* ಮಂಗಳೂರು ಏರ್ ಪೋರ್ಟ್ ನಲ್ಲಿ ಬಾಂಬ್ ಇಟ್ಟ ಪ್ರಕರಣ
* ಆರೋಪಿ ಆದಿತ್ಯಾ ರಾವ್ ಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದ ಮಂಗಳೂರು ಕೋರ್ಟ್
* ಮಂಗಳೂರಿನ ನಾಲ್ಕನೇ ಜಿಲ್ಲಾ ನ್ಯಾಯಾಲಯದಿಂದ ತೀರ್ಪು ಪ್ರಕಟ
* ಪ್ರಕರಣದಲ್ಲಿ ಪ್ರತ್ಯೇಕ ಎರಡು ಶಿಕ್ಷೆ ಪ್ರಮಾಣ ಪ್ರಕಟಿಸಿದ ನ್ಯಾಯಾಲಯ
ಮಂಗಳೂರು(ಮಾ. 16) ಮಂಗಳೂರು (Mangaluru) ವಿಮಾನ ನಿಲ್ದಾಣದಲ್ಲಿ (Airport) ಬಾಂಬ್ ಇಟ್ಟಿದ್ದ ಆಸಾಮಿಗೆ ಕೋರ್ಟ್ ಶಿಕ್ಷೆ ಪ್ರಮಾಣ ಪ್ರಕಟ ಮಾಡಿದೆ. 2020, ಜನವರಿ 20ರಂದು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿದ್ದ ಆದಿತ್ಯ ರಾವ್ ದೋಷಿ ಎಂದಿರುವ ಸ್ಥಳೀಯ ನ್ಯಾಯಾಲಯ, ಅಪರಾಧಿಗೆ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದೆ.
ಬಜ್ಪೆ ವಿಮಾನ ನಿಲ್ದಾಣದ ಬಾಂಬ್ ಪ್ರಕರಣದ ವಿಚಾರಣೆ ನಡೆಸಿದ 4ನೇ ಹೆಚ್ಚುವರಿ ನ್ಯಾಯಾಲಯ ಶಿಕ್ಷೆ ಪ್ರಕಟ ಮಾಡಿದೆ. ಸ್ಫೋಟಕ ವಸ್ತುಗಳ ಕಾಯ್ದೆ 1908ರ ಸೆಕ್ಷನ್ 4ರ ಅಡಿಯಲ್ಲಿ 5 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 10,000 ರೂ.ಗಳ ದಂಡವನ್ನು ವಿಧಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ದಂಡ ಪಾವತಿಸಲು ತಪ್ಪಿದಲ್ಲಿ 6 ತಿಂಗಳು ಹೆಚ್ಚುವರಿ ಶಿಕ್ಷೆ ಅನುಭವಿಸಬೇಕು ಎಂದು ನ್ಯಾಯಾಲಯ ತಿಳಿಸಿದೆ.
ಇದಲ್ಲದೆ, ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ 1967 ರ ಸೆಕ್ಷನ್ 16 ರ ಅಡಿಯಲ್ಲಿ, ರಾವ್ ಗೆ 20 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 10,000 ರೂ. ದಂಡ ವಿಧಿಸಲಾಗಿದೆ. ಅದನ್ನು ಪಾವತಿಸಲು ವಿಫಲವಾದರೆ ಮತ್ತೆ 6 ತಿಂಗಳ ಸಾದಾ ಜೈಲು ಶಿಕ್ಷೆ ಅನುಭವಿಸುವುದು ಕಡ್ಡಾಯ.
ಉಡುಪಿ ಜಿಲ್ಲೆ ಮಣಿಪಾಲ ಮೂಲದ ಆದಿತ್ಯರಾವ್ ಮೆಕ್ಯಾನಿಕಲ್ ಎಂಜಿನಿಯರ್ ಪದವೀಧರನಾಗಿದ್ದು, 2018ರಲ್ಲಿ ಬೆಂಗಳೂರು ಏರ್‌ಪೋರ್ಟ್ ಕೆಲಸಕ್ಕೆ ಅರ್ಜಿ ಸಲ್ಲಿಸಿದ್ದ. ಆದರೆ ಸೂಕ್ತ ದಾಖಲೆಗಳು ಇಲ್ಲದ ಕಾರಣ ಅರ್ಜಿ ತಿರಸ್ಕೃತಗೊಂಡಿತ್ತು. ಇದೇ ಆಕ್ರೋಶದಿಂದ ಬಾಂಬ್ ಇಟ್ಟಿದ್ದ. ಈ ಎಲ್ಲ ವಿಚಾರಗಳು ತನಿಖೆ ಸಂದರ್ಭ ಬಯಲಾಗಿತ್ತು.
ಆದಿತ್ಯ ವಿರುದ್ಧ 700 ಪುಟಗಳ ದೋಷಾರೋಪಣಾ ಪಟ್ಟಿಯನ್ನು ತನಿಖಾಧಿಕಾರಿಗಳು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಆತನ ವಿರುದ್ಧ ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆ(ಯುಎಪಿಎ) ಅಡಿ ಪ್ರಕರಣ ದಾಖಲಿಸಿ ಆರೋಪ ಪಟ್ಟಿಯನ್ನು ಸಲ್ಲಿಸಲಾಗಿತ್ತು. ಆರಂಭದಲ್ಲಿ ಆತ ಮಾನಸಿಕ ಅಸ್ವಸ್ಥ ಎಂದು ಪ್ರಚಾರವಾಗಿತ್ತು.
ಆಸ್ಪತ್ರೆ ಸೇರಿದ್ದ: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಫೋಟಕ ಇಟ್ಟಿದ್ದ ಆದಿತ್ಯರಾವ್ ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದ. ಪ್ರಕರಣದ ತನಿಖೆ ನಡೆಸುತ್ತಿರುವ ಮಂಗಳೂರು ಉತ್ತರ ಉಪ ವಿಭಾಗದ ಎಸಿಪಿ ಬೆಳ್ಳಿಯಪ್ಪ ನೇತೃತ್ವದ ತಂಡ ಸಾಕ್ಷಿಗಳ ಹೇಳಿಕೆ ದಾಖಲಿಸಿಕೊಂಡಿತ್ತು. ಮಲೇರಿಯಾದಿಂದ ಬಳಲುತ್ತಿದ್ದ ಆದಿತ್ಯ ಆಸ್ಪತ್ರೆ ಸೇರಿ ಚೇತರಿಸಿಕೊಂಡಿದ್ದ.
ಇಂಚಿಂಚು ಬಿಡದೆ ವಿಚಾರಣೆ: ಆದಿತ್ಯ ಉಳಿದುಕೊಂಡಿದ್ದ ಹೋಟೆಲ್, ಕೆಲಸ ಮಾಡಿದ್ದ ಜಾಗಗಳು, ಬಾಂಬ್ ತಯಾರಿಕೆಗೆ ಬೇಕಾದ ಕಚ್ಚಾ ವಸ್ತು ಖರೀದಿಸಿದ ಜಾಗ ಹೀಗೆ ಎಲ್ಲಾ ಕಡೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಲಾಗಿತ್ತು.
ವಿಮಾಣ ನಿಲ್ದಾಣದ ಹೊರಭಾಗದಲ್ಲಿನ ವಿಶ್ರಾಂತಿ ಚೇರ್‌ನಲ್ಲಿ ಬಾಂಬ್ ಬ್ಯಾಗ್ ಇಟ್ಟಿದ್ದ ಆರೋಪಿ ಆದಿತ್ಯ ತಾನು ನಡೆಸಿದ ಕೃತ್ಯದ ಬಗ್ಗೆ ವಿವರಣೆ ನೀಡಿದ್ದಾನೆ. ಎರಡನೇ ಚೇರ್ ನಲ್ಲಿ ಬಾಂಬ್ ಇಟ್ಟಿರೋದಾಗಿ ತೋರಿಸಿದ ಆದಿತ್ಯ ತನಿಖಾಧಿಕಾರಿ ಕೆ.ಯು.ಬೆಳ್ಳಿಯಪ್ಪರಿಗೆ ಘಟನೆಯನ್ನು ವಿವರಿಸಿದ್ದ.