ಡ್ರಗ್‌ ಮಾಫಿಯಾ: ಡ್ರಗ್ಗಿಣಿಯರ 600 ಪುಟ ಚಾಟಿಂಗ್‌ ಸಂಗ್ರಹ..!

By Kannadaprabha News  |  First Published Nov 5, 2020, 7:09 AM IST

ಮಾದಕ ವಸ್ತು ಸೇವನೆ ಬಗ್ಗೆ ಸ್ನೇಹಿತರಿಗೆ ರಾಗಿಣಿ, ಸಂಜನಾ ವಾಟ್ಸಪ್‌|ಇಬ್ಬರೂ ನಡೆಸಿದ್ದ ಚಾಟಿಂಗ್‌ ಬಗ್ಗೆ ತಲಾ 300 ಪುಟ ಮಾಹಿತಿ| ಡ್ರಗ್ಸ್‌ ಸೇವನೆ ಫೋಟೋ, ಮಾಹಿತಿ ಹಂಚಿಕೊಂಡಿದ್ದ ರಾಗಿಣಿ|ಡಿಲೀಟ್‌ ಮಾಡಿದ್ದರೂ ತಜ್ಞರ ನೆರವಿನಿಂದ ರಿಟ್ರೀವ್‌ ಮಾಡಿದ ಸಿಸಿಬಿ| 


ಗಿರೀಶ್‌ ಮಾದೇನಹಳ್ಳಿ

ಬೆಂಗಳೂರು(ನ.05): ಮಾದಕ ವಸ್ತು ಮಾರಾಟ ದಂಧೆ ಸಂಬಂಧ ವಾಟ್ಸಪ್‌ ಹಾಗೂ ಇ-ಮೇಲ್‌ನಲ್ಲಿ ತಮ್ಮ ಸ್ನೇಹ ಬಳಗದ ಜತೆ ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿ ನಡೆಸಿದ್ದ ಸುಮಾರು ತಲಾ 300 ಪುಟಗಳ ‘ಚಾಟಿಂಗ್‌’ ವಿವರವನ್ನು ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಕಲೆ ಹಾಕಿದೆ.

Latest Videos

undefined

ಈ ‘ಮಾದಕ’ ಮಾತುಕತೆಯೇ ನಟಿಯರ ಪಾಲಿಗೆ ಕಂಟಕವಾಗಿ ಪರಿಣಮಿಸಿದೆ. ಹಾಗೆಯೇ ನಟಿಮಣಿಯರಿಗೆ ನ್ಯಾಯಾಲಯದಲ್ಲಿ ಜಾಮೀನು ಸಿಗದಿರಲು ಈ ತಾಂತ್ರಿಕ ಸಾಕ್ಷ್ಯವೇ ಪ್ರಮುಖ ಕಾರಣವಾಗಿದೆ. ಇದಲ್ಲದೆ ತಮ್ಮ ಮೊಬೈಲ್‌ಗಳಲ್ಲೇ ಡ್ರಗ್ಸ್‌ ಪಾರ್ಟಿಗಳ ಫೋಟೋ ಕ್ಲಿಕ್ಕಿಸಿ ಶೇರ್‌ ಮಾಡಿದ್ದು ಅವರಿಗೆ ಈಗ ಮುಳ್ಳಾಗಿ ಪರಿಣಮಿಸಿದೆ. ಡ್ರಗ್ಸ್‌ ಪೆಡ್ಲರ್‌ ಹಾಗೂ ಸೇವನೆ ಆರೋಪ ಎದುರಿಸುತ್ತಿರುವ ನಟಿಯರು, ಈ ಕೃತ್ಯದಲ್ಲಿ ವ್ಯವಹಾರವನ್ನು ವಾಟ್ಸ್‌ಆ್ಯಪ್‌ ಮೂಲಕವೇ ನಡೆಸಿದ್ದಾರೆ ಎಂದು ಸಿಸಿಬಿ ಉನ್ನತ ಮೂಲಗಳು ‘ಕನ್ನಡಪ್ರಭ’ಕ್ಕೆ ತಿಳಿಸಿವೆ.

ಉಭಯ ನಟಿಯರನ್ನು ಬಂಧಿಸಿದ ಸಂದರ್ಭದಲ್ಲಿ ಜಪ್ತಿ ಮಾಡಲಾದ ಮೊಬೈಲ್‌ಗಳ ಮೂಲಕ ನಾಲ್ಕು ವರ್ಷಗಳ ಅವಧಿಯಲ್ಲಿ ಆ ಇಬ್ಬರು ನಡೆಸಿದ್ದ ಚಾಟಿಂಗ್‌ ವಿವರಗಳನ್ನು ಶೋಧಿಸಿದಾಗ ಬಹುಮುಖ್ಯವಾದ ಮಾಹಿತಿ ಪತ್ತೆಯಾಯಿತು. ಇದುವರೆಗೆ ನಟಿಯರ ಸುಮಾರು ತಲಾ 300ಕ್ಕೂ ಅಧಿಕ ಪುಟಗಳ ಚಾಟಿಂಗ್‌ ವಿವರ ಸಿಕ್ಕಿದೆ. ಇದನ್ನು ನ್ಯಾಯಾಲಯದ ಗಮನಕ್ಕೆ ತರಲಾಗಿದೆ. ಕೆಲವೇ ದಿನಗಳಲ್ಲಿ ಸಲ್ಲಿಕೆಯಾಗುವ ಆರೋಪ ಪಟ್ಟಿಯಲ್ಲಿ ಮಾತುಕತೆ ವಿವರವನ್ನು ಲಗತ್ತಿಸಲಾಗುತ್ತದೆ ಎಂದು ಮೂಲಗಳು ವಿವರಿಸಿವೆ.

ಸಂಜನಾ-ರಾಗಿಣಿ ಮುಂದಿರುವುದು ಎರಡೇ ಆಯ್ಕೆ!

ತಮ್ಮ ಸ್ನೇಹಿತರು ಬಂಧಿತರಾದ ಕೂಡಲೇ ನಟಿಯರು, ತಮ್ಮ ಮೊಬೈಲ್‌ಗಳಲ್ಲಿ ವಾಟ್ಸ್‌ಆ್ಯಪ್‌ ಗ್ರೂಪ್‌ಗಳನ್ನು ಡಿಲೀಟ್‌ ಮಾಡಿದ್ದರು. ಕೆಲವು ಭಾವಚಿತ್ರಗಳನ್ನು ಸಹ ನಾಶಗೊಳಿಸಿದ್ದರು. ಆದರೆ ಸೈಬರ್‌ ಹಾಗೂ ಎಫ್‌ಎಸ್‌ಎಲ್‌ ತಜ್ಞರ ನೆರವಿನಿಂದ ಅಳಿಸಿ ಹಾಕಲಾಗಿದ್ದ ಬಹುತೇಕ ಚಾಟಿಂಗ್‌ ರಿಟ್ರೀವ್‌ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕೊಕೇನ್‌ ಫೋಟೋ ಕ್ಲಿಕ್ಕಿಸಿದ್ದ ರಾಗಿಣಿ?:

ಬಿಳಿ ಬಣ್ಣದ ಪ್ಲೇಟ್‌ನಲ್ಲಿ ಕೊಕೇನ್‌ ಪುಡಿ ಹಾಗೂ ಡೆಬಿಟ್‌ ಕಾರ್ಡ್‌ ಇಡಲಾಗಿರುವ ಫೋಟೋವನ್ನು ತನ್ನ ಸ್ನೇಹಿತನಿಗೆ ನಟಿ ರಾಗಿಣಿ ಶೇರ್‌ ಮಾಡಿದ್ದಳು. ಮತ್ತೊಂದು ಮೆಸೇಜ್‌ನಲ್ಲಿ ಆ ಡ್ರಗ್ಸ್‌ ನೀಡಿದ ಮತ್ತಿನ ಸುಖದ ಬಗ್ಗೆ ವಿವರಿಸಲಾಗಿತ್ತು. ಕೊಕೇನ್‌ ಪುಡಿಯನ್ನು ಅಘ್ರಾಣಿಸಲು ಡೆಬಿಟ್‌ ಕಾರ್ಡನ್ನು ಆಕೆ ಬಳಸಿದ್ದಾಳೆ. ತಾನು ಡ್ರಗ್ಸ್‌ ಸೇವಿಸುವುದಿಲ್ಲ ಅನ್ನುವುದಾದರೆ ನಟಿಯ ವಾಟ್ಸ್‌ಆ್ಯಪ್‌ ಚಾಟಿಂಗ್‌ನಲ್ಲಿ ಈ ಫೋಟೋ ಹೇಗೆ ಬರುತ್ತದೆ ಎಂದು ಅಧಿಕಾರಿಗಳು ಪ್ರಶ್ನಿಸುತ್ತಾರೆ.
ಇನ್ನು ರಾಗಿಣಿಗೆ ಆಕೆಯ ಗೆಳೆಯ ಹಾಗೂ ಸಾರಿಗೆ ಇಲಾಖೆ ದ್ವಿತೀಯ ದರ್ಜೆ ಸಹಾಯಕ ರವಿಶಂಕರ್‌ ಡ್ರಗ್ಸ್‌ ಪೂರೈಸಿದ್ದಾನೆ. ಕೆಲವು ಬಾರಿ ರಾಗಿಣಿಯೇ, ಆಫ್ರಿಕಾ ಮೂಲದ ಲೂಮ್‌ ಪೆಪ್ಪರ್‌, ಓಸ್ಸಿ ಹಾಗೂ ಬೆನ್ಲಾಡ್‌ ಉಡೇನಾನನ್ನು ಸಂಪರ್ಕಿಸಿ ಡ್ರಗ್ಸ್‌ ಖರೀದಿಸಿದ್ದಾಳೆ. ಈ ಮೂವರ ಮೊಬೈಲ್‌ ಸಂಖ್ಯೆಗಳು ಆಕೆಯ ಮೊಬೈಲ್‌ನಲ್ಲಿದ್ದವು. ಅವರ ವಾಟ್ಸ್‌ಆ್ಯಪ್‌ ಮಾತುಕತೆ ವಿವರವು ಸಿಕ್ಕಿದೆ. ಇದಲ್ಲದೆ ರಾಗಿಣಿ ಶೇರ್‌ ಮಾಡಿದ್ದ ಡ್ರಗ್ಸ್‌ ಪಾರ್ಟಿಗಳ ಫೋಟೋಗಳು ಸಹ ಪತ್ತೆಯಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಅದೇ ರೀತಿ ಸಂಜನಾಳ ಮಾತುಕತೆ ವಿವರಗಳು ಸಿಕ್ಕಿವೆ. ತನ್ನ ಗೆಳೆಯ ರಾಹುಲ್‌, ವೀರೇನ್‌ ಖನ್ನಾ ಹಾಗೂ ನಿಯಾಜ್‌ ಅಹಮ್ಮದ್‌ ಜತೆ ಆಕೆಯ ಹಂಚಿಕೊಂಡಿದ್ದ ಭಾವಚಿತ್ರಗಳು ಸಿಕ್ಕಿವೆ. ಅದರಲ್ಲಿ ಕೆಲವು ಮಾದಕ ವಸ್ತು ಬಗ್ಗೆ ಪ್ರಸ್ತಾಪಿಸಲಾಗಿದೆ. ಹೋಟೆಲ್‌, ಕ್ಲಬ್‌, ಪಬ್‌ಗಳಲ್ಲಿ ಪಾರ್ಟಿಗಳು ಮುಗಿದ ಬಳಿಕ ಆಫ್ಟರ್‌ ಅವ​ರ್‍ಸ್ ಪಾರ್ಟಿಗಳ ಫೋಟೋಗಳು ಲಭಿಸಿವೆ ಎಂದು ತಿಳಿದು ಬಂದಿದೆ.

ವೀರೇನ್‌ 8 ವರ್ಷದ ಚರಿತ್ರೆ ಸಿಸಿಬಿ ಶೋಧ

ಡ್ರಗ್ಸ್‌ ಪ್ರಕರಣದ ಮತ್ತೊಬ್ಬ ಪ್ರಮುಖ ಆರೋಪಿ, ಪೇಜ್‌ ತ್ರಿ ಪಾರ್ಟಿ ಆಯೋಜನೆ ದಂಧೆಕೋರ ವೀರೇನ್‌ ಖನ್ನಾನ ಸುಮಾರು ಎಂಟು ವರ್ಷಗಳ ಮಾದಕ ಲೋಕದ ಚರಿತ್ರೆಯನ್ನು ಸಿಸಿಬಿ ಶೋಧಿಸಿದೆ ಎಂದು ಗೊತ್ತಾಗಿದೆ. 2012ರಲ್ಲಿ ತನ್ನ ಸ್ನೇಹಿತನಿಗೆ ಕಳುಹಿಸಿರುವ ಮೇಲ್‌ವೊಂದರಲ್ಲಿ ಖನ್ನಾ, ತಾನು ಮೊದಲ ಬಾರಿಗೆ ಡ್ರಗ್ಸ್‌ ಸೇವಿಸಿದ್ದೇನೆ ಎಂದಿದ್ದಾನೆ. ಇನ್ನೊಂದು ಮೇಲ್‌ನಲ್ಲಿ ಗೋವಾದಲ್ಲಿ ಸೇವಿಸಿದ್ದ ಡ್ರಗ್ಸ್‌ನಿಂದ ತನಗೆ ತಲೆ ನೋವಾಗಿತ್ತು ಎಂದು ಉಲ್ಲೇಖಿಸಿರುವುದಾಗಿ ಸಿಸಿಬಿ ಮೂಲಗಳು ತಿಳಿಸಿವೆ.

ಬಂಧನ ಮುನ್ನ ಕಾನೂನಿನ ಬಗ್ಗೆ ಹುಡುಕಾಡಿದ್ದ ನಟಿ

ಡ್ರಗ್ಸ್‌ ಕೇಸ್‌ನಲ್ಲಿ ಬಂಧನಕ್ಕೂ ನಾಲ್ಕು ದಿನಗಳ ಮುನ್ನ ರಾಗಿಣಿ, ತನ್ನ ಮೊಬೈಲ್‌ನಲ್ಲಿ ಗೂಗಲ್‌ನಲ್ಲಿ ಎನ್‌ಡಿಪಿಎಸ್‌ ಕಾಯ್ದೆಗಳ ಬಗ್ಗೆ ಹುಡುಕಾಟ ನಡೆಸಿದ್ದಾಳೆ. ಈ ಪ್ರಕರಣದಲ್ಲಿ ಯಾವ ಮಟ್ಟದ ಶಿಕ್ಷೆಯಾಗಬಹುದು. ಹೇಗೆ ತಪ್ಪಿಸಿಕೊಳ್ಳಬಹುದು ಎಂದೆಲ್ಲ ಆಕೆ ಶೋಧಿಸಿದ್ದಳು ಎಂದು ಅಧಿಕಾರಿಗಳು ಹೇಳಿದ್ದಾರೆ.

ಡ್ರಗ್ಗಿಣಿ ಗ್ಯಾಂಗ್‌ ವಿರುದ್ಧ ತಿಂಗಳಾಂತ್ಯಕ್ಕೆ ಚಾರ್ಜ್‌ಶೀಟ್‌ 

ಮಾದಕ ವಸ್ತು ಮಾರಾಟ ಜಾಲ ಪ್ರಕರಣ ಸಂಬಂಧ ಕನ್ನಡ ಚಲನಚಿತ್ರ ರಂಗದ ಖ್ಯಾತ ನಟಿಯರಾದ ರಾಗಿಣಿ ದಿವ್ವೇದಿ ಹಾಗೂ ಸಂಜನಾ ಗಲ್ರಾನಿ ಹಾಗೂ ಅವರ ಗ್ಯಾಂಗ್‌ನ 13 ಮಂದಿ ವಿರುದ್ಧ ನ್ಯಾಯಾಲಯಕ್ಕೆ ಇದೇ ತಿಂಗಳಾಂತ್ಯಕ್ಕೆ ಪ್ರಾಥಮಿಕ ಹಂತದ ಆರೋಪ ಪಟ್ಟಿಸಲ್ಲಿಕೆಗೆ ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಸಿದ್ಧತೆ ನಡೆಸಿದೆ.

ಇದೊಂದು ಕಾರಣಕ್ಕೆ ಸಂಜನಾ- ರಾಗಿಣಿಗೆ ಬೇಲ್ ಸಿಗಲಿಲ್ಲ!

ಎರಡೂವರೆ ತಿಂಗಳ ಸುದೀರ್ಘ ಕಾರ್ಯಾಚರಣೆ ನಡೆಸಿರುವ ಸಿಸಿಬಿ ಅಧಿಕಾರಿಗಳು, ತನಿಖಾ ಹಂತದಲ್ಲಿ ಲಭ್ಯವಾದ ಸಾದಂರ್ಭಿಕ ಸಾಕ್ಷ್ಯಗಳು, ನಟಿಯರ ಸ್ನೇಹಿತರ ಹೇಳಿಕೆಗಳು ಹಾಗೂ ತಾಂತ್ರಿಕ ಮಾಹಿತಿ ಆಧರಿಸಿ ಮೊದಲ ಹಂತದ ಆರೋಪಿಪಟ್ಟಿಸಲ್ಲಿಸಿ ತನಿಖೆ ಮುಂದುವರೆಸಲು ನಿರ್ಧರಿಸಿದ್ದಾರೆ. ಇದರಲ್ಲಿ ಮಾದಕ ವಸ್ತು ಜಾಲದಲ್ಲಿ ನಟಿಯರ ಪಾತ್ರದ ಬಗ್ಗೆ ಸಿಸಿಬಿ ಉಲ್ಲೇಖಿಸಲಿದೆ. ಸಾಕಷ್ಟುಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

ಈ ಪ್ರಕರಣದಲ್ಲಿ ನಟಿಯರು, ರಾಗಿಣಿ ಗೆಳೆಯ ಸಾರಿಗೆ ಇಲಾಖೆ ಉದ್ಯೋಗಿ ರವಿಶಂಕರ್‌, ಸಂಜನಾ ಸ್ನೇಹಿತ ರಾಹುಲ್‌ ತೋನ್ಸೆ, ಪೇಜ್‌ ತ್ರಿ ಪಾರ್ಟಿಗಳ ಆಯೋಜಕ ವೀರೇನ್‌ ಖನ್ನಾ ಹಾಗೂ ಮೂವರು ನೈಜೀರಿಯಾ ಪ್ರಜೆಗಳು ಸೇರಿ 15 ಆರೋಪಿಗಳು ಬಂಧಿತರಾಗಿದ್ದಾರೆ. ಅದೇ ರೀತಿ ನಟ ದಿಗಂತ್‌, ನಟಿ ಐಂದ್ರಿತಾ ರೈ, ಫ್ಯಾಷನ್‌ ಗುರು ರಮೇಶ್‌ ಡೆಂಬಲ್‌, ಬಿಜೆಪಿ ಮುಖಂಡ ಕಾರ್ತಿಕ್‌ ರಾಜ್‌, ಮಾಜಿ ಡಾನ್‌ ದಿ.ಮುತ್ತಪ್ಪ ರೈ ಪುತ್ರ ರಾಕಿ ರೈ, ನಿರ್ಮಾಪಕರಾದ ಸೌಂದರ್ಯ ಜಗದೀಶ್‌ ದಂಪತಿ ಮತ್ತಿರರು ಸಿಸಿಬಿ ವಿಚಾರಣೆ ಎದುರಿಸಿದ್ದರು. ಇವೆರಲ್ಲ ಹೇಳಿಕೆಗಳು ಆರೋಪ ಪಟ್ಟಿಯಲ್ಲಿ ಉಲ್ಲೇಖವಾಗಲಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

3 ತಿಂಗಳೊಳಗೆ ಚಾರ್ಜ್‌ಶೀಟ್‌‌ ಕಡ್ಡಾಯ:

ಮಾದಕ ವಸ್ತು ಮಾರಾಟ ಸಂಬಂಧ ನಟಿ ರಾಗಿಣಿ ಹಾಗೂ ವೀರೇನ್‌ ಖನ್ನಾ ವಿರುದ್ಧ ಸೆ.4 ರಂದು ಸಿಸಿಬಿ ಎಸಿಪಿ ಗೌತಮ್‌ ನೀಡಿದ ದೂರಿನ ಮೇರೆಗೆ ಕಾಟನ್‌ಪೇಟೆ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಯಿತು. ಅದೇ ದಿನ ರಾಗಿಣಿ ಬಂಧನವಾಯಿತು. ಎಫ್‌ಐಆರ್‌ ದಾಖಲಾದ ಮೂರು ತಿಂಗಳೊಳಗೆ ನ್ಯಾಯಾಲಯಕ್ಕೆ ಆರೋಪಿಗಳ ವಿರುದ್ಧ ಜಾಜ್‌ರ್‍ಶೀಟ್‌ ಸಲ್ಲಿಸಬೇಕಿದೆ. ಅಂತೆಯೇ ಡ್ರಗ್ಸ್‌ ಕೇಸ್‌ನಲ್ಲಿ ಡಿ.4 ರೊಳಗೆ ಆರೋಪ ಪಟ್ಟಿಸಲ್ಲಿಸಬೇಕಿದೆ. ಹಾಗಾಗಿ ಪ್ರಾಥಮಿಕ ಹಂತದ ಆರೋಪ ಪಟ್ಟಿಸಲ್ಲಿಸಿ ತನಿಖೆ ಮುಂದುವರೆಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೆಲವೊಂದು ಪ್ರಕರಣಗಳಲ್ಲಿ ಆರೋಪ ಪಟ್ಟಿಸಲ್ಲಿಕೆಗೆ ನ್ಯಾಯಾಲಯ ಸಮಯಾವಕಾಶ ಕೊಡಬಹುದು. ಆದರೆ ಡ್ರಗ್ಸ್‌ ಕೇಸ್‌ನಲ್ಲಿ ಈಗ ಬಂಧಿತರಾಗಿರುವ ನಟಿಯರ ವಿರುದ್ಧ ತನಿಖೆ ಭಾಗಶಃ ಅಂತ್ಯವಾಗಿದೆ. ಹಾಗೆಯೇ ಆರೋಪಿಗಳ ಅಪರಾಧ ಕೃತ್ಯ ರುಜುವಾತುಪಡಿಸಲು ಸಾಕ್ಷ್ಯಗಳು ಲಭ್ಯವಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಯಾರಾರ‍ಯರ ವಿರುದ್ಧ ಚಾರ್ಜ್‌ಶೀಟ್‌?

ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ, ರವಿಶಂಕರ್‌, ವೀರೇನ್‌ ಖನ್ನಾ, ಪ್ರಶಾಂತ್‌ ರಂಕಾ, ರಾಹುಲ್‌ ತೋನ್ಸೆ, ನಿಯಾಜ್‌ ಅಹಮ್ಮದ್‌, ಅಶ್ವಿನ್‌ ಬೋಗಿ, ವೈಭವ್‌ ಜೈನ್‌, ಪ್ರತೀಕ್ಷೆ ಶೆಟ್ಟಿ, ಶ್ರೀಕಾಂತ್‌ ಅಲಿಯಾಸ್‌ ಶ್ರೀ, ಆಫ್ರಿಕಾ ಪ್ರಜೆಗಳಾದ ಲೂಮ್‌ ಪೆಪ್ಪರ್‌ ಅಲಿಯಾಸ್‌ ಸಾಂಬಾ, ಬೆನ್ಲಾಡ್‌ ಉಡೇನಾ, ಓಸ್ಸಿ, ಜಾನಿ. ಇವರೆಲ್ಲರೂ ಈಗಾಗಲೇ ಬಂಧಿತರಾಗಿದ್ದಾರೆ.

ತಲೆಮರೆಸಿಕೊಂಡಿರುವ ಆರೋಪಿಗಳು:

ರಾಜಕಾರಣಿ ದಿ.ಜೀವರಾಜ್‌ ಆಳ್ವ ಪುತ್ರ ಆದಿತ್ಯ ಆಳ್ವ , ರಾಗಿಣಿ ಗೆಳೆಯ ಶಿವಪ್ರಕಾಶ್‌, ಪ್ರಶಾಂತ್‌ ರಾಜ್‌, ಮಹಮ್ಮದ್‌ ಮೆಸ್ಸಿ, ಅಭಿಸ್ವಾಮಿ. ಇವರ ವಿರುದ್ಧವೂ ಆರೋಪಪಟ್ಟಿಸಲ್ಲಿಕೆಯಾಗಲಿದೆ.

click me!