Bengaluru: ವಿದ್ಯಾರ್ಥಿ ಆತ್ಮಹತ್ಯೆಗೆ ಕುಮ್ಮಕ್ಕು ನೀಡಿಲ್ಲ, ಪಿಇಎಸ್‌ ವಿಶ್ವವಿದ್ಯಾಲಯ ಸ್ಪಷ್ಟನೆ

By Suvarna News  |  First Published Jul 24, 2023, 9:37 PM IST

ವಿದ್ಯಾರ್ಥಿ ಆದಿತ್ಯ ಸಾವಿನ ಕುರಿತ ಆರೋಪಗಳಿಗೆ ಬೆಂಗಳೂರಿನ ಖಾಸಗಿ ವಿಶ್ವವಿದ್ಯಾಲಯದ ಸ್ಪಷ್ಟನೆ ಕೊಟ್ಟಿದೆ. ವಿದ್ಯಾರ್ಥಿ ಆತ್ಮಹತ್ಯೆಗೆ ಕುಮ್ಮಕ್ಕು ನೀಡಿಲ್ಲ ಎಂದಿದೆ,


ಬೆಂಗಳೂರು (ಜು.24): ಹೊಸಕೆರೆ ಹಳ್ಳಿಯ ಸಮೀಪದ ತಮ್ಮ ಕಾಲೇಜಿನ ಆದಿತ್ಯ ಪ್ರಭು ಎಂಬ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣ ಸಂಬಂಧ ಕೇಳಿಬಂದಿರುವ ಆರೋಪಗಳಿಗೆ ಪಿಇಎಸ್‌ ವಿಶ್ವವಿದ್ಯಾಲಯ (PES University) ಸ್ಪಷ್ಟನೆ ನೀಡಿದ್ದು, ವಿವಿಯ ಯಾವುದೇ ಅಧಿಕಾರಿಗಳು ಆತ್ಮಹತ್ಯೆಗೆ ಕುಮ್ಮಕ್ಕು ನೀಡಿಲ್ಲ. ಈ ಬಗ್ಗೆ ತನಿಖೆ ನಡೆಯುತ್ತಿದ್ದು ವರದಿ ಬರುವವರೆಗೂ ಯಾರೂ ಕೂಡ ಅಪ್ರಚಾರ, ಅನಗತ್ಯ ಆರೋಪ ಮಾಡಬಾರದು ಎಂದು ಮನವಿ ಮಾಡಿದೆ.

ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ವಿವಿಯ ವಿಶೇಷಾಧಿಕಾರಿಗಳು, ನಮ್ಮ ಕಾಲೇಜಿನ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾಗಿದ್ದಕ್ಕೆ ವಿಶ್ವವಿದ್ಯಾಲಯವು ಸಂತಾಪ ಸೂಚಿಸುತ್ತದೆ. ಒಬ್ಬ ಪ್ರತಿಭಾವಂತ ವಿದ್ಯಾರ್ಥಿಯನ್ನು ಕಳೆದುಕೊಂಡಿರುವ ಬಗ್ಗೆ ಇಡೀ ಕಾಲೇಜಿಗೆ ಅತೀವ ನೋವು ಇದೆ. ಮೃತನ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇವೆ. ಆದರೆ, ಈ ಪ್ರಕರಣದ ಕುರಿತು ಯಾರು ಕೂಡ ಅಪಪ್ರಚಾರ ಮಾಡಬಾರದು. ವಿಶ್ವವಿದ್ಯಾಲಯದ ಅಧಿಕಾರಿಗಳಿಗೂ ಹೃದಯವಿದೆ. ಮಾನವೀಯತೆ ಇದೆ. ತಪ್ಪು ಮಾಡಿದಾಗ ಶಿಕ್ಷಿಸುವ ಕೆಲಸ ಮಾಡಿದ್ದಾರೆಯೇ ಹೊರತು ಆತ್ಮಹತ್ಯೆಗೆ ಯಾರೂ ಕುಮ್ಮಕ್ಕು ನೀಡಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತೇವೆ.

Latest Videos

undefined

ಹತ್ಯೆ ಮಾಡಿ ಆತ್ಮಹತ್ಯೆಯೆಂದು ಬಿಂಬಿಸಿದ ಹಂತಕಿ ಪತ್ನಿ, ಅನೈತಿಕ ಸಂಬಂಧಕ್ಕೆ ಗಂಡನ ಮುಗಿಸಿದ ಹೆಂಡತಿ!

ಸದ್ಯ ತನಿಖೆ ನಡೆಯುತ್ತಿರುವುದರಿಂದ ಹೆಚ್ಚಿನ ವಿಚಾರಗಳನ್ನು ಬಹಿರಂಗವಾಗಿ ಹೇಳುವುದು ಕಾನೂನು ಪ್ರಕಾರ ತಪ್ಪಾಗಲಿದೆ. ಆದರೆ, ಸತ್ಯಾಂಶವನ್ನು ವರದಿ ಮೂಲಕ ತನಿಖಾ ಸಮಿತಿಗೆ ಸಲ್ಲಿಸಿದ್ದೇವೆ. ಇದರಲ್ಲಿ ಪರೀಕ್ಷಾ ದುರಾಚಾರ ನಡೆದ ವೇಳೆಯಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನೂ ಸಹ ಲಗತ್ತಿಸಲಾಗಿದೆ. ಇದರಲ್ಲೇ ಸತ್ಯಾಂಶ ಏನೆಂದು ತಿಳಿಯಲಿದೆ ಎಂದು ಹೇಳಿದ್ದಾರೆ. ಉತ್ತಮ ವಿದ್ಯಾರ್ಥಿಯಾಗಿದ್ದ ಆದಿತ್ಯ ಪ್ರಭು ವಿದ್ಯಾಭ್ಯಾಸದಲ್ಲೂ ಮುಂದಿದ್ದ. ಜುಲೈ 17ರಂದು ವಿದ್ಯಾರ್ಥಿಯು ಪರೀಕ್ಷೆಗೆ ಹಾಜರಾಗಿದ್ದ. ಪರೀಕ್ಷಾ ಕೇಂದ್ರದೊಳಗೆ ಮೊಬೈಲ್‌ ಬಳಸಿದ್ದ ಹಿನ್ನೆಲೆಯಲ್ಲಿ ‘ಪರೀಕ್ಷಾ ದುರಾಚಾರ ಪ್ರಕರಣ’ ದಾಖಲು ಮಾಡಲಾಗಿತ್ತು.

ರಾಜ್ಯದಲ್ಲಿ ಇನ್ನೂ ಜೀವಂತ ಭ್ರೂಣ ಹತ್ಯೆ, 4 ತಿಂಗಳ ಭ್ರೂಣದ ಶವ ರಸ್ತೆ ಬದಿ ಎಸೆದ ಕಿಡಿಗೇಡಿಗಳು!

ಆದರೆ, ಮೃತ ವಿದ್ಯಾರ್ಥಿಯ ತಾಯಿ ಇದನ್ನು ಅಲ್ಲೆಗೆಳೆದಿದ್ದು, ಈ ವಿಚಾರವನ್ನು ದುರಾಚಾರ ಪ್ರಕರಣ ತನಿಖಾ ಸಮಿತಿಯು ಸ್ವೀಕರಿಸಲಿದೆ. ಅವರ ಅಭಿಪ್ರಾಯ ವ್ಯಕ್ತಪಡಿಸಲು ಮುಕ್ತ ಸ್ವಾತಂತ್ರ್ಯವಿದೆ. ತನಿಖೆ ಪ್ರಗತಿಯಲ್ಲಿರುವಾಗ ವಿಶ್ವವಿದ್ಯಾಲಯ ತನ್ನ ಅಭಿಪ್ರಾಯ ವ್ಯಕ್ತಪಡಿಸುವುದು ಸರಿಯಲ್ಲ ಎಂಬ ಕಾರಣಕ್ಕೆ ಮೌನವಹಿಸಿತ್ತು. ಆದರೆ, ತಮ್ಮ ವಿವಿಯ ಪ್ರಾಧ್ಯಾಪಕರ ನಡೆಯ ಬಗ್ಗೆ ಬೇರೆ ರೀತಿಯಲ್ಲಿ ಬಿಂಬಿತವಾಗುತ್ತಿರುವುದರಿಂದ ಇದೀಗ ಸ್ಪಷ್ಟನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಆದಿತ್ಯ ಪ್ರಭು ಅವರ ಆತ್ಮಹತ್ಯೆಗೆ ಕಾರಣರಾದ ವಿಶ್ವವಿದ್ಯಾನಿಲಯದ ಅಧಿಕಾರಿಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಪಿಇಎಸ್ ವಿಶ್ವವಿದ್ಯಾಲಯ ಸೇರಿದಂತೆ ಬೆಂಗಳೂರಿನ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಜುಲೈ 23 ರಂದು ಭಾನುವಾರ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಿದರು. ವಿಶ್ವವಿದ್ಯಾನಿಲಯದ 19 ವರ್ಷದ ಬಿಟೆಕ್ ವಿದ್ಯಾರ್ಥಿ ಆದಿತ್ಯ ಜುಲೈ 17 ರಂದು ವಿಶ್ವವಿದ್ಯಾನಿಲಯ ಕ್ಯಾಂಪಸ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪರೀಕ್ಷಾ ಹಾಲ್‌ಗೆ ಮೊಬೈಲ್ ಫೋನ್ ಕೊಂಡೊಯ್ದಿದ್ದಕ್ಕಾಗಿ ಕಾಲೇಜು ಅಧಿಕಾರಿಗಳು ಆತನನ್ನು ಕೆಟ್ಟದಾಗಿ ನಡೆಸಿಕೊಂಡರು ಮತ್ತು ಕಿರುಕುಳ ನೀಡಿದ್ದಾರೆ ಎಂದು ಅವರ ಪೋಷಕರು ಆರೋಪಿಸಿದ್ದಾರೆ.

click me!