ಅಕ್ರಮ ಆಸ್ತಿಗೆ ಸಂಬಂಧಿಸಿದಂತೆ ಎಸಿಬಿ ರೇಡ್ ಮಾಡೋದಾಗಿ ಹಾಗೂ ರೇಡ್ ತಪ್ಪಿಸೋದಕ್ಕೆ ಹಣ ನೀಡಬೇಕು ಅಂತಾ ಹೆದರಿಸೋ ಖತರ್ನಾಕ್ ಗ್ಯಾಂಗ್ ಹುಟ್ಕೊಂಡಿದೆ.
ಗಿರೀಶ್ ಕಮ್ಮಾರ, ಏಷ್ಯಾನೆಟ್ ಸುವರ್ಣ ನ್ಯೂಸ್, ಗದಗ
ಗದಗ (ಮೇ.09): ಅಕ್ರಮ ಆಸ್ತಿಗೆ ಸಂಬಂಧಿಸಿದಂತೆ ಎಸಿಬಿ ರೇಡ್ (ACB Raid ಮಾಡೋದಾಗಿ ಹಾಗೂ ರೇಡ್ ತಪ್ಪಿಸೋದಕ್ಕೆ ಹಣ ನೀಡಬೇಕು ಅಂತಾ ಹೆದರಿಸೋ ಖತರ್ನಾಕ್ ಗ್ಯಾಂಗ್ ಹುಟ್ಕೊಂಡಿದೆ. ಗದಗ (Gadag) ಜಿಲ್ಲೆಯ ರೋಣ ತಾಲೂಕು ದಂಡಾಧಿಕಾರಿ ಜಿಬಿ ಜಕ್ಕನಗೌಡರ್ ಅವರಿಗೇ ಹೆದರಿಸಲು ಮುಂದಾಗಿದ್ದ ಅನಾಮಿಕರ ತಂಡ, ಹಣದ ಬೇಡಿಗೆ ಇಟ್ಟ ಪ್ರಕರಣ ಬೆಳಕಿಗೆ ಬಂದಿದೆ.
ಗದಗದ ಎಸಿಬಿ ಡಿವೈಎಸ್‌ಪಿ ಎಮ್.ವೈ.ಮಲ್ಲಾಪುರ (MY Mallapura) ಹೆಸರು ಹೇಳ್ಕೊಂಡು ಏಪ್ರಿಲ್ 26ನೇ ತಾರೀಕು ತಹಶೀಲ್ದಾರ್ ಅವರಿಗೆ ಫೋನ್ ಬಂದಿತ್ತು. ಅಕ್ರಮ ಆಸ್ತಿ ಸಂಪಾದನೆ ಮಾಡಿದ ಬಗ್ಗೆ ಎಸಿಬಿಗೆ ಮಾಹಿತಿ ಇದೆ. ಕೂಡಲೇ ರೇಡ್ ಮಾಡುವವರಿದ್ದೇವೆ. ಹಣದ ವ್ಯವಸ್ಥೆ ಮಾಡಿದಲ್ಲಿ ರೇಡ್ ತಪ್ಪಿಸುತ್ತೇವೆ ಅಂತಾ ಕಥೆ ಕಟ್ಟಿದ್ರು. ತಹಶೀಲ್ದಾರ್ ಅವರಿಗೆ ಬೇರೆ ಬೇರೆ ನಂಬರ್‌ಗಳಿಂದ ಫೋನ್ ಮಾಡಿ ಹಣ ಹೊಂದಿಗೆ ಕೂಡಲೇ ಗೂಗಲ್ ಪೇ (Google Pay) ಮಾಡುವಂತೆ ಹೇಳಿದರು.
ಎಸಿಬಿ ಹೆಸರಿನಲ್ಲಿ ಅಧಿಕಾರಿಗಳಿಗೆ ಬೆದರಿಕೆ, ಗೂಗಲ್ ಪೇ ಮೂಲಕ ಹಣಕ್ಕೆ ಬೇಡಿಕೆ
ಏರ್ ಟಿಕೆಟ್ ಬುಕ್ ಮಾಡಿ. ರೇಡ್ ಮಾಡಲ್ಲ: ರೇಡ್ ಮಾಡೋದಾಗಿ ಭಯ ಹುಟ್ಟಿಸುವ ಖದೀಮರು, ಕೂಡಲೇ ನೀವು ಇರುವ ಜಾಗದಿಂದ ಬೇರೆಡೆ ಹೋಗಿ, ಸಂಜೆ ಐದು ಗಂಟೆಯೊಳಗೆ ಕೇಸ್ ಕ್ಲೋಸ್ ಮಾಡುತ್ತೇವೆ. ಬೆಂಗಳೂರಿನ ಎಸಿಬಿ ಅಧಿಕಾರಿಗಳು ಸ್ನೇಹಿತರೊಂದಿಗೆ ಹೊರ ದೇಶಕ್ಕೆ ಹೊರಟಿದ್ದಾರೆ. ಇಬ್ಬರಿಗೆ ಏರ್ ಟಿಕೆಟ್ ಬುಕ್ ಮಾಡಬೇಕಿದೆ. ಒಂದು ಟಿಕೆಟ್ ಬೆಲೆ 65 ಸಾವಿರ ರೂಪಾಯಿ ಒಟ್ಟು 1 ಲಕ್ಷ 30 ಸಾವಿರ ರೂಪಾಯಿ ಹಣ ಕೊಟ್ಟರೆ ಕೇಸ್ ಕ್ಲೋಸ್ ಆಗುತ್ತೆ ಅಂತಾ ಡೀಲ್ ಮಾಡೋದಕ್ಕೆ ಮುಂದೆ ಬಂದಿದ್ರು. ಎಸಿಬಿ ಅಧಿಕಾರಿ ಎಮ್ ವೈ ಮಲ್ಲಾಪುರ ಅವರ ಹೆಸರಲ್ಲಿ ವಂಚನೆ ನಡೆಯುತ್ತಿರುವ ಬಗ್ಗೆ ಆಗಲೇ ಗುಸುಗುಸು ಶುರುವಾಗಿತ್ತು. ವಿಷಯ ತಿಳಿದು ಮಲ್ಲಾಪುರ ಅವರು ತಹಶೀಲ್ದಾರ್ ಅವರಿಗೆ ಕೇಸ್ ದಾಖಲಿಸಲು ಹೇಳಿದರು. ಈ ಹಿನ್ನೆಲೆಯಲ್ಲಿ ಕೇಸ್ ದಾಖಲಿಸಿಕೊಂಡಿರೋ ಪೊಲೀಸರು ತನಿಖೆ ನಡೆಸ್ತಿದ್ದಾರೆ.
ಗದಗ ಜಿಲ್ಲೆಯ ಕೆಲ ಅಧಿಕಾರಿಗಳನ್ನ ಟಾರ್ಗೆಟ್ ಮಾಡಿದ್ದಾರಾ ಖದೀಮರು: ತಹಶೀಲ್ದಾರ್ ಜಕ್ಕನಗೌಡ್ರು ದೂರು ನೀಡಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಇದೇ ಮಾದರಿಯಲ್ಲಿ ಜಿಲ್ಲೆಯ ಬೇರೆ ಅಧಿಕಾರಿಗಳನ್ನ ವಂಚಿಸಲಾಗ್ತಿತ್ತು ಅನ್ನೋ ಮಾಹಿತಿಯೂ ಇದೆ. ಆದರೆ ಮರ್ಯಾದೆಗೆ ಅಂಜಿ ಅಧಿಕಾರಿಗಳು ಹಣ ವಂಚನೆಯಾಗಿರೋ ಬಗ್ಗೆ ಹೇಳಿಕೊಳ್ತಿಲ್ಲ.
ಮಹಾರಾಷ್ಟ್ರ ಮೂಲದ ಖದೀಮರಿಂದ ಆನ್ ಲೈನ್ ಫ್ರಾಡ್: ಮಹಾರಾಷ್ಟ್ರದಲ್ಲಿ ಕೂತು ಆಪ್ರೇಟ್ ಮಾಡೋ ಖದೀಮರ ಟೀಮ್ ಅಧಿಕಾರಿಗಳನ್ನ ಟಾರ್ಗೆಟ್ ಮಾಡ್ತಿದ್ಯಂತೆ. ಕಾಲರ್ ಐಡಿಯಲ್ಲೂ ಖದೀಮರ ನಂಬರ್ ಹೆಸರು ಎಸಿಬಿ ಡಿವೈಎಸ್‌ಪಿ ಅಂತಾ ಬರುವಹಾಗೆ ಮಾಡಲಾಗಿದೆ. ಸರ್ಕಾರಿ ಅಧಿಕಾರಿಗಳ ಭಯವನ್ನೇ ಬಂಡವಾಳ ಮಾಡ್ಕೊಂಡು ಆಪರೇಟ್ ಮಾಡೋ ಹೊಸದೊಂದು ಟೀಮ್ ಸದ್ಯ ಚಾಲ್ತಿಯಲ್ಲಿದೆ. ನಕಲಿ ಫೇಸ್‌ಬುಕ್ ಖಾತೆ ಓಪನ್ ಮಾಡಿ, ರಿಕ್ವೆಸ್ಟ್ ಕಳಿಸಿ ನಕಲಿ ಖಾತೆಯಿಂದ ಸ್ನೇಹಿತರಿಗೆ ರಿಕ್ವೆಸ್ಟ್ ಕಳುಹಿಸಿ ಹಣದ ಬೇಡಿಕೆ ಇಡಲಾಗ್ತಿತ್ತು. ಈ ಬಗ್ಗೆ ಅನೇಕ ದೂರುಗಳಿದ್ದು ಜನರೂ ಎಚ್ಚೆತ್ತುಕೊಂಡಿದ್ದಾರೆ. ಈಗ ಅಪ್‌ಗ್ರೇಡ್ ಆಗಿರೋ ಖದೀಮರು ಎಸಿಬಿ ಅಧಿಕಾರಿಗಳ ಹೆಸರಲ್ಲಿ ವಂಚಿಸಲು ಮುಂದಾಗಿದ್ದಾರೆ.
ACB Raids: ಲಂಚಕ್ಕೆ ಬೇಡಿಕೆ: ಭೋವಿ ನಿಗಮದ ಅಧಿಕಾರಿಗಳಿಗೆ ಎಸಿಬಿ ಬಿಸಿ
ಎಸಿಬಿ ಅಧಿಕಾರಿಗಳು ರೇಡ್ ಮಾಡ್ತಾರೆ.. ಹೆದರಿಸುವುದಿಲ್ಲ: ಪ್ರಕರಣದ ಬಗ್ಗೆ ಮಾಹಿತಿ ನೀಡಿರುವ ಗದಗ ಎಸ್ ಪಿ ಶಿವಪ್ರಕಾಶ್ ದೇವರಾಜು, ಎಸಿಬಿ ಬಳಿ ಅಕ್ರಮ ಆಸ್ತಿ ಬಗ್ಗೆ ಯಾವುದೇ ದೂರುಗಳಿದ್ದರೆ ದಾಳಿ ಮಾಡ್ತಾರೆ. ಅದು ಬಿಟ್ಟು ಫೋನ್ ಮಾಡಿ ಬ್ಲ್ಯಾಕ್ ಮೇಲ್ ಮಾಡಲ್ಲ. ಒಂದು ವೇಳೆ ಬ್ಲ್ಯಾಕ್ ಮೇಲ್ ಮಾಡಿದ್ರೆ ಕೂಡಲೇ ದೂರು ನೀಡಬಹುದು. ಪೊಲೀಸ್ ಅಧಿಕಾರಿಗಳ ಹಾಗೂ ಎಸಿಬಿ ಹೆಸರು ಹೇಳಿಕೊಂಡು ಖದೀಮರು ವಂಚಿಸುವ ಪ್ರಕರಣಗಳು ಬೆಳಕಿಗೆ ಬರ್ತಿವೆ. ಈ ಬಗ್ಗೆ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು. ಫ್ರಾಡ್ ಕಾಲ್‌ಗಳು ಬಂದಲ್ಲಿ ಹತ್ತಿರದ ಪೊಲೀಸ್ ಸ್ಟೇಷನ್‌ಗೆ ತೆರಳಿ ದೂರು ನೀಡಬೇಕು ಅಂತಾ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.