
ಇತ್ತೀಚೆಗೆ ಪ್ರತಿಷ್ಠಿತ ಶಾಲೆಗಳಲ್ಲಿ ಮಕ್ಕಳು ಸಾವಿಗೆ ಶರಣಾಗುತ್ತಿರುವ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಕೆಲ ದಿನಗಳ ಹಿಂದಷ್ಟೇ ರಾಜಸ್ಥಾನದ ಪ್ರತಿಷ್ಠಿತ ನೀರಜ್ ಮೋದಿ ಶಾಲೆಯಲ್ಲಿ ಬಾಲಕಿಯೊಬ್ಬಳು ಕಟ್ಟಡದಿಂದ ಕೆಳಗೆ ಹಾರಿ ಸಾವನ್ನಪ್ಪಿದ್ದಳು. ಘಟನೆಯ ನಂತರ ಶಾಲೆಯ ಆಡಳಿತ ಮಂಡಳಿ ವಿರುದ್ಧ ತೀವ್ರ ಆರೋಪಗಳು ಕೇಳಿ ಬಂದಿದ್ದವು.ಈ ಘಟನೆ ಮಾಸುವ ಮೊದಲೇ ಈಗ ದೆಹಲಿಯಲ್ಲಿ 10ನೇ ಕ್ಲಾಸ್ ಬಾಲಕನೋರ್ವ ಸಾವಿಗೆ ಶರಣಾಗಿದ್ದು, ಪೋಷಕರು ಶಾಲೆಯ ಶಿಕ್ಷಕರು ಹಾಗೂ ಶಾಲೆಯ ವಿರುದ್ಧ ತೀವ್ರತರದ ಆರೋಪಗಳನ್ನು ಮಾಡಿದ್ದಾರೆ. ಸೇಂಟ್ ಕೊಲಂಬಾದ ವಿದ್ಯಾರ್ಥಿ ಶೌರ್ಯ ಪಾಟೀಲ್ ಈ ವಾರದ ಆರಂಭದಲ್ಲಿ ದೆಹಲಿಯ ಮೆಟ್ರೋ ನಿಲ್ದಾಣದ 2ನೇ ಮಹಡಿಯಿಂದ ಹಾರಿ ಸಾವಿಗೆ ಶರಣಾಗಿದ್ದ. ಘಟನೆ ನಡೆದು ಒಂದು ವಾರದ ನಂತರ ಈ ಬಾಲಕನ ಸಾವು ಸಂಚಲನ ಸೃಷ್ಟಿಸಿದೆ.
ಬಾಲಕ ಶೌರ್ಯ ಪಾಟೀಲ್‌ನ ತಂದೆ ಪ್ರದೀಪ್ ಪಾಟೀಲ್ ಅವರು ಈಗ ತಮ್ಮ ಮಗನ ಸಾವಿನ ಬಗ್ಗೆ ಮಾತನಾಡಿದ್ದು, ಶಾಲೆಯ ಶಿಕ್ಷಕರ ವಿರುದ್ಧ ತೀವ್ರ ಆರೋಪ ಮಾಡಿದ್ದಾರೆ. ತಮ್ಮ ಮಗನನ್ನು ಎಲ್ಲರ ಮುಂದೆ ಅವಹೇಳನ ಮಾಡಲಾಯ್ತು, ಕೆಟ್ಟದಾಗಿ ನಡೆಸಿಕೊಳ್ಳಲಾಯ್ತು ಇದರಿಂದಲೇ ನಮ್ಮ ಮಗ ಸಾವಿಗೆ ಶರಣಾದ ಎಂದು ಅವರು ದೂರಿದ್ದಾರೆ. ಶೌರ್ಯ ಪಾಟೀಲ್ ಮೃತಪಟ್ಟ ದಿನವೇ ಆತ ಶಾಲೆಯಲ್ಲಿ ಡಾನ್ಸ್ ಮಾಡುವ ವೇಳೆ ಕುಸಿದು ಬಿದ್ದಿದ್ದ. ಈ ವೇಳೆ ಶಿಕ್ಷಕಿಯೊಬ್ಬರು ನಿನಗೆ ಎಷ್ಟು ಅಳಬೇಕು ಅನಿಸುತ್ತೊ ಅಷ್ಟು ಅಳು ಅದ್ಯಾವುದು ನನಗೆ ಮ್ಯಾಟರ್ ಆಗಲ್ಲ ಎಂದು ಹೇಳಿದರು ಎಂದು ಬಾಲಕನ ತಂದೆ ಪ್ರದೀಪ್ ಅವರು ಮಾಧ್ಯಮಗಳಿಗೆ ಹೇಳಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾದ ಎಫ್‌ಐಆರ್‌ನಲ್ಲಿರುವಂತೆ ಸೇಂಟ್ ಕೊಲಂಬಾದ ವಿದ್ಯಾರ್ಥಿ ಶೌರ್ಯ ಪಾಟೀಲ್, ಮಂಗಳವಾರ ಕೇಂದ್ರ ದೆಹಲಿಯ ರಾಜೇಂದ್ರ ಪ್ಲೇಸ್ ಮೆಟ್ರೋ ನಿಲ್ದಾಣದ ಪ್ಲಾಟ್‌ಫಾರ್ಮ್ 2ರಿಂದ ಕೆಳಗೆ ಹಾರಿದ್ದಾನೆ. ಆತನ ಶಾಲಾ ಬ್ಯಾಗ್‌ನಲ್ಲಿ ಡೆತ್‌ನೋಟ್ ಸಿಕ್ಕಿದ್ದು, ಆತ ತನ್ನ ಸಾವಿಗೆ ಶಾಲೆಯ ಮೂವರು ಶಿಕ್ಷಕರ ವರ್ತನೆಯೇ ಕಾರಣ ಎಂದು ಆರೋಪಿಸಿದ್ದಾರೆ. ಆದರೆ ವಿಚಾರದ ಬಗ್ಗೆ ಶಾಲೆ ಪ್ರತಿಕ್ರಿಯಿಸಿಲ್ಲ.
ನಾವು ಶಾಲಾ ಅಧಿಕಾರಿಗಳೊಂದಿಗೆ ಈ ವಿಚಾರವನ್ನು ಎತ್ತಿದಾಗಲೆಲ್ಲಾ, ಅವರು ನನ್ನ ಮಗ ತರಗತಿಗಳ ಸಮಯದಲ್ಲಿ ಗಮನಹರಿಸಬೇಕು ಎಂದು ಹೇಳುವ ಮೂಲಕ ವಿಚಾರ ಬೇರೆಡೆ ತಿರುಗಿಸುತ್ತಿದ್ದರು. ಅವನ ಗಣಿತದ ಅಂಕಗಳು ಕಡಿಮೆ ಇವೆ ಮತ್ತು ಅವನು ತನ್ನ ಅಧ್ಯಯನದ ಮೇಲೆ ಗಮನಹರಿಸಲು ಇಷ್ಟಪಡುವುದಿಲ್ಲ ಎಂದು ಅವರು ನಮಗೆ ಹೇಳುತ್ತಿದ್ದರು ಎಂದು ಮಗನ ಅಂತ್ಯಕ್ರಿಯೆಗಾಗಿ ಮಹಾರಾಷ್ಟ್ರದ ಸಾಂಗ್ಲಿಯಲ್ಲಿರುವ ತಮ್ಮ ಹುಟ್ಟೂರಿಗೆ ತೆರಳುವ ಮೊದಲು ಹೇಳಿದ್ದಾರೆ.
ಶೌರ್ಯ ಸಣ್ಣ ಹುಡುಗ, ಅವನ ವಯಸ್ಸಿನ ಮಕ್ಕಳು ವಿಚಲಿತರಾಗುವಂತೆ ಅವನೂ ಕೂಡ ಆಗಿರಬಹುದು. ಆದರೆ ಅದು ಅವನ ಬಗ್ಗೆ ಶಿಕ್ಷಕರ ವರ್ತನೆಯನ್ನು ಸಮರ್ಥಿಸುವುದಿಲ್ಲ, ಇದೇ ವಿಚಾರದಲ್ಲಿ ನಾವು ಅವರನ್ನು ಮತ್ತೆ ಸಂಪರ್ಕಿಸಿದಾಗ, ಅವರು ಅವನಿಗೆ ವರ್ಗಾವಣೆ ಪ್ರಮಾಣಪತ್ರ (ಟಿಸಿ) ನೀಡುವುದಾಗಿ ಬೆದರಿಕೆ ಹಾಕಿದರು ಎಂದು ಪ್ರದೀಪ್ ಹೇಳಿದ್ದಾರೆ.
ಶೌರ್ಯ ಸಾವಿಗೀಡಾದ ದಿನ ಶಾಲೆಯಲ್ಲಿ ಡಾನ್ಸ್ ಮಾಡುವಾಗ ವೇದಿಕೆಯಲ್ಲಿ ಬಿದ್ದಿದ್ದಾನೆ ಎಂದು ಆತನ ಸ್ನೇಹಿತರು ಹೇಳಿದರು. ಇದಾದ ನಂತರ ಶಿಕ್ಷಕರು ಆತನನ್ನು ಡಾನ್ಸ್ ನಿಂದ ಸಂಪೂರ್ಣವಾಗಿ ತೆಗೆದರು ಆತ ಉದ್ದೇಶಪೂರ್ವಕವಾಗಿ ಬಿದ್ದಿದ್ದಾನೆ ಎಂದರು. ಅಲ್ಲದೇ ಆತ ನಾಟಕ ಮಾಡ್ತಿದ್ದಾನೆ ಅತೀಯಾಗಿ ಆಡ್ತಿದ್ದಾನೆ ಎಂದೆಲ್ಲಾ ಹೇಳಿದ್ದರು. ಅದರಲ್ಲೂ ಒಬ್ಬ ಶಿಕ್ಷಕಿ ನೀನು ಎಷ್ಟು ಬೇಕಾದರೂ ಅಳು ಅದು ನಮಗೆ ದೊಡ್ಡ ವಿಚಾರವಲ್ಲ ಎಂದು ಹೇಳಿದ್ದರು. ಇದೇ ವೇಳೆ ಅಲ್ಲಿ ಪ್ರಾಂಶುಪಾಲರು ಇದ್ದರೂ ಅವರು ಈ ವಿಚಾರದ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ ಎಂದು ಅವರು ಹೇಳಿದರು.
ಪ್ರತಿದಿನವೂ ನಾವು ಆತನನ್ನು ಶಾಲೆಗೆ ಕರೆದುಕೊಂಡು ಹೋಗಿ ಶಾಲೆಯಿಂದ ಕರೆದುಕೊಂಡು ಬಂದು ಬಿಡುತ್ತಿದ್ದೆವು. ಆದರೆ ಆದರೆ ಘಟನೆ ನಡೆದಂದು ಆತ ಶಾಲೆಯ ಹಿಂದಿನ ಗೇಟಿನಿಂದ ಹೊರಗೆ ಬಂದು ಮೆಟ್ರೋ ಸ್ಟೇಷನ್ ಬಳಿ ಬಂದು ಸಾವಿಗೆ ಶರಣಾಗಿದ್ದಾನೆ. ಘಟನೆಗೂ 4 ದಿನ ಮೊದಲಿನಿಂದಲೂ ಆತನಿಗೆ ಶಿಕ್ಷಕರು ಬೆದರಿಸುತ್ತಿದ್ದರು. ಪೋಷಕರಿಗೆ ನೊಟೀಸ್ ನೀಡಲಾಗುವುದು ಟಿಸಿ ಕೊಡಲಾಗುವುದು ಎಂದು ಬೆದರಿಸುತ್ತಿದ್ದರು ಒಂದು ಸಮಯದಲ್ಲಂತು ಒಬ್ಬರು ಶಿಕ್ಷಕರು ನಮ್ಮ ಮಗನನ್ನು ತಳ್ಳಿದರು. ಆದರೆ ಮಗನ ಸಾವಿನ ನಂತರ ಕರೆ ಮಾಡಿದ ಪ್ರಾಂಶುಪಾಲರು ನಿಮಗೆ ಸಾಧ್ಯವಾಗುವ ಎಲ್ಲ ಬೆಂಬಲ ನೀಡುವುದಾಗಿ ಹೇಳಿದರು. ಆದರೆ ನಮಗೀಗ ನಮ್ಮ ಮಗ ಮರಳಿ ಬೇಕು ಎಂದು ಅವರು ಭಾವುಕರಾಗಿದ್ದಾರೆ.
ಸಾಯುವ ಮೊದಲು ಅಪ್ಪ ಅಮ್ಮ ಸೋದರನಿಗೆ ಕ್ಷಮೆ ಕೇಳಿದ ಶೌರ್ಯ:
ಸಾಯುವ ಮೊದಲು ಬಾಲಕ ಬರೆದ ಡೆತ್‌ನೋಟ್‌ನಲ್ಲಿ ಶಾಲೆಯಲ್ಲಿ ಮತ್ತೆ ಮತ್ತೆ ನಡೆಯುತ್ತಿರುವ ಕಿರುಕುಳ ತಾಳಲಾರದೇ ಒತ್ತಾಯಪೂರ್ವಕವಾಗಿ ತಾನು ಸಾವಿಗೆ ಶರಣಾಗುತ್ತಿರುವುದಾಗಿ ಬರೆದುಕೊಂಡಿದ್ದಾನೆ. ಪೋಷಕರಿಗೆ ಕ್ಷಮೆ ಕೇಳಿದ ಬಾಲಕ, ನೀವು ನನಗಾಗಿ ಎಲ್ಲವನ್ನು ಮಾಡಿದ್ದೀರಿ ಆದರೆ ನಿಮಗಾಗಿ ನಾನು ಏನು ಮಾಡಲಾಗಲಿಲ್ಲ ಎಂದು ಆತ ಬರೆದಿದ್ದು, ತಮ್ಮ ಹಾಗೂ ತಾಯಿಯ ಬಳಿ ಕ್ಷಮೆ ಕೇಳಿದ್ದಾನೆ. ನಾನು ಕೊನೆಯ ಬಾರಿ ನಿಮ್ಮ ಹೃದಯಕ್ಕೆ ಘಾಸಿ ಮಾಡುತ್ತಿದ್ದೇನೆ ಎಂದು ಆತ ಹೇಳದ್ದಾನೆ.
ಶಿಕ್ಷಕರು ನಾನು ಸಾಯುವಂತೆ ಮಾಡಿದರು, ನನ್ನ ಅಂಗಾಂಗಳ ದಾನ ಮಾಡಿ:
ಶಾಲಾ ಶಿಕ್ಷಕರು ಹಾಗಿದ್ದಾರೆ ನಾನೇನು ಮಾಡಲಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ನನ್ನ ರೀತಿ ಬೇರೆ ಯಾವ ಮಕ್ಕಳು ಸಾಯಬಾರದು ನನ್ನನ್ನು ಕ್ಷಮಿಸಿಬಿಡಿ ಕೊಲಂಬಾದ ಶಿಕ್ಷಕರು ನಾನು ಈ ರೀತಿ ಮಾಡಿಕೊಳ್ಳುವಂತೆ ಮಾಡಿದ್ದಾರೆ. ಎಂದು ಬರೆದಿರುವ ಶೌರ್ಯ ಡೆತ್‌ನೋಟ್‌ನಲ್ಲಿ ದೂರವಾಣಿ ಸಂಖ್ಯೆಯನ್ನು ಕೂಡ ಬರೆದಿದ್ದು, ಪತ್ರ ಸಿಕ್ಕವರು ಆ ಸಂಖ್ಯೆಯನ್ನು ಸಂಪರ್ಕಿಸುವಂತೆ ಹೇಳಿದ್ದಾನೆ ಸಾಧ್ಯವಾದಲ್ಲಿ, ತನ್ನ ದೇಹದ ಭಾಗಗಳು ಸುಸ್ಥಿತಿಯಲ್ಲಿದ್ದಲ್ಲಿ ದಾನ ಮಾಡುವಂತೆಯೂ ಬಾಲಕ ಕೇಳಿಕೊಂಡಿದ್ದಾನೆ.
ಇದನ್ನೂ ಓದಿ: ಇಸ್ರೇಲ್‌ನಲ್ಲಿ ವೃದ್ಧರ ಆರೈಕೆಗೆ ಹೋಗಿದ್ದ ಕೇರಳದ ಹೋಮ್ ನರ್ಸ್ ಸಾವು
ಇದನ್ನೂ ಓದಿ: ಪಿಜಿ ಬಿಟ್ಟು ಹೋಗುವ ವೇಳೆ ಡೆಪಾಸಿಟ್ ಹಣ ವಾಪಸ್ ಕೇಳಿದ್ದಕ್ಕೆ ಯುವತಿ ಮೇಲೆ ಪಿಜಿ ಮಾಲೀಕಳಿಂದ ಹಲ್ಲೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ