ವಾಣಿಜ್ಯ ತೆರಿಗೆ ಅಧಿಕಾರಿಗಳ ಭರ್ಜರಿ ದಾಳಿ: ಮತದಾರರಿಗೆ ಹಂಚಲು ಅಕ್ರಮವಾಗಿ ಸಾಗಿಸುತ್ತಿದ್ದ 40,000 ಸೀರೆಗಳು ಜಪ್ತಿ!

By Ravi JanekalFirst Published Apr 8, 2024, 7:26 PM IST
Highlights

ಲೋಕಸಭಾ ಚುನಾವಣೆ ಹಿನ್ನೆಲೆ ಮತದಾರರಿಗೆ ಹಂಚಲು ಅಕ್ರಮವಾಗಿ ಸೀರೆ ಸಾಗಾಟ ಮಾಡುತ್ತಿದ್ದ ವಾಹನದ ಮೇಲೆ ಬೀದರ್ ವಾಣಿಜ್ಯ ತೆರಿಗೆ ಇಲಾಖಾ ಅಧಿಕಾರಿಗಳು ದಾಳಿ ನಡೆಸಿದ್ದು, ಸುಮಾರು 40 ಸಾವಿರಕ್ಕೂ ಅಧಿಕ ಸೀರೆಗಳನ್ನು ಜಪ್ತಿ ಮಾಡಿದ್ದಾರೆ.

ಬೀದರ್ (ಏ.8):  ಲೋಕಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ಮತದಾನಕ್ಕೆ ಕೆಲವೇ ದಿನಗಳು ಬಾಕಿ ಉಳಿದಿರುವ ಹಿನ್ನೆಲೆ ಚುನಾವಣಾ ಆಯೋಗ ಯಾವುದೇ ಚುನಾವಣಾ ಅಕ್ರಮಕ್ಕೆ ಆಸ್ಪದ ನೀಡದಂತೆ ನೀತಿ ಸಂಹಿತೆ ಕಠಿಣಗೊಳಿಸಿದೆ. ನಗರದಲ್ಲಿ ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಿ ಪ್ರತಿಯೊಂದು ವಾಹನಗಳನ್ನು ತೀವ್ರ ತಪಾಸಣೆಗೊಳಪಡಿಸಲಾಗುತ್ತಿದೆ. ಇಷ್ಟಾಗಿಯೂ ವಿವಿಧ ಪಕ್ಷಗಳು ಮತದಾರರನ್ನು ಓಲೈಸಲು ಪೈಪೋಟಿಗೆ ಬಿದ್ದಿದ್ದು, ಕುಕ್ಕರ್, ಮದ್ಯ, ನಗದು, ಉಡುಗೊರೆ ಮತ್ತು ಇತರೆ ವಸ್ತುಗಳನ್ನು ನೀಡಲು, ಸರ್ಕಾರಿ ಬಸ್, ಗೂಡ್ಸ್, ಇನ್ನಿತರ ವಾಹನ ಬಳಸಿಕೊಂಡು ಅಕ್ರಮವಾಗಿ ಸಾಗಾಟ ಮಾಡುತ್ತಲೇ ಇದ್ದಾರೆ.

ಇಂದು ಬೀದರ್‌ನಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 40 ಲಕ್ಷಕ್ಕೂ ಅಧಿಕ ಮೌಲ್ಯದ ಸುಮಾರು 40 ಸಾವಿರ ಸೀರೆಗಳನ್ನು ವಾಣಿಜ್ಯ ತೆರಿಗೆ ಇಲಾಖಾ ಅಧಿಕಾರಿಗಳು ದಾಳಿ ನಡೆಸಿ ಜಪ್ತಿ ಮಾಡಿದ್ದಾರೆ.

ಚುನಾವಣೆ ಘೋಷಣೆ ಬಳಿಕ ದೊಡ್ಡ ಬೇಟೆ: ಒಂದೇ ದಿನ 36 ಕೋಟಿ ರು. ಜಪ್ತಿ!

ಲೋಕಸಭಾ ಚುನಾವಣೆ ಹಿನ್ನೆಲೆ ಮತದಾರರಿಗೆ ಹಂಚಲು ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿತ್ತು. ಖಚಿತ ಮಾಹಿತಿ ಮೇರೆಗೆ ಬೀದರ್ ಜಿಲ್ಲಾ ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತ ಮಹೇಶ್ ಪಾಟೀಲ ನೇತೃತ್ವದಲ್ಲಿ ನಡೆಸಿರುವ ಕಾರ್ಯಾಚರಣೆ. ಬೀದರ್‌ನ ಬಸವಕಲ್ಯಾಣ ತಾಲೂಕಿನ ಮನ್ನಳ್ಳಿ ಚೆಕ್‌ಪೋಸ್ಟ್‌ನಲ್ಲಿ ವಾಹನ ತಡೆಹಿಡಿದು ತಪಾಸಣೆ ನಡೆಸಿದ ಅಧಿಕಾರಿಗಳು. ಈ ವೇಳೆ ಲಕ್ಷಾಂತರ ರೂ. ಮೌಲ್ಯದ ಸೀರೆಗಳು ಪತ್ತೆಯಾಗಿವೆ. ಆದರೆ ಇದಕ್ಕೆ ಸೂಕ್ತ ದಾಖಲೆಗಳನ್ನು ಒದಗಿಸದ ಹಿನ್ನೆಲೆ  40 ಸಾವಿರಕ್ಕೂ ಅಧಿಕ ಸೀರೆಗಳನ್ನು ಜಪ್ತಿ ಮಾಡಿದ ವಾಣಿಜ್ಯ ಅಧಿಕಾರಿಗಳು.

click me!