
ಬೆಂಗಳೂರು (ಫೆ.10): ಔಷಧ ವ್ಯಾಪಾರಿ ಮನೆಗೆ ನುಗ್ಗಿ ಅವರ ಗರ್ಭಿಣಿ ಪತ್ನಿಗೆ ಬೆದರಿಕೆ ಹಾಕಿ ಚಿನ್ನಾಭರಣ ದೋಚಿದ್ದ ಇಬ್ಬರು ದುಷ್ಕರ್ಮಿಗಳನ್ನು ಗೋವಿಂದಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಡಿ.ಜೆ.ಹಳ್ಳಿಯ ಮಹಮ್ಮದ್ ಶಬಾಜ್ ಖಾನ್ ಹಾಗೂ ಟಿ.ದಾಸರಹಳ್ಳಿಯ ಎ.ಸೂರಜ್ ಬಂಧಿತರಾಗಿದ್ದು, ತಪ್ಪಿಸಿಕೊಂಡಿರುವ ಮತ್ತೊಬ್ಬನಿಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಆರೋಪಿಗಳಿಂದ 48.06 ಗ್ರಾಂ ಚಿನ್ನಾಭರಣ, 2.96 ಲಕ್ಷ ರು. ನಗದು ಹಾಗೂ 1 ಬೈಕ್ ಸೇರಿದಂತೆ ಒಟ್ಟು 7.44 ಲಕ್ಷ ರು. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಕೆಲ ದಿನಗಳ ಹಿಂದೆ ಗೋವಿಂದಪುರ ಸಮೀಪ 13ನೇ ಅಡ್ಡರಸ್ತೆಯಲ್ಲಿರುವ ಔಷಧ ವ್ಯಾಪಾರಿ ಮನೆಗೆ ಆರೋಪಿಗಳು ಈ ಕೃತ್ಯ ಎಸಗಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.
ಔಷಧ ವ್ಯಾಪಾರಿ ಸಂಬಂಧಿಕ ಆಫ್ರಿದ್‌ಗೆ ಈ ಇಬ್ಬರು ಆರೋಪಿಗಳು ಸ್ನೇಹಿತರಾಗಿದ್ದರು. ತಮ್ಮ ಬಂಧುವಿನ ಮನೆಯಲ್ಲಿ ಹಣ ಹಾಗೂ ಚಿನ್ನಾಭರಣವಿದೆ ಎಂದು ತಿಳಿಸಿ ಕಳ್ಳತನಕ್ಕೆ ಆಫ್ರಿದ್ ಸಂಚು ರೂಪಿಸಿದ್ದ. ಅಂತೆಯೇ ಜ.27 ರಂದು ಮನೆಗೆ ನುಗ್ಗಿ ಗರ್ಭಿಣಿ ಪತ್ನಿಗೆ ಜೀವ ಬೆದರಿಸಿ ಹಣ ದೋಚಿದ್ದರು.
ದರೋಡೆ ಕೃತ್ಯ ಎಸಗಿ ಹೊರಡುವ ವೇಳೆ ರಕ್ಷಣೆಗೆ ಔಷಧ ವ್ಯಾಪಾರಿ ಪತ್ನಿ ಜೋರಾಗಿ ಕೂಗಿಕೊಂಡಿದ್ದಾರೆ. ಈ ಚೀರಾಟ ಕೇಳಿ ಆಕೆಯ ಪತಿ ಹಾಗೂ ಸಂಬಂಧಿಕರು ಧಾವಿಸಿದ್ದಾರೆ. ಇದರಿಂದ ಭೀತಿಗೊಂಡ ಆರೋಪಿಗಳು ಕಾಲ್ಕಿತ್ತಿದ್ದಾರೆ. ಅಲ್ಲೇ ಸಮೀಪದಲ್ಲಿದ್ದ ಆಟೋವೇರಿದ ಆರೋಪಿ ಶಬಾಜ್, ತಕ್ಷಣವೇ ಚಾಲಕನಿಗೆ ಮಚ್ಚು ತೋರಿಸಿ ಹೊರಡುವಂತೆ ಹೇಳಿದ್ದ.ಸ್ವಲ್ಪ ದೂರ ಹೋದ ಆಟೋ ಚಾಲಕ, ಕಂಟೋನ್ಮೆಂಟ್ ರೈಲ್ವೆ ನಿಲ್ದಾಣ ಸಮೀಪ ಪೊಲೀಸ್ ಹೊಯ್ಸಳ ವಾಹನ ನೋಡಿದ್ದಾನೆ.
ಆಗ ಕಳ್ಳನನ್ನು ಸಿಲುಕಿಸಲು ಕೂಡಲೇ ಹೊಯ್ಸಳ ವಾಹನಕ್ಕೆ ಆಟೋವನ್ನು ಚಾಲಕ ಗುದ್ದಿಸಿದ್ದಾನೆ. ಕೂಡಲೇ ಆಟೋವನ್ನು ಪೊಲೀಸರು ಬೆನ್ನತ್ತಿದ್ದಾರೆ. ಆಗ ಆಟೋ ನಿಲ್ಲಿಸಿ ಕೆಳಗಿಳಿದು ಕಳ್ಳ ಕಳ್ಳ ಎಂದು ಕೂಗಿಕೊಂಡು ಓಡಿ ಹೋಗಿದ್ದಾನೆ. ಈ ಅನಿರೀಕ್ಷಿತ ಘಟನೆಯಿಂದ ಗಾಬರಿಗೊಂಡ ಶಬಾಜ್ ಅಲ್ಲಿಂದ ತಪ್ಪಿಸಿಕೊಳ್ಳಲು ಓಡಲಾರಂಭಿಸಿದ್ದಾನೆ. ಕೊನೆಗೆ ಆತನನ್ನು ಹೊಯ್ಸಳ ಪೊಲೀಸರು ಸೆರೆ ಹಿಡಿದು ಹೈಗ್ರೌಂಡ್ಸ್ ಠಾಣೆಗೆ ಕರೆದೊಯ್ದಿದ್ದಾರೆ. ಅಲ್ಲಿ ವಿಚಾರಣೆ ನಡೆಸಿದಾಗ ಸತ್ಯ ಗೊತ್ತಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ