ಗಂಡನ ಜೊತೆ ಪ್ರವಾಸಕ್ಕೆ ಬಂದಿದ್ದ ಬ್ರಿಟೀಷ್‌ ಮಹಿಳೆಯ ಮೇಲೆ ಗೋವಾ ಬೀಚಿನಲ್ಲಿ ಅತ್ಯಾಚಾರ

By Sharath SharmaFirst Published Jun 7, 2022, 10:35 AM IST
Highlights

British citzen raped in Goa: ಉತ್ತರ ಗೋವಾದ ಬೀಚ್‌ ಒಂದರಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದ ಬ್ರಿಟೀಷ್‌ ಮಹಿಳೆಯ ಮೇಲೆ ಅತ್ಯಾಚಾರ ನಡೆಸಲಾಗಿದೆ. ಘಟನೆ ಸಂಬಂಧ ಪೊಲೀಸರು ಗೋವಾದ ಸ್ಥಳೀಯನೊಬ್ಬನನ್ನು ಬಂಧಿಸಿದ್ದಾರೆ. 

ಬ್ರಿಟೀಷ್‌ ಮಹಿಳೆಯೊಬ್ಬರ ಮೇಲೆ ಗೋವಾದ ಅರಂಬೊಲ್‌ ಸ್ವೀಟ್‌ ವಾಟರ್‌ ಬೀಚ್‌ನಲ್ಲಿ ಅತ್ಯಾಚಾರ ಮಾಡಿದ ಘಟನೆ ನಡೆದಿದೆ. ಉತ್ತರ ಗೋವಾದ ಬೀಚ್‌ನಲ್ಲಿ ಮಹಿಳೆ ಆಕೆಯ ಗಂಡನ ಜೊತೆಗಿದ್ದಾಗ ಅತ್ಯಾಚಾರ ಮಾಡಲಾಗಿದ್ದು, ಘಟನೆ ಸಂಬಂಧ 32 ವರ್ಷದ ಆರೋಪಿಯನ್ನು ಬಂಧಿಸಲಾಗಿದೆ. ಪೊಲೀಸರ ಮಾಹಿತಿ ಪ್ರಕಾರ ಆರೋಪಿ ಸ್ಥಳೀಯನಾಗಿದ್ದು ವಿಚಾರಣೆಗೊಳಪಡಿಸಲಾಗಿದೆ. 

ಇದೇ ಜೂನ್‌ 2ರಂದು ಬ್ರಿಟೀಷ್ ಮಹಿಳೆ ಬೀಚ್‌ನಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದರು. ಇದನ್ನು ಗಮನಿಸಿದ ವ್ಯಕ್ತಿ ಆಕೆಯ ಮೇಲೆ ಅತ್ಯಾಚಾರ ಮಾಡಿದ್ದಾನೆ ಎನ್ನಲಾಗಿದೆ. ಘಟನೆ ನಡೆದು ನಾಲ್ಕು ದಿನಗಳಾದ ನಂತರ ಬ್ರಿಟೀಷ್‌ ಮಹಿಳೆ ತನ್ನ ಪತಿಯೊಂದಿಗೆ ಪೊಲೀಸ್‌ ಠಾಣೆಗೆ ಭೇಟಿ ನೀಡಿ ಸೋಮವಾರ (ಜೂನ್‌ 6) ದೂರು ನೀಡಿದ್ದಾರೆ. ದೂರನ್ನು ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. 

ಹೈದರಾಬಾದಿನಲ್ಲಿ ಅಪ್ರಾಪ್ತೆ ಮೇಲೆ ನಡೆದಿದ್ದ ಗ್ಯಾಂಗ್‌ ರೇಪ್‌:

ಕಾರಿನಲ್ಲಿ ಅಪ್ರಾಪ್ತ ಬಾಲಕಿಯೊಬ್ಬಳನ್ನು ಸಾಮೂಹಿಕ ಅತ್ಯಾಚಾರ (Gang rape) ಮಾಡಿದ ಘಟನೆ ಹೈದರಾಬಾದಿನಲ್ಲಿ ಕಳೆದೆರಡು ವಾರದ ಹಿಂದೆ ನಡೆದಿತ್ತು. ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಶಾಸಕನ ಮಗನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಪೊಲೀಸ್‌ ಮೂಲಗಳ ಮಾಹಿತಿ ಪ್ರಕಾರ ಇನೋವಾ ಕಾರಿನಲ್ಲಿ ಅಪ್ರಾಪ್ತ ಬಾಲಕಿಯನ್ನು ಎಳೆದೊಯ್ದು ಕಾರಿನಲ್ಲೇ ಶಾಸಕನ ಮಗ ಮತ್ತು ಇನ್ನೂ ನಾಲ್ವರು ಸೇರಿ ಅತ್ಯಾಚಾರ ಮಾಡಿದ್ದಾರೆ. ಘಟನೆ ಸಂಬಂಧ ನಾಲ್ಕು ಆರೋಪಿಗಳನ್ನು ಈಗಾಗಲೇ ಬಂಧಿಸಿದ್ದು ಅದರಲ್ಲಿ ಮೂವರು ಅಪ್ರಾಪ್ತ ವಯಸ್ಕರು. ಇನ್ನೊಬ್ಬ ಆರೋಪಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ.  

ಹೈದರಾಬಾದಿನ ಜುಬಿಲೀ ಹಿಲ್ಸ್‌ ಠಾಣೆಯಲ್ಲಿ (Hyderabad Jubilee Hills police station) ಜೂನ್‌ 1ರಂದು ಪ್ರಕರಣ ದಾಖಲಾಗಿದ್ದು ಪ್ರಕರಣದ ಪ್ರಾಥಮಿಕ ತನಿಖೆ ಶುರುವಾಗಿದೆ. ಆರಂಭದಲ್ಲಿ ಸೆಕ್ಷನ್‌ 354ರ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಈಗ ಪೋಕ್ಸೊ ಕಾಯ್ದೆಯಡಿಯೂ ಎಫ್‌ಐಆರ್‌ (First Information Report) ಮಾಡಲಾಗಿದೆ. 

17 ವರ್ಷದ ಸಂತ್ರಸ್ತೆಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದ್ದು, ಪೋಕ್ಸೊ (Prevention of Children from Sexual Offences Act) ಜೊತೆ ಸೆಕ್ಷನ್‌ 376 (ಸಾಮೂಹಿಕ ಅತ್ಯಾಚಾರ) ಪ್ರಕರಣವನ್ನೂ ದಾಖಲಿಸಲಾಗಿದೆ.  

ಇದನ್ನೂ ಓದಿ: ಅಯ್ಯೋ ವಿಧಿಯೇ... ಜನ್ಮದಾತನ ಬಳಿಯೂ ಹೆಣ್ಣು ಸುರಕ್ಷಿತಳಲ್ಲ: ಪೊಲೀಸರಿಂದ ತಂದೆಯ ಬಂಧನ

ಪೊಲೀಸ್‌ ಅಧಿಕಾರಿಗಳ ಪ್ರಕಾರ, ಶಾಸಕನ ಮಗ ಮತ್ತು ಅಲ್ಪಸಂಖ್ಯಾತ ಇಲಾಖೆಯ ಮುಖ್ಯಸ್ಥರ ಮಗ ಸಂತ್ರಸ್ತೆ ಭಾಗಿಯಾಗಿದ್ದ ಪಾರ್ಟಿಯಲ್ಲಿದ್ದರು. ಯುವತಿ ಶಾಸಕನ ಮಗನ ಹೆಸರನ್ನು ಮಾತ್ರ ಗುರುತಿಸಿದ್ದಾಳೆ, ಉಳಿದ ಆರೋಪಿಗಳ ಗುರುತು ಮತ್ತು ಪರಿಚಯ ಆಕೆಗಿರಲಿಲ್ಲ. ಯುವತಿ ನೀಡಿದ್ದ ಮಾಹಿತಿ ಅನುಸರಿಸಿ ಪೊಲೀಸರು ಒಟ್ಟೂ ನಾಲ್ಕು ಆರೋಪಿಗಳನ್ನು ಬಂಧಿಸಿದ್ದಾರೆ ಜತೆಗೆ ಆರೋಪಿಯೊಬ್ಬನ ಫಾರ್ಮ್‌ ಹೌಸ್‌ನಿಂದ ಕಾರನ್ನು ಕೂಡ ವಶಕ್ಕೆ ಪಡೆದಿದ್ದಾರೆ. ಆರೋಪಿಗಳು ಸಾಕ್ಷಿನಾಶಕ್ಕೆ ಪ್ರಯತ್ನಿಸಿದ್ದು, ಕಾರನ್ನು ವಾಶ್‌ ಮಾಡಲಾಗಿದೆ. 

ಈ ಸಂಬಂಧ ತೆಲಂಗಾಣ ಗೃಹ ಸಚಿವ ಮೊಹಮ್ಮದ್‌ ಮಹ್ಮೂದ್‌ ಅಲಿ ಪ್ರತಿಕ್ರಿಯೆ ನೀಡಿದ್ದು, ಆರೋಪಿಗಳು ಎಷ್ಟೇ ಪ್ರಭಾವಿಗಳಾದರೂ ಅವರ ಮೇಲೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವಂತೆ ಪೊಲೀಸರಿಗೆ ಆದೇಶಿಲಾಗಿದೆ. ಪೊಲೀಸರಿಗೆ ಈ ಪ್ರಕರಣದ ವಿಚಾರಣೆಯಲ್ಲಿ ಸಂಪೂರ್ಣ ಸ್ವತಂತ್ರ ನೀಡಲಾಗಿದೆ. ಪ್ರಕರಣದ ತನಿಖೆ ನಿಷ್ಪಕ್ಷಪಾತವಾಗಿ ನಡೆಯುತ್ತಿದೆ. ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ ಕೊಡಿಸಲಾಗುವುದು ಎಂದಿದ್ದಾರೆ. 

ಇದನ್ನೂ ಓದಿ: ಸರ್ಕಾರಿ ನೌಕರಿ ಗಿಟ್ಟಿಸಿಕೊಂಡ ಪತ್ನಿಯ ಕೈ ಕತ್ತರಿಸಿದ ಗಂಡ, ಇದ್ಯಾವ ಬಗೆಯ ಅಸೂಯೆ?

ತೆಲಂಗಾಣ ಬಿಜೆಪಿ ಮುಖ್ಯಸ್ಥ ಬಂಡಿ ಸಂಜಯ್‌ ಮುಖ್ಯಮಂತ್ರಿ ಕೆ ಚಂದ್ರಶೇಖರ್‌ ರಾವ್‌ ಅವರಿಗೆ ಪತ್ರ ಬರೆದಿದ್ದು, ಪ್ರಕರಣವನ್ನು ಸಿಬಿಐಗೆ ನೀಡುವಂತೆ ಕೋರಿದ್ದಾರೆ. ಪ್ರಕರಣದ ಎಲ್ಲ ಆರೋಪಿಗಳನ್ನೂ ಬಂಧಿಸಬೇಕು, ಪ್ರಕರಣ ಸಿಬಿಐಗೆ ಹೋದರೆ ಮಾತ್ರ ನ್ಯಾಯ ಸಿಗಲಿದೆ ಎಂದು ಬಿಜೆಪಿ ಆರೋಪಿಸುತ್ತಿದೆ. ಇನ್ನೊಂದು ಆರೋಪಿ ತಲೆಮರೆಸಿಕೊಂಡಿದ್ದು ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.

click me!