* ತಾಳಿ, ಕಾಲುಂಗುರ ಬಿಚ್ಚಿಸಿ ಪರೀಕ್ಷೆಗೆ ಕಳುಹಿಸಿದ ಪೋಷಕರು.
* ಸ್ನೇಹಿತೆ ಬಳಿ ಮದುವೆ ವಿಚಾರ ತಿಳಿಸಿದ ಬಾಲಕಿ.
* ಮಾಹಿತಿ ಬಹಿರಂಗ ಬಳಿಕ ಸಂತ್ರಸ್ತೆ ಬಾಲಕಿ ರಕ್ಷಣೆ.
ವರದಿ: ನಂದನ್ ರಾಮಕೃಷ್ಣ, ಏಷ್ಯಾನೆಟ್ ಸುವರ್ಣ ನ್ಯೂಸ್, ಮಂಡ್ಯ.
ಮಂಡ್ಯ (ಏ.01): ಪದೇ ಪದೇ ದೂರು ಕೇಳಿ ಬಂದ ಹಿನ್ನಲೆ ಅಧಿಕಾರಿಗಳು ಎಚ್ಚರಿಕೆ ನೀಡಿದರು ಪೋಷಕರು ಅಪ್ರಾಪ್ತ ಬಾಲಕಿಗೆ ಬಾಲ್ಯ ವಿವಾಹ (Child Marriage) ಮಾಡಿರುವ ಘಟನೆ ಮಂಡ್ಯ (Mandya) ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿದೆ. ಮಾಹಿತಿ ಬಹಿರಂಗಗೊಂಡ ಬಳಿಕ ಬಾಲಕಿ ರಕ್ಷಣೆ ಮಾಡಿರುವ ಅಧಿಕಾರಿಗಳು ಬಾಲ್ಯ ವಿವಾಹ ಮಾಡಿದವರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ದೂರು ನೀಡಿದ್ದಾರೆ.
ತಾಳಿ, ಕಾಲುಂಗುರ ಬಿಚ್ಚಿಸಿ ಪರೀಕ್ಷೆಗೆ ಕಳುಹಿಸಿದ ಪೋಷಕರು: ಮಾರ್ಚ್ 27ರಂದು ಕೆಆರ್ ಪೇಟೆ ಮೂಲದ ಸಂಬಂಧಿ ಯುವಕನ ಜೊತೆ ಬಾಲಕಿ ಮದುವೆ ಮಾಡಿರುವ ಪೋಷಕರು. ಮಾರನೇ ದಿನ (ಮಾರ್ಚ್ 28) ರಂದು ಬಾಲಕಿಗೆ SSLC ಪರೀಕ್ಷೆಗೆ ಇದ್ದುದ್ದರಿಂದ ಯಾರಿಗೂ ವಿಚಾರ ತಿಳಿಯಬಾರದು ಎಂಬ ಕಾರಣಕ್ಕೆ ಆಕೆ ಧರಿಸಿದ್ದ ತಾಳಿ, ಕಾಲುಂಗುರ ಬಿಚ್ಚಿಸಿಕೊಂಡು ಪರೀಕ್ಷೆಗೆ ಕಳುಹಿಸಿದ್ದರು. ಆಕೆಗೆ ಇಷ್ಟವಿಲ್ಲವಿದ್ರು ಪೋಷಕರ ಒತ್ತಾಯಕ್ಕೆ ಮಣಿದು ಸಂಬಂಧಿ ಯುವಕನನ್ನ ವರಿಸಿದ್ದ ಬಾಲಕಿ ವಲ್ಲದ ಮನಸ್ಸಿನಲ್ಲೇ ಪರೀಕ್ಷೆಗೆ ಹಾಜರಾಗಿದ್ದಳು.
ಸ್ನೇಹಿತೆ ಬಳಿ ಮದುವೆ ವಿಚಾರ ಹಂಚಿಕೊಂಡ ಸಂತ್ರಸ್ತ ಬಾಲಕಿ: ಮಾರ್ಚ್ 28 ರಂದು SSLC ಪರೀಕ್ಷೆಗೆ ಹಾಜರಾಗಿದ್ದ ಸಂತ್ರಸ್ತ ಬಾಲಕಿ ತನಗೆ ಮದುವೆ ಆಗಿರುವ ವಿಷಯವನ್ನ ಸ್ನೇಹಿತೆ ಬಳಿ ಹೇಳಿಕೊಂಡಿದ್ದಳು. ಸ್ನೇಹಿತೆ ವಿಚಾರವನ್ನ ಶಿಕ್ಷಕರಿಗೆ ತಿಳಿಸಿದ್ದರಿಂದ ಅಧಿಕಾರಿಗಳಿಗೆ ಮಾಹಿತಿ ತಲುಪಿತ್ತು. ಕೂಡಲೇ ಕಾರ್ಯಪ್ರವೃತ್ತರಾದ ಮಕ್ಕಳ ರಕ್ಷಣಾ ಘಟಕ ಅಧಿಕಾರಿಗಳು ಬಾಲಕಿ ಮನೆಗೆ ತೆರಳಿ ಆಕೆಯನ್ನ ರಕ್ಷಿಸಿದ್ದಾರೆ.
ಬಾಲ್ಯವಿವಾಹಕ್ಕೆ ಒತ್ತಾಯಿಸಿ ಕೋಣೆಯಲ್ಲಿ ಕೂಡಿ ಹಾಕಿದ್ದ ಬಾಲಕಿ ಎಸ್ಕೇಪ್, SSLC ಪರೀಕ್ಷೆಗೆ ಹಾಜರ್!
ವಿವಾಹ ನಿಶ್ಚಯ ಆಗುತ್ತಿದ್ದಂತೆ ದೂರುಗಳು ಕೇಳಿ ಬಂದ ಹಿನ್ನಲೆ ಮಾರ್ಚ್ 18 ಮತ್ತು ಮಾರ್ಚ್ 25ರಂದು ಮನೆಗೆ ಭೇಟಿ ನೀಡಿ ಪೋಷಕರಿಗೆ ಬಾಲ್ಯ ವಿವಾಹ ಮಾಡದಂತೆ ಎಚ್ಚರಿಕೆ ನೀಡಿದ್ದರು. ಆದರೆ ಅಧಿಕಾರಿಗಳ ಎಚ್ಚರಿಕೆಗೆ ಬಗ್ಗದ ಪೋಷಕರು ಅಪ್ರಾಪ್ತ ಬಾಲಕಿಯ ಮದುವೆ ಮಾಡಿ ಮುಗಿಸಿದ್ದರು. ಕಡೆಗೇ ಮದುವೆ ಮಾಹಿತಿ ಖಚಿತವಾಗ್ತಿದ್ದಂತೆ ಬಾಲಕಿಯನ್ನ ರಕ್ಷಿಸಿರುವ ಅಧಿಕಾರಿಗಳು ಆಕೆಯನ್ನ ಮಂಡ್ಯದ ಬಾಲ ಮಂದಿರದಲ್ಲಿ ಇರಿಸಿದ್ದಾರೆ. ಕದ್ದು ಮದುವೆ ಮಾಡಿದವರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ದೂರು ನೀಡಿದ್ದಾರೆ.
ಕೊರೋನಾ ವೇಳೆ ರಾಜ್ಯದಲ್ಲಿ 296 ಬಾಲ್ಯ ವಿವಾಹ: ರಾಜ್ಯದಲ್ಲಿ ಕಳೆದ ಮೂರು ವರ್ಷದಲ್ಲಿ 571 ಬಾಲ್ಯ ವಿವಾಹಗಳು ಜರುಗಿದ್ದು, ಈ ಪೈಕಿ ಕೋವಿಡ್‌ಪೀಡಿತ ವರ್ಷವಾಗಿದ್ದ 2020-21ನೇ ಸಾಲಿನಲ್ಲಿ 296 ಬಾಲ್ಯ ವಿವಾಹಗಳು ನಡೆದಿವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಹಾಲಪ್ಪ ಆಚಾರ್ ತಿಳಿಸಿದ್ದಾರೆ. ಕಾಂಗ್ರೆಸ್‌ನ ಡಾ. ಕೆ. ಗೋವಿಂದರಾಜು ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, 2018-19ನೇ ಸಾಲಿನಲ್ಲಿ 119, 2019-20ನೇ ಸಾಲಿನಲ್ಲಿ 156 ಬಾಲ್ಯ ವಿವಾಹಗಳು ನಡೆದಿವೆ, ಆದರೆ 2020-21ನೇ ಸಾಲಿನಲ್ಲಿ ಅತಿ ಹೆಚ್ಚು 296 ಬಾಲ್ಯ ವಿವಾಹ ನಡೆದಿರುವ ಬಗ್ಗೆ ವರದಿಯಾಗಿದೆ.
ಅತಿ ಹೆಚ್ಚು ಪ್ರಕರಣ ಹಾಸನ (39), ಮಂಡ್ಯ (34), ಮೈಸೂರು (31), ರಾಮನಗರ (20)ದಲ್ಲಿ ನಡೆದಿವೆ. ಬೆಂಗಳೂರು ಗ್ರಾಮಾಂತರ, ಬೆಳಗಾವಿ, ರಾಯಚೂರು ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ತಲಾ 18 ಬಾಲ್ಯ ವಿವಾಹ ಆಗಿವೆ ಎಂದು ತಿಳಿಸಿದರು. ಆದರೆ ಕೇಂದ್ರದ ಅಪರಾಧ ದಾಖಲಾತಿಗಳ ಸಂಸ್ಥೆಯ 2020ನೇ ಸಾಲಿನ ವರದಿಯಲ್ಲಿ ರಾಜ್ಯದಲ್ಲಿ 184 ಬಾಲ್ಯ ವಿವಾಹ ನಡೆದಿದೆ ಎಂದು ಉಲ್ಲೇಖಿಸಲಾಗಿದೆ. ಉಳಿದ ರಾಜ್ಯಗಳಿಗೆ ಹೋಲಿಸಿದಾಗ ಕರ್ನಾಟಕ ರಾಜ್ಯದಲ್ಲಿ ಹೆಚ್ಚು ಪ್ರಕರಣಗಳು ವರದಿಯಾಗಿರುತ್ತದೆ ಎಂದರು.
ದಾವಣಗೆರೆಯಲ್ಲಿ ಬಾಲ್ಯ ವಿವಾಹದಿಂದ 5ನೇ ತರಗತಿ ವಿದ್ಯಾರ್ಥಿಯನ್ನು ಕಾಪಾಡಿದ ಶಿಕ್ಷಕರು
ಪಿಡುಗು ನಿವಾರಣೆಗೆ ಕ್ರಮ: ಬಾಲ್ಯ ವಿವಾಹ ಹೆಚ್ಚಾಗಿರುವ 9 ಜಿಲ್ಲೆ ಸೇರಿದಂತೆ 26 ಜಿಲ್ಲೆಗಳಲ್ಲಿ ಒಂದು ತಿಂಗಳ ಕಾಲ ಬಾಲ್ಯ ವಿವಾಹ ನಿಷೇಧಿಸುವ ಕಾಯ್ದೆ ಕುರಿತು 911 ಬಸ್ ಬ್ರ್ಯಾಂಡಿಂಗ್ ಮಾಡುವ ಮೂಲಕ ಅರಿವು ಮೂಡಿಸಲಾಗಿದೆ. ರಾಜ್ಯಾದ್ಯಂತ ಬಾಲ್ಯ ವಿವಾಹ ನಿಷೇಧ ಅಭಿಯಾನ, ‘ವಿಡಿಯೋ ಆನ್ ವ್ಹೀಲ್ಸ್’ ವಾಹನಗಳ ಮೂಲಕ 788 ಹೋಬಳಿಗಳಲ್ಲಿ 3000 ಪ್ರದರ್ಶನ ಮತ್ತು 7 ಬಿಬಿಎಂಪಿ ವಲಯಗಳಲ್ಲಿ 350 ಪ್ರದರ್ಶನ ಏರ್ಪಡಿಸುವ ಮೂಲಕ ಅರಿವು ಮೂಡಿಸಲಾಗಿದೆ. ಆಕಾಶವಾಣಿಯಲ್ಲಿ ಒಂದು ತಿಂಗಳ ಕಾಲ ಬಾಲ್ಯ ವಿವಾಹ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ ಎಂದರು.