ಶಿಕ್ಷೆಯಿಂದ ಪಾರಾಗಲು ಚಟ್ಟದ ಮೇಲೆ ಮಲಗಿದ್ದ ಫೋಟೋ ಕೋರ್ಟ್‌ಗೆ ಕಳಿಸಿದ್ದ ವ್ಯಕ್ತಿಗೆ 14 ವರ್ಷ ಶಿಕ್ಷೆ!

By Santosh NaikFirst Published Jan 10, 2023, 5:58 PM IST
Highlights

ಅತ್ಯಾಚಾರದ ಶಿಕ್ಷೆಯಿಂದ ಪಾರಾಗಲು ಸತ್ತಂತೆ ನಟಿಸಿದ್ದಲ್ಲದೆ, ಮರಣ ಪ್ರಮಾಣಪತ್ರವನ್ನು ಕೋರ್ಟ್‌ಗೆ ಸಲ್ಲಿಸಿದ್ದ ಬಿಹಾರದ ಶಿಕ್ಷಕ ನೀರಜ್‌ ಮೋದಿಗೆ ವಿಶೇಷ ಪೋಕ್ಸೋ ನ್ಯಾಯಾಲಯ 14 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿದೆ.

ಪಾಟ್ನಾ (ಜ.10): ನಾಲ್ಕು ವರ್ಷದ ಹಿಂದೆ ತನ್ನ ವಿದ್ಯಾರ್ಥಿನಿಯ ಮೇಲೆ ಬಲಾತ್ಕಾರ ಮಾಡಿದ್ದಲ್ಲದೆ, ಶಿಕ್ಷೆಯಿಂದ ಪಾರಾಗುವ ಸಲುವಾಗಿ ತಾನು ಸತ್ತಂತೆ ನಂಬಿಸುವಂಥ ಸಾಕ್ಷ್ಯ ಸೃಷ್ಟಿಸಲು ಯತ್ನಿಸಿದ್ದ ಶಿಕ್ಷಕ ನೀರಜ್‌ ಮೋದಿಗೆ ಸ್ಥಳೀಯ ಕೋರ್ಟ್‌ ಸೋಮವಾರ 14 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಪೋಕ್ಸೋ ವಿಶೇಷ ನ್ಯಾಯಾಧೀಶ ಎಡಿಜೆ ಲವಕುಶ್ ಕುಮಾರ್ ಅವರು ಸೋಮವಾರ ಈ ತೀರ್ಪು ನೀಡಿದ್ದಾರೆ. ನ್ಯಾಯಾಲಯ ಆತನಿಗೆ 1 ಲಕ್ಷ ರೂಪಾಯಿ ದಂಡವನ್ನೂ ಕೂಡ ವಿಧಿಸಿದೆ. ದಂಡ ಕಟ್ಟಲು ವಿಫಲರಾದರೆ ಮತ್ತೆ ಇನ್ನೂ ಆರು ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ. ಇನ್ನು ದಲ್ಸಾ ಮೂಲದ ವಿದ್ಯಾರ್ಥಿನಿಗೆ 3 ಲಕ್ಷ ರೂಪಾಯಿಯ ಪರಿಹಾರವನ್ನೂ ನೀಡವಂತೆ ಕೋರ್ಟ್‌ ತಿಳಿಸಿದೆ.  ಸರ್ಕಾರದ ಪರವಾಗಿ ಪೋಕ್ಸೋ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ನರೇಶ್ ಪ್ರಸಾದ್ ರಾಮ್ ಮತ್ತು ಜೈಕರನ್ ಗುಪ್ತಾ ವಾದ ಮಂಡಿಸಿದ್ದರು. ಇದಕ್ಕೂ ಮುನ್ನ ಅಪರಾಧಿ ನೀರಜ್ ಮೋದಿ ಅಕ್ಟೋಬರ್‌ನಲ್ಲಿ ನ್ಯಾಯಾಲಯಕ್ಕೆ ಶರಣಾಗಿದ್ದರು.

ತಂದೆಯ ಸಹಾಯದಿಂದ ಸತ್ತಂತೆ ಬಿಂಬಿಸಿದ್ದ ನೀರಜ್‌ ಮೋದಿ: ವೃತ್ತಿಯಲ್ಲಿ ಶಿಕ್ಷಕನಾಗಿದ್ದ ನೀರಜ್‌ ಮೋದಿ ಮಧುರಾ ಸಿಮಾನ್‌ಪುರ ಗ್ರಾಮದವನು. 2018ರ ಅಕ್ಟೋಬರ್‌ 14 ರಂದು ಈತ ರೇಪ್‌ ಮಾಡಿದ್ದ ವಿದ್ಯಾರ್ಥಿನಿಯ ತಾಯಿ ನೀರಜ್‌ ಮೋದಿ ವಿರುದ್ಧ ಅತ್ಯಾಚಾರದ ಪ್ರಕರಣ ದಾಖಲು ಮಾಡಿದ್ದರು. ತಮ್ಮ ವಿರುದ್ಧ ಕೇಸ್‌ ದಾಖಲಾದ ಬೆನ್ನಲ್ಲಿಯೇ, ಶಿಕ್ಷೆಯಿಂದ ಪಾರಾಗುವ ಸಲುವಾಗಿ ತಾನು ಸತ್ತಂತೆ ಬಿಂಬಿಸಿದ್ದಲ್ಲದೆ, ತನ್ನ ಅಂತ್ಯಸಂಸ್ಕಾರವಾಗಿರುವ ಬಗ್ಗೆಯೂ ಸುಳ್ಳು ಮಾಹಿತಿಯನ್ನು ಕೋರ್ಟ್‌ಗೆ ತಂದೆಯ ಮೂಲಕ ಸಲ್ಲಿಕೆ ಮಾಡಿದ್ದ. ಚಟ್ಟದ ಮೇಲೆ ಶವದಂತೆ ಇರಿಸಿದ ತನ್ನ ಚಿತ್ರವನ್ನು ತೆಗೆದು ಅದನ್ನು ತಂದೆಯ ಸಹಾಯದಿಂದ ಕೋರ್ಟ್‌ಗೆ ಸಲ್ಲಿಕೆ ಮಾಡಿದ್ದ. ಆ ಮೂಲಕ ಕೋರ್ಟ್‌ ತಾನು ಸತ್ತಿದ್ದೇನೆ ಎಂದು ನಂಬಲಿ ಎನ್ನುವ ಉದ್ದೇಶ ಇದರಲ್ಲಿತ್ತು.

ಈ ಎಲ್ಲದಕ್ಕೂ ಸಹಾಯ ಮಾಡಿದ್ದ ಆತನ ತಂದೆ ಮಗನ ಶವಸಂಸ್ಕಾರದ ಚಿತ್ರವನ್ನು ಕೋರ್ಟ್‌ಗೆ ಸಲ್ಲಿಕೆ ಮಾಡಿದ್ದರು. ಆ ಬಳಿಕ ನೀರಜ್‌ ಮೋದಿ ಭೂಗತನಾಗಿದ್ದ. ಪೊಲೀಸರು ಕೂಡ ನೀರಜ್‌ ಮೋದಿ ಎನ್ನುವ ವ್ಯಕ್ತಿ ಸತ್ತಿದ್ದಾನೆ ಎಂದು ನಂಬಿದ್ದರಿಂದ ಅದರ ಅಫಡವಿಟ್‌ ಅನ್ನು ಕೋರ್ಟ್‌ಗೆ ಸಲ್ಲಿಸಿತ್ತು. ಅಪರಾಧಿಯೇ ಸತ್ತ ಕಾರಣದಿಂದ ಕೋರ್ಟ್‌ ಈ ಕೇಸ್‌ಅನ್ನು ಮುಕ್ತಾಯ ಮಾಡಿತ್ತು.

ಕೊಲೀಗ್ ಜೊತೆ ಹೆಂಡ್ತಿಯ ಲವ್ವಿಡವ್ವಿ, ಪ್ರೀತಿಸಿ ಮದ್ವೆಯಾಗಿದ್ರೂ ಬಿಟ್ಕೊಟ್ಟ ಪತಿರಾಯ !

ರಹಸ್ಯ ಬಯಲು ಮಾಡಿದ ವಿದ್ಯಾರ್ಥಿನಿಯ ತಾಯಿ: ಪ್ರಕರಣದಿಂದ ತಪ್ಪಿಸಿಕೊಳ್ಳಲು ನೀರಜ್ ತಾನು ಸತ್ತಿರುವುದಾಗಿ ಸಾಬೀತುಪಡಿಸಿದ್ದಾನೆ ಎಂದು ವಿದ್ಯಾರ್ಥಿನಿಯ ತಾಯಿಗೆ ಗೊತ್ತಾಗಿದೆ. ಇದಾದ ನಂತರ ಪಿರಪೇಂಟಿನ ಬಿಡಿಒಗೆ ಅರ್ಜಿ ನೀಡಿ ತಮ್ಮ ಕಚೇರಿಯಿಂದ ತಪ್ಪಾದ ಮರಣ ಪ್ರಮಾಣ ಪತ್ರ ನೀಡಿರುವ ಬಗ್ಗೆ ಮಾಹಿತಿ ನೀಡಿದರು. ಬಿಡಿಒ ತನಿಖೆ ನಡೆಸಿದ್ದು, ನಕಲಿ ಮರಣ ಪ್ರಮಾಣಪತ್ರ ತಯಾರಿಸಿರುವ ವಿಚಾರ ಬೆಳಕಿಗೆ ಬಂದಿದೆ. 2022ರ ಮೇ 21ರಂದು, ಬಿಡಿಓ ಅವರ ಸೂಚನೆಯ ಮೇರೆಗೆ, ನೀರಜ್ ಮೋದಿ ಅವರ ತಂದೆ ರಾಜಾರಾಂ ಮೋದಿ ವಿರುದ್ಧ ವಂಚನೆ ಪ್ರಕರಣ ದಾಖಲು ಮಾಡಿದ್ದಲ್ಲದೆ, ಮರಣ ಪ್ರಮಾಣಪತ್ರವನ್ನು ರದ್ದುಗೊಳಿಸಲಾಯಿತು. ಇದಾದ ನಂತರ ಪೋಕ್ಸೋ ವಿಶೇಷ ನ್ಯಾಯಾಧೀಶ ಲವಕುಶ್ ಕುಮಾರ್ ಅವರು ಇಡೀ ಪ್ರಕರಣದ ವರದಿಯನ್ನು ಕೇಳಿದ್ದರು.

ಪುರುಷರು ಅಸಡ್ಡೆ, ಮಹಿಳೆಯರು ಅವಿದ್ಯಾವಂತರು; ಹೀಗಾಗಿ ಜನಸಂಖ್ಯೆ ನಿಯಂತ್ರಣಕ್ಕೆ ಬರಲ್ಲ: ನಿತೀಶ್‌ ಕುಮಾರ್

ಮರಣ ಪ್ರಮಾಣಪತ್ರವನ್ನು ರದ್ದುಪಡಿಸಿದ ಬಗ್ಗೆ ಮಾಹಿತಿ ಪಡೆದ ನಂತರ, ವಿಶೇಷ ಪೋಕ್ಸೋ ನ್ಯಾಯಾಧೀಶ ಲವ್‌ಕುಶ್‌ ಕುಮಾರ್ ಅವರು ಇಶಿಪುರ್ ಬರಾಹತ್ ಪೊಲೀಸ್ ಠಾಣೆಗೆ ಸಮನ್ಸ್ ನೀಡಿದರು. ಅತ್ಯಾಚಾರದ ಆರೋಪಿಯ ಬದುಕಿದ್ದಾನೆ ಹಾಗಿದ್ದರೂ ಮರಣ ಪ್ರಮಾಣಪತ್ರ ನೀಡಿರುವ  ಬಗ್ಗೆ 2022ರ ಜುಲೈ 23 ರಂದು ಅವರಿಂದ ವರದಿಯನ್ನು ಕೇಳಲಾಯಿತು. ಪೊಲೀಸ್ ಠಾಣೆಯ ಮುಖ್ಯಾಧಿಕಾರಿ ವರದಿ ನೀಡುವ ಬದಲು ಮೌನ ವಹಿಸಿದ್ದರು. ಇದರಿಂದ ವಿಶೇಷ ನ್ಯಾಯಾಧೀಶರು ನ್ಯಾಯಾಲಯದ ಆದೇಶವನ್ನು ಅವಹೇಳನ ಮಾಡಿದ್ದಕ್ಕಾಗಿ ಠಾಣೆಯ ಮುಖ್ಯಸ್ಥರಿಗೆ ನೋಟಿಸ್ ಜಾರಿ ಮಾಡಿದ್ದರು.

click me!