
ಸುಳ್ಯ (ಆ.18): ಹಠ ಮಾಡುತ್ತಿದೆ ಎಂದು 4 ವರ್ಷದ ಪುಟ್ಟಹೆಣ್ಣುಮಗುವಿಗೆ ತಾಯಿಯೇ ಬರೆ ಹಾಕಿರುವ ಘಟನೆ ತಾಲೂಕಿನ ನಾವೂರಿನಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ. ಆರು ದಿನಗಳ ಹಿಂದೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಸ್ಥಳೀಯರು ನೀಡಿದ ಮಾಹಿತಿಯ ಆಧಾರದಲ್ಲಿ ಸುಳ್ಯ ಸಿಡಿಪಿಒ ರಶ್ಮಿ ನೆಕ್ರಾಜೆ ಅವರು ಆ ಮನೆಗೆ ಧಾವಿಸಿ ಪರಿಶೀಲಿಸಿದಾಗ ಮಗುವಿಗೆ ತಾಯಿ ಕಾವ್ಯಶ್ರೀ ತನ್ನ ಮಗುವಿಗೆ ಸಟ್ಟುಗವನ್ನು ಬಿಸಿ ಮಾಡಿ ತೋಳಿಗೆ ಬರೆ ಹಾಕಿರುವುದು ಕಂಡುಬಂದಿದೆ. ಬಳಿಕ ಮಗುವನ್ನು ಸಿಡಿಪಿಒ ರಶ್ಮಿ ಅವರು ಸುಳ್ಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು. ಅವರ ದೂರಿನ ಮೇರೆಗೆ ಸುಳ್ಯ ಪೊಲೀಸರು ತಾಯಿ ಕಾವ್ಯಶ್ರೀ ಮೇಲೆ ಕೇಸು ದಾಖಲಿಸಿಕೊಂಡಿದ್ದಾರೆ. ಈ ಮಗು ಕಾವ್ಯಶ್ರೀಯ ಮೊದಲ ಗಂಡನ ಮಗಳಾಗಿದ್ದು, ಪತಿಯಿಂದ ಬೇರೆಯಾಗಿ ಇದೀಗ ಬೇರೊಬ್ಬನೊಂದಿಗೆ ಇದ್ದಾರೆ.
ಮಲಗಿದ್ದ ತಂದೆಯನ್ನು ಕೊಡಲಿಯಿಂದ ಕೊಚ್ಚಿ ಕೊಂದ ಮಗ: ಕುಡಿದು ಕಿರಿಕ್ ಮಾಡ್ತಿದ್ದ ತಂದೆಯನ್ನು ತನ್ನ ಮಗನೇ ಕೊಡಲಿಯಿಂದ ಕೊಚ್ಚಿ ಭೀಕರ ಕೊಲೆ ಮಾಡಿರುವ ಘಟನೆ ಗದಗ ತಾಲೂಕಿನ ಹುಲಕೋಟಿ ಗ್ರಾಮದಲ್ಲಿ ನಡೆದಿದೆ. ಗಣೇಶ್ ಚಿಕ್ಕನಟ್ಟಿ (51) ಮಗನಿಂದ ಹತ್ಯೆಯಾದ ವ್ಯಕ್ತಿಯಾಗಿದ್ದು, ಸಂಜೆ ಕುಡಿದು ಗಲಾಟೆ ಮಾಡುತ್ತಿದ್ದ ಎಂಬ ಕಾರಣಕ್ಕೆ ಪುತ್ರ ವಿಜಯ ಚಿಕ್ಕನಟ್ಟಿ ಮಲಗಿದ್ದ ಸಮಯದಲ್ಲಿ ಕೊಡಲಿಯಿಂದ ಕೊಚ್ಚಿ ಕೊಂದ್ದಿದ್ದಾನೆ. ಸ್ಥಳಕ್ಕೆ ಡಿವೈಎಸ್ಪಿ ಶಿವಾನಂದ, ಸಿಪಿಐ ಸಿಎನ್ ಹರಿಹರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಅಪಘಾತದಲ್ಲಿ ಮೆದುಳು ನಿಷ್ಕ್ರಿಯ: ಯಕೃತ್ ಅನ್ನು ಝೀರೋ ಟ್ರಾಫಿಕ್‌ನಲ್ಲಿ ಕೊಂಡೊಯ್ದ ವೈದ್ಯಕೀಯ ಸಿಬ್ಬಂದಿ
ಇಬ್ಬರಿಗೆ ಮಾರಣಾಂತಿಕ ಹಲ್ಲೆ: ನಗರದ ಬೋಳೂರು ಜಾರಂದಾಯ ದೈವಸ್ಥಾನ ಬಳಿ ವ್ಯಕ್ತಿಯೊಬ್ಬರ ಮೇಲೆ ಇಬ್ಬರು ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಮಂಗಳವಾರ ತಡರಾತ್ರಿ ನಡೆದಿದೆ. ದೇವದಾಸ್ ಬೋಳೂರು ಮತ್ತು ಸಾಯಿ ಕಿರಣ್ ಪ್ರಕರಣದ ಆರೋಪಿಗಳು. ನವೀನ್ ಸಾಲ್ಯಾನ್ ಎಂಬುವರಿಗೆ ಬೋಳೂರು ಜಾರಂದಾಯ ದೇವಸ್ಥಾನ ಹತ್ತಿರ ದೇವದಾಸ್ ಬೋಳೂರು ಮತ್ತು ಆತನ ಪುತ್ರ ಸಾಯಿ ಕಿರಣ್ ಎಂಬವರು ಕಬ್ಬಿಣದ ರಾಡ್‌ನಿಂದ ಮರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಗಾಯಗೊಂಡ ನವೀನ್ ಅವರನ್ನು ಮಂಗಳೂರು ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಬಗ್ಗೆ ದಾಖಲಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ದೇವದಾಸ್ ಬೋಳೂರು ಮತ್ತು ಅವರ ಮಗ ಸಾಯಿ ಕಿರಣ್ ಅವರನ್ನು ವಶಕ್ಕೆ ಪಡೆಯಲಾಗಿದೆ. ಹಳೆ ದ್ವೇಷದ ಪರಿಣಾಮದಿಂದ ಈ ಘಟನೆ ನಡೆದಿದೆ. ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಿಎಸ್ವೈ ನೆತ್ತರು ಜಿಲ್ಲೆಗೆ ನೀರಾವರಿ ರೂಪದಲ್ಲಿ ಪರಿವರ್ತನೆ: ಸಂಸದ ರಾಘವೇಂದ್ರ
ಕೊಲೆಗೆ ಯತ್ನ-ದೂರು: ಜನ್ಮದಿನದ ಆಚರಣೆ ಸಂದರ್ಭದಲ್ಲಿ ಹಾಡು ಹಚ್ಚುವ ವಿಚಾರಕ್ಕೆ ವ್ಯಕ್ತಿ ಓರ್ವನಿಗೆ ಬಿಯರ್ ಬಾಟಲ್‌ನಿಂದ ಹೊಡೆದು ಕೊಲೆ ಮಾಡಲು ಯತ್ನಿಸಿದ ಪ್ರಕರಣ ಕಸಬಾಪೇಟ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಹಳೆ ಹುಬ್ಬಳ್ಳಿಯ ನಿವಾಸಿ ಅಭಿಷೇಕ ಭಜಂತ್ರಿ ಹಲ್ಲೆಗೊಳಗಾದ ವ್ಯಕ್ತಿ. ಹಳೆ ಹುಬ್ಬಳ್ಳಿಯ ನಾಗರಾಜ ಹಾಗೂ ಆಕಾಶ ಎಂಬುವವರು ಹಲ್ಲೆ ನಡೆಸಿದ್ದಾರೆ. ನಾಗರಾಜ ಜನ್ಮದಿನ ಪಾರ್ಟಿ ಸಮಯದಲ್ಲಿ ಅಭಿಷೇಕ ಹಾಡು ಯಾಕೇ ಹಾಕುತ್ತಿಯಾ ಎಂದು ಕೇಳಿದ್ದಾನೆ. ಇದಕ್ಕೆ ಕೋಪಗೊಂಡ ನಾಗರಾಜ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಅಷ್ಟೇ ಅಲ್ಲದೆ ಅವನ ಸಹೋದರ ಆಕಾಶ ಜೊತೆ ಸೇರಿ ಅಭಿಷೇಕ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ