
ಬೆಂಗಳೂರು (ಜು.20): ಅಪ್ಪ ಮಾಡಿದ ಆಸ್ತಿ ಹಂಚಿಕೆಯಲ್ಲಿ ಗಲಾಟೆಗಳಾಗಿ ಕೊಲೆಗಳಾಗಿರೋದನ್ನ ನೋಡಿದ್ದೇವೆ. ಆದ್ರೆ ಅಪ್ಪ ಸಂಪಾದಿಸಿದ್ದ ಇಡೀ ಆಸ್ತಿಯನ್ನ ತನ್ನದಾಗಿಸಿಕೊಳ್ಳಲು ತಮ್ಮನಿಗೆ ಚಾಕುವಿನಿಂದ ಚುಚ್ಚಿ ಮನೆ ಮೇಲಿಂದ ತಳ್ಳಿ ಕೊಲೆಗೈದ ಘಟನೆ ಬೆಂಗಳೂರಿನ ಕಾಮಾಕ್ಷಿಪಾಳ್ಯದಲ್ಲಿ ನಡೆದಿದೆ. ಕಾಮಾಕ್ಷಿಪಾಳ್ಯ ಠಾಣಾ ವ್ಯಾಪ್ತಿಯ ಕಾವೇರಿನಗರ ನಿವಾಸಿಯಾಗಿದ್ದ 31 ವರ್ಷದ ವಿನಯ್ ಕುಮಾರ್ ಕೊಲೆಯಾದ ಯುವಕ. ನಿನ್ನೆ (ಮಂಗಳವಾರ) ಸಂಜೆ ಮನೆಯ ರೂಮಿನಲ್ಲಿದ್ದಾಗ ಜಗಳ ಆರಂಭಿಸಿದ ಅಣ್ಣ ಸತೀಶ್ ತಮ್ಮನಿಗೆ ಚಾಕುವಿನಿಂದ ಹಲವು ಚುಚ್ಚಿದ್ದಾನೆ.
ಅಲ್ಲದೆ ರೂಮಿನಲ್ಲಿ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ಸಹೋದರ ವಿನಯ್ ನನ್ನು ಎಳೆದುತಂದು ನಾಲ್ಕನೇ ಮಹಡಿ ಮೇಲಿಂದ ಕೆಳಗೆ ತಳ್ಳಿದ್ದಾನೆ. ಕೂಡಲೇ ವಿನಯ್‌ನನ್ನ ಆಸ್ಪತ್ರೆಗೆ ಸಾಗಿಸಿದರೂ ಆಸ್ಪತ್ರೆಗೆ ತಲುಪುವ ವೇಳೆಗಾಗಲೇ ಸಾವನ್ನಪ್ಪಿರೋದಾಗಿ ವೈದ್ಯರು ಸ್ಪಷ್ಟಪಡಿಸಿದ್ದಾರೆ. ನಂತರ ತಾಯಿ ಜಯಮ್ಮ ತನ್ನ ಮೊದಲ ಮಗನೇ ಎರಡನೇ ಮಗನನ್ನು ಕೊಂದಿದ್ದಾನೆ ಎಂದು ಕಾಮಾಕ್ಷಿಪಾಳ್ಯ ಪೊಲೀಸರಿಗೆ ದೂರು ನೀಡಿದ್ದಾರೆ. ಕೊಲೆಗೈದು ಪರಾರಿಯಾಗಿದ್ದ ಅಣ್ಣ ಸತೀಶ್ ಕುಮಾರ್‌ನನ್ನ ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದಾರೆ.
ಪೊಲೀಸರ ಸೋಗಿನಲ್ಲಿ ಬಂದು ಚಿನ್ನಾಭರಣ ಕದ್ದು ಪರಾರಿಯಾದ ಖದೀಮರು!
ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದ ವಿನಯ್ ಸೌಮ್ಯ ಸ್ವಭಾವದವನಾಗಿದ್ದು, ಯಾರ ಜೊತೆಯೂ ಜಗಳ ಆಡಿದವನಲ್ಲ. ಇತ್ತೀಚೆಗಷ್ಟೆ ಮದುವೆ ನಿಶ್ಚಿತಾರ್ಥ ಜರುಗಿದ್ದು, ಮುಂದಿನ ತಿಂಗಳು ವಿನಯ್ ಮದುವೆ ನಿಗದಿ ಆಗಿತ್ತು. ವಿನಯ್ ಮದುವೆಯಾದ್ರೆ ಹೆಂಡತಿ ಬರ್ತಾಳೆ, ಮುಂದೆ ಮಕ್ಕಳು ಆಗ್ತಾವೆ. ಹೀಗಾದರೇ ಇಡೀ ಆಸ್ತಿಯಲ್ಲಿ ಅರ್ಧ ಭಾಗ ತಮ್ಮನಿಗೆ ನೀಡಲೇಬೇಕು. ಮದುವೆ ಆಗುವ ಮುನ್ನವೇ ವಿನಯ್‌ನನ್ನ ಕೊಲೆ ಮಾಡಬೇಕು ಎಂದು ನಿರ್ಧರಿಸಿ ಸಾಲದ ವಿಚಾರ ನೆಪ ಮಾಡಿಕೊಂಡು ಕೊಲೆ ಮಾಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸದ್ಯ ಆರೋಪಿ ಸತೀಶ್‌ನನ್ನ ಬಂಧಿಸಿರುವ ಕಾಮಾಕ್ಷಿಪಾಳ್ಯ ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ