ದೆಹಲಿಯಿಂದ ಬೆಂಗಳೂರಿಗೆ ಬರುತ್ತಿದ್ದ ಇಂಡಿಗೋ ವಿಮಾನದಲ್ಲಿ ಪಾನಮತ್ತ ಪ್ರಯಾಣಿಕನೊಬ್ಬ ವಿಮಾನದ ತುರ್ತು ನಿರ್ಗಮನ ದ್ವಾರ ತೆರೆಯಲು ಯತ್ನಿಸಿರುವ ಘಟನೆ ಶುಕ್ರವಾರ ನಡೆದಿದೆ.
ಬೆಂಗಳೂರು (ಏ.08): ದೆಹಲಿಯಿಂದ ಬೆಂಗಳೂರಿಗೆ ಬರುತ್ತಿದ್ದ ಇಂಡಿಗೋ ವಿಮಾನದಲ್ಲಿ ಪಾನಮತ್ತ ಪ್ರಯಾಣಿಕನೊಬ್ಬ ವಿಮಾನದ ತುರ್ತು ನಿರ್ಗಮನ ದ್ವಾರ ತೆರೆಯಲು ಯತ್ನಿಸಿರುವ ಘಟನೆ ಶುಕ್ರವಾರ ನಡೆದಿದೆ. ಉತ್ತರ ಪ್ರದೇಶದ ಕಾನ್ಪುರ ಮೂಲದ ಆರ್.ಪ್ರತೀಕ್(40) ಎಂಬಾತ ವಿಮಾನದಲ್ಲಿ ಹುಚ್ಚಾಟ ಮೆರೆದವನು. ಇಂಡಿಗೋ ವಿಮಾನದ ಸಿಬ್ಬಂದಿ ಆರೋಪಿಯನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎ) ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ(ಸಿಐಎಸ್‌ಎಫ್) ಸಿಬ್ಬಂದಿಗೆ ಹಸ್ತಾಂತರಿಸಿದರು. ಬಳಿಕ ಸಿಐಎಸ್‌ಎಫ್ ಸಿಬ್ಬಂದಿ ಆರೋಪಿಯನ್ನು ವಿಮಾನ ನಿಲ್ದಾಣದ ಸಮೀಪದ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸಿದಾಗ ಮದ್ಯ ಸೇವಿಸಿರುವುದು ಸಾಬೀತಾಯಿತು.
ನಂತರ ಆತನನ್ನು ಬೆಂಗಳೂರು ಇಂಟರ್ ನ್ಯಾಷನಲ್ ಏರ್‌ಪೋರ್ಟ್(ಬಿಐಎಎಲ್) ಠಾಣೆಯ ಪೊಲೀಸರಿಗೆ ಒಪ್ಪಿಸಲಾಯಿತು. ಸಾರ್ವಜನಿಕರೊಂದಿಗೆ ದುರ್ವರ್ತನೆ, ಇತರರ ಜೀವ ಹಾಗೂ ವೈಯಕ್ತಿಕ ಜೀವಕ್ಕೆ ಅಪಾಯ ತಂದೊಡ್ಡುವುದು, ಸುರಕ್ಷತೆಗೆ ಭಂಗ ತರಲು ಯತ್ನ ಆರೋಪದಡಿ ಪ್ರಕರಣ ದಾಖಲಿಸಿರುವ ಬಿಐಎಎಲ್ ಠಾಣೆ ಪೊಲೀಸರು, ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯವು ಆರೋಪಿಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮತದಾರರಿಗೆ ಉಡುಗೊರೆ: ಕುಸುಮಾ, ಡಿಕೆಸು ಸೇರಿ ಮೂವರ ವಿರುದ್ಧ ಕೇಸ್
ವಿಮಾನದಲ್ಲಿ ಹುಚ್ಚಾಟ: ಆರೋಪಿ ಪ್ರತೀಕ್ ಇ-ಕಾರ್ಮಸ್ ಕಂಪನಿಯೊಂದರಲ್ಲಿ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಆಗಿದ್ದಾನೆ. ಶುಕ್ರವಾರ ಬೆಳಗ್ಗೆ 8ಕ್ಕೆ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ಬರುವ ‘6ಇ 308’ ಸಂಖ್ಯೆಯ ಇಂಡಿಗೋ ವಿಮಾನ ಏರಿದ್ದಾನೆ. ವಿಮಾನ ಟೇಕಾಫ್ ಆದ ಬಳಿಕ ಪಾನಮತ್ತ ಆರೋಪಿಯು ಕ್ಷುಲ್ಲಕ ಕಾರಣಕ್ಕೆ ಸಹ ಪ್ರಯಾಣಿಕರೊಂದಿಗೆ ದುರ್ವರ್ತನೆ ತೋರಿದ್ದಾನೆ. ವಿಮಾನದ ಸಿಬ್ಬಂದಿ ಎಷ್ಟೇ ಹೇಳಿದರೂ ಕೇಳದೆ ಅನುಚಿತವಾಗಿ ವರ್ತಿಸಿದ್ದಾನೆ. ಬಳಿಕ ವಿಮಾನದ ತುರ್ತು ನಿಗರ್ಮನ ದ್ವಾರದ ಬಾಗಿಲು ತೆರೆಯಲು ಯತ್ನಿಸಿದ್ದಾನೆ.
ರಾಜ್ಯದ 6 ಜಿಲ್ಲೆಗಳಲ್ಲಿ ಅಕಾಲಿಕ ಮಳೆ ಅಬ್ಬರ: 5 ಮಂದಿ ಸಾವು
ಅಷ್ಟರಲ್ಲಿ ವಿಮಾನದ ಸಿಬ್ಬಂದಿ ಆತನನ್ನು ಹಿಡಿದುಕೊಂಡಿದ್ದಾರೆ. ವಿಮಾನ ಬೆಳಗ್ಗೆ 10.45ರ ಸುಮಾರಿಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆದ ಬಳಿಕ ಪಾನಮತ್ತ ಪ್ರತೀಕ್‌ನನ್ನು ಸಿಐಎಸ್‌ಎಫ್ ಸಿಬ್ಬಂದಿಗೆ ಹಸ್ತಾಂತರಿಸಿದ್ದಾರೆ. ಈ ಸಂಬಂಧ ಬಿಐಎಎಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ ಮುಂದುವರೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.