ಬೆಂಗಳೂರು: ಮನೆ ತೊರೆಯಲೊಪ್ಪದ ಅತ್ತೆಯ ತಲೆ ಗೋಡೆಗೆ ಡಿಕ್ಕಿ ಹೊಡೆಸಿ ಕೊಂದ ಸೊಸೆ..!

By Kannadaprabha News  |  First Published Oct 15, 2022, 10:00 AM IST

ಮನೆ ಖಾಲಿ ಮಾಡುವಂತೆ ಅತ್ತೆಗೆ ಸೊಸೆ ಧಮ್ಕಿ, ಅತ್ತಯನ್ನೇ ಕೊಂದ ಸೊಸೆಯ ಬಂಧನ


ಬೆಂಗಳೂರು(ಅ.15):  ಮನೆ ಖಾಲಿ ಮಾಡುವ ವಿಚಾರಕ್ಕೆ ಅತ್ತೆ-ಸೊಸೆ ನಡುವೆ ನಡೆದ ಜಗಳ ಅತ್ತೆಯ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಶ್ರೀರಾಮಪುರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಶ್ರೀರಾಮಪುರ 7ನೇ ಮುಖ್ಯರಸ್ತೆ ನಿವಾಸಿ ರಾಣಿಯಮ್ಮ(76) ಕೊಲೆಯಾದವರು. ಈ ಸಂಬಂಧ ಸೊಸೆ ಆರೋಪಿ ಸುಗುಣ(46) ಎಂಬಾಕೆಯನ್ನು ಬಂಧಿಸಿ ಜೈಲಿಗಟ್ಟಲಾಗಿದೆ. ಅ.12ರಂದು ಸಂಜೆ ಈ ದುರ್ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಕೊಲೆಯಾದ ರಾಣಿಯಮ್ಮನಿಗೆ ಒಂದು ಗಂಡು, ಮೂವರು ಹೆಣ್ಣು ಮಕ್ಕಳು. ಈ ಪೈಕಿ ಹೆಣ್ಣು ಮಕ್ಕಳ ವಿವಾಹವಾಗಿದೆ. ಮಗನಿಗೆ ಮದುವೆಯಾಗಿದೆ. ರಾಣಿಯಮ್ಮನಿಗೆ ಶ್ರೀರಾಮಪುರದಲ್ಲಿ ಎರಡು ಅಂತಸ್ತಿನ ಸ್ವಂತ ಮನೆಯಿದೆ. ಕೆಲ ವರ್ಷಗಳ ಹಿಂದೆ ಈ ಮನೆಯನ್ನು ಮಗನ ಹೆಸರಿಗೆ ವರ್ಗಾಯಿಸಿದ್ದರು. ಮೊದಲ ಮಹಡಿಯಲ್ಲಿ ಮಗ-ಸೊಸೆ ಇದ್ದರೆ, ನೆಲಮಹಡಿಯಲ್ಲಿ ರಾಣಿಯಮ್ಮ ನೆಲೆಸಿದ್ದರು. ಇತ್ತೀಚೆಗೆ ಆ ಮನೆಯನ್ನು ಮಗ ತನ್ನ ಹೆಂಡತಿ ಸುಗುಣ ಹೆಸರಿಗೆ ಬರೆದಿದ್ದ. ಹೀಗಾಗಿ ಸೊಸೆ ಸುಗುಣ ಆಗಾಗ ಅತ್ತೆ ರಾಣಿಯಮ್ಮನ ಜತೆ ಜಗಳ ತೆಗೆದು ಮನೆ ಖಾಲಿ ಮಾಡುವಂತೆ ಒತ್ತಾಯ ಮಾಡುತ್ತಿದ್ದಳು.

Tap to resize

Latest Videos

ಚಲಿಸುತ್ತಿದ್ದ ರೈಲಿನ ಕೆಳಗೆ ತಳ್ಳಿದ ಭಗ್ನಪ್ರೇಮಿ: ಕಾಲೇಜು ವಿದ್ಯಾರ್ಥಿನಿ ಸಾವು

ಅ.12ರಂದು ಸಂಜೆ ಮನೆ ಖಾಲಿ ಮಾಡುವ ವಿಚಾರಕ್ಕೆ ಸುಗುಣ ಮತ್ತು ರಾಣಿಯಮ್ಮನ ನಡುವೆ ಜೋರು ಜಗಳವಾಗಿದೆ. ಈ ವೇಳೆ ಕೋಪೋದ್ರಿಕ್ತಳಾದ ಸುಗುಣ ಅತ್ತೆ ರಾಣಿಯಮ್ಮನ ಮುಖಕ್ಕೆ ಬಲವಾಗಿ ಕೈಯಲ್ಲಿ ಗುದ್ದಿದ್ದಾಳೆ. ತಲೆ ಹಿಡಿದು ಗೋಡೆಗೆ ಡಿಕ್ಕಿ ಹೊಡೆಸಿದ್ದಾಳೆ. ಈ ವೇಳೆ ಪ್ರಜ್ಞೆ ತಪ್ಪಿ ರಾಣಿಯಮ್ಮ ದಿವಾನ್‌ ಕಾಟ್‌ ಮೇಲೆ ಬಿದ್ದಿದ್ದಾರೆ. ಅತ್ತೆ-ಸೊಸೆ ಜಗಳ ಕೇಳಿಸಿಕೊಂಡ ನೆರೆಯ ಮನೆಯ ಮಹಿಳೆಯೊಬ್ಬರು, ರಾಣಿಯಮ್ಮನ ಮಗಳು ಗಾಯತ್ರಿಗೆ ಕರೆ ಮಾಡಿ ಜಗಳದ ವಿಚಾರ ತಿಳಿಸಿದ್ದಾರೆ.

ಈ ವೇಳೆ ಗಾಬರಿಗೊಂಡ ಗಾಯತ್ರಿ ಕೂಡಲೇ ಮಲ್ಲೇಶ್ವರದಿಂದ ಶ್ರೀರಾಮಪುರಕ್ಕೆ ಬಂದು ತಾಯಿಯನ್ನು ನೋಡಿದಾಗ, ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದು, ಪರೀಕ್ಷಿಸಿದ ವೈದ್ಯರು ರಾಣಿಯಮ್ಮ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಹೀಗಾಗಿ ಗಾಯತ್ರಿ ನೀಡಿದ ದೂರಿನ ಮೇರೆಗೆ ಆರೋಪಿ ಸುಗುಣಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
 

click me!