* ದೊಡ್ಡಬಳ್ಳಾಪುರ ಬಳಿ ಕಾರು ಅಡ್ಡಗಟ್ಟಿಹಲ್ಲೆ ಪ್ರಕರಣಕ್ಕೆ ಟ್ವಿಸ್ಟ್
* ನಾಲ್ವರು ಆರೋಪಿಗಳ ಬಂಧನ
* ಪತಿ ಮುಕುಂದನ ಹತ್ಯೆಗೆ 40 ಲಕ್ಷ ರು. ಸುಪಾರಿ ನೀಡಿದ್ದ ಪತ್ನಿ ಮಮತ
ದೊಡ್ಡಬಳ್ಳಾಪುರ(ಜೂ.07): ನಗರದ ಹೊರವಲಯದ ಕೈಗಾರಿಕಾ ಪ್ರದೇಶದಲ್ಲಿ ಕಳೆದ 11 ದಿನಗಳ ಹಿಂದೆ ಶಿಕ್ಷಣ ಇಲಾಖೆ ನೌಕರರ ಕಾರನ್ನು ಅಡ್ಡಗಟ್ಟಿಹಲ್ಲೆ ನಡೆಸಿದ್ದ ಪ್ರಕರಣವನ್ನು ಗ್ರಾಮಾಂತರ ಠಾಣೆ ಪೊಲೀಸರು ಭೇದಿಸಿದ್ದು, ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಸೋಮವಾರ ಗ್ರಾಮಾಂತರ ಪೊಲೀಸ್ ಠಾಣೆ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಬೆ.ಗ್ರಾ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಂಶಿಕೃಷ್ಣ ಮಾಹಿತಿ ನೀಡಿ, ಮೇ25ರಂದು ಬೀರಸಂದ್ರದಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರ್ತವ್ಯ ಮುಗಿಸಿ ಮನೆಗೆ ತೆರಳುತ್ತಿದ್ದ, ಸಾರ್ವಜನಿಕ ಶಿಕ್ಷಣ ಇಲಾಖೆಯ ಸಿಬ್ಬಂದಿ ಕಾರು ಅಡ್ಡಗಟ್ಟಿದ್ದ ಕಿರಾತಕರು ಕಾರು ಜಖಂಗೊಳಿಸಿ ಪರಾರಿಯಾಗಿದ್ದರು ಎಂದು ಕಾರು ಚಲಾಯಿಸುತ್ತಿದ್ದ ಸಿಬ್ಬಂದಿ ಮುಕುಂದ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಪ್ರಕರಣದ ತನಿಖೆ ವೇಳೆ ಶಿಡ್ಲಘಟ್ಟಮೂಲದ ಮೌಲಾ(36), ಕೆಜಿ ಹಳ್ಳಿ ನಿವಾಸಿ ಸೈಯದ್ ನಹೀಮ್(32) ಅವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ, ಮುಕುಂದ ಅವರ ಪತ್ನಿ ಮಮತ ತನ್ನ ಗಂಡನ ಕೊಲೆಗೆ ಸುಪಾರಿ ನೀಡಿದ್ದಳು.
15 ಬಾರಿ ಚಾಕುವಿನಿಂದ ಇರಿದು ಗಂಡನ ಕೊಲೆ: ಪತ್ನಿ, ಮಗನ ಬಂಧನ
ಮಮತ, ತನ್ನ ಪತಿ ಮುಕುಂದ ಅವರ ಹತ್ಯೆಗೆ 40 ಲಕ್ಷ ರು. ಸುಪಾರಿ ನೀಡಿದ್ದಳು ಎನ್ನಲಾಗಿದೆ. ಬಳಿಕ ಪೊಲೀಸರು ಮಮತ(44) ಮತ್ತು ಆಕೆಯ ಗೆಳತಿ ಟಿ.ದಾಸರಹಳ್ಳಿಯ ತಸ್ಲಿಮ್(45)ಎಂಬುವವರನ್ನು ಬಂಧಿಸಿ ತನಿಖೆ ಮುಂದುವರೆಸಲಾಗಿದೆ ಎಂದರು.
ಬೆಂ.ಗ್ರಾ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಂಶಿಕೃಷ್ಣ, ಅಪರ ಪೊಲೀಸ್ ಅಧೀಕ್ಷಕ ಲಕ್ಷ್ಮೀಗಣೇಶ್, ಡಿವೈಎಸ್ಪಿ ನಾಗರಾಜ್ ಮಾರ್ಗದರ್ಶನದಲ್ಲಿ ಗ್ರಾಮಾಂತರ ಠಾಣೆ ಇನ್ಸ್‌ಪೆಕ್ಟರ್ ಸತೀಶ್, ಕೆ.ಜಿ.ಪಂಕಜ, ತರಬೇತಿ ಪಿಎಸ್‌ಐ ಪ್ರಶಾಂತ್, ಸಿಬ್ಬಂದಿ ರಾಧಾಕೃಷ್ಣ, ದತ್ತಾತ್ರೇಯ, ರಂಗನಾಥ್, ಗಂಗಯ್ಯ, ಮುತ್ತುರಾಜ್ ತಂಡ ನಿಯೋಜಿಸಿತ್ತು. ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಡಿವೈಎಸ್ಪಿ ನಾಗರಾಜ್, ಸರ್ಕಲ್ ಇನ್ಸ್‌ಪೆಕ್ಟರ್ ಹರೀಶ್, ಇನ್ಸ್‌ಪೆಕ್ಟರ್ ಸತೀಶ್ ಇದ್ದರು.