ಉಳ್ಳಾಲ ಮತ್ತು ಮೆಲ್ಕಾರ್‌ನಲ್ಲಿ 2015 ಮತ್ತು 2016ರಲ್ಲಿ ನಡೆದಿದ್ದ ಎರಡು ಪ್ರತ್ಯೇಕ ಕೊಲೆ ಪ್ರಕರಣಗಳ ಆರೋಪಿಗಳ ಮೇಲಿನ ಆರೋಪವು ನ್ಯಾಯಾಲಯದಲ್ಲಿ ಸಾಬೀತಾಗಿದೆ. ಶಿಕ್ಷೆಯ ಪ್ರಮಾಣದ ಮೇಲಿನ ವಿಚಾರಣೆಯನ್ನು ಏ.16ಕ್ಕೆ ನಿಗದಿಪಡಿಸಲಾಗಿದೆ.
ಮಂಗಳೂರು (ಏ.14): ಕೋಮು ದ್ವೇಷದ ಹಿನ್ನೆಲೆಯಲ್ಲಿ ಉಳ್ಳಾಲ ಮತ್ತು ಮೆಲ್ಕಾರ್‌ನಲ್ಲಿ 2015 ಮತ್ತು 2016ರಲ್ಲಿ ನಡೆದಿದ್ದ ಎರಡು ಪ್ರತ್ಯೇಕ ಕೊಲೆ ಪ್ರಕರಣಗಳ ಆರೋಪಿಗಳ ಮೇಲಿನ ಆರೋಪವು ನ್ಯಾಯಾಲಯದಲ್ಲಿ ಸಾಬೀತಾಗಿದೆ. ಶಿಕ್ಷೆಯ ಪ್ರಮಾಣದ ಮೇಲಿನ ವಿಚಾರಣೆಯನ್ನು ಏ.16ಕ್ಕೆ ನಿಗದಿಪಡಿಸಲಾಗಿದೆ.
2015ರ ಆ.6ರಂದು ಮೆಲ್ಕಾರ್‌ನಲ್ಲಿ ನಡೆದ ಮೊಹಮ್ಮದ್ ನಾಸಿರ್ ಕೊಲೆ ಪ್ರಕರಣದಲ್ಲಿ (Mohammed Nazir murder case ) ವಿಜೇತ್ ಕುಮಾರ್ (22), ಕಿರಣ್ (24), ಅನೀಶ್ ಅಲಿಯಾಸ್ ಧನು (23) ಮತ್ತು ಅಭಿ ಅಲಿಯಾಸ್ ಅಭಿಜಿತ್ (24) ಅಪರಾಧಿಗಳು ಎನ್ನುವುದು ಸಾಬೀತಾಗಿದೆ. ಅದೇ ರೀತಿ 2016ರಲ್ಲಿ ಉಳ್ಳಾಲದಲ್ಲಿ ರಾಜೇಶ್ ಕೋಟ್ಯಾನ್ ಕೊಲೆ ಪ್ರಕರಣದಲ್ಲಿ (Rajesh Kotian murder case) ಮೊಹಮ್ಮದ್ ಆಸಿಫ್ ಅಲಿಯಾಸ್ ಆಚಿ (23), ಮೊಹಮ್ಮದ್ ಸುಹೈಲ್ ಅಲಿಯಾಸ್ ಸುಹೈಲ್ (20), ಅಬ್ದುಲ್ ಮುತಾಲಿಪ್ ಅಲಿಯಾಸ್ ಮುತ್ತು (20), ಅಬ್ದುಲ್ ಅಸ್ವೀರ್ ಅಲಿಯಾಸ್ ಅಚ್ಚು (19) ಮತ್ತು ಕಾನೂನಿನ ಸಂಘರ್ಷಕ್ಕೊಳಗಾದ ಇಬ್ಬರು ಬಾಲಕರು ಪ್ರಕರಣದ ಆರೋಪಿಗಳು. ಕಾನೂನಿನ ಸಂಘರ್ಷಕ್ಕೊಳಗಾದ ಬಾಲಕರ ಹೊರತು ಇತರ ಆರೋಪಿಗಳ ವಿಚಾರಣೆ ನಡೆದಿದ್ದು ಅವರ ಮೇಲಿನ ಆರೋಪ ಸಾಬೀತಾಗಿದೆ.
ನಾಸೀರ್ ಕೊಲೆ ಪ್ರಕರಣ: 2015ರ ಆ.6ರಂದು ಮೆಲ್ಕಾರ್‌ನಲ್ಲಿ ನಡೆದ ಮೊಹಮ್ಮದ್ ನಾಸೀರ್ ಕೊಲೆ ಪ್ರಕರಣದಲ್ಲಿ ರಾತ್ರಿ 10.45ಕ್ಕೆ ಮೊಹಮ್ಮದ್ ಮುಸ್ತಾಫ ಮತ್ತು ಮೊಹಮ್ಮದ್ ನಾಸೀರ್ ಮೆಲ್ಕಾರ್ ಕಡೆಯಿಂದ ಮುಡಿಪು ಕಡೆಗೆ ಆಟೋರಿಕ್ಷಾದಲ್ಲಿ ಹೋಗುತ್ತಿದ್ದರು. ಈ ವೇಳೆ ಆರೋಪಿಗಳಾದ ವಿಜೇತ್ ಕುಮಾರ್ (22), ಕಿರಣ್ (24), ಅನೀಶ್ ಅಲಿಯಾಸ್ ಧನು (23) ಮತ್ತು ಅಭಿ ಅಲಿಯಾಸ್ ಅಭಿಜಿತ್ (24) ಬೈಕ್‌ನಲ್ಲಿ ಬಂದು ಸಜೀಪಮೂಡ ಗ್ರಾಮದ ಕೊಳಕೆ ಎಂಬಲ್ಲಿ ಆಟೋರಿಕ್ಷಾ ತಡೆದು ನಿಲ್ಲಿಸಿ ತಲವಾರಿನಿಂದ ಹಲ್ಲೆ ನಡೆಸಿದ್ದರು. ಇದರಿಂದ ಮೊಹಮ್ಮದ್ ಮುಸ್ತಾಫ ಮತ್ತು ನಾಸಿರ್ ಗಾಯಗೊಂಡಿದ್ದು, ನಾಸಿರ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು.
ಕೊಲೆ ಪ್ರಕರಣದ ಬಗ್ಗೆ ಇನ್ಸ್‌ಪೆಕ್ಟರ್ ಕೆ.ಯು.ಬೆಳ್ಳಿಯಪ್ಪ ತನಿಖೆ ಪೂರ್ಣಗೊಳಿಸಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಮಂಗಳೂರಿನ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಆರೋಪಿಗಳು ದೋಷಿಗಳೆಂದು ತೀರ್ಪು ನೀಡಿದೆ. ಸರ್ಕಾರದ ಪರವಾಗಿ ಶೇಖರ ಶೆಟ್ಟಿ ವಿಚಾರಣೆ ನಡೆಸಿದ್ದು, ಜುಡಿತ್ ಓಲ್ಗಾ ಮಾರ್ಗರೇಟ್ ಕ್ರಾಸ್ತಾ ವಾದ ಮಂಡಿಸಿದ್ದಾರೆ.
Rameshwaram Cafe Blast Case: ಬೆಂಗಳೂರು to ಕೊಲ್ಕತ್ತಾ, ಉಗ್ರರು ಸಿಕ್ಕಿಬಿದ್ದಿದ್ದು ಹೇಗೆ? ಇಂಚಿಂಚು ಮಾಹಿತಿ
ರಾಜೇಶ್ ಕೋಟ್ಯಾನ್ ಕೊಲೆ: 2016ರ ಏಪ್ರಿಲ್‌ನಲ್ಲಿ ಉಳ್ಳಾಲದ ಕೋಟೆಪುರ ರಸ್ತೆಯಲ್ಲಿ ರಾಜೇಶ್ ಕೋಟ್ಯಾನ್ ಅಲಿಯಾಸ್ ರಾಜ (44) ಕೊಲೆಯಾಗಿತ್ತು. ಏ.12ರಂದು ಮುಂಜಾನೆ ಮೀನುಗಾರಿಕೆಗೆಂದು ಕೋಟೆಪುರ ರಸ್ತೆಯಲ್ಲಿ ಒಂಟಿಯಾಗಿ ನಡೆದುಕೊಂಡು ಹೋಗುತ್ತಿದ್ದ ರಾಜೇಶ್ ಕೋಟ್ಯಾನ್ ಮೇಲೆ ಆರೋಪಿಗಳು ಮರದ ದೊಣ್ಣೆಗಳಿಂದ ಹಲ್ಲೆ ಮಾಡಿ ಅನಂತರ ಮುಖಕ್ಕೆ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದರು. ಈ ಪ್ರಕರಣದಲ್ಲಿ ಮೊಹಮ್ಮದ್ ಆಸಿಫ್, ಮೊಹಮ್ಮದ್ ಸುಹೈಲ್, ಅಬ್ದುಲ್ ಮುತಾಲಿಪ್, ಅಬ್ದುಲ್ ಅಸ್ವೀರ್ ಎಂಬವರ ಮೇಲಿನ ಆರೋಪ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಸಾಬೀತಾಗಿದೆ. ಉಳ್ಳಾಲ ಠಾಣೆಯ ನಿರೀಕ್ಷಕ ಅಶೋಕ ತನಿಖೆ ನಡೆಸಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಜುಡಿತ್ ಓಲ್ಗಾ ಮಾರ್ಗರೇಟ್ ಕ್ರಾಸ್ತಾ ಸಾಕ್ಷಿಗಳ ಸಾಕ್ಷಿ ವಿಚಾರಣೆ ಮಾಡಿ ವಾದ ಮಂಡಿಸಿದ್ದಾರೆ.