* ಮಳೆಯಿಂದ ಮನೆ, ರಸ್ತೆ ಕುಸಿತ
* ಬೆಳೆಹಾನಿಗೆ ನೊಂದು ರೈತನೋರ್ವ ಆತ್ಮಹತ್ಯೆ
* ನಿರಂತರ ಮಳೆಗೆ ಜನಜೀವನ ವ್ಯತ್ಯಯ
ಶಿರಸಿ(ನ.21): ಅಕಾಲಿಕ ಮಳೆ(Untimely Rain) ತಾಲೂಕಿನಲ್ಲಿ ರೈತರೊಬ್ಬರ(Farmer) ಜೀವ ತೆಗೆದಿದೆ. ಬೆಳೆದ ಬೆಳೆ ಕಣ್ಣೆದುರೇ ಹಾಳಾಗಿದ್ದನ್ನು ಕಂಡ ರೈತ ಮುಂದೆ ಜೀವನ ಹೇಗೆ ಎಂದು ಮನನೊಂದು ಕೀಟನಾಶಕ(Poison) ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ ನಡೆದಿದೆ.
ಉತ್ತರ ಕನ್ನಡ(Uttara Kannada) ಜಿಲ್ಲೆಯ ಶಿರಸಿ(Sirsi) ತಾಲೂಕಿನ ನರೂರಿನ ಗಂಗಾಧರ ಫಕೀರಪ್ಪ ಶೇಷಣ್ಣನವರ್ (58) ಆತ್ಮಹತ್ಯೆ ಮಾಡಿಕೊಂಡ ರೈತ. ಅವರು ತಮ್ಮ ಎರಡು ಎಕರೆ ಹೊಲದಲ್ಲಿ ಶುಂಠಿ ಹಾಗೂ ಭತ್ತವನ್ನು ಬೆಳೆದಿದ್ದರು. ಕೆಲ ದಿನಗಳ ಹಿಂದೆ ಈ ಬೆಳೆಗೆ(Crop) ರೋಗ ಬಾಧೆ ಸಹ ಕಾಣಿಸಿಕೊಂಡಿತ್ತು. ಈಗ ರೋಗ ನಿಯಂತ್ರಣವಾಗಿ, ಬೆಳೆ ಕಟಾವಿಗೆ ಬಂದಿತ್ತು. ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ(Rain) ಕಣ್ಣೆದುರೇ ಬೆಳೆ ಹಾಳಾಗಿದ್ದರಿಂದ ಮಾನಸಿಕವಾಗಿ ತೀವ್ರ ನೊಂದಿದ್ದರು.
ಕಳೆದ ವರ್ಷ ದೇಶದಲ್ಲಿ ಕೃಷಿ ಕಾರ್ಮಿಕರ ಆತ್ಮಹತ್ಯೆ ಪ್ರಕರಣ 18% ಏರಿಕೆ!
ಶುಕ್ರವಾರ ರಾತ್ರಿ 8 ಗಂಟೆಯ ವೇಳೆ ಹೊಲದ(Land) ಬಳಿ ಇದ್ದ ಗುಡಿಸಲಿಗೆ ತೆರಳಿದ ಗಂಗಾಧರ, ಕೀಟನಾಶಕ ಸೇವಿಸಿದ್ದಾರೆ. ವಿಷಯ ಗೊತ್ತಾಗುತ್ತಿದ್ದಂತೆ ಅವರನ್ನು ಶಿರಸಿಯ ಖಾಸಗಿ ಆಸ್ಪತ್ರೆಗೆ(Hospital) ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಈ ಕುರಿತು ಬನವಾಸಿ ಠಾಣೆಯಲ್ಲಿ ಪ್ರಕರಣ(Case) ದಾಖಲಾಗಿದೆ.
ನಿರಂತರ ಮಳೆಗೆ ಜನಜೀವನ ವ್ಯತ್ಯಯ
ಕಾರವಾರ(Karwar): ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಬೆಳೆಹಾನಿಯಾಗಿದ್ದನ್ನು ನೋಡಿ ಮನನೊಂದ ಶಿರಸಿಯ ರೈತ ಆತ್ಮಹತ್ಯೆ ಮಾಡಿಕೊಂಡಿದ್ದು, ಯಲ್ಲಾಪುರದಲ್ಲಿ(Yellapur) ಮನೆಯೊಂದು ಕುಸಿದಿದೆ. ರಸ್ತೆಯೂ ಕೊಚ್ಚಿಹೋಗಿರುವ ಘಟನೆ ನಡೆದಿದೆ.
ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಯಲ್ಲಾಪುರ ತಾಲೂಕಿನ ಉಮ್ಮಚಗಿ ಗ್ರಾಪಂ ವ್ಯಾಪ್ತಿಯ ಬಾಳೆಗದ್ದೆ ಊರಿನ ಅನಂತ ರಾಮಾ ಸಿದ್ದಿ ಎನ್ನುವವರಿಗೆ ಸೇರಿದ ಮನೆ ಸಂಪೂರ್ಣ ಕುಸಿದಿದೆ. ಉಮ್ಮಚಗಿ ಗ್ರಾಪಂ ವ್ಯಾಪ್ತಿಯ ತುಡುಗುಣಿಯಿಂದ ಸೂರಿಮನೆ ಸಂಪರ್ಕಿಸುವ ರಸ್ತೆಯ ತುಡುಗುಣಿ ಬ್ರಿಡ್ಜ್ ಬಳಿ ರಸ್ತೆ ಸಂಪೂರ್ಣ ಕುಸಿತಗೊಂಡಿದ್ದು, ಸೂರಿಮನೆ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ.
ಬತ್ತದ(Paddy) ಕೊಯ್ಲಿನ ಹಂಗಾಮಿನಲ್ಲಿ ಕೊಯ್ಲು ಮಾಡಲಾದ ಬೆಳೆ 894 ಹೆಕ್ಟೇರ್ ಪ್ರದೇಶದಲ್ಲಿ ಹಾನಿಯಾಗಿದೆ ಎಂದು ಕೃಷಿ ಇಲಾಖೆ(Department of Agriculture) ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯ ಕೊಯ್ಲು ಮಾಡಲಾದ ಬೆಳೆಯ ಪ್ರಾಥಮಿಕ ಸಮೀಕ್ಷೆ(Survey) ನಡೆಸಲಾಗಿದೆ. ಕೊಯ್ಲು ಮಾಡದೆ ಇರುವ ಬೆಳೆಯೂ ಹಾನಿಗೊಳಗಾಗಿದೆ(Corp Loss). ಅದರ ಸಮೀಕ್ಷೆ ನಡೆಯಬೇಕಿದೆ.
ಗೋಕಾಕ: ಸಾಲಗಾರರ ಕಾಟ, ಫೇಸ್‌ಬುಕ್ ಲೈವಲ್ಲಿ ರೈತ ಆತ್ಮಹತ್ಯೆ ಯತ್ನ
ನಿರಂತರ ಮಳೆ:
ಉತ್ತರ ಕನ್ನಡ ಜಿಲ್ಲೆಯ ವಿವಿಧೆಡೆ ವಾರದಿಂದ ನಿರಂತರವಾಗಿ ಮಳೆಯಾಗುತ್ತಿದೆ. ಪ್ರತಿದಿನವೂ ಗುಡುಗು, ಮಿಂಚಿನೊಂದಿಗೆ ಮಳೆ ಸುರಿಯುತ್ತಿದೆ. ದಿನವಿಡಿ ದಟ್ಟವಾದ ಮೋಡ ಕವಿದ ವಾತಾವರಣ ಬೇರೆ. ಶುಕ್ರವಾರ ರಾತ್ರಿಯಿಂದ ಶನಿವಾರ ಸಂಜೆ ತನಕ ಕಾರವಾರದಲ್ಲಿ ಜಿಟಿಜಿಟಿ ಮಳೆ ಬಿದ್ದಿದೆ. ಶಿರಸಿ, ಯಲ್ಲಾಪುರ, ಕುಮಟಾ, ಸಿದ್ಧಾಪುರ, ಮುಂಡಗೋಡ, ಜೋಯಿಡಾ, ಹೊನ್ನಾವರ ಹಾಗೂ ಭಟ್ಕಳಗಳಲ್ಲೂ ಮಳೆಯಾಗಿದೆ. ಈಗ ಭಾರಿ ಮಳೆ ಸುರಿಯದೆ ಜಿಟಿಜಿಟಿ ಮಳೆಯಾಗುತ್ತಿದೆ. ಆಗೊಮ್ಮೆ ಈಗೊಮ್ಮೆ ಜೋರಾಗಿ ಮಳೆ ಸುರಿಯುತ್ತಿದೆ.
ಮಳೆಯಿಂದಾಗಿ ಜನಸಂಚಾರ ಕಡಿಮೆಯಾಗಿದೆ. ಪೇಟೆ, ಪಟ್ಟಣಗಳಲ್ಲಿ ವ್ಯಾಪಾರ(Business) ವಹಿವಾಟು ಇಳಿಮುಖವಾಗಿದೆ. ರಸ್ತೆ, ಸೇತುವೆ, ಕಟ್ಟಡ ನಿರ್ಮಾಣ ಕಾಮಗಾರಿಗಳು ಸ್ಥಗಿತವಾಗಿವೆ. ಕ್ರೀಡಾಕೂಟ, ಸಭೆ ಸಮಾರಂಭಗಳು ರದ್ದಾಗಿವೆ. ಮೀನುಗಾರಿಕೆಯೂ ಸರಿಯಾಗಿ ನಡೆಯುತ್ತಿಲ್ಲ. ಜನಸಂಚಾರ ಅಸ್ತವ್ಯಸ್ತವಾಗಿದೆ. ಕಾರವಾರದ ಬಾಡ ಮಹಾದೇವರ ಜಾತ್ರೆಯ(Fair) ವೇಳೆ ಮಳೆ ಸುರಿದ ಕಾರಣ ದೇವರ ಪಲ್ಲಕ್ಕಿ ಮೆರವಣಿಗೆಯನ್ನು ಸುರಿಯುವ ಮಳೆಯಲ್ಲೇ ನಡೆಸಲಾಯಿತು. ಮಳೆಯಿಂದಾಗಿ ಜಾತ್ರೆಗೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲಿಲ್ಲ. ಒಟ್ಟಿನಲ್ಲಿ ಮಳೆಯಿಂದ ಜಿಲ್ಲೆಯಾದ್ಯಂತ ಜನಜೀವನದಲ್ಲಿ ವ್ಯತ್ಯಯ ಉಂಟಾಗಿದೆ.