Mangaluru: ಕಾರಿಗೆ ಬೆಂಕಿ ಬಿದ್ದಿದೆ ಎಂದು ಹಣ ಸುಲಿಯುವ ಗ್ಯಾಂಗ್‌: ವಾಹನ ಸವಾರರೇ ಎಚ್ಚರ..!

By Kannadaprabha News  |  First Published Dec 18, 2021, 6:01 AM IST

*  ಕಾರಿನ ಎಂಜಿನ್‌ನಲ್ಲಿ ಬೆಂಕಿ: ಸಿನಿಮೀಯ ಶೈಲಿಯ ಹೀಗೊಂದು ಹೆದ್ದಾರಿ ವಂಚನೆ
*  ಸಂತ್ರಸ್ತ ಸುಳ್ಯ ಮೂಲದವರಿಂದ ಜಾಲತಾಣದಲ್ಲಿ ಬರಹ
*  ಪ್ರಕರಣದ ವಿವರ ಈಗ ವೈರಲ್‌
 


ಮಂಗಳೂರು(ಡಿ.18): ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ರಾತ್ರಿ ಹೊತ್ತಲ್ಲಿ ಮಾತ್ರವಲ್ಲ ಹಗಲಿನಲ್ಲಿ, ಅದರಲ್ಲೂ ವಾಹನ ದಟ್ಟಣೆ ವೇಳೆಯಲ್ಲಿ ಸಂಚರಿಸುವವರನ್ನು ಯಾಮಾರಿಸಿ ಹಣ ಪೀಕಿಸುವ ವಂಚಕರ ಜಾಲ ಸಕ್ರಿಯವಾಗಿರುವ ಬಗ್ಗೆ ದ.ಕ. ಮೂಲದ ಸುಳ್ಯದ 62ರ ಹರೆಯದ ಸಂತ್ರಸ್ತರೊಬ್ಬರು ಸಾಮಾಜಿಕ ಜಾಲತಾಣದಲ್ಲಿ(Social Media) ಬರೆದುಕೊಂಡಿದ್ದಾರೆ. ಈ ಮೂಲಕ ಈ ಹೆದ್ದಾರಿಯಲ್ಲಿ(Highway) ಸಂಚರಿಸುವಾಗ ಸಾಕಷ್ಟು ಮುಂಜಾಗ್ರತೆ ಹಾಗೂ ಎಚ್ಚರಿಕೆ ವಹಿಸುವಂತೆ ವಿನಂತಿ ಮಾಡಿರುವ ಬರಹ ವೈರಲ್‌ ಆಗಿದೆ.

ಸುಳ್ಯದ ಕೃಷ್ಣ ಕುಮಾರ್‌ ಪೈಲೂರು ಎಂಬವರೇ ಹೆದ್ದಾರಿಯಲ್ಲಿ ಸಿನಿಮೀಯ ಶೈಲಿಯಲ್ಲಿ ವಂಚಕರ ಬಲೆಗೆ ಬಿದ್ದು ಹಣವನ್ನು ಕಳೆದುಕೊಂಡವರು. ಬುಧವಾರ ಈ ಘಟನೆ ನಡೆದಿರುವ ಬಗ್ಗೆ ಫೇಸ್‌ಬುಕ್‌ನಲ್ಲಿ(Facebook) ಇವರು ಬರೆದುಕೊಂಡಿದ್ದಾರೆ.

Tap to resize

Latest Videos

Medical Seat Fraud: ವೈದ್ಯಕೀಯ ಸೀಟು ಆಸೆ ತೋರಿಸಿ 15 ಲಕ್ಷ ಮೋಸ

ಪ್ರಕರಣದ ವಿವರ:

ಕೃಷ್ಣ ಕುಮಾರ್‌ ಪೈಲೂರು ಅವರು ಬೆಂಗಳೂರಿನ(Bengaluru) ಪುತ್ರಿಯ ಮನೆಯಿಂದ ಬುಧವಾರ ಪತ್ನಿಯೊಂದಿಗೆ ಕಾರಿನಲ್ಲಿ ಬೆಳಗ್ಗೆ 8 ಗಂಟೆಗೆ ಹೊರಟಿದ್ದರು. ಸುಮಾರು 10.30ಕ್ಕೆ ಮದ್ದೂರು(Maddur) ಅಡಿಗಾಸ್‌ ಹೊಟೇಲ್‌ ದಾಟಿ ಸಿಗುವ ತಿರುವಿನಲ್ಲಿ ಬರುತ್ತಿದ್ದಾಗ ಸುಮಾರು 50 ವರ್ಷ ಪ್ರಾಯದ ವ್ಯಕ್ತಿ ಬೈಕ್‌ನಲ್ಲಿ ಓವರ್‌ ಟೇಕ್‌ ಮಾಡಿ ‘ಗಾಡಿ ನಿಲ್ಲಿಸಿ’ ಎಂದು ಜೋರಾಗಿ ಸನ್ನೆ ಮಾಡಿದ್ದನು. ಆತನ ಜೊತೆ ಯುವಕನೂ ಇದ್ದ.

ಇವರು ಕಾರನ್ನು ನಿಲ್ಲಿಸಿದಾಗ ಬೈಕ್‌ನಲ್ಲಿ ಬಂದ ವ್ಯಕ್ತಿ ಓಡೋಡಿ ಬಂದು ಕಾರಿನ ಮುಂಭಾಗದಲ್ಲಿ ಬೆಂಕಿ(Fire) ನೋಡಿದೆ ಎಂದು ಹೇಳಿದ್ದ. ಗಾಬರಿಗೊಂಡ ಕೃಷ್ಣ ಕುಮಾರ್‌ ಕಾರಿನ ಬಾನೆಟ್‌ ಓಪನ್‌ ಮಾಡಿದ್ದರು. ಬಳಿಕ ಕಾರನ್ನು ಸ್ಟಾರ್ಟ್‌ ಮಾಡಿದಾಗ ಬಾನೆಟ್‌ನಲ್ಲಿ ಬೆಂಕಿ ಕಾಣಿಸಿತ್ತು. ನಂತರ ನೀರು ಹಾಕಿ ನಂದಿಸಿದರು.

ಆಗ ಆ ವ್ಯಕ್ತಿ ‘ಎಂಜಿನ್‌ ಅಡಿ ಭಾಗದಲ್ಲಿ ಇರುವ ಇಗ್ನಿಶನ್‌ ಕಾಯಿಲ್‌ನ ವಯರ್‌ ಬಹುಶಃ ಇಲಿ ಕಡಿತದಿಂದಾಗಿ ಶಾರ್ಟ್‌ ಆಗಿದೆ. ನಾನೊಬ್ಬ ಫಿಟ್ಟರ್‌, ಸರಿ ಮಾಡಿಕೊಡುತ್ತೇನೆ’ ಎಂದ. ತಕ್ಷಣವೇ ಅವನ ಹುಡುಗನನ್ನು ಗ್ಯಾರೇಜಿಗೆ ಕಳುಹಿಸಿ ಬಿಡಿಭಾಗ ತರಿಸಿದ. ನನ್ನನ್ನು ‘ಕ್ಲಚ್‌ ಒತ್ತಿ ಹಿಡಿಯಿರಿ’ ಎಂದು ಹೇಳಿ ಹುಡುಗನ ಮೂಲಕ ಬಿಡಿಭಾಗ (ಸೀಲ್ಡ್‌ ಪ್ಯಾಕ್‌ನಲ್ಲಿತ್ತು) ಹಾಕುವ ‘ನಾಟಕ’ ಮಾಡಿದ್ದ. ಮೂರ್ನಾಲ್ಕು ನಿಮಿಷಗಳಲ್ಲೆ ಈ ಕೆಲಸ ಪೂರ್ಣಗೊಂಡಿತ್ತು.

ನಂತರ ಕಾರು(Car) ಸ್ಟಾರ್ಟ್‌ ಮಾಡಿದಾಗ ಬೆಂಕಿ ಕಾಣಿಸಲಿಲ್ಲ. ಮದ್ದೂರು ಪೇಟೆಗೆ ಹೋಗುವ ಎಂದು ಇವರೊಂದಿಗೆ ಬಂದಿದ್ದ. ಆತನ ಜೊತೆಯಲ್ಲಿದ್ದ ಯುವಕ ಬೈಕಿನಲ್ಲಿ ಹಿಂಬಾಲಿಸುತ್ತಿದ್ದ. ದಾರಿ ಮಧ್ಯ ಶುಲ್ಕ ಕೇಳಿದಾಗ ‘ಬಿಡಿಭಾಗಕ್ಕೆ 7,000 ರು, ನಿಮ್ಮ ಜೀವ ಉಳಿಸಿದ್ದಕ್ಕೆ 2,000 ರು. ಕೊಡಿ’ ಎಂದಿದ್ದ. ಇವರಲ್ಲಿದ್ದ 7 ಸಾವಿರ ರು. ಕೊಟ್ಟು ಮತ್ತೆ ಕೇವಲ 300 ರು. ಮಾತ್ರ ಇರುವುದು ಎಂದಿದ್ದರು. ‘ಹಾಗಾದರೆ ಎಟಿಎಂಗೆ(ATM) ಹೋಗಿ ತನ್ನಿ’ ಎಂದು ಆಗ್ರಹಿಸಿದ್ದ. ಇವರಲ್ಲಿ ಯಾವುದೇ ಕಾರ್ಡ್‌ ಇಲ್ಲ ಎಂದಾಗ ಫೋನ್‌ ನಂಬರ್‌ ನೀಡಿ ಅದಕ್ಕೆ ಫೋನ್‌ ಪೇ ಮಾಡಿ’ ಎಂದು 9845531624 ನಂಬರ್‌ ನೀಡಿದ್ದ. ಅಷ್ಟರಲ್ಲಿ ಕೃಷ್ಣ ಕುಮಾರ್‌ಗೆ ಫೋನ್‌ ಕರೆ ಬಂದಿತ್ತು. ಅಷ್ಟರಲ್ಲಿ ಅವರಿಬ್ಬರೂ ನಾಪತ್ತೆಯಾಗಿದ್ದರು.

Marriage Fraud: 60 ವರ್ಷದ ಮುದುಕನ ಮದುವೆಗೆ ತಂದಿದ್ದ ಸೀರೆ, ತಾಳಿ ಜತೆ ವಧು ಪರಾರಿ..!

ನಂತರ ಮೈಸೂರಿಗೆ(Mysuru) ಬಂದು ಅರಸ್‌ ಕಾರ್ಸ್‌ (ಟಾಟಾ ಕಾರು ಡೀಲರ್‌)ನಲ್ಲಿ ಕಾರನ್ನು ಪರಿಶೀಲನೆಗೆ ಒಪ್ಪಿಸಿದ್ದರು. ಮದ್ದೂರಿನಲ್ಲಿ ಆ ವ್ಯಕ್ತಿ ನೀಡಿದ್ದ ಬಿಡಿ ಭಾಗವನ್ನೂ ತೋರಿಸಿದ್ದರು. ಅವರು ಕೂಲಂಕಷವಾಗಿ ಪರಿಶೀಲಿಸಿ, ‘ಬೆಂಕಿಯನ್ನು ಉಂಟುಮಾಡುವ ಯಾವ ಸಮಸ್ಯೆಯೂ ಕಾರಲ್ಲಿ ಸಂಭವಿಸಿಲ್ಲ, ಮಾತ್ರವಲ್ಲ, ಆ ಬಿಡಿಭಾಗ ಈ ಕಾರಿಗೆ ಸಂಬಂ​ಧಿಸಿದ್ದೇ ಅಲ್ಲ. ಆತ ನಿಮಗೆ ಮೋಸಮಾಡಿದ್ದಾನೆ, ಎಂಜಿನ್‌ನs ತುಂಬ ಬಿಸಿ ಇರುವ ಭಾಗಕ್ಕೆ ಕರ್ಪೂರ/ರಾಳದ ಹುಡಿ ಹಾಕಿ ಬೆಂಕಿ ಹೊತ್ತಿಸಿರಬಹುದು’ ಎಂದಿದ್ದರು.

ಇದೇ ವೇಳೆ ಆತ ಕೊಟ್ಟ ಮೊಬೈಲ್‌ ನಂಬರ್‌ಗೆ ಕರೆ ಮಾಡಿದರೆ ಅದು ಆಗಲೂ, ನಂತರೂ ಸ್ವಿಚ್ಟ್‌ ಆಫ್‌. ಅಂತಹ ವಂಚಕರ ಜಾಲವೇ ಸಕ್ರಿಯವಾಗಿರಬಹುದು ಎಂಬುದು ಊಹೆ. ಯಾವುದೇ ಕಾರಣಕ್ಕೂ ಯಾರೂ ಬೊಬ್ಬಿಟ್ಟು ಸಹಾಯಕ್ಕೆ ಅಂಗಲಾಚಿದರೂ ಹೆದ್ದಾರಿಯಲ್ಲಿ ಸಂಚರಿಸುವಾಗ ವಾಹನ ನಿಲ್ಲಿಸಬೇಡಿ ಎಂದು ಕೃಷ್ಣ ಕುಮಾರ್‌ ಅವರು ಫೇಸ್‌ಬುಕ್‌ ಬರಹದಲ್ಲಿ ಕಳಕಳಿ ವ್ಯಕ್ತಪಡಿಸಿದ್ದಾರೆ.
 

click me!