ಬೆಂಗಳೂರು: ಬೆಸ್ಕಾಂ ಹೆಸರಿನಲ್ಲಿ ಸೈಬರ್‌ ಕಳ್ಳರ ಕಾಟ..!

By Girish GoudarFirst Published Aug 27, 2022, 12:00 AM IST
Highlights

ಗ್ರಾಹಕರಿಗೆ ಬೆಸ್ಕಾಂ ಹೆಸರಿನಲ್ಲಿ ಎಸ್ಸೆಂಎಸ್‌, ಕರೆ ಮಾಡುವ ದಂಧೆಕೋರರು, ಸ್ಪಂದಿಸಿದವರ ಖಾತೆ ವಿವರ ಪಡೆದು ವಂಚನೆ

ಬೆಂಗಳೂರು(ಆ.27):  ವಿದ್ಯುತ್‌ ಶುಲ್ಕ ಪಾವತಿ ಸಂಬಂಧ ಗ್ರಾಹಕರಿಗೆ ಬೆಸ್ಕಾಂ ಅಧಿಕಾರಿಗಳ ಸೋಗಿನಲ್ಲಿ ಕರೆ ಮಾಡಿ ಸೈಬರ್‌ ವಂಚಕರು ಮೋಸದ ಕೃತ್ಯ ಮುಂದುವರೆದಿದ್ದು, ಸೈಬರ್‌ ವಂಚಕರ ಪತ್ತೆಗೆ ಕೇಂದ್ರ ವಿಭಾಗದ ಸಿಇಎನ್‌ ಠಾಣೆಯಲ್ಲಿ ಬೆಸ್ಕಾಂ ದೂರು ದಾಖಲಿಸಿದೆ. ವಿದ್ಯುತ್‌ ಶುಲ್ಕ ಪಾವತಿ ವಿಚಾರವಾಗಿ ತಮಗೆ ಎಸ್‌ಎಂಎಸ್‌ ಮತ್ತು ಕರೆಗಳು ಬಂದಿರುವ ಬಗ್ಗೆ ಬೆಸ್ಕಾಂ ಸಹಾಯವಾಣಿ (1912)ಗೆ ಕರೆ ಮಾಡಿ 16ಕ್ಕೂ ಹೆಚ್ಚಿನ ಗ್ರಾಹಕರು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಬೆಸ್ಕಾಂ ಪ್ರಧಾನ ವ್ಯವಸ್ಥಾಪಕ (ಗ್ರಾಹಕ ಸಂಪರ್ಕ) ಎಸ್‌.ಆರ್‌.ನಾಗರಾಜ್‌ ಅವರು ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.

ಬೆಸ್ಕಾಂ ಹೆಸರಿನಲ್ಲಿ ಗ್ರಾಹಕರಿಗೆ ಎಸ್‌ಎಂಎಸ್‌ ಅಥವಾ ಕರೆ ಮಾಡುವ ಸೈಬರ್‌ ವಂಚಕರು, ನೀವು ವಿದ್ಯುತ್‌ ಬಿಲ್‌ ಪಾವತಿಸಿಲ್ಲ. ಕೂಡಲೇ ಪಾವತಿಸದೆ ಹೋದರೆ ಮುಂದಿನ ತಿಂಗಳು ಹೆಚ್ಚುವರಿ ಶುಲ್ಕ ಭರಿಸಬೇಕಾಗುತ್ತದೆ. ಹಣ ಕಟ್ಟದೆ ಹೋದರೆ ವಿದ್ಯುತ್‌ ಸಂಪರ್ಕ ಕಡಿತಗೊಳಿಸಲಾಗುತ್ತದೆ ಎಂದು ಎಚ್ಚರಿಕೆ ನೀಡುತ್ತಿದ್ದರು. ಅಲ್ಲದೆ ಒಂದು ವೇಳೆ ಶುಲ್ಕ ಪಾವತಿಸಿದ್ದರೆ ಸಾಫ್ಟ್‌ವೇರ್‌ ಪರಿಶೀಲಿಸುವಂತೆ ಸೂಚಿಸುತ್ತಿದ್ದರು. ಇದರಿಂದ ಭಯಗೊಂಡ ಗ್ರಾಹಕರು ಆಲ್‌ನೈಲ್‌ನಲ್ಲಿ ಹಣ ಪಾವತಿಸುತ್ತಿದ್ದರು. ಗ್ರಾಹಕರ ಬ್ಯಾಂಕ್‌ ವಿವರ ಪಡೆದು ಅವರ ಖಾತೆಗೆ ಕನ್ನ ಹಾಕುತ್ತಿದ್ದರು. ಕೆಲವು ಬಾರಿ ತಮ್ಮ ಖಾತೆಗಳಿಗೆ ಗ್ರಾಹಕರಿಂದ ನೇರವಾಗಿ ಹಣ ವರ್ಗಾಯಿಸಿಕೊಳ್ಳುತ್ತಿದ್ದರು ಎಂದು ಪೊಲೀಸರು ವಿವರಿಸಿದ್ದಾರೆ.

Bengaluru Crime: ಬೆಸ್ಕಾಂನ 100 ಬ್ಯಾಟರಿ ಕಳವು ಮಾಡಿಸಿದ್ದ ಗುಜರಿ ವ್ಯಾಪಾರಿ!

ಬಂಗಾಳ, ಯುಪಿ ಕಾಟ

ಬೆಸ್ಕಾಂ ಗ್ರಾಹಕರಿಗೆ ಪಶ್ಚಿಮ ಬಂಗಾಳ ಹಾಗೂ ಉತ್ತರ ಪ್ರದೇಶ ರಾಜ್ಯಗಳಿಂದ ಹೆಚ್ಚಿನ ಎಸ್‌ಎಂಎಸ್‌ ಹಾಗೂ ಕರೆಗಳು ಬರುತ್ತಿವೆ. ಸೈಬರ್‌ ವಂಚಕರು ಹಿಂದಿಯಲ್ಲಿ ಮಾತನಾಡುತ್ತಿರುವುದು ತನಿಖೆಯಲ್ಲಿ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆನ್‌ಲೈನಲ್ಲಿ ವಿದ್ಯುತ್‌ ಕಡಿತ ತಂತ್ರಜ್ಞಾನ ಇಲ್ಲ

ವಿದ್ಯುತ್‌ ಶುಲ್ಕ ಪಾವತಿಸದೆ ಹೋದರೆ ಆನ್‌ಲೈನ್‌ ಮೂಲಕ ವಿದ್ಯುತ್‌ ಸಂಪರ್ಕ ಕಡಿತಗೊಳಿಸುವ ತಂತ್ರಜ್ಞಾನ ಇಲ್ಲ. ಗ್ರಾಹಕರಿಗೆ ಬೆದರಿಸಿ ಹಣ ವಸೂಲಿಗೆ ಸೈಬರ್‌ ವಂಚಕರು ಈ ರೀತಿ ಸುಳ್ಳು ಹೇಳುತ್ತಿದ್ದಾರೆ ಎಂದು ಬೆಸ್ಕಾಂ ಸ್ಪಷ್ಟಪಡಿಸಿದೆ.

ವಿದ್ಯುತ್‌ ಶುಲ್ಕ ಪಾವತಿಸದೆ ಹೋದರೆ ಮುಂದಿನ ತಿಂಗಳು ಶುಲ್ಕ ಪಾವತಿಗೆ ಅವಕಾಶವಿರುತ್ತದೆ. ವಿದ್ಯುತ್‌ ಕಡಿತಗೊಳಿಸುವ ಮುನ್ನ ಗ್ರಾಹಕರ ಮನೆಗೆ ಬೆಸ್ಕಾಂ ಸಿಬ್ಬಂದಿ ಭೇಟಿ ನೀಡಿ ವಿಚಾರಣೆ ನಡೆಸಲಿದ್ದಾರೆ. ಇದಾದ ನಂತರವೂ ಶುಲ್ಕ ಕಟ್ಟದೆ ಹೋದಾಗ ಮಾತ್ರ ವಿದ್ಯುತ್‌ ಸಂಪರ್ಕ ಕಡಿತವಾಗಲಿದೆ. ಹಾಗಾಗಿ ಅಪರಿಚಿತ ಕರೆಗಳು ಅಥವಾ ಲಿಂಕ್‌ಗಳು ಬಂದರೆ ನಿರ್ಲಕ್ಷ್ಯವಹಿಸುವಂತೆ ಬೆಸ್ಕಾಂ ಅಧಿಕಾರಿಗಳು ಮನವಿ ಮಾಡಿದ್ದಾರೆ.
 

click me!