
ಬೆಂಗಳೂರು(ಜು.10): ರಾಹುಕಾಲ ಆರಂಭಕ್ಕೂ ಮುನ್ನ ಅಂಗಡಿ ತೆರೆಯುವ ಬಗ್ಗೆ ಮಾಹಿತಿ ಪಡೆದು ಬೆಳ್ಳಂಬೆಳಗ್ಗೆ ಚಿನ್ನದಂಗಡಿಗೆ ನುಗ್ಗಿ ನೌಕರನಿಗೆ ಪಿಸ್ತೂಲ್ ತೋರಿಸಿ ನಗದು ಸೇರಿದಂತೆ ಕೋಟ್ಯಂತರ ರುಪಾಯಿ ಮೌಲ್ಯದ ಚಿನ್ನ-ಬೆಳ್ಳಿ ಆಭರಣ ದರೋಡೆ ಮಾಡಿದ್ದರು ಎಂಬುದು ಪೊಲೀಸ್ ತನಿಖೆಯಿಂದ ಬಯಲಾಗಿದೆ.
ಎಲೆಕ್ಟ್ರಾನಿಕ್ ಸಿಟಿಯ ಮೈಲಸಂದ್ರದ ರಾಮದೇವ್ ಜುವೆಲ್ಸ್ ಆ್ಯಂಡ್ ಬ್ರೋಕರ್ಸ್ ಅಂಗಡಿಗೆ ನಾಲ್ವರು ದರೋಡೆಕೋರರು ಜು.4ರಂದು ಬೆಳಗ್ಗೆ 7.30ಕ್ಕೆ ನುಗ್ಗಿ ದರೋಡೆ ಮಾಡಿದ್ದರು. ಈ ಸಂಬಂಧ ರಾಜಸ್ಥಾನ ಮೂಲದ ಆರೋಪಿಗಳಾದ ದೇವಾರಾಮ್, ರಾಹುಲ್ ಸೋಲಂಕಿ, ಅನಿಲ್ ಹಾಗೂ ರಾಮ್ ಸಿಂಗ್ ಎಂಬುವವರನ್ನು ರಾಜಸ್ಥಾನದ ಉದಯಪುರದಲ್ಲಿ ಸಿನಿಮೀಯ ಶೈಲಿನಲ್ಲಿ ಚೈಸ್ ಮಾಡಿ ಬಂಧಿಸಿ ನಗರಕ್ಕೆ ಕರೆತರಲಾಗಿದೆ. ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ. ಬಂಧಿತ ಆರೋಪಿಗಳಿಂದ .1.58 ಕೋಟಿ ಮೌಲ್ಯದ ಚಿನ್ನ-ಬೆಳ್ಳಿ ಆಭರಣ ಹಾಗೂ 2 ಪಿಸ್ತೂಲ್, 3 ಜೀವಂತ ಗುಂಡು ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರು: ಹಾಡಹಗಲೇ ಜ್ಯೋತಿಷಿ ಮನೆ ರಾಬರಿ: ನಗದು, ಚಿನ್ನಾಭರಣ ಎಗರಿಸಿ ಎಸ್ಕೇಪ್
ಒಂದೇ ಒಂದು ಜ್ಯುವೆಲ್ಲರಿ ದರೋಡೆಗೆ ಸ್ಕೆಚ್:
ಬಂಧಿತ ನಾಲ್ವರು ಕುಖ್ಯಾತ ದರೋಡೆಕೋರರು. ಈ ಪೈಕಿ ರಾಜಸ್ಥಾನ ಮೂಲದ ದೇವಾ ರಾಮ್ ಕೆಲ ವರ್ಷಗಳ ಹಿಂದೆ ಬೆಂಗಳೂರಿನ ಹುಳಿಮಾವು ಕೆಂಪಮ್ಮ ದೇವಸ್ಥಾನ ಸಮೀಪ ಹಾರ್ಡ್‌ವೇರ್ ಆ್ಯಂಡ್ ಎಲೆಕ್ಟ್ರಿಕಲ್ ಅಂಗಡಿ ತೆರೆದು ನಷ್ಟಅನುಭವಿಸಿದ್ದ. ಹೀಗಾಗಿ ಸುಲಭವಾಗಿ ಗಳಿಸುವ ಉದ್ದೇಶದಿಂದ ಅಪರಾಧದಲ್ಲಿ ತೊಡಗಿಸಿಕೊಂಡಿದ್ದ. ಬೆಂಗಳೂರಿನಲ್ಲಿ 10ಕ್ಕೂ ಅಧಿಕ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಜಾಮೀನು ಪಡೆದು ವಾಪಸ್ ರಾಜಸ್ಥಾನ ತೆರಳಿದ್ದ. ಕಳೆದ ಜೂನ್‌ನಲ್ಲಿ ಐವರು ಆರೋಪಿಗಳು ರಾಜಸ್ಥಾನದ ದೇವಾರಾಮ್ ಮನೆಯಲ್ಲಿ ಸೇರಿಕೊಂಡು ಹಣಕಾಸು ಸಮಸ್ಯೆಗಳ ಬಗ್ಗೆ ಚರ್ಚಿಸಿದ್ದರು.
ಬೆಂಗಳೂರಿನ ಯಾವುದಾದರೂ ಒಂದು ಜ್ಯುವೆಲ್ಲರಿ ಅಂಗಡಿ ದರೋಡೆ ಮಾಡಲು ಸಂಚು ರೂಪಿಸಿದ್ದರು. ಅದರಂತೆ ಪಿಸ್ತೂಲ್, ಗುಂಡುಗಳನ್ನು ಖರೀದಿಸಿ ರಾಜಸ್ಥಾನದಿಂದ ಬೆಂಗಳೂರಿಗೆ ಕಾರಿನಲ್ಲಿ ಬಂದು, ಸಂಬಂಧಿಕರ ಮನೆಯಲ್ಲಿದ್ದು 15 ದಿನ ನಗರದ ಸುತ್ತಾಡಿ ಜ್ಯುವೆಲ್ಲರಿ ಅಂಗಡಿ ದರೋಡೆಗೆ ಯೋಜನೆ ರೂಪಿಸಿದ್ದರು. ಕೊನೆಗೆ ಮೈಲಸಂದ್ರ ರಾಮದೇವ್ ಜುವೆಲ್ಸ್ ಆ್ಯಂಡ್ ಬ್ರೋಕರ್ಸ್ ಅಂಗಡಿ ದರೋಡೆಗೆ ಗುರಿ ಇರಿಸಿದ್ದರು.
ಹಾಡಹಗಲೇ ಶಸ್ತ್ರಸಜ್ಜಿತ ದರೋಡೆಕೋರರಿಂದ ಚಿನ್ನದಂಗಡಿಗೆ ನುಗ್ಗಿ ದರೋಡೆ: ಮಾಲೀಕನ ಮೇಲೆ ಗುಂಡಿನ ದಾಳಿ
ಮಕ್ಕಳ ಕಾಲು ಚೈನು ನೆಪದಲ್ಲಿ ಪ್ರವೇಶ
ಜು.4ರಂದು ಬೆಳಗ್ಗೆ 7.30ರ ಸುಮಾರಿಗೆ ಇಬ್ಬರು ಆರೋಪಿಗಳು ಗ್ರಾಹಕರ ಸೋಗಿನಲ್ಲಿ ಅಂಗಡಿಗೆ ಭೇಟಿ ನೀಡಿ ಮಕ್ಕಳ ಕಾಲು ಚೈನು ತೋರಿಸುವಂತೆ ಕೇಳಿದ್ದಾರೆ. ಇದರ ಬೆನ್ನಲ್ಲೇ ಮತ್ತಿಬ್ಬರು ಅಂಗಡಿ ಪ್ರವೇಶಿಸಿ ಏಕಾಏಕಿ ಪಿಸ್ತೂಲ್ ತೆಗೆದು ಅಂಗಡಿ ನೌಕರ ಧರ್ಮೇಂದ್ರನನ್ನು ಬೆದರಿಸಿ, ನಾಲ್ವರು ಸೇರಿಕೊಂಡು ಆತನ ಕೈ ಕಾಲು ಕಟ್ಟಿದ್ದಾರೆ. ಬಳಿಕ ಚಿನ್ನ-ಬೆಳ್ಳಿ ಆಭರಣ, ನಗದು ದೋಚಿದ್ದರು. ನೌಕರ ಧರ್ಮೇಂದ್ರನ ಮೊಬೈಲ್ ಕಿತ್ತುಕೊಂಡು ಸ್ವಿಚ್‌ಆಫ್ ಮಾಡಿ, ಅಂಗಡಿಯ ಸಿಸಿಟಿವಿ ಕ್ಯಾಮರಾದ ಡಿವಿಆರ್ ಬಿಚ್ಚಿಕೊಂಡು ಪರಾರಿಯಾಗಿದ್ದರು.
3 ಕಿ.ಮೀ.ಸಿನಿಮಾ ಶೈಲಿನಲ್ಲಿ ದರೊಡೆಕೋರರ ಚೇಸಿಂಗ್
ಬಂಧಿತ ನಾಲ್ವರು ಆರೋಪಿಗಳ ಪೈಕಿ ಮೂವರು ಅಪರಾಧ ಹಿನ್ನೆಲೆ ಉಳ್ಳುವರು. ಘಟನಾ ಸ್ಥಳದಲ್ಲಿ ದೊರೆತ ಬೆರಳಚ್ಚು ಹಾಗೂ ಸಿಸಿಟಿವಿ ಕ್ಯಾಮರಾ ದೃಶ್ಯಾವಳಿ ಆಧರಿಸಿ ಇದು ದೇವಾರಾಮ್ ಮತ್ತು ಆತನ ತಂಡ ಕೃತ್ಯ ಎಂಬುದು ಪೊಲೀಸರಿಗೆ ಖಚಿತವಾಗಿತ್ತು. ಮೊಬೈಲ್ ನೆಟ್‌ವರ್ಕ್ ಆಧರಿಸಿ ರಾಜಸ್ಥಾನದ ಉದಯಪುರದಲ್ಲಿ ಆರೋಪಿಗಳ ಬಂಧನಕ್ಕೆ ಬೆಂಗಳೂರು ಪೊಲೀಸರು ತೆರಳಿದ್ದರು. ಈ ವೇಳೆ ಆರೋಪಿಗಳು ಪೊಲೀಸರ ಮೇಲೆ ಗುಂಡು ಹಾರಿಸಿ ತಪ್ಪಿಸಿಕೊಳ್ಳಲು ಮುಂದಾಗಿದ್ದಾರೆ. ಆದರೂ ಬೆಂಗಳೂರು ಪೊಲೀಸರು ಸಿನಿಮಾ ಶೈಲಿನಲ್ಲಿ 3 ಕಿ.ಮೀ. ಚೇಸ್ ಮಾಡಿ ಆರೋಪಿಗಳನ್ನು ಬಂಧಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ