Woman Shot Dead: ಬಡ್ಡಿ ವ್ಯವಹಾರ ಮಾಡುತ್ತಿದ್ದ ಮಹಿಳೆಗೆ ಗುಂಡಿಕ್ಕಿ ಹತ್ಯೆ!

By Kannadaprabha News  |  First Published Jan 17, 2022, 9:21 AM IST

*ಬೆಳಗಾವಿ: ಬಡ್ಡಿ ವ್ಯವಹಾರ ಮಾಡುತ್ತಿದ್ದ ಮಹಿಳೆಗೆ ಗುಂಡಿಕ್ಕಿ ಹತ್ಯೆ
*ವಿಜಯಪುರ: ಸಾಲ ವಾಪಸ್‌ ಕೊಡದ್ದಕ್ಕೆ ವೃದ್ಧೆಗೆ  ಬೆದರಿಕೆ
*ಮಂಡ್ಯ: ಸರ್ಕಾರಿ ಕಟ್ಟಡದಿಂದ ಜಿಗಿದು ಡಿ ಗ್ರೂಪ್‌ ನೌಕರ ಆತ್ಮಹತ್ಯೆ
 


ಸಂಕೇಶ್ವರ (ಜ. 17): ಒಂಟಿಯಾಗಿ ವಾಸಿಸುತ್ತಿದ್ದ ಮಹಿಳೆಯನ್ನು ಅಪರಿಚಿತರು ಗುಂಡಿಕ್ಕಿ ಕೊಲೆ ಮಾಡಿರುವ ಘಟನೆ ಬೆಳ​ಗಾವಿ (Belagavi) ಜಿಲ್ಲೆ ಹುಕ್ಕೇರಿ ತಾಲೂ​ಕಿ​ನ ಸಂಕೇ​ಶ್ವ​ರ ಪಟ್ಟಣದ ಸಂಸುದ್ದಿ ಗಲ್ಲಿಯಲ್ಲಿ ಭಾನುವಾರ ಬೆಳಗ್ಗೆ ನಡೆದಿದೆ. ಶೈಲಾ ನಿರಂಜನ ಸುಭೇದಾರ (56) ಕೊಲೆಯಾದ ಮಹಿಳೆ. ಮೃತ ಮಹಿಳೆಯ ಎದೆಗೆ ಎರಡು, ಕೈಗೆ ಒಂದು ಗುಂಡು ತಗುಲಿದ್ದು, ಒಂದು ಗುಂಡು ಸ್ಥಳದಲ್ಲಿ ಪತ್ತೆಯಾಗಿದೆ. ಕೊಲೆಗೆ ಕಂಟ್ರಿ ಪಿಸ್ತೂಲ್‌ ಬಳಕೆ ಮಾಡಲಾಗಿದೆ ಎಂದು ಹೇಳಲಾಗುತ್ತಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶ್ವಾನ ದಳದಿಂದಲೂ ಪರಿಶೀಲನೆ ನಡೆಸಲಾಗಿದೆ. 

ಶೈಲಾ ಬಡ್ಡಿಗೆ ಹಣ ನೀಡುತ್ತಿದ್ದರು ಎನ್ನಲಾಗಿದೆ. ಆಸ್ತಿ ವಿವಾದ ಹಾಗೂ ಹಣದ ವ್ಯವಹಾರವೇ ಕೊಲೆಗೆ ಕಾರಣ ಎಂದು ಸಂಬಂಧಿಕರು ಶಂಕೆ ವ್ಯಕ್ತಪಡಿಸಿದ್ದಾರೆ. ಸಂಕೇಶ್ವರ ಪೋಲಿಸ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

Tap to resize

Latest Videos

ಇದನ್ನೂ ಓದಿ: Suicide Case: ಫೈನಾನ್ಸಿಯರ್‌ ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆ: ಕಾರಣ ನಿಗೂಢ?

ಸಾಲ ವಾಪಸ್‌ ಕೊಡದ್ದಕ್ಕೆ ವೃದ್ಧೆಗೆ ಬಂದೂಕು ತೋರಿಸಿ ಬೆದರಿಕೆ, ಹಲ್ಲೆ: ಸಾಲ ವಾಪಸ್‌ ನೀಡುವಂತೆ ವೃದ್ಧೆಗೆ ಬಂದೂಕು ತೋರಿಸಿ ಬೆದರಿಕೆ ಹಾಕಿ, ಹಲ್ಲೆ ಮಾಡಿರುವ ಘಟನೆ ವಿಜ​ಯ​ಪುರ (Vijayapura) ಜಿಲ್ಲೆ​ಯ ತಿಕೋಟಾ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಜಾಲಗೇರಿ ಗ್ರಾಮದಲ್ಲಿ ನಡೆದಿದೆ. ಜಾಲಗೇರಿ ಗ್ರಾಮದ ಶಾಂತಾಬಾಯಿ ರಾಠೋಡ (65) ಹಲ್ಲೆಗೊಳಗಾದ ವೃದ್ಧೆ. ಅವರಿಗೆ ಇದೇ ಗ್ರಾಮದ ಮಾದಣ್ಣಲಾಲಿ ಎಂಬ ವ್ಯಕ್ತಿ ಬಂದೂಕು ತೋರಿಸಿದ್ದಲ್ಲದೆ, ಆಕೆಯ ಜೊತೆ ಅನುಚಿತವಾಗಿ ವರ್ತನೆ ನಡೆಸಿದ್ದಾನೆ ಎಂದು ಆರೋಪಿಸಿದ್ದಾರೆ. 

ಮಾದಣ್ಣನಿಂದ ಶಾಂತಾಬಾಯಿ ಕೈಗಡವಾಗಿ .30 ಸಾವಿರ ಸಾಲ ಪಡೆದಿದ್ದಳು ಎನ್ನಲಾಗಿದೆ. ಅದನ್ನು ಹಿಂತಿರುಗಿಸಿಲ್ಲ ಎಂದು ಮಾದಣ್ಣ ಲಾಲಿ ಬೆದರಿಕೆ ಹಾಕಿದ್ದಾನೆ ಎಂದು ಹೇಳಲಾಗಿದೆ. ಹಲ್ಲೆಗೊಳಗಾಗಿರುವ ವೃದ್ಧೆಯನ್ನು ವಿಜಯಪುರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಜೀವ ಬೆದರಿಕೆ ಇರುವ ಕಾರಣ ರಕ್ಷಣೆ ಕೊಡಿ ಎಂದು ಪೊಲೀಸರಿಗೆ ಮನವಿ ಮಾಡಿದ್ದಾರೆ. ತಿಕೋಟಾ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಇದನ್ನೂ ಓದಿ: Dowry Blackmail: ಶಿವಮೊಗ್ಗ, ವರದಕ್ಷಿಣೆ ಹಣ ತರದಿದ್ರೆ ಬೆತ್ತಲೆ ವಿಡಿಯೋ ಅಪ್  ಮಾಡ್ತೆನೆ..ಎಂಥಾ ಗಂಡ!

ಸರ್ಕಾರಿ ಕಟ್ಟಡದಿಂದ ಜಿಗಿದು ಡಿ ಗ್ರೂಪ್‌ ನೌಕರ ಆತ್ಮಹತ್ಯೆ: ಮದ್ದೂರು ತಾಲೂಕು ಕಚೇರಿ ಕಟ್ಟಡದ ಮೇಲಿಂದ ಜಿಗಿದು ಡಿ ಗ್ರೂಪ್‌ ನೌಕರ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ. ಮಂಡ್ಯ ತಾಲೂಕು ಕಚೇರಿಯ ರೆಕಾರ್ಡ್‌ ರೂಂನಲ್ಲಿ ಕೆಲಸ ಮಾಡುತ್ತಿದ್ದ ವೆಂಕಟೇಶ್‌ (48) ಮೃತರು. 2019ರಲ್ಲಿ ಕಂದಾಯ ಸಚಿವ ಆರ್‌. 

ಅಶೋಕ್‌ ತಾಲೂಕು ಕಚೇರಿಗೆ ಭೇಟಿ ನೀಡಿದ ವೇಳೆ ಆರ್‌ಟಿಸಿ ನೀಡಲು ವೆಂಕಟೇಶ್‌ ಲಂಚ ಕೇಳುತ್ತಿದ್ದಾರೆ ಎಂದು ರೈತರು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಸಚಿವ ಅಶೋಕ್‌ ಅವರು ವೆಂಕಟೇಶ್‌ನನ್ನು ಅಮಾನತು ಮಾಡಿದ್ದರು. ಆರು ತಿಂಗಳ ನಂತರ ಅಮಾನತು ವಾಪಸ್‌ ಪಡೆದ ಜಿಲ್ಲಾಧಿಕಾರಿಗಳು, ಮಂಡ್ಯ ತಾಲೂಕು ಕಚೇರಿಗೆ ವರ್ಗಾವಣೆ ಮಾಡಿದ್ದರು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಮದ್ದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

click me!