
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಹರಿಯಾಣದ ಕರ್ನಾಲ್‌ನ 26 ವರ್ಷದ ಭಾರತೀಯ ನೌಕಾಪಡೆಯ ಅಧಿಕಾರಿ ಲೆಫ್ಟಿನೆಂಟ್ ವಿನಯ್ ನರ್ವಾಲ್ ದುರಂತವಾಗಿ ಸಾವನ್ನಪ್ಪಿದ್ದಾರೆ. ಮದುವೆಯಾದ ಏಳೇ ದಿನಕ್ಕೆ ಅವರು ಈ ನೀಚ ಕೃತ್ಯಕ್ಕೆ ಬಲಿಯಾಗಿದ್ದಾರೆ. ಪತ್ನಿ ಹಿಮಾಂಶಿ ಸೋವಾಮಿ ಜೊತೆ ಅವರು ಕಾಶ್ಮೀರಕ್ಕೆ ಹೋಗಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಆದರೆ, ಇವರ ಹತ್ಯೆಯ ಸುದ್ದಿಯ ಜೊತೆಗೇ, ವಿಡಿಯೋ ಒಂದು ವೈರಲ್ ಆಗುತ್ತಿದೆ. ಅದರಲ್ಲಿ ಭಯೋತ್ಪಾದಕ ದಾಳಿಗೆ ಕೆಲವೇ ಗಂಟೆಗಳ ಮೊದಲು ಭಾರತೀಯ ನೌಕಾಪಡೆಯ ಲೆಫ್ಟಿನೆಂಟ್ ವಿನಯ್ ನರ್ವಾಲ್ ಮತ್ತು ಅವರ ಪತ್ನಿ ಹಿಮಾಂಶಿ ಸೋವಾಮಿ ನೃತ್ಯ ಮಾಡಿದ್ದರು. ಇದು ಅವರ ಕೊನೆಯ ವಿಡಿಯೋ ಆಗಿತ್ತು ಎಂದು ಅದರಲ್ಲಿ ಹೇಳಲಾಗಿದೆ. ಇದು ಸೋಷಿಯಲ್ ಮೀಡಿಯಾದಲ್ಲಿ ಭಾರಿ ಶೇರ್ ಕೂಡ ಆಗುತ್ತಿದ್ದು, ಜನರು ಕಂಬನಿ ಮಿಡಿಯುತ್ತಿದ್ದಾರೆ.
ಆದರೆ, ಇದೀಗ ಖುದ್ದು ಹಿಮಾಂಶಿ ಸೋವಾಮಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ಇದು ನಮ್ಮ ವಿಡಿಯೋ ಅಲ್ಲ. ದಯವಿಟ್ಟು ಸುಳ್ಳು ಸುದ್ದಿ ಪ್ರಕಟಿಸಬೇಡಿ ಎಂದು ಯೂಟ್ಯೂಬರ್ಸ್ಗಳಿಗೆ ಮನವಿ ಮಾಡಿಕೊಂಡಿದ್ದಾರೆ. 19 ಸೆಕೆಂಡುಗಳ ಈ ಕ್ಲಿಪ್ನಲ್ಲಿ ಪಹಲ್ಗಾಮ್‌ನ ಬೈಸರನ್ ಕಣಿವೆಯ ರಮಣೀಯ ಹಿನ್ನೆಲೆಯಲ್ಲಿ ಯುವ ದಂಪತಿ ನೃತ್ಯ ಮಾಡುವುದನ್ನು, ಜನಪ್ರಿಯ ಕೋಕ್ ಸ್ಟುಡಿಯೋ ಹಾಡಿಗೆ ಹೆಜ್ಜೆ ಹಾಕುವುದನ್ನು ನೋಡಬಹುದು. ಏಪ್ರಿಲ್ 22 ರಂದು ಹಿಂದೂ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ನಡೆದ ಭಯೋತ್ಪಾದಕ ದಾಳಿಯಲ್ಲಿ ದುರಂತವಾಗಿ ಸಾವನ್ನಪ್ಪುವ ಮೊದಲು, ಪಹಲ್ಗಾಮ್ ಪ್ರವಾಸದ ಸಮಯದಲ್ಲಿ ಲೆಫ್ಟಿನೆಂಟ್ ನರ್ವಾಲ್ ಮತ್ತು ಅವರ ಪತ್ನಿಯ ಕೊನೆಯ ವೀಡಿಯೊ ಇದಾಗಿದೆ ಎಂದು ಹೇಳುವ ಶೀರ್ಷಿಕೆಯೊಂದಿಗೆ ಇದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ಆದರೆ ಈ ವಿಡಿಯೋ ತಮ್ಮದಲ್ಲ ಎಂದು ಹಿಮಾಂಶಿ ಸೋವಾಮಿ ಸ್ಪಷ್ಟಪಡಿಸಿದ್ದಾರೆ.
ಇದೇ ವೇಳೆ, ಈ ವಿಡಿಯೋ ತಮ್ಮದು ಎಂದು ಆಶಿಶ್ ಸೆಹ್ರಾವತ್ ಮತ್ತು ಯಾಶಿಕಾ ಶರ್ಮಾ ಹೇಳಿದ್ದಾರೆ. ಕ್ಲಿಪ್‌ನಲ್ಲಿರುವ ಭಾರತೀಯ ರೈಲ್ವೆಯಲ್ಲಿ ಕೆಲಸ ಮಾಡುವ ಸೆಹ್ರಾವತ್ ಅವರು ಇದು ಹಿಮಾಂಶಿ ಸೋವಾಮಿ ದಂಪತಿ ವಿಡಿಯೋ ಅಲ್ಲ. ಬದಲಿಗೆ ನಮ್ಮ ವಿಡಿಯೋ. ಗುಂಡಿನ ದಾಳಿ ನಡೆದ ಸ್ಥಳದಲ್ಲಿಯೇ ಏಪ್ರಿಲ್ 14 ರಂದು ಕಾಶ್ಮೀರಕ್ಕೆ ಹೋಗಿದ್ದ ಸಂದರ್ಭದಲ್ಲಿ ಈ ವಿಡಿಯೋ ರೆಕಾರ್ಡ್ ಮಾಡಲಾಗಿದೆ. ಇದನ್ನು ನಾವು ಶೇರ್ ಮಾಡಿದ್ದು, ಆದರೆ ತಪ್ಪಾಗಿ ಅವರ ಹೆಸರಿನಲ್ಲಿ ವಿಡಿಯೋ ವೈರಲ್ ಆಗುತ್ತಿದೆ ಎಂದಿದ್ದಾರೆ.
"ದಾಳಿ ನಡೆದ ಅದೇ ಸ್ಥಳದಿಂದ ವಿಡಿಯೋ ಪೋಸ್ಟ್ ಮಾಡಿದ್ದಕ್ಕಾಗಿ ನಮಗೆ ಪ್ರತಿಕ್ರಿಯೆ ಬರಲು ಪ್ರಾರಂಭಿಸಿತು. ಈಗ ಆ ವಿಡಿಯೋ ತೆಗೆದು ಹಾಕಿದ್ದೇವೆ. ಆದರೆ ಆ ಹೊತ್ತಿಗೆ, ಯಾರೋ ಒಬ್ಬರು ವಿನಯ್ ನರ್ವಾಲ್ ಮತ್ತು ಅವರ ಪತ್ನಿಯ ವಿಡಿಯೋ ಎಂದು ತೋರಿಸಿಬಿಟ್ಟಿದ್ದು, ಅದು ವೈರಲ್ ಆಗಿದೆ ಸೆಹ್ರಾವತ್ ಹೇಳಿದ್ದಾರೆ. ನಾವು ಸುರಕ್ಷಿತವಾಗಿದ್ದೇವೆ. ಆದರೆ ವಿಡಿಯೋ ನೋಡಿದ ಬಳಿಕ ನಮ್ಮ ಪರಿಚಯಸ್ಥರು ನಮಗೂ ಅನಾಹುತ ಸಂಭವಿಸಿದೆ ಎಂದು ಅಂದುಕೊಳ್ಳುತ್ತಿದ್ದಾರೆ. ದಯವಿಟ್ಟು ಹೀಗೆ ಪ್ರಸಾರ ಮಾಡಬೇಡಿ ಎಂದು ಅವರೂ ಕೇಳಿಕೊಂಡಿದ್ದಾರೆ. "ನಾವು ಜೀವಂತವಾಗಿದ್ದೇವೆ. ನಮ್ಮ ವಿಡಿಯೋ ಈ ರೀತಿ ಹೇಗೆ ಹರಡಲಾಗುತ್ತಿದೆ ಎಂದು ನಮಗೆ ತಿಳಿದಿಲ್ಲ. ಇದನ್ನು ದುರಂತ ಘಟನೆಗೆ ತಪ್ಪಾಗಿ ಜೋಡಿಸುತ್ತಿರುವುದು ಹೃದಯವಿದ್ರಾವಕ. ಲೆಫ್ಟಿನೆಂಟ್ ನರ್ವಾಲ್ ಅವರ ಕುಟುಂಬಕ್ಕೆ ನಮ್ಮ ಪ್ರಾಮಾಣಿಕ ಸಂತಾಪಗಳು ಎಂದಿದ್ದಾರೆ.
Pahalgam Terror Attack: ಕಾಶ್ಮೀರದಲ್ಲಿ ಉಗ್ರರ ಕೃತ್ಯದ ಮುನ್ನ ಪ್ರವಾಸಿಗನೊಬ್ಬ ಮಾಡಿರುವ ವಿಡಿಯೋ ವೈರಲ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ