
ವರದಿ: ಪುಟ್ಟರಾಜು. ಆರ್. ಸಿ. ಏಷಿಯಾನೆಟ್, ಸುವರ್ಣ ನ್ಯೂಸ್, ಚಾಮರಾಜನಗರ.
ಚಾಮರಾಜನಗರ (ಜ.29): ಇತ್ತೀಚೆಗೆ ಮೋಸ, ದಗಾ ವಂಚನೆಯ ಸುದ್ದಿಗಳೆ ಹೆಚ್ಚಾಗಿ ಸದ್ದು ಮಾಡುತ್ತಿವೆ. ಮೋಸ ಹೋಗುವವರು ಇರೋತನಕ ಮೋಸ ಮಾಡುವರು ಇದ್ದೆ ಇರುತ್ತಾರೆ ಎಂಬ ಮಾತಿಗೆ ತಕ್ಕಂತೆ ಚಾಮರಾಜನಗರ ಜಿಲ್ಲೆಯಲ್ಲಿ ಇಬ್ಬರು ಚಾಲಾಕಿ ಹೆಂಗಸರು ಚೀಟಿ ಹಾಕಿದರೆ ಒಂದೇ ವರ್ಷದಲ್ಲಿ ಮೂರು ಪಟ್ಟು ಹೆಚ್ಚು ಹಣ ಕೊಡೋದಾಗಿ ನಂಬಿಸಿ 246 ಮಹಿಳೆಯರಿಗೆ ಕೋಟ್ಯಂತರ ರೂಪಾಯಿ ಪಂಗನಾಮ ಹಾಕಿದ್ದಾರೆ. ಈ ಫೋಟೋ ನೋಡಿ.. ಯಾರದ್ದೋ ದುಡ್ಡು ಎಲ್ಲಮ್ಮನ ಜಾತ್ರೆ ಎಂಬಂತೆ ಈ ಇಬ್ಬರು ಚಾಲಾಕಿ ಹೆಂಗಸರು ಮೈಮೇಲೆ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಕ್ಕೊಂಡು ಶೋಕಿ ಮಾಡ್ತಿದ್ದಾರೆ.
ಒಂದೇ ವರ್ಷದಲ್ಲಿ ಮೂರು ಪಟ್ಟು ಹೆಚ್ಚು ಹಣ ನೀಡೋದಾಗಿ ನಂಬಿಸಿ ಮಹಿಳೆಯರಿಂದ ಚೀಟಿ ಹಾಕಿಸಿಕೊಂಡು ವಂಚನೆ ಮಾಡಿ ಅದೇ ದುಡ್ಡಲ್ಲಿ ಶೋಕಿ ಮಾಡ್ತಿದ್ದಾರೆ. ಅಂದ ಹಾಗೆ ಈ ವಂಚನೆ ಪ್ರಕರಣ ನಡೆದಿರೋದು ಚಾಮರಾಜನಗರ ಶಾಸಕ ಸಿ ಪುಟ್ಟರಂಗಶೆಟ್ಟಿ ಸ್ವಗ್ರಾಮ ಯಳಂದೂರು ತಾಲೋಕಿನ ಉಪ್ಪಿನಮೋಳೆ ಗ್ರಾಮದಲ್ಲಿ. ಉಪ್ಪಿನಮೋಳೆ ಗ್ರಾಮದ ಚೌಡಮ್ಮ ಹಾಗು ಪಕ್ಕದ ವೈ.ಕೆ. ಮೋಳೆ ಗ್ರಾಮದ ಸರಸ್ವತಮ್ಮ ಎಂಬ ಈ ಇಬ್ಬರು ಹೆಂಗಸರು ಶಿವರಾತ್ರಿ ಚೀಟಿ, ಯುಗಾದಿ ಚೀಟಿ, ದೀಪಾವಳಿ ಚೀಟಿ, ಅದು ಇದು ಅಂತ 246 ಮಹಿಳೆಯರಿಂದ ಚೀಟಿ ಹಾಕಿಸಿಕೊಂಡಿದ್ದರು. ಚೀಟಿ ಹಾಕಿದ ಒಂದು ವರ್ಷಕ್ಕೆ ಮೂರು ಪಟ್ಟು ಹಣ ನೀಡೋದಾಗಿ ನಂಬಿಸಿದ್ದರು. ಸಣ್ಣ ಪುಟ್ಟ ಪ್ರವಾಸ ಏರ್ಪಡಿಸಿ ತಮ್ಮ ಮೇಲೆ ನಂಬಿಕೆ ಬರುವಂತೆ ಮಾಡಿದ್ದರು.
ಇವರನ್ನು ನಂಬಿದ ಗ್ರಾಮದ 246 ಮಹಿಳೆಯರು 25 ಸಾವಿರ, 50 ಸಾವಿರ, ಒಂದು ಲಕ್ಷ, ಎರಡು ಲಕ್ಷ ಹೀಗೆ ತಮ್ಮ ಶಕ್ತ್ಯಾನುಸಾರ ಚೀಟಿ ಹಾಕಿದ್ದರು. ಆದರೆ ಚೀಟಿ ಅವಧಿ ಮುಗಿದು ವರ್ಷ ಕಳೆದರು ಮಹಿಳೆಯರಿಗೆ ಹಣ ನೀಡದೆ ವಂಚಿಸಿದ್ದಾರೆ. ಕೆಲವರು ತಾವು ಕೂಡಿಟ್ಟಿದ್ದ ಹಣವನ್ನು ತಮ್ಮ ಗಂಡಂದಿರಿಗೆ ಕಾಣದಂತೆ ಚೀಟಿ ಹಾಕಿದ್ದರು. ಗ್ರಾಮದ ಸುಶೀಲಮ್ಮ ಎಂಬ ಮಹಿಳೆ ತನ್ನ ಗಂಡನಿಗೆ ಕಾಣದಂತೆ ತಮ್ಮ ಬಳಿ ಇದ್ದ ಚಿನ್ನಾಭರಣ ಅಡವಿಟ್ಟು ಸಾಲ ಸೋಲ ಮಾಡಿ ಚೀಟಿ ಹಾಕಿದ್ದರು. ಕೊನೆಗೆ ಈ ವಿಷಯ ತಮ್ಮ ಗಂಡನಿಗೆ ಈ ವಿಷಯ ಗೊತ್ತಾಗಿ ಅವರು ಬೇಸರದಿಂದ ನೀರಿಗೆ ಆತ್ಮಹತ್ಯೆ ಮಾಡಿಕೊಂಡರು ಎಂದು ಸುಶೀಲಮ್ಮ ಕಣ್ಣೀರಿಡುತ್ತಿದ್ದಾರೆ. ಗಂಡ ಸತ್ತ ಹೋದರು ಹಣ ನೀಡಲಿಲ್ಲ ಎಂದು ಅವರು ಚಾಮರಾಜನಗರ ಜಿಲ್ಲಾಧಿಕಾರಿ ಹಾಗು ಪೊಲೀಸ್ ವರಿಷ್ಢಾಧಿಕಾರಿ ಮುಂದೆ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಚಾಮರಾಜನಗರದಲ್ಲಿ 55 ಹೊಸ ಸಿಸಿ ಕ್ಯಾಮೆರಾ ಅಳವಡಿಸಿದ ಖಾಕಿ ಪಡೆ!
ಈ ವಂಚನೆಯ ಬಗ್ಗೆ ಯಳಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಗತ್ಯ ದಾಖಲೆಗಳೊಂದಿಗೆ ದೂರು ನೀಡಿದಲ್ಲಿ ಸಂಬಂಧಿಸಿದವರ ವಿರುದ್ದ ಎಎಫ್ಆರ್ ದಾಖಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ಡಾ ಬಿ ಟಿ ಕವಿತಾ ತಿಳಿಸಿದ್ದಾರೆ. ಸದ್ಯ ಯಾವುದೇ ದಾಖಲೆಗಳು ಇಲ್ಲದ ಕಾರಣ ಈ ವಂಚಕಿ ಮಹಿಳೆಯರನ್ನು ಬಂಧಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಇವರ ಆಸ್ತಿಪಾಸ್ತಿ ಬಗ್ಗೆ ಮಾಹಿತಿ ಕಲೆ ಹಾಕಿ ತನಿಖೆ ನಡೆಸಲು ತಹಸೀಲ್ದಾರ್ ಹಾಗು ಪೊಲೀಸ್ ಅಧಿಕಾರಿಗಳ ಒಂದು ಸಮಿತಿಯನ್ನು ರಚಿಸಲಾಗಿದೆ. ವರದಿ ಬಂದ ಬಳಿಕ ನ್ಯಾಯ ಒದಗಿಸಿಕೊಡೋದಾಗಿ ಜಿಲ್ಲಾಧಿಕಾರಿ ಶಿಲ್ಪಾನಾಗ್ ವಂಚನೆಗೆ ಒಳಗಾದ ಮಹಿಳೆಯರಿಗೆ ಭರವಸೆ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ