ಭಾರತದಲ್ಲಿ ಲಾಕ್‌ಡೌನ್ ಬಳಿಕ ಮತ್ತೊಂದು ಸಮಸ್ಯೆ ತಲೆದೂರಿದ್ದು, ಕೌಟುಂಬಿಕ ದೌರ್ಜನ್ಯ ಕೇಸ್‌ಗಳ ಸಂಖ್ಯೆ ಹೆಚ್ಚಾಗಲಾರಂಭಿಸಿವೆ. ಈ ಕುರಿತಾದ ಒಂದು ವರದಿ ಇಲ್ಲಿದೆ ನೋಡಿ.
ನವದೆಹಲಿ(ಏ.03): ಕೊರೋನಾ ವೈರಸ್ ಸೋಂಕು ಹರಡಲು ಆರಂಭವಾದ ನಂತರ ಜಗತ್ತಿನಾದ್ಯಂತ ಕೌಟುಂಬಿಕ ದೌರ್ಜನ್ಯ ಹಾಗೂ ವಿಚ್ಛೇದನದ ಸಂಖ್ಯೆ ಹೆಚ್ಚಳವಾದ ಬಗ್ಗೆ ವರದಿಯಾಗಿತ್ತು. ಭಾರತದಲ್ಲೂ ಈಗ ಇದೇ ಟ್ರೆಂಡ್ ಆರಂಭವಾಗಿದ್ದು, ಲಾಕ್‌ಡೌನ್ ಜಾರಿಯಾದ ನಂತರ ಮಹಿಳೆಯರ ಮೇಲಿನ ಗೃಹಹಿಂಸೆ ಪ್ರಕರಣಗಳು ಜಾಸ್ತಿಯಾಗಿವೆ.
ರಾಷ್ಟ್ರವ್ಯಾಪಿ ಲಾಕ್‌ಡೌನ್ ಜಾರಿಯಾದ ಮಾ.24ರಿಂದ ಏ.1ರ ನಡುವೆ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ 257 ದೂರು ಸಲ್ಲಿಕೆಯಾಗಿದೆ. ಇವುಗಳ ಪೈಕಿ 69 ದೂರುಗಳು ಕೌಟುಂಬಿಕ ದೌರ್ಜನ್ಯಕ್ಕೆ ಸಂಬಂಧಿಸಿದ್ದಾಗಿವೆ. ಹೆಚ್ಚಿನ ಮಹಿಳೆಯರು ಅಂಚೆ ಮೂಲಕ ದೂರು ಸಲ್ಲಿಸಿದ್ದಾರೆ. ಕೆಲ ಪ್ರಕರಣಗಳಲ್ಲಿ ಮಗಳ ಪರವಾಗಿ ತಂದೆ ದೂರು ಸಲ್ಲಿಸಿದ್ದಾರೆ.
undefined
ಲಾಕ್‌ಡೌನ್‌ಗೂ ಕ್ಯಾರೇ ಎನ್ನುತ್ತಿಲ್ಲ ಜನ: ಅಪಾಯ ತಪ್ಪಿದ್ದಲ್ಲ!
‘ಗೃಹಹಿಂಸೆ ಪ್ರಕರಣಗಳ ಸಂಖ್ಯೆ ಬಹುಶಃ ಇನ್ನೂ ಜಾಸ್ತಿಯಿದೆ. ಆದರೆ, ಲಾಕ್‌ಡೌನ್‌ನಿಂದಾಗಿ ಮಹಿಳೆಯರಿಗೆ ದೂರು ನೀಡಲು ಸಾಧ್ಯವಾಗುತ್ತಿಲ್ಲ ಅಥವಾ ದೂರು ನೀಡಿದ ಮೇಲೂ ಬೇರೆಲ್ಲೂ ಹೋಗಲು ಸಾಧ್ಯವಿಲ್ಲದೆ ಗಂಡನ ಜೊತೆಗೇ ಇರಬೇಕು ಎಂಬ ಕಾರಣಕ್ಕೆ ಅನೇಕ ಮಹಿಳೆಯರು ದೂರು ನೀಡುತ್ತಿಲ್ಲ’ ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಹೇಳಿದ್ದಾರೆ.
ಮಾ.24ರ ನಂತರ ಮಹಿಳಾ ಆಯೋಗಕ್ಕೆ 69 ಕೌಟುಂಬಿಕ ದೌರ್ಜನ್ಯದ ದೂರುಗಳು ಬಂದಿವೆ. ಅವುಗಳ ಸಂಖ್ಯೆ ದಿನೇದಿನೇ ಹೆಚ್ಚುತ್ತಿದೆ. ಹಿಂದೆ ಪತಿಯ ಮನೆಯಲ್ಲಿ ದೌರ್ಜನ್ಯ ನಡೆದರೆ ಮಹಿಳೆಯರು ಪೊಲೀಸರಿಗೆ ದೂರು ನೀಡಿ ತವರು ಮನೆಗೆ ಹೋಗುತ್ತಿದ್ದರು. ಆದರೆ ಈಗ ಲಾಕ್‌ಡೌನ್ ಜಾರಿಯಲ್ಲಿರುವುದರಿಂದ ತವರಿಗೆ ಹೋಗಲು ಸಾಧ್ಯವಿಲ್ಲ. ಹೀಗಾಗಿ ಗಂಡನ ಮನೆಯಲ್ಲೇ ಇರಬೇಕಾಗುತ್ತದೆ. ದೂರು ಕೊಟ್ಟರೆ ಆತ ಇನ್ನೂ ಹಿಂಸೆ ನೀಡುತ್ತಾನೆ ಎಂದು ಬಹಳಷ್ಟುಮಹಿಳೆಯರು ದೂರು ನೀಡುತ್ತಿಲ್ಲ ಎಂದು ತಿಳಿಸಿದ್ದಾರೆ.