Bengaluru: ಬಾಡಿಗೆ ಮನೆ ಹಣಕ್ಕಾಗಿ ಕಾಲಲ್ಲಿ ತುಳಿದು ಸೋದರಮಾವನ ಕೊಲೆಗೈದ ಯುವಕನ ಬಂಧನ

Published : Mar 05, 2026, 07:15 AM IST
Bengaluru Murder

ಸಾರಾಂಶ

ಯುವಕನೊಬ್ಬ ತನ್ನ ಸೋದರಮಾವನನ್ನು ಹತ್ಯೆ ಮಾಡಿದ್ದಾನೆ. ನಂತರ ಇದನ್ನು ಅಸಹಜ ಸಾವು ಎಂದು ಬಿಂಬಿಸಿ ಅಂತ್ಯಕ್ರಿಯೆಗೆ ಯತ್ನಿಸಿದಾಗ, ವಿವೇಕನಗರ ಪೊಲೀಸರು ಮಧ್ಯಪ್ರವೇಶಿಸಿ ಮರಣೋತ್ತರ ಪರೀಕ್ಷೆಯ ಮೂಲಕ ಸತ್ಯವನ್ನು ಬಯಲಿಗೆಳೆದು ಆರೋಪಿಯನ್ನು ಬಂಧಿಸಿದ್ದಾರೆ.

ಬೆಂಗಳೂರು: ಮನೆ ಬಾಡಿಗೆ ವಿವಾದದ ಹಿನ್ನೆಲೆಯಲ್ಲಿ ತನ್ನ ಸೋದರ ಸಂಬಂಧಿಯನನ್ನು ಕೊಂದು ಬಳಿಕ ಅಸಹಜ ಸಾವಿನ ಸುಳ್ಳಿನ ಕತೆ ಕಟ್ಟಿ ಅಂತ್ಯಕ್ರಿಯೆಗೆ ಯತ್ನಿಸಿದ್ದ ಖಾಸಗಿ ಕಂಪನಿ ಉದ್ಯೋಗಿಯೊಬ್ಬನನ್ನು ವಿವೇಕನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಆಸ್ಟಿನ್ ಟೌನ್‌ನ ನಿವಾಸಿ ಇನಾಯತ್‌ ಪಾಷ (55) ಕೊಲೆಯಾದ ದುರ್ದೈವಿ. ಈ ಹತ್ಯೆ ಸಂಬಂಧ ಮೃತನ ಅಕ್ಕನ ಮಗ ಮಸ್ರೂರ್‌ ಅಹಮ್ಮದ್‌ (22)ನನ್ನು ಪೊಲೀಸರು ಬಂಧಿಸಿದ್ದಾರೆ.

ಸಾವಿನ ಹಿಂದಿನ ಸತ್ಯ

ನಾಲ್ಕು ದಿನಗಳ ಹಿಂದೆ ಮನೆ ಬಾಡಿಗೆ ವಿಚಾರವಾಗಿ ಪಾಷ ಹಾಗೂ ಮಸ್ರೂರ್ ಮಧ್ಯೆ ನಡೆದ ಜಗಳವು ವಿಕೋಪಕ್ಕೆ ತಿರುಗಿದೆ. ಈ ಹಂತದಲ್ಲಿ ಕೆರಳಿದ ಆತ, ಪಾಷ ಮೇಲೆ ಮನಬಂದಂತೆ ಹಲ್ಲೆ ನಡೆಸಿ ಹತ್ಯೆಗೈದು ಬಳಿಕ ಕೆಳಗೆ ಬಿದ್ದು ಆತ ಮೃತಪಟ್ಟಿದ್ದಾನೆ ಎಂದಿದ್ದ. ಆದರೆ ಈ ಬಗ್ಗೆ ವಿವೇಕನಗರ ಪೊಲೀಸರಿಗೆ ಸ್ಥಳೀಯ ನಿವಾಸಿಯೊಬ್ಬರು ಕರೆ ಮಾಡಿ ತಿಳಿಸಿದ್ದರು. ಕೂಡಲೇ ಇನ್ಸ್‌ಪೆಕ್ಟರ್ ವೀರೇಶ್ ತಂಡವು, ಘಟನಾ ಸ್ಥಳಕ್ಕೆ ಆಗಮಿಸಿ ಮೃತದೇಹ ಅಂತ್ಯಕ್ರಿಯೆ ತಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು. ಸಾವಿನ ಹಿಂದಿನ ಸತ್ಯ ಬಯಲಾಗಿದೆ.

ಆಸ್ಟಿನ್‌ ಟೌನ್‌ನಲ್ಲಿ ಮಸ್ರೂರ್ ಕುಟುಂಬಕ್ಕೆ ಸೇರಿದ ಎರಡು ಅಂತಸ್ತಿನ ಕಟ್ಟಡವಿದ್ದು, ಇದರಲ್ಲಿ ಕೆಳಹಂತದ ಮನೆಯಲ್ಲಿ ಕಳೆದ 11 ವರ್ಷಗಳಿಂದ ಅವರ ತಾಯಿ ಸೋದರ ಪಾಷ ನೆಲೆಸಿದ್ದ. ಮೊದಲು 3 ಲಕ್ಷ ರು.ಗೆ ಭೋಗ್ಯಕ್ಕೆ ಮನೆ ಪಡೆದ ಆತ, ಭೋಗ್ಯದ ಅವಧಿ ಮುಗಿದ ಬಳಿಕವೂ ಬಾಡಿಗೆ ಸಹ ನೀಡದೆ ಅದೇ ಮನೆಯಲ್ಲಿ ವಾಸವಿದ್ದ.

ಮೆಕ್ಯಾನಿಕ್ ಆಗಿದ್ದ ಪಾಷ, ತನ್ನ ಪತ್ನಿಯಿಂದ ಪ್ರತ್ಯೇಕವಾಗಿದ್ದ. ಇತ್ತೀಚೆಗೆ ಮನೆ ಬಾಡಿಗೆ ವಿಷಯವಾಗಿ ಸಂಬಂಧಿಗಳ ಮಧ್ಯೆ ಮನಸ್ತಾಪವಾಗಿತ್ತು. ಪದೇ ಪದೇ ಮನೆ ಖಾಲಿ ಮಾಡುವಂತೆ ಮಸ್ರೂರ್ ಹೇಳಿದರೂ ಪಾಷ ಕೇಳಿರಲಿಲ್ಲ. ಆಗಾಗ್ಗೆ ಗಲಾಟೆಗಳು ಸಹ ಆಗಿದ್ದವು. ಅಂತೆಯೇ ಮಾ.1 ರಂದು ಸಂಜೆ 4.30ರ ಸುಮಾರಿಗೆ ಪಾಷ ಮನೆಗೆ ತೆರಳಿ ಮನೆ ಖಾಲಿ ಮಾಡುವಂತೆ ಮಸ್ರೂರ್ ಹೇಳಿದ್ದಾನೆ. ಅವಾಚ್ಯ ಶಬ್ದಗಳಿಂದ ಸಹ ನಿಂದಿಸಿದ್ದಾನೆ. ಈ ವೇಳೆ ಮದ್ಯ ಸೇವಿಸಿದ್ದ ಪಾಷ ಸಹ ತಿರುಗಿ ಬಿದ್ದಿದ್ದಾನೆ. ಆಗ ಮಾತಿಗೆ ಮಾತು ಬೆಳೆದು ಜಗಳವು ಅತಿರೇಕಕ್ಕೆ ಹೋಗಿದೆ.

ಜಿಮ್‌ ಮಾಡಿ ದೇಹ ಹುರಿಗೊಳಿಸಿದ್ದ ಮಸ್ರೂರ್

ಜಿಮ್‌ ಮಾಡಿ ದೇಹ ಹುರಿಗೊಳಿಸಿದ್ದ ಮಸ್ರೂರ್, ಪಾಷನನ್ನು ಕೆಳಗೆ ಬೀಳಿಸಿಕೊಂಡು ಮನಬಂದಂತೆ ಕಾಲಿನಿಂದ ತುಳಿದು ಹಲ್ಲೆ ನಡೆಸಿದ್ದಾನೆ. ಈ ಹಲ್ಲೆಯಿಂದ ಆತ ಕೊನೆಯುಸಿರೆಳೆದಿದ್ದಾನೆ. ಬಳಿಕ ಆಕಸ್ಮಿಕವಾಗಿ ಕೆಳಗೆ ಬಿದ್ದು ಪಾಷ ಮೃತಪಟ್ಟಿದ್ದಾನೆ ಎಂದು ಸಂಬಂಧಿಕರಿಗೆ ಸುಳ್ಳು ಹೇಳಿ ಅಂತ್ಯಕ್ರಿಯೆಗೆ ಮಸ್ರೂರ್ ಯತ್ನಿಸಿದ್ದಾನೆ. ಆಗ ಇನ್ಸ್‌ಪೆಕ್ಟರ್‌ ವೀರೇಶ್ ಅವರಿಗೆ ಸ್ಥಳೀಯ ನಿವಾಸಿ ಕರೆ ಮಾಡಿ ಗಲಾಟೆ ವಿಚಾರ ತಿಳಿಸಿದ್ದಾರೆ.

ದೂರು ನೀಡಲು ಹಿಂದೇಟು

ಕೂಡಲೇ ಘಟನಾ ಸ್ಥಳಕ್ಕೆ ತೆರಳಿ ಪೊಲೀಸರು ವಿಚಾರಿಸಿದಾಗ ಮೃತನ ಸಂಬಂಧಿಕರು ಜಗಳದ ವಿಚಾರವನ್ನು ನಿರಾಕರಿಸಿದ್ದಾರೆ. ಅಲ್ಲದೆ ಈ ಬಗ್ಗೆ ದೂರು ನೀಡಲು ಸಹ ಅವರು ಹಿಂದೇಟು ಹಾಕಿದ್ದಾರೆ. ಕೊನೆಗೆ ಪೊಲೀಸರು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಆಗ ಮರಣೋತ್ತರ ಪರೀಕ್ಷೆಯಲ್ಲಿ ಹಲ್ಲೆಯಿಂದ ಪಾಷ ಮೃತಪಟ್ಟಿರುವುದನ್ನು ವೈದ್ಯರು ಖಚಿತಪಡಿಸಿದ್ದಾರೆ.

ಇದನ್ನೂ ಓದಿ: ಸಿದ್ದಾಪುರ ಠಾಣೆಯಲ್ಲಿ 7 ಕೋಟಿ: ಪೊಲೀಸರಿಗೆ ನಿದ್ದೆಯಿಲ್ಲದ ರಾತ್ರಿ!

ಈ ಮಾಹಿತಿ ಮೇರೆಗೆ ಕೊಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಸಮಯ ವ್ಯರ್ಥ ಮಾಡದೆ ಆರೋಪಿಯನ್ನು ಬಂಧಿಸಿದ್ದಾರೆ. ಎಚ್‌ಎಸ್‌ಆರ್ ಲೇಔಟ್ ಸಮೀಪದ ಖಾಸಗಿ ಕಂಪನಿಯಲ್ಲಿ ಮಸ್ರೂರ್ ಉದ್ಯೋಗದಲ್ಲಿದ್ದ. ಸಿಟ್ಟಿಗೆ ಬುದ್ಧಿಕೊಟ್ಟು ಆತ ಜೈಲು ಸೇರಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ನಾಳೆ ಸಿದ್ದರಾಮಯ್ಯ ಬಜೆಟ್‌ : ವಲಯವಾರು ನಿರೀಕ್ಷೆಗಳೇನು?

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿದ್ದಾಪುರ ಠಾಣೆಯಲ್ಲಿ 7 ಕೋಟಿ: ಪೊಲೀಸರಿಗೆ ನಿದ್ದೆಯಿಲ್ಲದ ರಾತ್ರಿ!
ಕೋರ್ಟ್ ಸಮಯ ಹಾಳು ಮಾಡುತ್ತಿರೋ ಡಿ ಗ್ಯಾಂಗ್; ದಾಸನ ಬೇಡಿಕೆಗೆ SPP ಗುನ್ನ, ಮುಗಿಯಲ್ಲ ಗ್ರಹಣ..!