ಸೀರೆ ವ್ಯಾಪಾರದ ಸೋಗಲ್ಲಿ ಬೆಂಗ್ಳೂರಲ್ಲಿ ಗಾಂಜಾ ಮಾರಾಟ: ಐವರ ಬಂಧನ

By Kannadaprabha NewsFirst Published Jun 9, 2022, 7:44 AM IST
Highlights

*  ಆಂಧ್ರದಿಂದ ಸೀರೆಯೊಳಗೆ ಮಡಚಿಟ್ಟು ಸಾಗಾಟ
*  53 ಕೇಜಿ ಗಾಂಜಾ ಜಪ್ತಿ
*  ಸೀರೆ ಕವರ್‌ಗಳಲ್ಲಿ ಗಾಂಜಾ ಸಾಗಣೆ
 

ಬೆಂಗಳೂರು(ಜೂ.09):  ಸೀರೆ ವ್ಯಾಪಾರದ ಸೋಗಿನಲ್ಲಿ ನಗರಕ್ಕೆ ಗಾಂಜಾ ತಂದು ಮಾರಾಟ ಮಾಡುತ್ತಿದ್ದ ಐವರು ಚಾಲಾಕಿ ಪೆಡ್ಲರ್‌ಗಳನ್ನು ಯಶವಂತಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಆಂಧ್ರಪ್ರದೇಶದ ವಿಶಾಖಪಟ್ಟಣದ ಜಮೀಲ್‌ ಅಲಿಯಾಸ್‌ ಕುಳ್ಳ ಶಿವ, ತಿರುಪತಿಯ ಕಳ್ಳಪಲ್ಲಿ ನಾಗೇಂದ್ರ, ರಮಣ, ಮಣಿಕಂಠ ಹಾಗೂ ಯಶವಂತಪುರ ಕಿರಣ್‌ ಬಂಧಿತರಾಗಿದ್ದು, ಆರೋಪಿಗಳಿಂದ 53.45 ಕೆಜಿ ಗಾಂಜಾ ಸೇರಿದಂತೆ ಇತರೆ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಜಯರಾಮ್‌ ಕಾಲೋನಿ ಸಮೀಪ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿರುವ ಖಚಿತ ಮಾಹಿತಿ ಪಡೆದು ಕಿರಣ್‌ನನ್ನು ಇನ್ಸ್‌ಪೆಕ್ಟರ್‌ ಕೆ.ಸುರೇಶ್‌ ತಂಡ ಬಂಧಿಸಿತ್ತು. ವಿಚಾರಣೆ ವೇಳೆ ಆತ ನೀಡಿದ ಮಾಹಿತಿ ಆಧರಿಸಿ ಆಂಧ್ರಪ್ರದೇಶ ಮೂಲದ ಪ್ರಮುಖ ಗಾಂಜಾ ಪೂರೈಕೆದಾರರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸೀರೆ ಕವರ್‌ಗಳಲ್ಲಿ ಗಾಂಜಾ ಸಾಗಣೆ

ಆಂಧ್ರಪ್ರದೇಶ ಮೂಲದ ನಾಲ್ವರು ಆರೋಪಿಗಳು ವೃತ್ತಿಪರ ಗಾಂಜಾ ಪೆಡ್ಲರ್‌ಗಳಾಗಿದ್ದು, ಅವರ ವಿರುದ್ಧ ಬೆಂಗಳೂರು ಸೇರಿದಂತೆ ವಿವಿಧೆಡೆ ಪ್ರಕರಣ ದಾಖಲಾಗಿವೆ. ತಿಂಗಳ ಹಿಂದಷ್ಟೇ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಬಿಡುಗಡೆಯಾಗಿದ್ದ ಈ ನಾಲ್ವರು, ಮತ್ತೆ ತಮ್ಮ ಚಾಳಿ ಮುಂದುವರೆಸಿ ಈಗ ಜೈಲು ಸೇರಿದ್ದಾರೆ. ಬಸ್‌, ರೈಲುಗಳಲ್ಲಿ ಆಂಧ್ರಪ್ರದೇಶದ ವಿಶಾಖಪಟ್ಟಣದಿಂದ ನಗರಕ್ಕೆ ಗಾಂಜಾ ಸಾಗಿಸಿ ಬಳಿಕ ದುಬಾರಿ ಬೆಲೆಗೆ ಗಾಂಜಾ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Chikkamagaluru: ಆನೆದಂತ ಮಾರಾಟ ಮಾಡಲು ಯತ್ನ: ಐವರ ಬಂಧನ

ಸೀರೆ ಮಧ್ಯದಲ್ಲಿ ಪೊಟ್ಟಣಗಳಲ್ಲಿ ತುಂಬಿದ ಗಾಂಜಾವನ್ನು ಇಟ್ಟು ಆಂಧ್ರಪ್ರದೇಶದಿಂದ ಬಸ್‌ಗಳಲ್ಲಿ ನಗರಕ್ಕೆ ಗಾಂಜಾ ಸಾಗಿಸುತ್ತಿದ್ದರು ಎಂದು ಪೊಲೀಸರು ವಿವರಿಸಿದ್ದಾರೆ.

ಸೆರೆಯಾಗಿದ್ದು ಹೇಗೆ?

ಕೊರಿಯರ್‌ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಕಿರಣ್‌ ಗಾಂಜಾ ವ್ಯಸನಿ ಆಗಿದ್ದು, ನಂತರ ಹಣದಾಸೆಗೆ ಬಿದ್ದು ಆತ ಪೆಡ್ಲರ್‌ ಆಗಿ ಪರಿವರ್ತನೆಗೊಂಡಿದ್ದ. ತಾನು ಗಾಂಜಾ ಖರೀದಿಸುತ್ತಿದ್ದ ಸ್ಥಳೀಯ ಪೆಡ್ಲರ್‌ ಮೂಲಕ ಆಂಧ್ರಪ್ರದೇಶದ ಪೆಡ್ಲರ್‌ಗಳನ್ನು ಪರಿಚಯಿಸಿಕೊಂಡು ಕಿರಣ್‌ ಗಾಂಜಾ ಮಾರಾಟ ದಂಧೆಗಿಳಿದಿದ್ದ. ಆಂಧ್ರಪ್ರದೇಶದಲ್ಲಿ .2,500 ಸಾವಿರಕ್ಕೆ ತಲಾ 1 ಕೆಜಿ ಗಾಂಜಾ ಖರೀದಿಸಿ ತಂದು ನಗರದಲ್ಲಿ ಅದನ್ನೇ .15 ರಿಂದ .20 ಸಾವಿರಕ್ಕೆ ಮಾರುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ

click me!