ಸೋಫಾದಲ್ಲಿ ಸಿಕ್ತು ಪತ್ನಿ ಶವ- ಎರಡು ದಿನ ಡೆಡ್‌ಬಾಡಿ ಮೇಲೆಯೇ ಮಲಗಿದ್ದ ಡ್ರೈವರ್ ಗಂಡ 

By Mahmad Rafik  |  First Published Nov 11, 2024, 1:13 PM IST

ಗಂಡ ಕ್ಯಾಬ್ ಡ್ರೈವರ್ ಆಗಿ ಕೆಲಸ ಮಾಡ್ತಿದ್ದ. ದಿಢೀರ್ ಅಂತ ನಾಪತ್ತೆಯಾದ ಪತ್ನಿಯನ್ನು ಹುಡುಕಾಡಿ ಬಂದು ಮನೆ ಸೋಫಾದ ಮೇಲೆಯೇ ಎರಡು ದಿನ ಮಲಗಿದ್ದ. ಆದರೆ ಅದರೊಳಗೆಯೇ ಪತ್ನಿಯ ಶವ ಸಿಕ್ಕಿದೆ.


ಪುಣೆ: ಮಹಾರಾಷ್ಟ್ರದ ಪುಣೆ ನಗರದ ಪುರಸಂಗಿ ವ್ಯಾಪ್ತಿಯಲ್ಲಿ ಕ್ಯಾಬ್ ಡ್ರೈವರ್ ಪತ್ನಿ ಶವ ಆತನ ಮನೆಯಲ್ಲಿನ ಸೋಫಾದಲ್ಲಿ ಸಿಕ್ಕಿದ್ದು, ಆಶ್ಚರ್ಯಕರ ವಿಷಯ ಅಂದ್ರೆ ಎರಡು ದಿನ ಪತಿ ಅದೇ ಸೋಫಾದ ಮೇಲೆ ಮಲಗಿದ್ದನು. ಆದ್ರೆ ಸೋಫಾದೊಳಗೆ ಪತ್ನಿ ಶವ ಇದೆ ಎಂಬುವುದು ಆತನಿಗೆ ಗೊತ್ತಾಗಿರಲಿಲ್ಲ. 24 ವರ್ಷದ ಸ್ವಪ್ನಾಲಿ ಉಮೇಶ್ ಶವ ಮನೆಯಲ್ಲಿರುವ ಸೋಫಾ ಕಮ್‌ ಬೆಡ್‌ನಲ್ಲಿ ಸಿಕ್ಕಿದೆ. ಇದೇ ಸೋಫಾದ ಮೇಲೆ ಆಕೆಯ ಗಂಡ ಎರಡು ದಿನ ಮಲಗಿದ್ದನು.

ಕ್ಯಾಬ್ ಡ್ರೈವರ್ ಉಮೇಶ್ ಎಂಬವರು ನವೆಂಬರ್ 7ರಂದು ಪತ್ನಿಗೆ ಕರೆ ಮಾಡಿದಾಗ ಸಂಪರ್ಕ ಸಾಧ್ಯವಾಗಲಿಲ್ಲ. ಕ್ಯಾಬ್‌ನಲ್ಲಿ ಪ್ರಯಾಣಿಕರಿದ್ದ ಕಾರಣ ಪದೇ ಪದೇ  ಫೋನ್ ಮಾಡದೇ ವಾಹನ ಚಾಲನೆ ಮಾಡಿದ್ದರು. ಬೆಳಗ್ಗೆ ಮತ್ತೆ ಸ್ವಪ್ನಪಾಲಿಗೆ ಕರೆ ಮಾಡಿದಾಗ ಫೋನ್ ಸ್ವಿಚ್ಛ್ ಆಫ್ ಬಂದಿದೆ. ಪತ್ನಿ ಜೊತೆ ಸಂಪರ್ಕ ಸಾಧ್ಯವಾಗದಿದ್ದಾಗ ಗೆಳೆಯನೋರ್ವನಿಗೆ ಕರೆ ಮಾಡಿ ಮನೆ ಬಳಿ ಹೋಗಿ ಬರುವಂತೆ ಹೇಳಿದ್ದಾರೆ. ಮನೆಯಲ್ಲಿಯೂ ಸ್ವಪ್ನಾಲಿಯ ಸುಳಿವು ಇರಲಿಲ್ಲ. 

Latest Videos

ಪುಣೆಗೆ ಬಂದ ಕೂಡಲೇ ಉಮೇಶ್ ಪತ್ನಿಯ ಹುಡುಕಾಟ ಆರಂಭಿಸಿದ್ದರು. ಗೆಳೆಯರು, ಸಂಬಂಧಿಕರು ಸೇರಿದಂತೆ ಎಲ್ಲರಿಗೂ ಉಮೇಶ್ ಮಾಹಿತಿ ನೀಡಿದರೂ ಸ್ವಪ್ನಾಲಿಯ ಸುಳಿವು ಸಿಕ್ಕಿರಲಿಲ್ಲ. ಎರಡು ದಿನವಾದರೂ ಪತ್ನಿ ಪತ್ತೆಯಾಗದಿದ್ದಾಗ ಮನೆಯಲ್ಲಿ ಏನಾದರೂ ಸುಳಿವು ಸಿಗಬಹುದಾದ ಅಂತ ಸೂಕ್ಷ್ಮವಾಗಿ ಪರಿಶೀಲನೆ ನಡೆಸಲು ಆರಂಭಿಸಿದರು. 

ಶನಿವಾರ ಬೆಳಗ್ಗೆ ಪತ್ನಿಯ ಬೆಲೆಬಾಳುವ ಆಭರಣಗಳು ಕಾಣೆಯಾಗಿರೋದು ಉಮೇಶ್ ಗಮನಕ್ಕೆ ಬಂದಿದೆ. ನಂತರ ಸೋಫಾದ ಕೆಳಗಿರುವ ಸ್ಟೋರೇಜ್ ಕಂಪಾರ್ಟ್‌ಮೆಂಟ್ ತೆರೆದಾಗ ಪತ್ನಿಯ ಶವ ಸಿಕ್ಕಿದೆ. ಇದೇ ಸೋಫಾದ ಮೇಲೆ ಉಮೇಶ್ ಮಲಗಿದ್ದರು. ಆದರೂ ಕೆಳಗೆ ಪತ್ನಿ ಶವವಿದೆ ಎಂಬ ಸಣ್ಣ ಸಂದೇಹವೂ ಉಮೇಶ್‌ಗೆ ಬಂದಿರಲಿಲ್ಲ. ನಂತರ ಕೂಡಲೇ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. 

ಇದನ್ನೂ ಓದಿ: ಸೂಟ್‌ಕೇಸ್ ಜೊತೆ ರೈಲ್ವೆ ನಿಲ್ದಾಣಕ್ಕೆ ಬಂದ ತಂದೆ-ಮಗಳು, ಅನುಮಾನದಿಂದ ಒಳಗೇನಿದೆ ಅಂತ ನೋಡಿದಾಗ?

ಸ್ವಪ್ನಾಲಿಯವರ ಕತ್ತು ಸೀಳಿ ಕೊಲೆ ಮಾಡಲಾಗಿದೆ. ಕುತ್ತಿಗೆ ಭಾಗದಲ್ಲಿ ಉಗುರಿನ ಗುರುತುಗಳು ಕಂಡು ಬಂದಿವೆ. ಪರಿಚಯಸ್ಥ ವ್ಯಕ್ತಿಯೇ ಬಂದು ಕೊಲೆ ಮಾಡಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಮನೆಯೊಳಗೆ ಅತಿಕ್ರಮಣ ಮಾಡಿರುವ ಬಗ್ಗೆ ಯಾವುದೇ ಕುರುಹು ಸಿಕ್ಕಿಲ್ಲ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು, ಎಲ್ಲಾ ಆಯಾಮದಲ್ಲಿಯೂ ತನಿಖೆ ನಡೆಸಲಾಗುತ್ತಿದೆ. ಶೀಘ್ರದಲ್ಲಿಯೇ ಹಂತಕನನ್ನು ಬಂಧಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.

ಸ್ವಪ್ನಾಲಿ ಪತಿ ಹೇಳಿಕೆ ಪ್ರಕಾರ, ತಮ್ಮ ಮನೆಗೆ ಬರುತ್ತಿದ್ದ ವ್ಯಕ್ತಿಯೋರ್ವನ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ. ಆ ವ್ಯಕ್ತಿ ಪದೇ ಪದೇ ಮನೆಗೆ ಬರುತ್ತಿದ್ದನು. ಕೆಲವು ಸಂದರ್ಭಗಳಲ್ಲಿ ಮನೆಯಲ್ಲಿಯೇ ಉಳಿದುಕೊಳ್ಳುತ್ತಿದ್ದನು ಎಂದು ಹೇಳಿದ್ದಾರೆ. ಉಮೇಶ್ ಹೇಳಿಕೆ ಆಧರಿಸಿ ಆ ವ್ಯಕ್ತಿಯ ಮನೆಗೆ ಹೋದಾಗ ಅಲ್ಲಿಯೂ ಆತ ಸಿಕ್ಕಿಲ್ಲ. ಶ್ವಾನದಳ ಮತ್ತು ಬೆರಳಚ್ಚು ಮಾದರಿ ಮೂಲಕ ಹಂತಕನ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ. ಹಾಗೆಯೇ ಮನೆ ಆವರಣ ಮತ್ತು ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾ ದೃಶ್ಯಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಕ್ಯಾಮೆರಾ ಮುಂದೆ ಗೋಳಾಡಿದ್ದ ಹೆಂಡತಿನೇ ಗಂಡನ ಹೆಣ ಹಾಕಿಸಿದ್ಳು; ಅಮಾಯಕ ಪತಿಯ ಕೊಲೆ ರಹಸ್ಯ

click me!