
ಬೆಂಗಳೂರು(ಮಾ.19): ತೂಕದ ಸ್ಕೇಲ್‌ನಲ್ಲಿ(ವೇಯಿಂಗ್ ಮಿಷನ್)ಚಿಪ್ ಅಳವಡಿಸಿ ತೂಕದಲ್ಲಿ ವ್ಯತ್ಯಾಸ ಮಾಡಿ ಗ್ರಾಹಕರನ್ನು ವಂಚಿಸುತ್ತಿದ್ದ 17 ಮಂದಿ ಆರೋಪಿಗಳನ್ನು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕಾಮಾಕ್ಷಿಪಾಳ್ಯದ ಸೋಮಶೇಖರ್ (33), ಬಾಗಲಗುಂಟೆಯ ನವೀನ್ ಕುಮಾರ್ (30), ಕಾಮಾಕ್ಷಿಪಾಳ್ಯದ ವಿನೇಶ್ ಪಟೇಲ್ (22), ಅನ್ನಪೂಣೇಶ್ವರಿನಗರದ ರಾಜೇಶ್ ಕುಮಾರ್(43), ಗೊಲ್ಲರಹಟ್ಟಿಯ ವ್ಯಾಟರಾಯನ್ (42), ನಾಗರಬಾವಿಯ ಮೇಘನಾಥಮ್(38), ಕಾವೇರಿಪುರದ ಕೆ.ಲೋಕೇಶ್ (39), ಸುಂಕದಕಟ್ಟೆಯ ಎಸ್.ಆರ್.ಲೋಕೇಶ್ (24) ಹೆಗ್ಗನಹಳ್ಳಿ ಕ್ರಾಸ್ ಗಂಗಾಧರ್ (32), ಕಾಮಾಕ್ಷಿಪಾಳ್ಯದ ಚಂದ್ರಶೇಖರ್ (41), ಸುಕಂದಕಟ್ಟೆಯ ಅನಂತಯ್ಯ (44), ಪಟ್ಟೆಗಾರಪಾಳ್ಯದ ರಂಗನಾಥ್ (38), ಡಿ ಗ್ರೂಪ್ ಲೇಔಟ್‌ನ ಶಿವಣ್ಣ (51), ಪ್ರಕಾಶನಗರದ ಸನಾವುಲ್ಲಾ(65), ಹೆಗ್ಗನಹಳ್ಳಿಯ ವಿಶ್ವನಾಥ್(54), ಚಿಕ್ಕಬಸ್ತಿಯ ಮಹಮದ್ ಇಶಾಕ್(30) ಹಾಗೂ ಉಲ್ಲಾಳು ಉಪನಗರದ ಮಧುಸೂಧನ್(24) ಬಂಧಿತರು.
Bengaluru: ಗ್ರಾಹಕರ ಮೊಬೈಲ್ ಸಂಖ್ಯೆ ಬಳಸಿ ದೋಖಾ: ಆರೋಪಿಯ ಬಂಧನ
ಆರೋಪಿಗಳು ನ್ಯಾಯಬೆಲೆ ಅಂಗಡಿ, ಗುಜರಿ ಅಂಗಡಿ, ಕೋಳಿ, ಮೀನು, ಮಾಂಸ ಮಾರಾಟದ ಅಂಗಡಿಗಳಲ್ಲಿ ಈ ಚಿಪ್ ಅಳವಡಿಸಿದ ತೂಕದ ಸ್ಕೇಲ್‌ನಲ್ಲಿ ವ್ಯತ್ಯಾಸ ಮಾಡಿ ಗ್ರಾಹಕರಿಗೆ ವಂಚಿಸುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಶೇಷ ತಂಡ ಕಾರ್ಯಾಚರಣೆ:
ಇತ್ತೀಚೆಗೆ ಕಾಮಾಕ್ಷಿಪಾಳ್ಯದ ಮಾರುತಿನಗರದ ವಿಘ್ನೇಶ್ವರ್ ಓಲ್ಡ್ ಪೇಪರ್ ಮಾರ್ಚ್‌ನ ಮಾಲೀಕ ರಿಮೋಟ್ ಮೂಲಕ ತೂಕದಲ್ಲಿ ಮೋಸ ಮಾಡುತ್ತಿದ್ದಾನೆ ಎಂದು ಆರೋಪಿಸಿ ಗಣೇಶ್ ಎಂಬುವವರು ದೂರು ನೀಡಿದ್ದರು. ಈ ದೂರು ಆಧರಿಸಿ ಅಂಗಡಿ ಮಾಲೀಕ ವಿನೇಶ್ ಪಟೇಲ್‌ನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಆರೋಪಿಗಳಾದ ಸೋಮಶೇಖರ್ ಮತ್ತು ನವೀನ್‌ಕುಮಾರ್ ಎಂಬುವವರ ಬಳಿ ಚಿಪ್ ಆಧಾರಿತ ತೂಕದ ಯಂತ್ರ ಖರೀದಿಸಿದ್ದಾಗಿ ಬಾಯ್ಬಿಟ್ಟಿದ್ದಾನೆ. ಈ ಬಗ್ಗೆ ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ ನಿಂಬರಗಿ ಅವರು ಈ ವಂಚನೆ ಜಾಲ ಬೇಧಿಸಲು ರಚಿಸಿದ್ದ ಪೊಲೀಸರ ವಿಶೇಷ ತಂಡ ಕಾಮಾಕ್ಷಿಪಾಳ್ಯ ಠಾಣಾ ವ್ಯಾಪ್ತಿಯ ವಿವಿಧೆಡೆ ಕಾರ್ಯಾಚರಣೆ ನಡೆಸಿ ತೂಕದಲ್ಲಿ ವಂಚನೆ ಮಾಡುತ್ತಿದ್ದ 14 ಮಂದಿ ಆರೋಪಿಗಳನ್ನು ಬಂಧಿಸಿದೆ.
ಯೂಟ್ಯೂಬ್ ನೋಡಿ ಕಲಿಕೆ:
ಪ್ರಕರಣದ ಪ್ರಮುಖ ಆರೋಪಿಗಳಾದ ಸೋಮಶೇಖರ್ ಮತ್ತು ನವೀನ್ ಕುಮಾರ್ ಮಾಪನ ಶಾಸ್ತ್ರ ಇಲಾಖೆಯಿಂದ ಪರವಾನಗಿ ಪಡೆದು ಸ್ಕೇಲ… ಸರ್ವಿಸ್ ಮಾಡುವ ಕೆಲಸ ಮಾಡುತ್ತಿದ್ದರು. ಯೂಟ್ಯೂಬ್ ನೋಡಿಕೊಂಡು ತೂಕದ ಸ್ಕೇಲ್‌ನಲ್ಲಿ ಚಿಪ್ ಅಳವಡಿಸಿ ತೂಕದಲ್ಲಿ ವ್ಯತ್ಯಾಸ ಮಾಡುವುದನ್ನು ಕಲಿತಿದ್ದರು. ನಗರದ ಎಸ್.ಪಿ ರಸ್ತೆಯಿಂದ ಎಲೆಕ್ಟ್ರಾನಿಕ್ ವಸ್ತುಗಳನ್ನು ಖರೀದಿಸಿ ತಂದು ತೂಕದ ಯಂತ್ರದಲ್ಲಿ ಪ್ರಿಂಟೆಡ್ ಸಕ್ರ್ಯೂಟ್ ಬೋರ್ಡ್ (ಪಿಸಿಬಿ) ಚಿಪ್‌ನಲ್ಲಿ ಬದಲಾವಣೆ ಮಾಡಿ ಸ್ಕೇಲ…ನಲ್ಲಿ ಹೆಚ್ಚುವರಿ ಬಟನ್ ಹಾಗೂ ರಿಮೋಟ್ ಅಳವಡಿಸುತ್ತಿದ್ದರು. ಕಳೆದ ಮೂರು ವರ್ಷಗಳಿಂದ ಹಲವು ವ್ಯಾಪಾರಿಗಳಿಂದ ದುಬಾರಿ ಹಣ ಪಡೆದು ತೂಕದ ಸ್ಕೇಲ…ನಲ್ಲಿ ಮಾರ್ಪಾಡು ಮಾಡಿಕೊಟ್ಟಿದ್ದಾರೆ. ವಿಚಾರಣೆ ವೇಳೆ ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ಉಳಿದ ಆರೋಪಿಗಳನ್ನು ಬಂಧಿಸಲಾಗಿದೆ.
Vijayapura ಬೆತ್ತಲೆ ವಿಡಿಯೋ ಮಾಡಿ ಹಾಸನ 'ಪ್ರಿಯತಮೆ'ಯಿಂದ ದೋಖಾ: ₹ 40 ಲಕ್ಷ ಕಳೆದುಕೊಂಡ 'ಹೀರೋ'
ಹಿಂದೆಯೂ ಸಿಕ್ಕಿಬಿದ್ದಿದ್ದ ಆರೋಪಿ
ಪ್ರಮುಖ ಆರೋಪಿ ನವೀನ್ ಕುಮಾರ್‌ನ ತಾತ, ಅಪ್ಪ ಕೂಡ ತೂಕದ ಯಂತ್ರ ಮಾರಾಟ ಹಾಗೂ ಸರ್ವಿಸ್ ಕೆಲಸ ಮಾಡುತ್ತಿದ್ದರು. ಮೂರನೇ ತಲೆಮಾರಿನಲ್ಲಿ ನವೀನ್ ಕುಮಾರ್ ಆ ಕೆಲಸವನ್ನು ಮುಂದುವರೆಸಿದ್ದ. ಈತನ ವಿರುದ್ಧ ಈ ಹಿಂದೆ 2020ರಲ್ಲಿ ತೂಕದ ಸ್ಕೇಲ್‌ನಲ್ಲಿ ಬದಲಾವಣೆ ಮಾಡಿದ ಆರೋಪದಡಿ ಕೆ.ಪಿ.ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈತನ ವಿರುದ್ಧ ದೂರು ನೀಡಿದ್ದ ಮಾಪನ ಶಾಸ್ತ್ರ ಇಲಾಖೆ ಅಸಿಸ್ಟೆಂಟ್ ಕಂಟ್ರೋಲ್‌ಗೆ ಜೀವ ಬೆದರಿಕೆ ಹಾಕಿದ ಆರೋಪದಡಿ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಾಟ್ಸಾಪ್ ಗ್ರೂಪ್‌ನಲ್ಲಿ ವ್ಯವಹಾರ:
ಆರೋಪಿಗಳಾದ ಸೋಮಶೇಖರ್ ಮತ್ತು ನವೀನ್ ಕುಮಾರ್ ವಾಟ್ಸಾಪ್ ಗ್ರೂಪ್ ರಚಿಸಿಕೊಂಡು ಈ ಚಿಪ್ ಅಳವಡಿಕೆಯ ತೂಕದ ಯಂತ್ರಗಳನ್ನು ಮಾರಾಟ ಮಾಡುತ್ತಿದ್ದರು. ನಗರದ ವಿವಿಧೆಡೆ ಹಲವು ವ್ಯಾಪಾರಿಗಳಿಗೆ ಈ ಮಾರ್ಪಡಿಸಿದ ತೂಕದ ಯಂತ್ರಗಳನ್ನು ಮಾರಾಟ ಮಾಡಿದ್ದಾರೆ. ಆರೋಪಿಗಳ ಬಂಧನದ ಬೆನ್ನಲ್ಲೇ ಹಲವರು ತೂಕದ ಯಂತ್ರಗಳಲ್ಲಿ ರಹಸ್ಯವಾಗಿ ಅಳವಡಿಸಿದ್ದ ರಿಮೋಟ್‌ಗಳನ್ನು ಕಿತ್ತು ಎಸೆದಿದ್ದಾರೆ. ಈ ವಂಚನೆ ಜಾಲದಲ್ಲಿ ಮಾಪನ ಶಾಸ್ತ್ರ ಇಲಾಖೆಯ ಅಧಿಕಾರಿಗಳ ಕೈವಾಡ ಇರುವ ಬಗ್ಗೆ ಪೊಲೀಸರು ಶಂಕಿಸಿದ್ದು, ತನಿಖೆ ಮುಂದುವರೆಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ