
ಬೆಂಗಳೂರು(ಸೆ.27): ಮಾದಕ ವಸ್ತು ಮಾರಾಟ ಜಾಲ ನಂಟು ಪ್ರಕರಣ ಸಂಬಂಧ ಸುಮಾರು 10 ತಾಸುಗಳು ಪ್ರಶ್ನೆಗಳನ್ನು ಹಾಕಿ ಖ್ಯಾತ ವಸ್ತ್ರ ವಿನ್ಯಾಸಕ ಹಾಗೂ ಫ್ಯಾಷನ್ ಜಗತ್ತಿನ ದಿಗ್ಗಜ ರಮೇಶ್ ಡೆಂಬಲ್‌ಗೆ ಸಿಸಿಬಿ ಪೊಲೀಸರು ಶನಿವಾರ ಬೆವರಿಳಿಸಿದ್ದಾರೆ.
ನೋಟಿಸ್ ಹಿನ್ನೆಲೆಯಲ್ಲಿ ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಗೆ ಬೆಳಗ್ಗೆ 11.30 ಗಂಟೆಗೆ ಹಾಜರಾದ ರಮೇಶ್, ವಿಚಾರಣೆ ಮುಗಿಸಿ ರಾತ್ರಿ 9.30ರ ಸುಮಾರಿಗೆ ಹೊರ ಬಂದಿದ್ದಾನೆ. ಮಾದಕ ವಸ್ತು ಜಾಲದ ಆರೋಪಿಗಳ ಜತೆ ಸ್ನೇಹದ ಬಗ್ಗೆ ಸುದೀರ್ಘವಾಗಿ ಫ್ಯಾಷನ್ ಗುರುವಿಗೆ ತನಿಖಾಧಿಕಾರಿಗಳು ಪ್ರಶ್ನಿಸಿ ಹೇಳಿಕೆ ಪಡೆದಿದ್ದಾರೆ. ಆದರೆ ಕೆಲವು ಪ್ರಶ್ನೆಗಳಿಗೆ ಆತ ಸಮರ್ಪಕ ಉತ್ತರ ನೀಡಿಲ್ಲ ಎನ್ನಲಾಗಿದೆ. ಹೀಗಾಗಿ ಮತ್ತೆ ವಿಚಾರಣೆ ಹಾಜರಾಗುವಂತೆ ಸೂಚಿಸಿ ಆತನನ್ನು ಅಧಿಕಾರಿಗಳು ಕಳುಹಿಸಿದ್ದಾರೆ.
ವಿಚಾರಣೆ ಮುಗಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಮೇಶ್ ಡೆಂಬಲ್, ‘ನನಗೆ ಮಾದಕ ವಸ್ತು ಪ್ರಕರಣದಲ್ಲಿ ಸಿಸಿಬಿ ಬಂಧಿಸಿರುವ 10 ಆರೋಪಿಗಳು ಸ್ನೇಹಿತರು. ಈ ಗೆಳೆಯರ ಒಡನಾಟದ ಸೇರಿದಂತೆ ಕೆಲವು ವಿಷಯಗಳ ಬಗ್ಗೆ ಮಾಹಿತಿ ಪಡೆಯಲು ಅಧಿಕಾರಿಗಳು ಕರೆದಿದ್ದರು. ನಾನು ತನಿಖೆಗೆ ಸಂಪೂರ್ಣವಾಗಿ ಸಹಕರಿಸಿದ್ದೇನೆ’ ಎಂದರು.
ಡ್ರಗ್ಸ್ ಕೇಸ್: ಫ್ಯಾಷನ್ ಗುರುಗೆ ಸಿಸಿಬಿ ಬುಲಾವ್
ಫ್ಯಾಷನ್‌ಗೆ ಸಂಬಂಧಿಸಿದ ಪಾರ್ಟಿಗಳಲ್ಲಿ ಪಾಲ್ಗೊಂಡಿದ್ದೇನೆ. ಆದರೆ ನಾನು ಯಾವತ್ತೂ ಡ್ರಗ್ಸ್ ಪಾರ್ಟಿಗಳಿಗೆ ಹೋಗಿಲ್ಲ. ನನಗೆ ಡ್ರಗ್ಸ್ ಚಟವಿಲ್ಲ. ಅದರ ವ್ಯವಹಾರವು ಗೊತ್ತಿಲ್ಲ. ನನ್ನ ಎರಡು ಮೊಬೈಲ್‌ಗಳನ್ನು ನನ್ನ ಬಳಿಯೇ ಇವೆ ಎಂದು ರಮೇಶ್ ಸ್ಪಷ್ಟಪಡಿಸಿದರು.
ರಂಗು ರಂಗಿನ ಪಾರ್ಟಿಗಳ ಮಾಹಿತಿ:
ಖ್ಯಾತ ವಸ್ತ್ರ ವಿನ್ಯಾಸಕ ರಮೇಶ್, ಬೆಂಗಳೂರು ಫ್ಯಾಷನ್ ಎಂಬ ಸಂಸ್ಥೆಯನ್ನು ಹೊಂದಿದ್ದಾನೆ. ಹಲವು ವರ್ಷಗಳಿಂದ ಫ್ಯಾಷನ್ ಜಗತ್ತಿನಲ್ಲಿ ಮಿಂಚುತ್ತಿರುವ ಆತ, ಹಲವು ಬ್ರ್ಯಾಂಡ್‌ಗಳಿಗೆ ರೂಪದರ್ಶಿಗಳನ್ನು ಪರಿಚಯಿಸಿದ್ದಾನೆ. ಬಾಲಿವುಡ್ ನಟ ಅಕ್ಷಯ್ ಕುಮಾರ್ ಸೇರಿದಂತೆ ಇತರೆ ಖ್ಯಾತನಾಮರ ಸಂಪರ್ಕವಿದೆ.
ಸಿಸಿಬಿ ಪೊಲೀಸರಿಂದ ವಿಚಾರಣೆ ಮುಕ್ತಾಯ; ಡ್ರಗ್ಸ್ ಸುಳಿಯಲ್ಲಿ ಅನುಶ್ರೀ?
ರಮೇಶ್ ಸ್ನೇಹ ವಲಯದಲ್ಲಿ ಉದ್ಯಮಿಗಳು, ಕ್ರಿಕೆಟ್ ಆಟಗಾರರು ಹಾಗೂ ಸ್ಟಾರ್ ರೂಪದರ್ಶಿಗಳ ಕಾಣಿಸಿಕೊಂಡಿದ್ದಾರೆ. ಈಗ ಮಾದಕ ವಸ್ತು ಮಾರಾಟ ಜಾಲದಲ್ಲಿ ಆರೋಪಿಗಳಾಗಿರುವ ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿ ಕೂಡಾ ರಮೇಶ್ ಆಯೋಜಿಸಿದ್ದ ಫ್ಯಾಷನ್ ಶೋಗಳಲ್ಲಿ ಪಾಲ್ಗೊಂಡಿದ್ದಾರೆ.
ಮೊದಲ ಹಂತದ ವಿಚಾರಣೆಯಲ್ಲಿ ರಮೇಶ್ ನೀಡಿರುವ ಮಾಹಿತಿಯನ್ನು ಪರಿಶೀಲಿಸಲಾಗುತ್ತದೆ. ಆರೋಪಿಗಳ ಜತೆ ಆತನ ವಾಟ್ಸಾಪ್ ಸಂದೇಶಗಳು ಹಾಗೂ ಮೊಬೈಲ್ ಸಂಭಾಷಣೆಗಳು ಪತ್ತೆಯಾಗಿವೆ. ಹಾಗೆಯೇ ತನಿಖೆ ವೇಳೆ ಬಂಧಿತ ಆರೋಪಿಗಳು ಸಹ ರಮೇಶ್ ಹೆಸರು ಪ್ರಸ್ತಾಪಿಸಿದ್ದಾರೆ. ಹೀಗಾಗಿ ಈ ಎಲ್ಲ ಮಾಹಿತಿಯನ್ನು ಪರಾಮರ್ಶಿಸಿ ಮುಂದೆ ಕಾನೂನು ರೀತ್ಯ ಕ್ರಮ ಜರುಗಿಸಲಾಗುತ್ತೆ ಎಂದು ಮೂಲಗಳು ಹೇಳಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ