Sunetra Pandit: ಹಂಪಲ್ಲಿ ಎಗರಿ ಬಿದ್ದ ಸ್ಕೂಟರ್‌: ನಟಿ ಜೀವ ಉಳಿಸಿದ ಹೆಲ್ಮೆಟ್‌!

By Govindaraj S  |  First Published May 9, 2022, 2:45 AM IST

ಅವೈಜ್ಞಾನಿಕ ರಸ್ತೆ ಹಂಪ್‌ನಿಂದ ಸಂಭವಿಸಿದ ಅಪಘಾತದಲ್ಲಿ ಖ್ಯಾತ ಪೋಷಕ ನಟಿ ಸುನೇತ್ರಾ ಪಂಡಿತ್‌ ಅವರು ಗಾಯಗೊಂಡಿರುವ ಘಟನೆ ಶನಿವಾರ ರಾತ್ರಿ ಬಸವನಗುಡಿ ಸಂಚಾರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.


ಬೆಂಗಳೂರು (ಮೇ.09): ಅವೈಜ್ಞಾನಿಕ ರಸ್ತೆ ಹಂಪ್‌ನಿಂದ ಸಂಭವಿಸಿದ ಅಪಘಾತದಲ್ಲಿ (Accident) ಖ್ಯಾತ ಪೋಷಕ ನಟಿ ಸುನೇತ್ರಾ ಪಂಡಿತ್‌ (Sunetra Pandit) ಅವರು ಗಾಯಗೊಂಡಿರುವ ಘಟನೆ ಬಸವನಗುಡಿ ಸಂಚಾರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ನಗರದ ನರಸಿಂಹರಾಜ ಕಾಲೋನಿ (ಎನ್‌.ಆರ್‌.ಕಾಲೋನಿ) 9ನೇ ಅಡ್ಡರಸ್ತೆಯಲ್ಲಿ ಈ ದುರ್ಘಟನೆ ನಡೆದಿದೆ. ಅಪಘಾತದಲ್ಲಿ ಸುನೇತ್ರಾ ಪಂಡಿತ್‌ ಅವರ ತಲೆಗೆ ಗಾಯವಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ (Private Hospital) ಚಿಕಿತ್ಸೆ (Treatment) ಪಡೆಯುತ್ತಿದ್ದಾರೆ. ಅದೃಷ್ಟವಶಾತ್‌ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ನಟಿ ಸುನೇತ್ರಾ ಪಂಡಿತ್‌ ಅವರು ಶನಿವಾರ ರಾತ್ರಿ ಚಿತ್ರೀಕರಣ ಮುಗಿಸಿಕೊಂಡು ರಾತ್ರಿ 11.45ರ ಸುಮಾರಿಗೆ ತಮ್ಮ ದ್ವಿಚಕ್ರ ವಾಹನದಲ್ಲಿ ಮನೆಗೆ ಬರುತ್ತಿದ್ದರು. ಈ ವೇಳೆ ಮಾರ್ಗ ಮಧ್ಯೆ ಎನ್‌.ಆರ್‌.ಕಾಲೋನಿಯ 9ನೇ ಅಡ್ಡರಸ್ತೆಯಲ್ಲಿ ರಸ್ತೆ ಹಂಫ್ಸ್‌ ಕಾಣಿಸಿಲ್ಲ. ತಮ್ಮ ದ್ವಿಚಕ್ರ ವಾಹನವನ್ನು ಹಾಗೆಯೇ ಚಲಾಯಿಸಿದ್ದಾರೆ. ಆಗ ದ್ವಿಚಕ್ರ ವಾಹನ ಎಗರಿ ಬಿದ್ದಿದೆ. ಆಗ ಸುನೇತ್ರಾ ಪಂಡಿತ್‌ ರಸ್ತೆಗೆ ಬಿದ್ದಿದ್ದಾರೆ. ಬಿದ್ದ ರಭಸಕ್ಕೆ ಹೆಲ್ಮೆಟ್‌ ರಸ್ತೆಗೆ ಉಜ್ಜಿ ಚೂರಾಗಿದೆ. ದ್ವಿಚಕ್ರ ವಾಹನ ಹಂಪ್‌ನಿಂದ ಎಗರಿ ರಸ್ತೆಗೆ ಬಿದ್ದು ಜೋರಾದ ಶಬ್ಧ ಬಂದ ಹಿನ್ನೆಲೆಯಲ್ಲಿ ಸ್ಥಳೀಯರು ಕೂಡಲೇ ಸ್ಥಳಕ್ಕೆ ದೌಡಾಯಿಸಿದ್ದಾರೆ. 

Tap to resize

Latest Videos

ಅವೈಜ್ಞಾನಿಕ ಟಾರಿನಿಂದ ಮೈಸೂರು ರಸ್ತೇಲಿ ಗಾಡಿ ಸ್ಕಿಡ್; ನಟಿ ಸುನೇತ್ರಾ ಪಂಡಿತ್ ಪೋಸ್ಟ್ ವೈರಲ್!

ತೀವ್ರ ರಕ್ತಸ್ರಾವದಿಂದ ಒದ್ದಾಡುತ್ತಿದ್ದ ಸುನೇತ್ರಾ ಪಂಡಿತ್‌ ಅವರನ್ನು ಕಾರಿನಲ್ಲಿ ಸಮೀಪದ ಆಸ್ಪತ್ರೆಗೆ ಕರೆದೊಯ್ದು ದಾಖಲಾಗಿದ್ದಾರೆ. ಹೆಲ್ಮೆಟ್‌ ಧರಿಸಿದ್ದರಿಂದ ತಲೆಗೆ ಸಣ್ಣ ಗಾಯವಾಗಿದೆ. ಹೆಲ್ಮೆಟ್‌ ಧರಿಸದಿದ್ದಲ್ಲಿ ತಲೆಗೆ ಗಂಭೀರ ಪೆಟ್ಟು ಬೀಳುವ ಸಾಧ್ಯತೆ ಇತ್ತು ಎಂದು ಸ್ಥಳೀಯರು ಹೇಳಿದರು. ಘಟನೆ ಹಿನ್ನೆಲೆಯಲ್ಲಿ ಬಸವನಗುಡಿ ಸಂಚಾರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತಕ್ಕೀಡಾದ ಸುನೇತ್ರಾ ಪಂಡಿತ್‌ ಅವರು ಈವರೆಗೂ ಘಟನೆ ಸಂಬಂಧ ದೂರು ನೀಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಸದ್ಯಕ್ಕೆ ಸಮಸ್ಯೆಯಿಲ್ಲ-ಪುತ್ರಿ: ಅಮ್ಮ ರಾತ್ರಿ ಶೂಟಿಂಗ್‌ ಮುಗಿಸಿಕೊಂಡು ಮನೆಗೆ ಬರುವಾಗ ಈ ದುರ್ಘಟನೆಯಾಗಿದೆ. ರಸ್ತೆಯ ಹಂಪ್‌ ಕಾಣಿಸಿದೆ ಅಪಘಾತ ಸಂಭವಿಸಿದೆ. ಹಂಫ್ಸ್‌ ಸಮೀಪವೇ ರಸ್ತೆ ಗುಂಡಿಯೂ ಇದೆ. ಅಮ್ಮ ಹೆಲ್ಮೆಟ್‌ ಧರಿಸಿದ್ದರಿಂದ ತಲೆಗೆ ಗಂಭೀರ ಪೆಟ್ಟು ಬಿದ್ದಿಲ್ಲ. ಸಣ್ಣಪುಟ್ಟಗಾಯವಾಗಿದೆ. ಸದ್ಯಕ್ಕೆ ಯಾವುದೇ ಸಮಸ್ಯೆಯಿಲ್ಲ. ಅಮ್ಮ ಆರಾಮಾಗಿದ್ದಾರೆ. ವೈದ್ಯರ ಸಲಹೆ ಮೇರೆಗೆ ಅಮ್ಮನನ್ನು ಡಿಸ್ಚಾಜ್‌ರ್‍ ಮಾಡುತ್ತೇವೆ ಎಂದು ನಟಿ ಸುನೇತ್ರಾ ಪಂಡಿತ್‌ ಅವರ ಪುತ್ರಿ ಶ್ರೇಯಾ ಮಾಧ್ಯಮಗಳಿಗೆ ತಿಳಿಸಿದರು.

Me Too ಫೇಮ್‌ನ ನಟಿ Tanushree Dutta ಕಾರು ಅಪಘಾತ!

ಅವೈಜ್ಞಾನಿಕ ಹಂಪ್‌-ಸ್ಥಳೀಯರ ಆಕ್ರೋಶ: ಅಪಘಾತಕ್ಕೆ ಕಾರಣವಾದ ಹಂಪ್‌ ಅವೈಜ್ಞಾನಿಕವಾಗಿದೆ. ಈ ಜಾಗದಲ್ಲಿ ಈ ಹಿಂದೆಯೂ ಹಲವು ಅಪಘಾತಗಳು ಸಂಭವಿಸಿವೆ. ರಾತ್ರಿ ವೇಳೆ ಇಲ್ಲಿ ಹಂಪ್‌ ಇದೆ ಎಂಬುದು ಕಾಣುವುದಿಲ್ಲ. ರೇಡಿಮ್‌ ಮಾರ್ಕ್ ಅಥವಾ ಪೇಯಿಂಟ್‌ ಮಾರ್ಕ್ ಯಾವುದೂ ಇಲ್ಲ. ವಾಹನ ಸವಾರರು ಹಂಪ್‌ ಗುರತಿಸಲಾಗದೆ ವಾಹನ ಚಲಾಯಿಸುವುದರಿಂದ ಅಪಘಾತಗಳು ಸಂಭವಿಸುತ್ತಿವೆ. ಈ ಹಂಪ್‌ ಸರಿಪಡಿಸುವಂತೆ ಹಲವು ಬಾರಿ ಮನವಿ ಮಾಡಿದರೂ ಪಾಲಿಕೆ ಅಧಿಕಾರಿಗಳು ಗಮನ ಹರಿಸಿಲ್ಲ. ಅಮಾಯಕರು ಪ್ರಾಣ ಕಳೆದುಕೊಂಡರೆ ಯಾರು ಹೊಣೆ ಎಂದು ಸ್ಥಳೀಯರು ಪಾಲಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

click me!