
ಬೆಳಗಾವಿ: ವಯಸ್ಸು ಎನ್ನೋದು ದೇಹಕ್ಕೇ ವಿನಾ ಮನಸ್ಸಿಗಲ್ಲ ಎನ್ನುವ ಮಾತಿದೆ. ಇದನ್ನು ಸಾಧನೆ ಮಾಡುವವರಿಗೆ ಹೆಚ್ಚಾಗಿ ಹೇಳುವ ಮಾತು. ಆದರೆ ಬೆಳಗಾವಿಯ 80 ವರ್ಷದ ಅಜ್ಜಿ ಇದೀಗ ಪರರ ಜಮೀನುಗಳನ್ನು ತನ್ನದೇ ಜಮೀನು ಎಂದು ನಕಲಿ ದಾಖಲೆಯನ್ನು ಸೃಷ್ಟಿಸಿ ಹಲವಾರು ಮಂದಿಗೆ ವಂಚಿಸಿ ಈಗ ಅಂದರ್ ಆಗಿರೋ ಘಟನೆ ನಡೆದಿದೆ. ಮೋಸ ಹೋಗುವವರು ಇರುವವರೆಗೂ, ವಯಸ್ಸಿನ ಅಡ್ಡಿಯಿಲ್ಲದೇ ಮೋಸ ಮಾಡುವವರು ಇರುತ್ತಾರೆ ಎನ್ನುವುದಕ್ಕೆ ಈ ಕಿಲಾಡಿ ಅಜ್ಜಿಯೇ ಸಾಕ್ಷಿಯಾಗಿದ್ದಾಳೆ.
ವಡಗಾಂವ ಗಣೇಶ ಕಾಲೋನಿ ನಿವಾಸಿ ಮಂದಾಕಿನಿ ಪರಿಶವಾಡಕರ್ ಎನ್ನುವ ವೃದ್ಧೆ ತನ್ನ ಗ್ರಾಮದಲ್ಲಿ ಇರುವ ಅಕ್ಕ-ಪಕ್ಕದ ಜಮೀನುಗಳ ಒಡತಿ ತಾನೇ ಎಂದು ಬಿಂಬಿಸಿ, ಅದರ ನಕಲಿ ದಾಖಲೆಗಳನ್ನೂ ಸೃಷ್ಟಿಸಿ ಮಾರಾಟ ಮಾಡಿದ್ದಾಳೆ. ಈ ಮೂಲಕ ಕೋಟ್ಯಂತರ ರೂಪಾಯಿ ಕಮಾಯಿಯನ್ನೂ ಮಾಡಿದ್ದಾಳೆ. ಮೋಸ ಮಾಡುವವರು ಎಷ್ಟು ಎಂದು ಮಾಡಿಯಾರು? ಕೊನೆಗೆ ಜಮೀನಿನ ಮಾಲೀಕರೊಬ್ಬರು ಸಲ್ಲಿಸಿದ ಕಂಪ್ಲೇಂಟ್ ಆಧಾರದ ಮೇಲೆ ಪೊಲೀಸರು ಈಕೆಯ ಜಾತಕ ಬಿಚ್ಚಿದಾಗ, ಒಂದೊಂದೇ ಬಯಲಿಗೆ ಬಂದಿದೆ. ಸದ್ಯ ಈಕೆ ಮಾರ್ಕೆಟ್ ಠಾಣೆ ಪೊಲೀಸರ ಅತಿಥಿಯಾಗಿದ್ದಾಳೆ.
ಕಣಬರ್ಗಿ ರಸ್ತೆಯ ಮಹಾಂತೇಶ ನಗರದಲ್ಲಿರುವ ಪ್ಲಾಟ್ ನಂ.2313 ಹಾಗೂ ಸಿಟಿಎಸ್ ನಂ.944ರ ಜಾಗ ರತ್ನಾ ಯಶವಂತ ಮಲ್ಯೂಕರ ಎನ್ನುವವರ ಹೆಸರಿನಲ್ಲಿತ್ತು. ಈ ಜಾಗವನ್ನು ಅಕ್ರಮವಾಗಿ ಪರಭಾರೆ ಮಾಡುವ ಉದ್ದೇಶದಿಂದ ಮಂದಾಕಿವಿ, ರತ್ನಾ ಅವರಂತೆ ನಟನೆ ಮಾಡಿ ನಕಲಿ ದಾಖಲೆಗಳನ್ನು ಸೃಷ್ಟಿಸಿದಳು. ಕೊನೆಗೆ ಸಾಲದು ಎನ್ನುವುದಕ್ಕೆ 2003ರಲ್ಲಿ ಬೆಳಗಾವಿ ಉತ್ತರ ಉಪನೋಂದಣಾಧಿಕಾರಿ ಕಚೇರಿಗೆ ತೆರಳಿದ ಆರೋಪಿ ಈಕೆ, ಅವರದ್ದೇ ಹೆಸರಿನಲ್ಲಿ ವೆಬ್ ಕ್ಯಾಮೆರಾದಲ್ಲಿ ಫೋಟೊ ತೆಗೆಸಿಕೊಂಡಿದ್ದಳು. ಮಾತ್ರವಲ್ಲದೇ, ಅವರ ಹೆಸರಿನಲ್ಲಿ ಹೆಬ್ಬೆರಳು ಗುರುತು ಹಾಗೂ ಸಹಿ ನೀಡಿ ಜಾಗವನ್ನು ಮತ್ತೊಬ್ಬರಿಗೆ ಮಾರಾಟ ಮಾಡಿದ್ದಳು.
ಇದು ಕೊನೆಗೆ ಮಾಲೀಕರ ಗಮನಕ್ಕೆ ಬಂದಾಗ, ಈಕೆಯ ಒಂದೊಂದೇ ಕಿತಾಪತಿ ಬಯಲಿಗೆ ಬಂದಿದೆ. ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮಂದಾಕಿನಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪ್ರಕರಣದ ಹಲವು ಅಂಶಗಳು ಬಹಿರಂಗಗೊಂಡಿವೆ. ಪ್ರಕರಣದಲ್ಲಿ ಕೃತ್ಯಕ್ಕೆ ಸಹಕರಿಸಿದ ಆರೋಪದಡಿ ರಾಹುಲ್ ಅನೀಲ ಮಗದುಮ್ ಎಂಬಾತನ ವಿರುದ್ಧವೂ ಪ್ರಕರಣ ದಾಟಲಾಗಿದೆ. ರಾಹುಲ್ ಈಗಾಗಲೇ ದಾಖಲಾಗಿರುವ ಇನ್ನೆರಡು ಪ್ರಕರಣಗಳಲ್ಲಿ ತಲೆಮರೆಸಿಕೊಂಡಿದ್ದು, ಆತನ ಪತ್ರಗಾಗಿ ಪೊಲೀಸರು ಶೋಧ ಮುಂದುವರಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ