ಹೊಸ ವರ್ಷಕ್ಕೆ ಟ್ರಿಪ್ ಹೊರಟವರಿಗೆ ಪೊಲೀಸ್ ಎಚ್ಚರ, ಕೆಮಿಕಲ್‌ನಿಂದ ಕಾರಿನ ಗಾಜು ಒಡೆದು ಕಳ್ಳತನ!

By Suvarna News  |  First Published Dec 27, 2023, 5:15 PM IST

ಹೊಸ ವರ್ಷವನ್ನು ಪ್ರವಾಸಿ ತಾಣಗಳಲ್ಲಿ ಆಚರಿಸುವುದು ಸಾಮಾನ್ಯ. ಈಗಾಗಲೇ ಜನ ಬೇರೆ ಬೇರೆ ತಾಣಗಳತ್ತ ಹೊರಟಿದ್ದಾರೆ. ಆದರೆ ಹೀಗೆ ಪ್ರವಾಸಿ ತಾಣಕ್ಕೆ ತೆರಳುವರಿಗೆ ಪೊಲೀಸ್ ಎಚ್ಚರಿಕೆ ನೀಡಿದೆ. ಕಳ್ಳರ ಗ್ಯಾಂಗ್, ಕೆಮಿಕಲ್ ಬಳಸಿ ಕಾರಿನ ಗಾಜು ಒಡೆದು ಬ್ಯಾಗ್, ಅಮೂಲ್ಯ ವಸ್ತುಗಳ ಕಳ್ಳತನ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಈ ಕುರಿತು ಪೊಲೀಸರೇ ವಿಡಿಯೋ ಪೋಸ್ಟ್ ಮಾಡಿ ಎಚ್ಚರಿಕೆ ನೀಡಿದ್ದಾರೆ.


ಶಿಮ್ಲಾ(ಡಿ.27)  ಹೊಸ ವರ್ಷ ಬರಮಾಡಿಕೊಳ್ಳಲು ತಯಾರಿಗಳು ನಡೆಯುತ್ತಿದೆ. ಹಲವರು ಈಗಾಗಲೇ ಪ್ರವಾಸಿ ತಾಣ, ನೆಚ್ಚಿನ ತಾಣಗಳನ್ನು ತಲುಪಿದ್ದಾರೆ. ಆದರೆ ಪ್ರವಾಸಿ ತಾಣಗಳಲ್ಲಿ ಇದೀಗ ಕಳ್ಳರ ಹಾವಳಿಗಳು ಹೆಚ್ಚಾಗಿದೆ. ನಿಲ್ಲಿಸಿರುವ ಕಾರುಗಳ ಗಾಜುಗಳನ್ನು ಕೆಮಿಕಲ್ ಬಳಸಿ ಸುಲಭವಾಗಿ ಒಡೆದು ಕಾರಿನೊಳಗಿನ ಅಮೂಲ್ಯ ವಸ್ತುಗಳನ್ನು ದೋಚುವ ಗ್ಯಾಂಗ್ ಎಲ್ಲೆಡೆ ಸಕ್ರಿಯವಾಗಿದೆ. ಈ ಕುರಿತು ಹಿಮಾಚಲ ಪ್ರದೇಶ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಕ್ರಿಸ್ಮಸ್ ರಜೆಗಳಿಂದ ಹಿಮಾಚಲ ಪ್ರದೇಶದಲ್ಲಿ ಟ್ರಾಫಿಕ್ ಜಾಮ್ ಸಂಭವಿಸಿತ್ತು. ಎಲ್ಲೆಡೆ ಪ್ರವಾಸಿಗಳಿಂದಲೇ ತುಂಬಿ ತುಳುಕಿತ್ತು. ಈ ವೇಳೆ ಹಲವರ ಕಾರುಗಳಿಂದ ಅಮೂಲ್ಯ ವಸ್ತುಗಳನ್ನು ಇದೇ ರೀತಿ ಎಗರಿಸಲಾಗಿದೆ. 

ಕಳೆದ ವಾರದಿಂದ ಹಿಮಾಚಲ ಪ್ರದೇಶದ ತುಂಬಾ ಪ್ರವಾಸಿಗಳೇ ತುಂಬಿ ಹೋಗಿದ್ದಾರೆ. ಎಲ್ಲಾ ರಸ್ತೆ, ಮೈದಾನ, ತಾಣಗಳಲ್ಲಿ ಪ್ರವಾಸಿಗಳು ಹಾಗೂ ವಾಹನಗಳೇ ಕಾಣುತ್ತಿದೆ. ಕೆಲ ಪ್ರದೇಶಗಳಲ್ಲಿ 5 ರಿಂದ 10 ಕಿಲೋಮೀಟರ್ ವರೆಗೆ ಟ್ರಾಫಿಕ್ ಜಾಮ್ ಸಂಭವಿಸಿತ್ತು. ವಾಹನ ಪಾರ್ಕ್ ಮಾಡಲು ಜಾಗವಿಲ್ಲದೆ ರಸ್ತೆ ಬದಿ, ಮೈದಾನ ಸೇರಿದಂತೆ ಹಲವೆಡೆ ಪಾರ್ಕಿಂಗ್ ಮಾಡಲಾಗುತ್ತಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕಳ್ಳರು, ನಿಲ್ಲಿಸಿದ್ದ ಕಾರಿನ ಗಾಜುಗಳನ್ನು ಸುಲಭವಾಗಿ ಕೆಮಿಕಲ್ ಬಳಸಿ ಒಡೆಯುತ್ತಿದ್ದಾರೆ. ಬಳಿಕ ಕಾರಿನೊಳಗೆ ಭದ್ರವಾಗಿ ಇಟ್ಟಿರುವ ಅಮೂಲ್ಯ ವಸ್ತುಗಳನ್ನು ಕದಿಯುವ ಘಟನೆಗಳು ಹೆಚ್ಚಾಗುತ್ತಿದೆ. 

Latest Videos

undefined

ಬೆಂಗಳೂರು ಬಿಎಂಡಬ್ಲ್ಯೂ ಕಾರಿನ ಗಾಜು ಒಡೆದು 13 ಲಕ್ಷ ರೂ. ದೋಚಿದ ಕಳ್ಳರು

ಹಿಮಾಚಲ ಪ್ರದೇಶ ಪೊಲೀಸರು ಕ್ರಿಸ್ಮಸ್ ರಜೆ ಸಂದರ್ಭದಲ್ಲಿ ನಡೆದ ಕಳ್ಳತನದ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ರಸ್ತೆ ಬದಿಯಲ್ಲಿ ಟಾಟಾ ಹ್ಯಾರಿಯರ್ ಕಾರು ಪಾರ್ಕ್ ಮಾಡಲಾಗಿತ್ತು. ಕಳ್ಳನೊಬ್ಬ ಒಂದೆರೆಡು ನಿಮಿಷ ಅತ್ತ ಇತ್ತ ಗಮನಿಸಿ, ಜೇಬಿನಿಂದ ಕೆಮಿಕಲ್ ತೆಗೆದಿದ್ದಾನೆ. ಬಳಿಕ ಕಾರಿನ ಗಾಜಿನ ಮೇಲೆ ಸಿಂಪಡಿಸಿದ್ದಾನೆ. ಒಂದೆ ಸೆಕೆಂಡ್‌ನಲ್ಲಿ ಕಾರಿನ ಗಾಜು ಪುಡಿ ಪುಡಿಯಾಗಿದೆ.  ಬಳಿಕ ಸುಲಭವಾಗಿ ಕಾರಿನೊಳಗಿದ್ದ ಬ್ಯಾಗ್ ಎಗರಿಸಿ ಪರಾರಿಯಾಗಿದ್ದಾನೆ. 

 

 

ಈ ವಿಡಿಯೋ ಹಂಚಿಕೊಂಡಿರುವ ಹಿಮಾಚಲ ಪ್ರದೇಶ ಪೊಲೀಸರು, ಕಳ್ಳರ ಹೊಸ ವಿಧಾನದಿಂದ ಎಚ್ಚೆತ್ತುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.  ಇದು ಕೇವಲ ಹಿಮಾಚಲ ಪ್ರದೇಶದ ಕತೆಯಲ್ಲ, ದೇಶದ ಬಹುತೇಕ ಕಡೆಗಳಲ್ಲಿ ಈ ರೀತಿ ಕಳ್ಳತನ ಮಾಡುವ ಗ್ಯಾಂಗ್ ಇದೆ. ಹೀಗಾಗಿ ಪ್ರವಾಸಿಗರು, ರಸ್ತೆ ಬದಿಯಲ್ಲಿ ಕಾರು ಪಾರ್ಕಿಂಗ್ ಮಾಡುವ ವ್ಯಕ್ತಿಗಳು ಎಚ್ಚರವಹಿಸುವುದು ಅತೀ ಅಗತ್ಯ. ಕಾರಿನೊಳಗೆ ಲಗೇಜ್, ಅಮೂಲ್ಯ ವಸ್ತುಗಳನ್ನು ಇಡುವ ಬದಲು, ಕಾರಿನ ಡಿಕ್ಕಿಯೊಳಗೆ ಇಡುವುದು ಹೆಚ್ಚು ಸೂಕ್ತ. ಜೊತೆಗೆ ಸುರಕ್ಷಿತ ಕಡೆಗಳಲ್ಲಿ ಪಾರ್ಕಿಂಗ್ ಮಾಡುವುದು ಅದಕ್ಕಿಂತ ಉತ್ತಮ. 

ಹುಬ್ಬಳ್ಳಿ: ಬ್ಯಾಂಕ್ ಲಾಕರ್‌ನಲ್ಲಿಟ್ಟಿದ್ದ 56 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ: ಎಸ್‌ಬಿಐ ಬ್ಯಾಂಕ್ ವಿರುದ್ಧ FIR

click me!