Crime news: ಅಂಕೋಲಾದಲ್ಲಿ ನಕಲಿ ನೋಟಿನ ಹಾವಳಿ; ಸಣ್ಣ ವ್ಯಾಪಾರಿಗಳೇ ಟಾರ್ಗೆಟ್!

By Kannadaprabha NewsFirst Published Aug 30, 2023, 4:31 PM IST
Highlights

ಪಟ್ಟಣದ ಹಲವೆಡೆ . 500 ಮುಖಬೆಲೆಯ ನಕಲಿ ನೋಟಿನ ಚಲಾವಣೆ ಹೆಚ್ಚಾಗಿದ್ದು ಸಣ್ಣ ವ್ಯಾಪಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ. ಇದರಿಂದ ನಾಗರಿಕರು ಆತಂಕಕ್ಕೆ ಒಳಗಾಗಿದ್ದಾರೆ.

-ರಾಘು ಕಾಕರಮಠ.

ಅಂಕೋಲಾ (ಆ.30) :  ಪಟ್ಟಣದ ಹಲವೆಡೆ . 500 ಮುಖಬೆಲೆಯ ನಕಲಿ ನೋಟಿನ ಚಲಾವಣೆ ಹೆಚ್ಚಾಗಿದ್ದು ಸಣ್ಣ ವ್ಯಾಪಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ. ಇದರಿಂದ ನಾಗರಿಕರು ಆತಂಕಕ್ಕೆ ಒಳಗಾಗಿದ್ದಾರೆ.

ನಕಲಿ ನೋಟು(Fake notes) ಚಲಾವಣೆ ಮಾಡುವ ಒಂದು ತಂಡವೇ ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮೀಣ ಪ್ರದೇಶಗಳಲ್ಲಿ ಸಕ್ರೀಯವಾಗಿದೆ. ಹೆಚ್ಚಾಗಿ ಅಂಕೋಲಾದ ಶನಿವಾರದ ಸಂತೆಯಲ್ಲಿ ಖೋಟಾ ನೋಟು ತನ್ನ ಕರಾಳ ಮುಖ ಪ್ರದರ್ಶಿಸುತ್ತಲಿದೆ. . 500 ಮುಖಬೆಲೆಯ ನೋಟುಗಳನ್ನಷ್ಟೆಆಯ್ದ ಕೆಲವು ವ್ಯಕ್ತಿಗಳಿಗೆ ಕೊಟ್ಟು ಜನದಟ್ಟಣೆ ಇರುವ ವ್ಯಾಪಾರ ಕೇಂದ್ರಗಳಲ್ಲಿ ವಸ್ತು ಖರೀದಿಸಿ ನೋಟು ವಿನಿಮಯ ಮಾಡಿಕೊಳ್ಳಲಾಗುತ್ತಿದೆ.

ಇನ್‌ಸ್ಟಾಗ್ರಾಂನಲ್ಲಿ ಖೋಟಾ ನೋಟು ಖರೀದಿಸಿ ದಂಧೆ!

ಕೆಲವೆಡೆ ಅಸಲಿ ನೋಟಿನ ಜತೆಗೆ ನಕಲಿ ನೋಟುಗಳನ್ನು ಸೇರಿಸಿ ಕೊಡುವುದು ಮತ್ತು ರಸ್ತೆ ಬದಿಗಳಲ್ಲಿ ವ್ಯಾಪಾರ ಮಾಡುವ ಸಣ್ಣ ವ್ಯಾಪಾರಿಗಳ ಬಳಿ ವಸ್ತು ಖರೀದಿಸಿ ಕಲರ್‌ ಪ್ರಿಂಟ್‌ ನೋಟು ಕೊಟ್ಟು ಹೋಗುತ್ತಿದ್ದಾರೆ.

ಅಸಲಿ ನೋಟನ್ನು ಕಲರ್‌ ಪ್ರಿಂಟ್‌ ಮಾಡಿ ನೋಟಿನ ಮಧ್ಯಭಾಗದಲ್ಲಿ ಬರುವ ಆರ್‌ಬಿಐ ಗೆರೆಯನ್ನು ಮಾರ್ಕ್ರ್‌ ಪೆನ್‌ಬಳಸಿ ಎಳೆಯಲಾಗಿದೆ. ಆದರೆ, ಈ ನಕಲಿ ನೋಟಿಗೆ ಬಳಸಲಾಗಿರುವ ಪೇಪರ್‌ ತೆಳುವಾಗಿದ್ದು, ಕೈಯಲ್ಲಿ ಮುದುರಿದರೆ ಸಂಪೂರ್ಣವಾಗಿ ಪೇಪರ್‌ ಉಂಡೆಯಾಗುತ್ತದೆ. ಅಲ್ಲದೆ ಈ ನೋಟುಗಳು ಸಾರ್ವಜನಿಕರ ಕೈನಿಂದ ಕೈಗೆ ಚಲಾವಣೆಯಾಗುತ್ತಿದ್ದಂತೆ ಬಣ್ಣವೆಲ್ಲ ಮಾಸಿ ಬೇಗನೆ ಹರಿದು ಹೋಗುತ್ತದೆ.

ಪ್ರತಿದಿನ ವ್ಯವಹಾರ ನಡೆಸುವ ಪೆಟ್ರೋಲ್‌ ಬಂಕ್‌ ಹಾಗೂ ಇತರ ವ್ಯಾಪಾರಿಗಳು ಬ್ಯಾಂಕ್‌ಗಳಿಗೆ ಹಣಕಟ್ಟಲು ಹೋದಾಗ ನೋಟು ಎಣಿಕೆ ಯಂತ್ರಕ್ಕೆ ಹಾಕಿದಾಗ ನಕಲಿ ನೋಟುಗಳು ಬೇರ್ಪಡುತ್ತವೆ. ಇವುಗಳನ್ನು ಬ್ಯಾಂಕ್‌ ಸಿಬ್ಬಂದಿ ಹಣ ಕಟ್ಟಿದ ಗ್ರಾಹಕನಿಗೆ ವಾಪಸ್‌ ಕೊಡದೆ ಹರಿದು ಬಿಸಾಡುತ್ತಾರೆ. ಇಂತಹ ಬಹಳಷ್ಟುಸನ್ನಿವೇಶಗಳು ಪಟ್ಟಣದಲ್ಲಿ ಪ್ರತಿನಿತ್ಯ ಸಾರ್ವಜನಿಕ ವಲಯದಲ್ಲಿ ಕಾಣಸಿಗುತ್ತಿದ್ದು, ಸಾರ್ವಜನಿಕರು ಯಾವುದು ನಕಲಿ, ಅಸಲಿ ನೋಟು ಎಂದು ಗೊತ್ತಾಗದೆ ಪೇಚಿಗೆ ಸಿಲುಕುವಂತಾಗಿದೆ.

Bengaluru: ಕನಕಪುರ ರಸ್ತೆಯಲ್ಲಿ 2000 ರೂ. ಮುಖಬೆಲೆಯ ಕಂತೆ ಕಂತೆ ನೋಟುಗಳು ಪತ್ತೆ

ನಾನು ದಿನನಿತ್ಯ ಸಣ್ಣಪುಟ್ಟವ್ಯಾಪಾರ ಮಾಡುತ್ತೇನೆ. ನಕಲಿ ನೋಟು ವ್ಯಾಪಾರದಲ್ಲಿ ಬರುತ್ತಿರುವುದರಿಂದ ನಮಗೆ ದಿಕ್ಕು ತೋಚದಂತಾಗಿದೆ. ಪೊಲೀಸರು ಈ ಬಗ್ಗೆ ಕ್ರಮವಹಿಸುವಂತಾಗಬೇಕು.

ಬೇಬಿ ಗೌಡ ಬೆಳಂಬಾರ

ಖೋಟಾ ನೋಟು ಹಾವಳಿಯ ನಿಯಂತ್ರಣಕ್ಕೆ ಇಲಾಖೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಿದೆ. ಮಪ್ತಿಯಲ್ಲಿ ಪೊಲೀಸರನ್ಬು ನಿಯೋಜಿಸಿ ಪ್ರಕರಣದ ಪತ್ತೆಗೆ ಕ್ರಮ ಜರುಗಿಸಲಾಗುವುದು. ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳುವಂತೆ ಅಂಕೋಲಾ ಪೊಲೀಸರಿಗೆ ಸೂಚನೆ ನೀಡಿದ್ದೇನೆ.

ವೆಲೆಂಟೈನ್‌ ಡಿಸೋಜಾ, ಡಿವೈಎಸ್ಪಿ ಕಾರವಾರ ವಿಭಾಗ

ಪೊಲೀಸರಿಗೆ ದೂರು ನೀಡಲು ಭಯ

ನಕಲಿ ನೋಟು ಬಂದಾಗ ಅದನ್ನು ಪೊಲೀಸರ ಗಮನಕ್ಕೂ ತರಲು ನಾಗರಿಕರು ಭಯಪಡುತ್ತಿದ್ದಾರೆ. ಪೊಲೀಸರು ಎಲ್ಲಿ ತಮ್ಮನ್ನೆ ಆರೋಪಿಯನ್ನಾಗಿಸಿ ವಿಚಾರಣೆಗೆ ಕರೆದೊಯ್ಯಬಹುದು ಎಂಬ ಆತಂಕವಿದೆ. ಹೀಗಾಗಿ ಖೋಟಾ ನೋಟು ಮಾತ್ರ ನಿರಾತಂಕ ಚಲಾವಣೆಗೊಳ್ಳುತ್ತಿರುವುದು ತಾಲೂಕಿನ ಆರ್ಥಿಕ ವ್ಯವಸ್ಥೆಯ ಮೇಲೆ ಕರಿ ನೆರಳು ಚೆಲ್ಲುವಂತಾಗಿದೆ.

click me!