ಕೈದಿಗಳಿಗೆ ರಾಜ್ಯಾತಿಥ್ಯ ನೀಡಿದರೆ ಜೈಲು ಸಿಬ್ಬಂದಿ ಕೆಲಸಕ್ಕೆ ಕುತ್ತು!

By Kannadaprabha NewsFirst Published Jul 10, 2022, 8:11 AM IST
Highlights
  • ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಸಿಬ್ಬಂದಿಯಿಂದಲೇ ಕೈದಿಗಳಿಗೆ ಡ್ರಗ್ಸ್, ಮದ್ಯ, ಮೊಬೈಲ್‌ ಪೂರೈಕೆ
  • ಇದರಿಂದ ಸರ್ಕಾರಕ್ಕೆ ತೀವ್ರ ಮುಜುಗರ
  • ಅಕ್ರಮದಲ್ಲಿ ತೊಡಗಿದ ಸಿಬ್ಬಂದಿ ಅಮಾನತು ಬದಲು ವಜಾ ಎಚ್ಚರಿಕೆ

ಮೋಹನ ಹಂಡ್ರಂಗಿ

 ಬೆಂಗಳೂರು(ಜು.10): ಕೈದಿಗಳ ಪಾಲಿನ ಸ್ವರ್ಗ ಎಂಬ ಕುಖ್ಯಾತಿ ಪಡೆದಿರುವ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಇನ್ಮುಂದೆ ಡ್ರಗ್‌್ಸ, ಮದ್ಯ ಹಾಗೂ ಮೊಬೈಲ್‌ ಪೂರೈಕೆ ಸೇರಿದಂತೆ ಕೈದಿಗಳಿಗೆ ‘ರಾಜ್ಯಾತಿಥ್ಯ’ ನೀಡುವ ಕಾರಾಗೃಹ ಸಿಬ್ಬಂದಿಯ ಸರ್ಕಾರಿ ನೌಕರಿಗೆ ಕುತ್ತು ಬರಲಿದೆ...!

ಕಾರಾಗೃಹದ ಕರ್ಮಕಾಂಡದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಕಟು ಟೀಕೆಗಳ ಹಿನ್ನೆಲೆಯಲ್ಲಿ ಎಚ್ಚೆತ್ತಿರುವ ಕಾರಾಗೃಹದ ನೂತನ ಮುಖ್ಯ ಅಧೀಕ್ಷಕ ಪಿ.ಎಸ್‌.ರಮೇಶ್‌ ಅವರು, ಈಗ ಜೈಲಿನ ಅಕ್ರಮ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಅಮಾನತು ಮಾಡದೆ ಸೇವೆಯಿಂದಲೇ ವಜಾಗೊಳಿಸುವ ಎಚ್ಚರಿಕೆ ನೀಡಿದ್ದಾರೆ. ಕೆಲ ದಿನಗಳ ಹಿಂದೆ ನಡೆದ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಭೆಯಲ್ಲಿ ಈ ಖಡಕ್‌ ಸೂಚನೆ ನೀಡಿದ್ದಾರೆ.

ರೇಪ್‌ ಸಂತ್ರಸ್ತೆಯ ತಾಯಿಗೆ ಧಮ್ಕಿ: ಬೇಲ್‌ ಸಿಕ್ಕರೂ ಖೈದಿಗಿಲ್ಲ ಬಿಡುಗಡೆ

ಕೆಲ ದಿನಗಳ ಹಿಂದೆಯಷ್ಟೇ ಶಿವಮೊಗ್ಗದ ಹಿಂದೂ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣ ಆರೋಪಿಗಳು ಸೇರಿದಂತೆ 9 ಮಂದಿ ವಿಚಾರಣಾಧೀನ ಕೈದಿಗಳು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಮೊಬೈಲ್‌ ಬಳಸಿಕೊಂಡು ವಿಡಿಯೋ ಕಾಲ್‌ ಮಾಡಿ ಕುಟುಂಬದವರು ಹಾಗೂ ಸ್ನೇಹಿತರ ಜತೆಗೆ ಮಾತನಾಡಿದ್ದರು. ಈ ವಿಡಿಯೋ ಕಾಲ್‌ ಹಾಗೂ ಕೈದಿಗಳ ಸೆಲ್ಫಿ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದವು. ಜೈಲಿನಲ್ಲಿ ನಿಷೇಧಿತ ಮೊಬೈಲ್‌ ಫೋನ್‌ ಬಳಸಿದ ಆರೋಪದಡಿ ಪರಪ್ಪನ ಅಗ್ರಹಾರ ಪೊಲೀಸ್‌ ಠಾಣೆಯಲ್ಲಿ 11 ಮಂದಿ ಆರೊಪಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿತ್ತು.

ಕಳೆದ ವಾರವಷ್ಟೇ ಆಗ್ನೇಯ ವಿಭಾಗದ ಪೊಲೀಸರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮೇಲೆ ದಾಳಿ ಮಾಡಿದ್ದರು. ಈ ವೇಳೆ ಒಂದು ಸಿಮ್‌ ಕಾರ್ಡ್‌, ಮೂರು ಮೆಮೋರಿ ಕಾರ್ಡ್‌, ಒಂದು ಪೆನ್‌ ಡ್ರೈವ್‌, ಸುಮಾರು .75 ಸಾವಿರ ನಗದು, ಪಾತ್ರೆಗಳಿಂದ ಮಾಡಿದ್ದ ನಾಲ್ಕು ಚಾಕುಗಳು, ಚಾರ್ಜಿಂಗ್‌ ವೈರ್‌ಗಳು, ಎರಡು ಹೆಡ್‌ಫೋನ್‌ಗಳನ್ನು ಪೊಲೀಸರು ಜಪ್ತಿ ಮಾಡಿದ್ದರು. ಜೈಲಿನಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ಸಂಬಂಧ ಮೂರು ದಿನಗಳಲ್ಲಿ ಪರಪ್ಪನ ಅಗ್ರಹಾರ ಪೊಲೀಸ್‌ ಠಾಣೆಯಲ್ಲಿ ಆರು ಎಫ್‌ಐಆರ್‌ಗಳು ದಾಖಲಾಗಿದ್ದವು.

Bengaluru: ಜೈಲಿನಿಂದಲೇ ಹಣಕ್ಕಾಗಿ ರೌಡಿ ಬೆದರಿಕೆ: ಇನ್‌ಸ್ಪೆಕ್ಟರ್‌ ಅಮಾನತು

ಹಣಕ್ಕೆ ವಿವಿಐಪಿ ಸೌಲಭ್ಯ: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಜೈಲು ಅಧಿಕಾರಿ ಹಾಗೂ ಸಿಬ್ಬಂದಿಗೆ ಹಣ ಕೊಟ್ಟರೆ ಕೈದಿಗಳಿಗೆ ವಿವಿಐಪಿ ಸೌಲಭ್ಯ ಸಿಗುತ್ತದೆ. ಮೊಬೈಲ್‌, ಮದ್ಯ, ಗಾಂಜಾ, ತಂಬಾಕು ಉತ್ಪನ್ನ ಸೇರಿದಂತೆ ಕೈದಿಗಳ ಎಲ್ಲ ಬಯಕೆಗಳು ಈಡೇರಿಸಲಾಗುತ್ತದೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಇದಕ್ಕೆ ಪೂರಕವಾಗಿ ಕೆಲ ತಿಂಗಳ ಹಿಂದೆ ಕೈದಿಗಳು ಜೈಲು ಸಿಬ್ಬಂದಿಗೆ ಹಣ ನೀಡುವ ವಿಡಿಯೊಗಳು ವೈರಲ್‌ ಆಗಿತ್ತು. ಈ ವೇಳೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹವು ತೀವ್ರ ಟೀಕೆಗೆ ಗುರಿಯಾಗಿತ್ತು. ರಾಜ್ಯ ಸರ್ಕಾರ ಹಾಗೂ ಗೃಹ ಸಚಿವ ತೀವ್ರ ಮುಜುಗರ ಅನುಭವಿಸಿದ್ದರು.

ಸಮಿತಿ ಶಿಫಾರಸು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಅಕ್ರಮ ಚಟುವಟಿಕೆಗಳ ಆರೋಪದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಎಡಿಜಿಪಿ ಮುರುಗನ್‌ ನೇತೃತ್ವದಲ್ಲಿ ವಿಚಾರಣಾ ಸಮಿತಿ ನೇಮಿಸಿತ್ತು. ಕೇಂದ್ರ ಕಾರಾಗೃಹಕ್ಕೆ ಭೇಟಿ ಪರಿಶೀಲನೆ ಮಾಡಿದ್ದ ಸಮಿತಿ, ಕಾರಾಗೃಹದಲ್ಲಿ ಕೈದಿಗಳ ಅಕ್ರಮ ಚಟುವಟಿಕೆಗಳಿಗೆ ಕೆಲ ಜೈಲು ಅಧಿಕಾರಿಗಳು ಹಾಗೂ ಸಿಬ್ಬಂದಿ ಕೈ ಜೋಡಿಸಿರುವುದನ್ನು ಪತ್ತೆ ಹಚ್ಚಿತ್ತು. ಕಾರಾಗೃಹ ಸುಧಾರಣೆಗೆ ಹಲವು ಶಿಫಾರಸು ಮಾಡಿತ್ತು. ಈ ಪೈಕಿ ಕೈದಿಗಳ ಅಕ್ರಮ ಕೂಟಕ್ಕೆ ಸಾಥ್‌ ನೀಡಿದ್ದ ಜೈಲು ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಶಿಫಾರಸಿನಲ್ಲಿ ಸೂಚಿಸಿತ್ತು.

ಅಧಿಕಾರಿಗಳ ಎತ್ತಂಗಡಿ! : ಕೇಂದ್ರ ಕಾರಾಗೃಹದಲ್ಲಿ ಅಕ್ರಮ ಚಟುವಟಿಕೆಗಳಿಗೆ ಬ್ರೇಕ್‌ ಹಾಕುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ಕೆಲ ದಿನಗಳ ಹಿಂದೆಯಷ್ಟೇ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷ ರಂಗನಾಥ್‌, ಅಧೀಕ್ಷಕಿ ಲತಾ ಸೇರಿದಂತೆ 10 ಮಂದಿ ಸಿಬ್ಬಂದಿಯನ್ನು ವರ್ಗಾವಣೆ ಮಾಡಿತ್ತು. ಕಲಬುರಗಿ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕರಾಗಿದ್ದ ಪಿ.ಎಸ್‌.ರಮೇಶ್‌ ಅವರನ್ನು ಮುಖ್ಯ ಅಧೀಕ್ಷಕರನ್ನಾಗಿ ನೇಮಿಸಿತ್ತು. ಇದರ ಬೆನ್ನಲ್ಲೇ ಪಿ.ಎಸ್‌.ರಮೇಶ್‌ ಅವರು ಕೇಂದ್ರ ಕಾರಾಗೃಹದಲ್ಲಿ ಅಕ್ರಮ ಚಟುವಟಿಕೆಗಳಿಗೆ ಬ್ರೇಕ್‌ ಹಾಕುವ ನಿಟ್ಟಿನಲ್ಲಿ ಬಿಗಿ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದ್ದಾರೆ.

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಅಕ್ರಮ ಚಟುವಟಿಕೆಗಳಿಗೆ ಅವಕಾಶ ನೀಡುವುದಿಲ್ಲ. ಈಗಾಗಲೇ ಕಾರಾಗೃಹದಲ್ಲಿ ಸ್ವಚ್ಛತಾ ಅಭಿಯಾನ ಶುರುವಾಗಿದೆ.

-ಪಿ.ಎಸ್‌.ರಮೇಶ್‌, ಮುಖ್ಯ ಅಧೀಕ್ಷಕ, ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ.

click me!