Chamarajanagar: ಮಗು ತಾಯಿ ಮಡಿಲಿಗೆ: ಮಗು ಮಾರಿದ್ದ ತಂದೆ ಜೈಲಿಗೆ

By Govindaraj SFirst Published Sep 22, 2022, 2:45 AM IST
Highlights

ಹಣದಾಸೆಗೆ 25 ದಿನದ ಮಗು ಮಾರಾಟ ಮಾಡಿದ್ದ ಪ್ರಕರಣ ಸುಖಾಂತ್ಯಗೊಂಡಿದೆ. ಶಿಶುವನ್ನು ಪೊಲೀಸರು 24 ತಾಸಿನೊಳಗೆ ಪತ್ತೆ ಹಚ್ಚಿದ್ದಾರೆ. 50 ಸಾವಿರ ರು .ಗೆ ಮಾರಾಟ ಮಾಡಿದ್ದ ಮಗುವಿನ ತಂದೆ ಬಸಪ್ಪ(35)ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಚಾಮರಾಜನಗರ (ಸೆ.22): ಹಣದಾಸೆಗೆ 25 ದಿನದ ಮಗು ಮಾರಾಟ ಮಾಡಿದ್ದ ಪ್ರಕರಣ ಸುಖಾಂತ್ಯಗೊಂಡಿದೆ. ಶಿಶುವನ್ನು ಪೊಲೀಸರು 24 ತಾಸಿನೊಳಗೆ ಪತ್ತೆ ಹಚ್ಚಿದ್ದಾರೆ. 50 ಸಾವಿರ ರು .ಗೆ ಮಾರಾಟ ಮಾಡಿದ್ದ ಮಗುವಿನ ತಂದೆ ಬಸಪ್ಪ(35)ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕಳೆದ 7 ದಿನಗಳಿಂದ ಎದೆಹಾಲು ಕುಡಿಸದೇ ಪ್ಯಾಕೆಟ್‌ ಹಾಲು ಕುಡಿಸಿರುವುದರಿಂದ ಆರೋಗ್ಯದಲ್ಲಿ ಏರುಪಾರಾಗಿದ್ದು ಸದ್ಯ ಶಿಶು ಆಸ್ಪತ್ರೆಗೆ ದಾಖಲಾಗಿದೆ.

ಏನಿದು ಪ್ರಕರಣ: ಚಾಮರಾಜನಗರದ ಕೋರ್ಟ್‌ ರಸ್ತೆಯಲ್ಲಿ ವಾಸವಿರುವ, ಹೋಟೇಲ್‌ ಕಾರ್ಮಿಕ ಬಸಪ್ಪ(35) ನಾಗವೇಣಿ ದಂಪತಿಗೆ 7 ವರ್ಷದ ಗಂಡು ಮಗು ಇದೆ. 25 ದಿನಗಳ ಹಿಂದಷ್ಟೇ ಎರಡನೇ ಹೆರಿಗೆಯಲ್ಲಿ ಮತ್ತೊಂದು ಗಂಡು ಮಗು ಜನಿಸಿತ್ತು. ಆ ಮಗುವನ್ನು ಬಸಪ್ಪ ಗಾಳೀಪುರದ ವ್ಯಕ್ತಿಯೊಬ್ಬನಿಗೆ 50 ಸಾವಿರ ರು.ಗೆ 7 ದಿನಗಳ ಹಿಂದೆ ಮಾರಾಟ ಮಾಡಿದ್ದನು. ಲಿಂಗತ್ವ ಅಲ್ಪಸಂಖ್ಯಾತೆ ಹಾಗೂ ಸಂಶೋಧನಾ ವಿದ್ಯಾರ್ಥಿಯಾಗಿರುವ ದೀಪು ಬುದ್ಧೆ ಮೂಲಕ ಮಗು ಮಾರಾಟ ಪ್ರಕರಣ ಬಯಲಿಗೆಳಿದಿದ್ದು, ಬಳಿಕ ಮಕ್ಕಳ ಕಲ್ಯಾಣ ಸಮಿತಿ ಗಮನಕ್ಕೆ ತಂದಿದ್ದರು.

Belagavi: ನರ್ಸ್ ವೇಷದಲ್ಲಿ ಬಂದು ಮಗು ಅಪಹರಿಸಿದ್ದ ಚಾಲಾಕಿ ಕಳ್ಳಿಯ ಬಂಧನ

ಪ್ರಕರಣ ಸಂಬಂಧ ಕಾರ್ಯಪ್ರವೃತ್ತರಾದ ಚಾಮರಾಜನಗರ ಪಟ್ಟಣ ಠಾಣೆ ಪೊಲೀಸರು ಮದ್ದೂರು ತಾಲೂಕಿನ ಊರೊಂದರಲ್ಲಿದ್ದ ಮಗುವನ್ನು ಪತ್ತೆ ಹಚ್ಚಿ ಪ್ರಕರಣ ಸುಖಾಂತ್ಯಗೊಳಿಸಿದ್ದಾರೆ. ಮಗು ಮಾರಾಟ ಮಾಡಿದ್ದ ಬಸಪ್ಪನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಸಂಬಂಧ ಚಾಮರಾಜನಗರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಗು ಖರೀದಿಸಿದವರ ಬಂಧನ ಇಲ್ಲವೇ ವಶಕ್ಕೆ ಪಡೆದಿರುವ ಸಂಬಂಧ ಪೊಲೀಸ್‌ ಇಲಾಖೆ ಮಾಹಿತಿ ಬಿಟ್ಟುಕೊಟ್ಟಿಲ್ಲ.

ಮಗು ಮಾರಾಟ-ಸ್ಟಾಫ್‌ ನರ್ಸ್‌ ಬಂಧನ: ಅನಧಿಕೃತವಾಗಿ ಮಕ್ಕಳ ಮಾರಾಟ ಹಾಗೂ ಸಾಕಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಡಚಣ ತಾಲೂಕಿನ ಜಿಗಜಿವಣಗಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಸ್ಟಾಫ್‌ ನರ್ಸ್‌ ಒಬ್ಬಳನ್ನು ಪೊಲೀಸರು ಬಂಧಿಸಿ, ಐದು ಮಕ್ಕಳನ್ನು ರಕ್ಷಿಸಿದ್ದಾರೆ. ಜಿಗಜಿಣಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ಗುತ್ತಿಗೆ ಸ್ಟಾಫ್‌ ನರ್ಸ್‌ ಜಯಮಾಲಾ ಬಿಜಾಪುರ (ಪಾಟೀಲ) ಬಂಧಿತ ಆರೋಪಿ.

ವಿಜಯಪುರ ನಗರದ ಅಥಣಿ ಗಲ್ಲಿಯ ನಿವಾಸಿ ಸ್ಟಾಫ್‌ ನರ್ಸ್‌ ಐದು ಮಕ್ಕಳ ಮಾರಾಟ ಹಾಗೂ ಸಾಕಣೆ ಬಗ್ಗೆ ಖಚಿತ ಮಾಹಿತಿಯನ್ನು ಆಧರಿಸಿ ವಿಜಯಪುರ ಮಹಿಳಾ ಪೊಲೀಸರು ಕಾರ್ಯಾಚರಣೆ ನಡೆಸಿ ಐದು ಮಕ್ಕಳನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪೊಲೀಸರು ಹಾಗೂ ಮಕ್ಕಳ ಸಹಾಯವಾಣಿ ನಿರ್ದೇಶಕಿ ಸುನಂದಾ ತೋಳಬಂದಿ ಮತ್ತು ಅವರ ತಂಡದವರು ದಾಳಿ ನಡೆಸಿ ಮಕ್ಕಳನ್ನು ರಕ್ಷಿಸಿದ್ದಾರೆ. ಸ್ಟಾಫ್‌ ನರ್ಸ್‌ ಜಯಮಾಲಾ ಮನೆಯಲ್ಲಿ 5 ವರ್ಷದ ಗಂಡು ಮಗು ಹಾಗೂ 3 ವರ್ಷದ ಒಂದು ಹೆಣ್ಣು ಮಗು, ನಗರದ ದರಬಾರ ಗಲ್ಲಿಯ ಶಾಂತಮ್ಮ ಹೆರಕಲ್‌ ಬಳಿ 3 ವರ್ಷ್ ಒಂದು ಹೆಣ್ಣು ಮಗು, ಅಥಣಿ ಗಲ್ಲಿಯ ಚಂದ್ರಮ್ಮ ಮಾದರ ಬಳಿ 11 ತಿಂಗಳ ಹೆಣ್ಣು ಮಗುವನ್ನು ನರ್ಸ್‌ ಜಯಮಾಲಾ ಬಿಟ್ಟಿದ್ದಳು.

ಪ್ರೇಯಸಿಯನ್ನ ಕೊಲೆ ಮಾಡಿ, ಆತ್ಮಹತ್ಯೆ ಮಾಡಿಕೊಂಡ ಪ್ರೇಮಿ: 4 ವರ್ಷದ ಪ್ರೀತಿ ಜಗಳದಲ್ಲಿ ಅಂತ್ಯ?

ಐದು ವರ್ಷದ ಹೆಣ್ಣು ಮಗುವನ್ನು ಮಹಾರಾಷ್ಟ್ರದ ಸೊಲ್ಲಾಪುರ ಕುಟುಂಬವೊಂದಕ್ಕೆ ಸಾಗಾಟ ಮಾಡಲಾಗಿತ್ತು. ಒಂದು ಗಂಡು ಮಗು ಸೇರಿದಂತೆ ಒಟ್ಟು ಐವರು ಮಕ್ಕಳನ್ನು ರಕ್ಷಿಸಿ ನರ್ಸ್‌ ಜಯಮಾಲಾ ಎಂಬುವಳನ್ನು ಮಹಿಳಾ ಪೊಲೀಸರು ಬಂಧಿಸಿದ್ದಾರೆ. ಸದ್ಯಕ್ಕೆ ರಕ್ಷಣೆ ಮಾಡಿದ ಐವರು ಮಕ್ಕಳನ್ನು ಸಿದ್ದೇಶ್ವರ ದತ್ತು ಕೇಂದ್ರದಲ್ಲಿ ಆಶ್ರಯ ನೀಡಲಾಗಿದೆ. ಈ ಕುರಿತು ವಿಜಯಪುರ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

click me!