*ಪಾನಿಪುರಿ ತಿನ್ನಲು ಬಂದರೆಂಬ ಕಾರಣಕ್ಕಾಗಿ ಪರಿಶಿಷ್ಟರ ಮನೆಗೆ ನುಗ್ಗಿ ಹಲ್ಲೆ
*ಮೈಸೂರು ತಾಲೂಕಿನ ಜಯಪುರದ ಅರಸನಕೆರೆಯಲ್ಲಿ ಘಟನೆ
*ಎಸ್ಸಿ, ಎಸ್ಟಿದೌರ್ಜನ್ಯ ಕಾಯ್ದೆ ಪ್ರಕರಣ ದಾಖಲಿಸಿಕೊಂಡು, 6 ಮಂದಿ
ಮೈಸೂರು (ಜ. 17): ತಮ್ಮ ಕೇರಿಗೆ ಪಾನಿಪುರಿ ತಿನ್ನಲು ಬಂದರೆಂಬ ಕಾರಣಕ್ಕಾಗಿ ಪರಿಶಿಷ್ಟರ ಮನೆಗೆ ನುಗ್ಗಿ ಹಲ್ಲೆ ನಡೆಸಿರುವ ಘಟನೆ ಮೈಸೂರು (Mysuru) ತಾಲೂಕಿನ ಜಯಪುರ ಹೋಬಳಿಯ ಅರಸನಕೆರೆಯಲ್ಲಿ ನಡೆದಿದೆ. ಈ ಸಂಬಂಧ ಜಯಪುರ ಠಾಣೆಯ ಪೊಲೀಸರು ಎಸ್ಸಿ, ಎಸ್ಟಿದೌರ್ಜನ್ಯ ಕಾಯ್ದೆಯಲ್ಲಿ ಪ್ರಕರಣ ದಾಖಲಿಸಿಕೊಂಡು, 6 ಮಂದಿಯನ್ನು ಬಂಧಿಸಿದ್ದಾರೆ. ಅರಸನಕೆರೆ ಗ್ರಾಮದ ಸೌಭಾಗ್ಯ, ದಿಲೀಪ, ಚಂದನ, ಮಧುಕರ, ಪ್ರಸನ್ನ ಎಂಬವರೇ ಹಲ್ಲೆಗೊಳಗಾಗಿದ್ದು, ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರ ಮೇಲೆ ಹಲ್ಲೆ ನಡೆಸಿದ ಅದೇ ಗ್ರಾಮದ ಮೂರ್ತಿ, ಸಚ್ಚಿನ್, ನವೀನ್, ಮಹದೇವಸ್ವಾಮಿ, ಚಂದನ್ ಮತ್ತು ಸಂತೋಷ್ ಎಂಬವರೇ ಬಂಧಿತ ಆರೋಪಿಗಳು.
ದಿಲೀಪ, ಪ್ರಸನ್ನ ಮತ್ತು ಮಧುಕರ ಎಂಬುವರು ಪಾನಿಪುರಿ ತಿನ್ನಲೆಂದು ಗುರುವಾರ ರಾತ್ರಿ 7.30ಕ್ಕೆ ಕೇರಿಗೆ ತೆರಳಿದ್ದರು. ಅದನ್ನು ಆಕ್ಷೇಪಿಸಿದ್ದ ಮೂರ್ತಿ, ಸಚ್ಚಿನ್ ಹಲ್ಲೆ ನಡೆಸಿದ್ದರು. ಈ ಸಂಬಂಧ ಗ್ರಾಮದ ಮುಖಂಡರ ಸಮ್ಮುಖದಲ್ಲಿ ಸಂಧಾನ ನಡೆದಿತ್ತು. ಶುಕ್ರವಾರ ಬೆಳಗ್ಗೆ ಮತ್ತೆ ಆರೋಪಿಗಳಾದ ಮೂರ್ತಿ, ಸಚ್ಚಿನ್ ಅವರು ದಿಲೀಪ, ಪ್ರಸನ್ನ ಮತ್ತು ಮಧುಕರ ಅವರ ಮನೆಗೆ ನುಗ್ಗಿ ಹಲ್ಲೆ ನಡೆಸಿದ್ದರು. ಅಲ್ಲದೆ, ತಡೆಯಲು ಬಂದ ಸೌಭಾಗ್ಯ ಮತ್ತು ಚಂದನ ಅವರ ಮೇಲೂ ಹಲ್ಲೆ ನಡೆಸಿದ್ದರು.
undefined
ಈ ಘಟನೆ ಸಂಬಂಧ ಹಲ್ಲೆಗೊಳದಾವರು ನೀಡಿದ ದೂರಿನ ಮೇರೆಗೆ ಆರೋಪಿಗಳ ವಿರುದ್ಧ ಜಾತಿ ನಿಂದನೆ, ಅವಾಚ್ಯ ಶಬ್ದಗಳಿಂದ ನಿಂದನೆ, ಕೊಲೆ ಬೆದರಿಕೆ ಪ್ರಕರಣವನ್ನು ಜಯಪುರ ಠಾಣೆ ಪೊಲೀಸರು ದಾಖಲಿಸಿಕೊಂಡು, ಆರೋಪಿಗಳನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ಪೇಜಾವರ ಶ್ರೀಗಳ ಬಗ್ಗೆ ಹಂಸಲೇಖ ವಿವಾದಾತ್ಮಕ ಹೇಳಿಕೆ, ದಲಿತರ ಜೊತೆ ನಾವಿದ್ದೇವೆ ಎಂದ ಶ್ರೀಗಳು
ದೇವಿಗುಡಿ ಪ್ರವೇಶಕ್ಕೆ ಸವರ್ಣೀಯರ ವಿರೋಧ: ರಾಜ್ಯದಲ್ಲಿ ದಲಿತರ ಹೋರಾಟಗಳು ನಡೆದಿರೋ ಬೆನ್ನಲ್ಲೆ ಬಾಗಲಕೋಟೆ (Bagalkot) ಜಿಲ್ಲೆಯಲ್ಲಿ ದಲಿತರ ಮೇಲೆ ಸವರ್ಣಿಯರಿಂದ ನಿರಂತರ ದೌರ್ಜನ್ಯದ ಜೊತೆಗೆ ಈ ಮಧ್ಯೆ ದಲಿತರಿಗೆ ದೇವಿಗುಡಿ ಪ್ರವೇಶವನ್ನು ಸಹ ನಿರಾಕರಿಸಲಾಗಿರೋ ಆರೋಪ ಕೇಳಿ ಬಂದಿದೆ. ಇದಕ್ಕೆ ದಲಿತರ ಹೋರಾಟದ ಹಾದಿ ಹಿಡಿದಿದ್ದಾರೆ. ಜಿಲ್ಲೆಯ ಮಾಜಿ ಸಿಎಂ ಸಿದ್ದರಾಮಯ್ಯನವರ ಸ್ವಕ್ಷೇತ್ರ ಬಾದಾಮಿ ಮತಕ್ಷೇತ್ರದ ಮಂಗಳಗುಡ್ಡ ಗ್ರಾಮದಲ್ಲಿ ಇತ್ತೀಚಿಗೆ ನಡೆದ ದೇವಿ ಗುಡಿಯ ಕಾರ್ತಿಕೋತ್ಸವದಲ್ಲಿ ದಲಿತ ಯುವಕರಿಗೆ ಗುಡಿ ಪ್ರವೇಶ ವಿಚಾರವಾಗಿ ಸವರ್ಣಿಯರಿಂದ ಅವಾಚ್ಯ ಪದಗಳ ನಿಂದನೆ ಸಹಿತ ದೌರ್ಜನ್ಯ ನಡೆಸಲಾಗಿದೆಯಂತೆ.
ಇದರಿಂದ ದಲಿತ ಮುಖಂಡರು ಸೇರಿ ಈ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮಕೈಗೊಳ್ಳುವಂತೆ ಕೇಸ್ ದಾಖಲಿಸಿದ್ದಾರೆ. ಆದ್ರೆ ಈ ಬಗ್ಗೆ ಸೂಕ್ತ ಕ್ರಮ ವಹಿಸದೇ ಪೊಲೀಸ್ ಅಧಿಕಾರಿಗಳು ಜಾಣ ಕುರುಡುತನ ಪ್ರದರ್ಶಿಸುತ್ತಿದ್ದು, ಹೀಗಾಗಿ ಈ ಕೂಡಲೇ ಸಂಭಂದಪಟ್ಟ ಅಧಿಕಾರಿಗಳು ಕ್ರಮ ವಹಿಸಬೇಕು ಮತ್ತು ಸ್ವಕ್ಷೇತ್ರದ ಶಾಸಕ,ಮಾಜಿ ಸಿಎಂ ಸಿದ್ದರಾಮಯ್ಯನವರು ಸಹ ಕ್ರಮಕ್ಕೆ ಸೂಚಿಸಬೇಕೆಂದು ದಲಿತ ಮುಖಂಡರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: Karnataka Politics| ದಲಿತರ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್ಸಿಗಿಲ್ಲ: ಯಡಿಯೂರಪ್ಪ
ದಲಿತ ಮಹಿಳೆ ಮೇಲೆ ಸುಡುವ ಸಾಂಬಾರು ಎಸೆದು ಹಲ್ಲೆ ಯತ್ನ: ಮತಾಂತರ ಮಾಡುತ್ತಿದ್ದಾರೆಂದು ಆರೋಪಿಸಿ ದಲಿತ ಕುಟುಂಬದ ಮೇಲೆ ಹಲ್ಲೆ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಡಿಸೆಂಬರ್ 29ರಂದು ತುಕ್ಕಾನಟ್ಟಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಏಳು ಜನರ ವಿರುದ್ಧ ಹಲ್ಲೆ ಆರೋಪವನ್ನು ಘಟಪ್ರಭಾ ಪೊಲೀಸ್ ಠಾಣೆಗೆ ಕವಿತಾ ಕರಗಣವಿ ಎಂಬುವರು ದೂರು ನೀಡಿದ್ದಾರೆ.ಪ್ರಾರ್ಥನೆ ಮಾಡುತ್ತಿದ್ದ ವೇಳೆ ಮನೆಗೆ ನುಗ್ಗಿ, ಜನರನ್ನು ಕ್ರೈಸ್ತ ಧರ್ಮಕ್ಕೆ ಏಕೆ ಮತಾಂತರ ಮಾಡಿಸುತ್ತಿದ್ದೀರಿ ಅಂತಾ ಪ್ರಶ್ನಿಸಿ, ಮಹಿಳೆ ಮೇಲೆ ಸುಡುವ ಸಾಂಬಾರು ಎಸೆಯಲು ಯತ್ನಿಸಿದ್ದರೆಂದು ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ.
ತುಕ್ಕಾನಟ್ಟಿಯ ಶಿವಾನಂದ ಗೋಟೂರು, ರಮೇಶ ದಂಡಾಪೂರ, ಪರಸಪ್ಪ ಬಾಬು ಫಕ್ಕೀರಪ್ಪ ಬಾಗೇವಾಡಿ, ಕೃಷ್ಣಾ ಕಾನಿಟ್ಕರ್, ಕಂಕನವಾಡಿಯ ಚೇತನ ಗಡಾಡಿ, ಹತ್ತರಕಿ ಗ್ರಾಮದ ಮಹಾಂತೇಶ ಹತ್ತರಗಿ ವಿರುದ್ಧ ದೂರು ದಾಖಲಾಗಿದೆ. ಘಟನೆ ನಡೆದು ಎರಡು ದಿನ ಕಳೆದರೂ ಇನ್ನೂ ಪೋಲಿಸರು ಯಾರನ್ನೂ ಬಂಧಿಸದೆ, ಪ್ರಕರಣ ಮುಚ್ಚಿಹಾಕಲು ಯತ್ನಿಸುತ್ತಿದ್ದಾರೆಂದು ನೊಂದ ಕುಟುಂಬಸ್ಥರು ಆರೋಪಿಸಿದ್ದು, ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.