ಬೆಂಗಳೂರು: ಹತ್ತಾರು ಸೋಗಿನಲ್ಲಿ ನಕಲಿ ಐಪಿಎಸ್‌ ಅಧಿಕಾರಿ ವಂಚನೆ..!

By Kannadaprabha NewsFirst Published Mar 19, 2023, 6:40 AM IST
Highlights

ಅಧಿಕಾರಿ ಸೋಗಿನಲ್ಲಿ ಉದ್ಯಮಿಗೆ ವಂಚಿಸಿದ್ದ ಶ್ರೀನಿವಾಸನ ನಾನಾ ಅಳವಂಡಗಳು ಪೊಲೀಸ್‌ ತನಿಖೆ ವೇಳೆ ಪತ್ತೆ, ಆರೋಪಿಯಿಂದ ನಕಲಿ ಗುರುತಿನ ಪತ್ರಗಳು, ವಿಸಿಟಿಂಗ್‌ ಕಾರ್ಡ್‌, 90.20 ಲಕ್ಷ ರು ಮೌಲ್ಯದ ವಸ್ತುಗಳ ವಶ. 

ಬೆಂಗಳೂರು(ಮಾ.19):  ಐಪಿಎಸ್‌ ಅಧಿಕಾರಿ ಸೋಗಿನಲ್ಲಿ ಉದ್ಯಮಿಯೊಬ್ಬರಿಗೆ ವಂಚಿಸಿ ಇತ್ತೀಚೆಗೆ ಪೊಲೀಸರಿಗೆ ಸಿಕ್ಕಿಬಿದ್ದಿರುವ ವಂಚಕ ಶ್ರೀನಿವಾಸ್‌, ಹೃದ್ರೋಗ ತಜ್ಞ, ರಕ್ಷಣಾ ಇಲಾಖೆ ಅಧಿಕಾರಿ ಸೇರಿದಂತೆ ವಿವಿಧ ಅವತಾರದಲ್ಲಿ ಜನರಿಗೆ ವಂಚಿಸಿ ರುವ ಸಂಗತಿ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಇತ್ತೀಚಿಗೆ 400 ಕೋಟಿ ರು. ಮೌಲ್ಯದ ರಿಯಲ್‌ ಎಸ್ಟೇಟ್‌ ಡೀಲ್‌ ನಡೆಸುವುದಾಗಿ ನಂಬಿಸಿ ಉದ್ಯಮಿ ವೆಂಕಟನಾರಾಯಣ್‌ ಅವರಿಗೆ 2.26 ಕೋಟಿ ರು. ವಂಚಿಸಿದ್ದ ಆರ್‌.ಶ್ರೀನಿವಾಸ್‌ನನ್ನು ತಲಘಟ್ಟಪುರ ಪೊಲೀಸರು ಸೆರೆ ಹಿಡಿದಿದ್ದರು. ಅತನನ್ನು ಇನ್ನಷ್ಟುವಿಚಾರಣೆಗೆ ಒಳಪಡಿಸಿದಾಗ ಬೇರೆ ಬೇರೆ ಸೋಗಿನಲ್ಲಿ ವಂಚಿಸಿರುವುದು ಬಯಲಾಗಿವೆ. ತನ್ನನ್ನು ರೈಲ್ವೆ ಇಲಾಖೆ ಆಪರೇಷನ್‌ ಎಕ್ಸ್‌ಕ್ಯೂಟಿವ್‌, ಕರ್ನಾಟಕ ಮೆಡಿಕಲ್‌ ಕೌನ್ಸಿಲ್‌ನ ನೋಂದಾಯಿತ ಹೃದ್ರೋಗ ತಜ್ಞ ವೈದ್ಯ( ಎಂಡಿ ಇನ್‌ ಕಾರ್ಡಿಯೋಲಾಜಿ), ರಕ್ಷಣಾ ಇಲಾಖೆಯ ಡಿಆರ್‌ಡಿಓದಲ್ಲಿ ವಿಂಗ್‌ ಆಫೀಸರ್‌ ಹಾಗೂ ಕೇಂದ್ರ ಗುಪ್ತದಳ (ಐಬಿ) ಇನ್ಸ್‌ಪೆಕ್ಟರ್‌ ಎಂದು ಬಿಂಬಿಸಿಕೊಂಡಿದ್ದ. ಈ ಸಂಬಂಧ ಆತನಲ್ಲಿದ್ದ ನಕಲಿ ಗುರುತಿನ ಪತ್ರಗಳು ಹಾಗೂ ವಿಸಿಟಿಂಗ್‌ ಕಾರ್ಡ್‌ಗಳನ್ನು ಸಬ್‌ ಇನ್ಸ್‌ಪೆಕ್ಟರ್‌ ವಿನಯ್‌ ತಂಡ ಜಪ್ತಿ ಮಾಡಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಬೆಂಗಳೂರಲ್ಲಿ ಮತ್ತೊಬ್ಬ ನಕಲಿ ಎಸ್‌ಪಿ: ಬರೋಬ್ಬರಿ 2.5 ಕೋಟಿ ಪಂಗನಾಮ ಹಾಕಿದ ಖದೀಮ..!

ವಂಚನೆ ಹಣದಲ್ಲಿ ಐಷರಾಮಿ ಬೈಕ್‌ ಖರೀದಿ: ಮೊದಲಿನಿಂದಲೂ ಶ್ರೀನಿವಾಸ್‌ಗೆ ಬೈಕ್‌ ಹುಚ್ಚು ಇತ್ತು, ಹೀಗಾಗಿ ವಂಚನಿಂದ ಸಂಪಾದಿಸಿದ ಹಣದಲ್ಲಿ ಆತ, ದುಬಾರಿ ಮೌಲ್ಯದ ಬೈಕ್‌ಗಳನ್ನು ಖರೀದಿಸಿ ಸುತ್ತಾಡುತ್ತಿದ್ದ. ಆರೋಪಿಯಿಂದ ಬಿಎಂಡಬ್ಲ್ಯು ಬೈಕ್‌, ರಾಯಲ್‌ ಎನ್‌ಫೀಲ್ಡ್‌ ಬೈಕ್‌, ಇನ್ನೋವಾ ಕಾರು ಸೇರಿ 54 ಲಕ್ಷ ರು. ಮೌಲ್ಯದ ವಾಹನಗಳನ್ನು ಜಪ್ತಿ ಮಾಡಲಾಗಿದೆ. ಅಲ್ಲದೆ ಐ ಫೋನ್‌, ನಕಲಿ ಪಿಸ್ತೂಲ್‌, ನಾಲ್ಕು ವಾಕಿಟಾಕಿ, ಲ್ಯಾಪ್‌ಟಾಪ್‌ ಹಾಗೂ 36 ಲಕ್ಷ ರು. ನಗದು ಸೇರಿದಂತೆ ಒಟ್ಟು 90.20 ಲಕ್ಷ ರು.ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ತಿರುಪತಿ ತಿಮ್ಮಪ್ಪನ ಹೆಸರು ನಂಬಿ ಟೋಪಿ: 

ತಿರುಪತಿ ತಿಮ್ಮಪ್ಪನ ದೇವರ ಪರಮಭಕ್ತರಾದ ಉದ್ಯಮಿ ವೆಂಕಟನಾರಾಯಣ್‌, ತಮ್ಮ ಇಷ್ಟದ ದೇವರ ಹೆಸರನ್ನಿಟ್ಟುಕೊಂಡಿದ್ದ ಕಾರಣಕ್ಕೆ ವಂಚಕ ಶ್ರೀನಿವಾಸ್‌ ನಂಬಿ 2 ಕೋಟಿ ಕಳೆದುಕೊಂಡಿದ್ದರು ಎಂಬ ಸಂಗತಿ ಈಗ ಬಯಲಾಗಿದೆ. ತಿಮ್ಮಪ್ಪನ ಹೆಸರಿಟ್ಟುಕೊಂಡು ಮೋಸ ಮಾಡಲ್ಲ ಅಂತ ಭಾವಿಸಿದೆ ಎಂದು ಪೊಲೀಸರಿಗೆ ದೂರುದಾರ ಹೇಳಿಕೆ ಕೊಟ್ಟಿದ್ದಾರೆ. ಕೊನೆಗೆ ವಂಚಕ ಶ್ರೀನಿವಾಸನ ಲೀಲೆ ಗೊತ್ತಾಗಿ ಅವರು ಬೆಸ್ತು ಬಿದ್ದಿದ್ದಾರೆ.

ಐಪಿಎಸ್‌ 7ನೇ ರಾರ‍ಯಂಕ್‌ ಎಂದಿದ್ದ ವಂಚಕ !

ಐಷರಾಮಿ ಜೀವನ ನಡೆಸಲು ಸುಲಭವಾಗಿ ಹಣ ಸಂಪಾದನೆಗೆ ಶ್ರೀನಿವಾಸ್‌, ಜನರಿಗೆ ಮೋಸಗೊಳಿಸಿ ಹಣ ಸಂಪಾದಿಸುವ ಕೃತ್ಯಕ್ಕಿಳಿದಿದ್ದ. ಮೊದಲು ಐಬಿ ಇನ್ಸ್‌ಪೆಕ್ಟರ್‌ ಎಂದು ಹೇಳಿಕೊಂಡಿದ್ದ ಆತ, ನಂತರ ತಾನು ಐಪಿಎಸ್‌ ಪರೀಕ್ಷೆಯಲ್ಲಿ 7ನೇ ರಾರ‍ಯಂಕ್‌ ಪಡೆದಿರುವುದಾಗಿ ಹೇಳಿಕೊಂಡಿದ್ದ. ಪೊಲೀಸ್‌ ಅಧಿಕಾರಿ ಸಮವಸ್ತ್ರ ಧರಿಸಿ, ಇನ್ನೋವಾ ಕಾರಿಗೆ ಪೊಲೀಸ್‌ ವಾಹನಗಳ ಮೇಲೆ ಇರುವ ಟಾಪ್‌ಲೈಟ್‌ ಅಳವಡಿಸಿಕೊಂಡು ತಿರುಗಾಡುತ್ತಿದ್ದ. ಅಲ್ಲದೆ ಸೊಂಟಕ್ಕೆ ಡಮ್ಮಿ ಪಿಸ್ತೂಲ್‌, ವಾಕಿಟಾಕಿಯನ್ನು ಕೂಡಾ ಇಟ್ಟುಕೊಂಡಿದ್ದ ಎಂದು ಪೊಲೀಸರು ವಿವರಿಸಿದ್ದಾರೆ.

click me!