
ಬೆಂಗಳೂರು(ಸೆ.26): ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದೆ ಎಂಬ ಕಾರಣಕ್ಕೆ ಹೆತ್ತ ಕಂದಮ್ಮನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ ತಾಯಿಯೊಬ್ಬಳಿಗೆ ಜೀವಾವಧಿ ಶಿಕ್ಷೆ ಮತ್ತು ಐದು ಸಾವಿರ ರು. ದಂಡ ವಿಧಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯ ತೀರ್ಪು ನೀಡಿದೆ.
ನಗರದ ಕೋಡಿಗೆಹಳ್ಳಿಯ ನಿವಾಸಿ ಶ್ರದ್ಧಾ (26) ಜೀವಾವಧಿ ಶಿಕ್ಷೆಗೊಳಗಾದ ಮಹಿಳೆ. ಮನೆ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿರುವ ಶ್ರದ್ಧಾ ಕೆಲ ವರ್ಷಗಳ ಹಿಂದೆ ಪರಿಚಿತನನ್ನು ಪ್ರೀತಿಸಿ ವಿವಾಹವಾಗಿದ್ದಳು. ದಂಪತಿಗೆ ಅಂಜನಾ ಎಂಬ ಎರಡೂವರೆ ವರ್ಷದ ಹೆಣ್ಣು ಮಗುವಿತ್ತು. ಕೆಲ ಸಮಯದ ಬಳಿಕ ಪತಿಯನ್ನು ತೊರೆದಿದ್ದ ಆಕೆ, ಕಾಲೇಜಿನಲ್ಲಿ ಸಹಪಾಠಿಯಾಗಿದ್ದ ಶರತ್ ಕುಮಾರ್ ಎಂಬಾತನ ಜತೆ ಅನೈತಿಕ ಸಂಬಂಧ ಹೊಂದಿದ್ದಳು.
ಬಾಡಿಗೆ ನೀಡಲು ಒಪ್ಪದ್ದಕ್ಕೆ ಗುಂಡು ಹೊಡೆದು ಕೊಲೆಗೆ ಯತ್ನ
ಅಲ್ಲದೆ, ಶರತನನ್ನು ವಿವಾಹವಾಗಲು ನಿರ್ಧರಿಸಿದಾಗ ಅದಕ್ಕೆ ಪುತ್ರಿ ಅಂಜನಾ ಅಡ್ಡಿಯಾಗುತ್ತಾಳೆಂದು ಶ್ರದ್ಧಾ ಭಾವಿಸಿದ್ದಳು. 2017 ನ.11ರಂದು ಮಗಳನ್ನು ಗೋಡೆಗೆ ಜೋರಾಗಿ ತಳ್ಳಿದ್ದಳು. ಅದರಿಂದ ನೋವು ಉಂಟಾಗಿ ಅಂಜನಾ ಜೋರಾಗಿ ಅತ್ತಾಗ, ಮುಖದ ಮೇಲೆ ತಲೆದಿಂಬು ಅದುಮಿ ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಳು. ನಂತರ ಪ್ರಿಯಕರ ಶರತ್‌ಗೆ ಕರೆ ಮಾಡಿ ಈ ವಿಚಾರ ತಿಳಿಸಿದಾಗ ಇಬ್ಬರೂ ಸೇರಿ ಕೊಲೆ ಪ್ರಕರಣವನ್ನು ಮರೆ ಮಾಚಲು ಮಂಚದ ಮೇಲಿಂದ ಕೆಳಗೆ ಬಿದ್ದು ಮಗು ಮೃತಪಟ್ಟಿದೆ ಎಂದು ಬಿಂಬಿಸಿದ್ದರು.
ಮರಣೋತ್ತರ ಪರೀಕ್ಷಾ ವರದಿಯಲ್ಲಿ ತುಟಿ ಮತ್ತು ಬಾಯಿಯನ್ನು ಒತ್ತಡದಿಂದ ಮುಚ್ಚಿದಾಗ ಮೆದುಳಿನಲ್ಲಿ ರಕ್ತಸ್ರಾವವಾಗಿ ಮಗು ಮೃತಪಟ್ಟಿದೆ ಎಂದು ವೈದ್ಯ ತಿಳಿಸಿದ್ದರು. ನಂತರ ತಾವರಕೆರೆ ಪೊಲೀಸರು ಶ್ರದ್ಧಾಗಳನ್ನು ಬಂಧಿಸಿ ತನಿಖೆಗೆ ಒಳಪಡಿಸಿದಾಗ ಸತ್ಯ ಒಪ್ಪಿಕೊಂಡಿದ್ದಳು. ಪೊಲೀಸರ ಪರ ಸರ್ಕಾರಿ ಅಭಿಯೋಜಕ ಎಸ್.ವಿ.ಭಟ್ ವಾದ ಮಂಡಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ