*ಕೆಮಿಕಲ್ ಬೆರಸಿ ಕಲಬೆರಕೆ ಚಿನ್ನ ತಯಾರಿ
*ವಿದೇಶದ ಪ್ರತಿಷ್ಠಿತ ಕಂಪನಿಯ ಸೀಲ್ ಹಾಕಿ ಮಾರಾಟ
*ನಗರತ್‌ಪೇಟೆಯಲ್ಲಿರುವ ಮಾತಾಜಿ ಜ್ಯುವೆಲ್ಲರಿ
*3 ವರ್ಷದಿಂದ ಜ್ಯುವೆಲ್ಲರಿ ನಡೆಸುತ್ತಿದ್ದ ರಾಜೇಶ್
*ನಿತ್ಯ 3ರಿಂದ 5 ಕೇಜಿ ಕಲಬೆರಕೆ ಚಿನ್ನ ಮಾರಾಟ
ಬೆಂಗಳೂರು (ಫೆ. 04): ನಗರದ ನಗರತ್‌ಪೇಟೆಯಲ್ಲಿ ಕಲಬೆರಕೆ ಚಿನ್ನ (Sub Standard Gold) ಮಾರಾಟದ ದಂಧೆ ಮೇಲೆ ದಾಳಿ ನಡೆಸಿದ ಸಿಸಿಬಿ (CCB), ವಿದೇಶಿ ಕಂಪನಿಗಳ ಹೆಸರಿನಲ್ಲಿ ಕೇಜಿ ಗಟ್ಟಲೇ ಕಲಬೆರಕೆ ಚಿನ್ನವನ್ನು ಪರಿಶುದ್ಧ ಎಂದು ನಂಬಿಸಿ ಜನರಿಗೆ ಮಾರುತ್ತಿದ್ದ ನಾಲ್ವರನ್ನು ಬಂಧಿಸಿ 1.7 ಕೆ.ಜಿ. ಕಲಬೆರಕೆ ಚಿನ್ನವನ್ನು ವಶಪಡಿಸಿಕೊಂಡಿದೆ. ನಗರತ್‌ಪೇಟೆಯ (Nagarathpete ) ರಾಜೇಶ್ ಬೋಸ್ಲೆ, ಸಿದ್ಧು ಶಿಂದೆ ಅಲಿಯಾಸ್ ವಿಜಯ್, ಅಕ್ಷಯ್ ಹಾಗೂ ವೃತಿಕ್ ಬಂಧಿತರಾಗಿದ್ದು, ಆರೋಪಿಗಳಿಂದ 1.794 ಕೆ.ಜಿ ಚಿನ್ನ ಹಾಗೂ .20 ಸಾವಿರ ನಗದು ಜಪ್ತಿ ಮಾಡಲಾಗಿದೆ.
ನಗರತ್‌ಪೇಟೆ ಮುಖ್ಯರಸ್ತೆಯ ಮಾತಾಜಿ ಜ್ಯುವೆಲ್ಲರಿ ಮಾರ್ಕೆಟ್ ಕಟ್ಟಡದಲ್ಲಿರುವ ಅಂಗಡಿಯಲ್ಲಿ ಕೆಲವರು ಕಲಬೆರಕೆ ಚಿನ್ನ ತಯಾರಿಸಿ ಪ್ರತಿದಿನ 3-5 ಕೇಜಿ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಕಾರ್ಯಾಚರಣೆ ನಡೆಸಿತು ಎಂದು ಜಂಟಿ ಪೊಲೀಸ್ ಆಯುಕ್ತ (ಅಪರಾಧ) ರಮಣಗುಪ್ತ ತಿಳಿಸಿದ್ದಾರೆ.
ಇದನ್ನೂ ಓದಿ: Robbery:ವಿಜಯಪುರ, ಇಂಜಿನ್ ಆಯಿಲ್ ಸೋರ್ತಿದೆ ಅಂತ ನಂಬಿಸಿ ಹಣ ಲಪಟಾಯಿಸಿದರು!
ಮಹಾರಾಷ್ಟ್ರ ಮೂಲದ ರಾಜೇಶ್ ಬೋಸ್ಲೆ, ತನ್ನ ಕುಟುಂಬದ ಜತೆ ಚಿಕ್ಕಪೇಟೆಯಲ್ಲಿ ನೆಲೆಸಿದ್ದಾನೆ. ನಾಲ್ಕೈದು ವರ್ಷಗಳಿಂದ ನಗರತ್‌ಪೇಟೆ ಮುಖ್ಯ ರಸ್ತೆಯಲ್ಲಿ ಚಿನ್ನದ ಬಿಸ್ಕತ್ ಮಾರಾಟ ಮಳಿಗೆ ಇಟ್ಟಿದ್ದ ಆತ, ಅಕ್ರಮವಾಗಿ ದುಪ್ಪಟ್ಟು ಹಣ ಸಂಪಾದನೆಗೆ ಅಡ್ಡದಾರಿ ತುಳಿದಿದ್ದಾನೆ. ಇದಕ್ಕೆ ಇನ್ನುಳಿದ ಮೂವರು ಆರೋಪಿಗಳು ಜೊತೆಗೂಡಿದ್ದರು. ಚಿನ್ನದ ಗಟ್ಟಿಗಳನ್ನು ಆಸ್ಮಿಯಮ್ ಸ್ಪಾಂಜ್ ಎಂಬ ರಾಸಾಯನಿಕ ವಸ್ತುವನ್ನು ಬಳಸಿ ಕಲಬೆರಕೆ ಮಾಡಿ ಬಳಿಕ ಆರೋಪಿಗಳು, ಚಿನ್ನವನ್ನು ಕರಗಿಸಿ ಬಿಸ್ಕತ್‌ಗಳನ್ನು ಮಾಡುತ್ತಿದ್ದರು.
ನಂತರ ಸ್ವಿಜರ್‌ಲ್ಯಾಂಡ್, ದುಬೈ, ಗಲ್‌್ಫ ದೇಶಗಳ ಪ್ರತಿಷ್ಠಿತ ಚಿನ್ನದ ಮಾರಾಟ ಕಂಪನಿಗಳ ನಕಲಿ ಸೀಲುಗಳನ್ನು ಬಳಸಿ ಕಲಬೆರಕೆ ಚಿನ್ನವನ್ನು ಪರಿಶುದ್ಧವೆಂದು ಮಾರಾಟ ಮಾಡುತ್ತಿದ್ದರು. ಇದೇ ರೀತಿ ಪ್ರತಿದಿನ 3ರಿಂದ 5 ಕೆ.ಜಿ ಚಿನ್ನವನ್ನು ಆರೋಪಿಗಳು ವಿಲೇವಾರಿ ಮಾಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದು ವಿಶೇಷ ವಿಚಾರಣಾ ದಳದ ಇನ್‌ಸ್ಪೆಕ್ಟರ್ ರವಿಪಾಟೀಲ್ ನೇತೃತ್ವದ ತಂಡ ದಾಳಿ ನಡೆಸಿ ಮಾಲಿಕನ ಸಮೇತ ಕಲಬೆರಕೆ ದಂಧೆಕೋರರನ್ನು ಸೆರೆ ಹಿಡಿಯಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕಳೆದ ಆರು ತಿಂಗಳಿಂದ ಈ ಕಲಬೆರಕೆ ಚಿನ್ನ ಮಾರಾಟ ದಂಧೆಯಲ್ಲಿ ತೊಡಗಿದ್ದಾಗಿ ವಿಚಾರಣೆ ವೇಳೆ ಬೋಸ್ಲೆ ಹೇಳಿಕೆ ನೀಡಿದ್ದಾನೆ. ಆದರೆ ನಗರತ್‌ಪೇಟೆಯಲ್ಲಿ ಆತ ನಾಲ್ಕೈದು ವರ್ಷಗಳಿಂದ ಚಿನ್ನ ಮಾರಾಟ ನಡೆಸುತ್ತಿರುವುದರಿಂದ ಅಂದಿನಿಂದಲೇ ಆತ ಕಲಬೆರಕೆ ದಂಧೆಯಲ್ಲಿ ತೊಡಗಿರುವ ಶಂಕೆ ಇದೆ. ಇನ್ನುಳಿದ ವ್ಯಾಪಾರಿಗಳ ಹಿನ್ನೆಲೆ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: Dharwad: ಕುಡಿದ ಮತ್ತಿನಲ್ಲಿ ಪೊಲೀಸರ ಜೀಪನ್ನೇ ಕಳವು ಮಾಡಿದ ಭೂಪ...!
ಪೆಡ್ಲರ್‌ಗಳಿಗೆ ಮಾದಕವಸ್ತು ಪೂರೈಸುತ್ತಿದ್ದ ಮೂವರ ಸೆರೆ: ಬೆಂಗಳೂರು(Bengaluru) ಸೇರಿದಂತೆ ಇತರೆ ಜಿಲ್ಲೆಗಳಿಗೆ ಗಾಂಜಾ(Marijuana) ಪೂರೈಕೆ ಮಾಡುತ್ತಿದ್ದ ಮೂವರನ್ನು ಮಾರತ್ತಹಳ್ಳಿ ಠಾಣೆ ಪೊಲೀಸರು(Police) ಬಂಧಿಸಿದ್ದಾರೆ.
ಚಿಕ್ಕಬಳ್ಳಾಪುರ(Chikkaballapur) ಜಿಲ್ಲೆ ಬಾಗೇಪಲ್ಲಿ ತಾಲೂಕಿನ ಮುದ್ದಲಪಲ್ಲಿ ಗ್ರಾಮದ ಆರ್.ಅಜಯ್ ಕುಮಾರ್, ರಾಜು ಅಲಿಯಾಸ್ ರಾಜ್ ಬಾಬು ಹಾಗೂ ಆಂಧ್ರಪ್ರದೇಶದ(Andhra Pradesh) ಚಿತ್ತೂರು ಜಿಲ್ಲೆ ಮದನಪಲ್ಲಿ ತಾಲೂಕಿನ ರವಿ ಅಲಿಯಾಸ್ ರವಿ ಮೊಗಸಾಲ ಬಂಧಿತನಾಗಿದ್ದು, ಆರೋಪಿಗಳಿಂದ(Accused) 40 ಕೆ.ಜಿ. ಗಾಂಜಾ ಜಪ್ತಿ ಮಾಡಲಾಗಿದೆ.
ಪಣತ್ತೂರು ರೈಲ್ವೆ ನಿಲ್ದಾಣ ಸಮೀಪ ಆರೋಪಿಗಳನ್ನು ಬಂಧಿಸಲಾಗಿದೆ. ಈ ದಾಳಿ ವೇಳೆ ತಪ್ಪಿಸಿಕೊಂಡಿರುವ ಆಂಧ್ರಪ್ರದೇಶದ ಮದನಪಲ್ಲಿಯ ಶಂಕರ್ ಅಲಿಯಾಸ್ ರಾಜೇಶ್ ಪತ್ತೆಗೆ ಕಾರ್ಯಾಚರಣೆ ಮುಂದುವರೆದಿದೆ.