Belagavi Crime News: ಸಾಕ್ಷ್ಯಾಧಾರ ಕೊರತೆ: ತ್ರಿಪಲ್ ಮರ್ಡರ್ ಕೇಸ್ ಆರೋಪಿ ಖುಲಾಸೆ

By Suvarna News  |  First Published Jun 23, 2022, 3:58 PM IST

*ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು ಬೆಳಗಾವಿ ತ್ರಿವಳಿ ಕೊಲೆ ಪ್ರಕರಣ!
*ಸಾಕ್ಷ್ಯಾಧಾರ ಕೊರತೆಯಿಂದ ಆರೋಪಿ ನಿರ್ದೋಷಿ!
*ಹೈಕೋರ್ಟ್ ಧಾರವಾಡ ಪೀಠದಿಂದ ಮಹತ್ವದ ಆದೇಶ!


ವರದಿ: ಮಹಾಂತೇಶ ಕುರಬೇಟ್, ಬೆಳಗಾವಿ

ಬೆಳಗಾವಿ (ಜೂ. 23): 2015ರಲ್ಲಿ ಬೆಳಗಾವಿಯ (Belagavi)ಎಪಿಎಂಸಿ ಠಾಣಾ ವ್ಯಾಪ್ತಿಯಲ್ಲಿ ನಡೆದ ತಾಯಿ ಹಾಗೂ ಇಬ್ಬರು ಮಕ್ಕಳ ಕೊಲೆ ಪ್ರಕರಣದ ಆರೋಪಿ ಖುಲಾಸೆಯಾಗಿದ್ದಾ‌ನೆ. ಈ ಸಂಬಂಧ ಹೈಕೋರ್ಟ್ ಧಾರವಾಡ ಪೀಠ ಆದೇಶ ಹೊರಡಿಸಿದೆ. ಆರೋಪಿ ಪ್ರವೀಣ್ ಭಟ್‌ಗೆ (Praveen Bhat) ಬೆಳಗಾವಿಯ ಎರಡನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 2018ರ ಏಪ್ರಿಲ್ 16ರಂದು ಜೀವಾವಧಿ ಶಿಕ್ಷೆ ಪ್ರಕಟಿಸಿತ್ತು‌. ಈ ಆದೇಶ ಪ್ರಶ್ನಿಸಿ ಕೊಲೆ ಆರೋಪಿ ಪ್ರವೀಣ್ ಭಟ್ ಹೈಕೋರ್ಟ್ ಮೆಟ್ಟಿಲೇರಿದ್ದ. ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಕೆ.ಎಸ್.ಮುದಗಲ್ (Justice K S Mudagal), ಎಂಜಿಎಸ್ ಕಮಲ್ ( Justice M G S Kamal) ಅವರಿದ್ದ ಪೀಠ ಸೂಕ್ತ ಸಾಕ್ಷ್ಯಾಧಾರ ಕೊರತೆ ಹಿನ್ನೆಲೆ ಆರೋಪಿ ಪ್ರವೀಣ್ ಭಟ್ ನಿರ್ದೋಷಿ ಎಂದು ತೀರ್ಪು ನೀಡಿದೆ ಎಂದು ಆರೋಪಿ ಪರ ವಕೀಲ ಪ್ರವೀಣ್ ಕರೋಶಿ ತಿಳಿಸಿದ್ದಾರೆ.

Tap to resize

Latest Videos

ಏನಿದು ತ್ರಿವಳಿ ಕೊಲೆ ಪ್ರಕರಣ?: 2015ರ ಆಗಸ್ಟ್ 16ರಂದು ನಸುಕಿನ ಜಾವ ಬೆಳಗಾವಿಯ ಕುವೆಂಪುನಗರದಲ್ಲಿ ವಾಸವಿದ್ದ ಗೃಹಿಣಿ ರೀನಾ ಮಾಲಗತ್ತಿ ಹಾಗೂ ಆಕೆಯ ಇಬ್ಬರು ಮಕ್ಕಳಾದ ಆದಿತ್ಯ, ಸಾಹಿತ್ಯಳನ್ನು ಭೀಬತ್ಸವಾಗಿ ಕೊಲೆ (Belgaum Crime News) ನಡೆದಿತ್ತು. ಈ ಘಟನೆ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು. ಘಟನೆ ನಡೆದು 24 ಗಂಟೆಯಲ್ಲೇ ಬೆಳಗಾವಿ ಎಪಿಎಂಸಿ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿದ್ದರು. 

ಪ್ರಕರಣದ ವಿಚಾರಣೆ ನಡೆಸಿದ್ದ ಬೆಳಗಾವಿ ಜಿಲ್ಲಾ ಎರಡನೇ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯ ಆರೋಪಿ ಪ್ರವೀಣ್ ಭಟ್‌ಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಕುವೆಂಪು ನಗರದಲ್ಲಿ ವಾಸವಾಗಿದ್ದ ರೀನಾ ಮಾಲಗತ್ತಿ ಯುವಕ ಪ್ರವೀಣ ಭಟ್ ನಡುವೆ ಸ್ನೇಹ ಸಲುಗೆ ಬೆಳೆದಿತ್ತು. ಎರಡು ವರ್ಷದವರೆಗೆ ಇಬ್ಬರ ಮಧ್ಯೆ ಅನೈತಿಕ ಸಂಬಂಧ ಇದ್ದ ಬಗ್ಗೆ ಆರೋಪ ಕೇಳಿಬಂದಿತ್ತು. 

ಇದನ್ನೂ ಓದಿ: ವಕೀಲನ ಮೇಲೆ ಖಾಕಿ ದೌರ್ಜನ್ಯ, ಸಿಸಿಟಿವಿಯಲ್ಲಿ ಥಳಿತದ ದೃಶ್ಯ ಸೆರೆ

ಬಳಿಕ ಪ್ರವೀಣ್ ಭಟ್ ಅಂತರ ಕಾಯ್ದುಕೊಳ್ಳಲು ಯತ್ನಿಸಿದಕ್ಕೆ ಅನೈತಿಕ ಸಂಬಂಧದ ಸಂಗತಿ  ಬಹಿರಂಗ ಮಾಡುತ್ತೇನೆ ಎಂದು ಬೆದರಿಸಿದ ಆರೋಪ ಕೇಳಿ ಬಂದಿತ್ತು. ಈ ಸಂಗತಿಯೇ ಕೊಲೆಗೆ ಕಾರಣವೆಂದು ದೋಷಾರೋಪ ಪಟ್ಟಿಯಲ್ಲಿ ನಮೂದಿಸಲಾಗಿತ್ತು. 

ಆರೋಪಿ ಪರ ವಕೀಲರು ಹೇಳೋದೇನು?:  ಈ ಬಗ್ಗೆ ಬೆಳಗಾವಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಆರೋಪಿ ಪರ ವಕೀಲ ಪ್ರವೀಣ್ ಕರೋಶಿ, 'ಬೆಳಗಾವಿಯ ಕುವೆಂಪು ನಗರದಲ್ಲಿ ನಡೆದಿದ್ದ ತ್ರಿವಳಿ ಪ್ರಕರಣದಲ್ಲಿ ಹೈಕೋರ್ಟ್ ಸಾಕ್ಷ್ಯಾಧಾರ ಕೊರತೆಯ ಕಾರಣ ಆರೋಪಿಯನ್ನು ಮುಕ್ತಗೊಳಿಸಿದೆ. ತುಂಬ ಗಂಭೀರವಾದ ಈ ಪ್ರಕರಣದಲ್ಲಿ ಹೈಕೋರ್ಟ್ ದ್ವಿಸದಸ್ಯ ಪೀಠವು ಮಹತ್ವದ ತೀರ್ಪು ನೀಡಿದೆ. ಸಮರ್ಥನೀಯ ಹಾಗೂ ಪ್ರತ್ಯಕ್ಷ ಸಾಕ್ಷ್ಯ ಒದಗಿಸಲು ಆಗಿಲ್ಲ. ನನ್ನ ಕಕ್ಷಿದಾರ ಪ್ರವೀಣ ಭಟ್ ಮಂಗಳವಾರ ಬಿಡುಗಡೆ ಆಗಿದ್ದಾರೆ' ಎಂದು ತಿಳಿಸಿದ್ದಾರೆ

click me!