ಬೆಂಗಳೂರು ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಸುಮಾರು ಒಂದು ಕೋಟಿ ರುಪಾಯಿ ಮೌಲ್ಯದ ಗಾಂಜಾವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ಬೆಂಗಳೂರು(ಆ.28): ಹೊರ ರಾಜ್ಯಗಳಿಂದ ಕ್ವಿಂಟಾಲ್ ಗಟ್ಟಲೇ ಗಾಂಜಾ ತಂದು ರಾಜ್ಯದಲ್ಲಿ ವಿತರಿಸುತ್ತಿದ್ದ ಜಾಲವನ್ನು ಬೇಧಿಸುವಲ್ಲಿ ಯಶಸ್ಸು ಕಂಡಿರುವ ಸಿಸಿಬಿ, ಪ್ರಮುಖ ಪೂರೈಕೆದಾರರಾದ ಮೈಸೂರು ಮೂಲದ ರಾಜಕಾರಣಿ ಸೇರಿದಂತೆ ಮೂವರನ್ನು ಸೆರೆ ಹಿಡಿದಿದೆ.
ಮೈಸೂರಿನ ಕೆ.ಆರ್.ಪುರದ ಸಮೀರ್, ಕೈಸರ್ ಪಾಷ ಅಲಿಯಾಸ್ ಜಾಕೀರ್ ಹಾಗೂ ಚಿಕ್ಕಬಳ್ಳಾಪುರ ತಾಲೂಕಿನ ಗೌರಿಬಿದನೂರಿನ ಇಸ್ಮಾಯಿಲ್ ಶರೀಫ್ ಬಂಧಿತರಾಗಿದ್ದು, ಆರೋಪಿಗಳಿಂದ 1 ಕೋಟಿ ರುಪಾಯಿ ಮೌಲ್ಯದ 204 ಕೆ.ಜಿ ಗಾಂಜಾ, ಮೂರು ಮೊಬೈಲ್‌ಗಳು ಹಾಗೂ ಲಾರಿ ಸೇರಿದಂತೆ ಮತ್ತಿತರ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
ಆಂಧ್ರಪ್ರದೇಶದಿಂದ ಕಂಟೈನರ್ ಲಾರಿಯಲ್ಲಿ ಎರಡು ಕ್ವಿಂಟಾಲ್ ಗಾಂಜಾ ತಂದಿದ್ದ ಆರೋಪಿಗಳು, ದೇವನಹಳ್ಳಿ ಸಮೀಪ ರಾಜ್ಯದ ಇತರೆಡೆ ಸಾಗಿಸಲು ಕಾರಿಗೆ ತುಂಬುತ್ತಿದ್ದರು. ಆಗ ಖಚಿತ ಮಾಹಿತಿ ಪಡೆದು ದಾಳಿ ನಡೆಸಿ ಸಮೀರ್ ತಂಡವನ್ನು ಸಿಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ ಎಂದು ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದ್ದಾರೆ.
ಸ್ಯಾಂಡಲ್‌ವುಡ್‌ಗೆ ಡಗ್ಸ್ ಸರಬರಾಜು ಮಾಡ್ತಿದ್ದ ಅನಿಕಾ ಯಾವ ಸೀರಿಯಲ್‌ನಲ್ಲಿದ್ದಳು?
ಈ ಆರೋಪಿಗಳಿಗೆ ಆಂಧ್ರಪ್ರದೇಶದ ಕುಖ್ಯಾತ ಗಾಂಜಾ ಮಾರಾಟಗಾರ ಶಿವಾರೆಡ್ಡಿ ಗಾಂಜಾ ಮಾರುತ್ತಿದ್ದ. ಅಂತೆಯೇ ಆ ರಾಜ್ಯದ ಪೂರ್ವ ಗೋದಾವರಿ ಜಿಲ್ಲೆಯ ತುನಿ ಎಂಬ ಗ್ರಾಮದಿಂದ ಕಂಟೈನರ್‌ನಲ್ಲಿ ಗಾಂಜಾ ತುಂಬಿಕೊಂಡು ದೇವನಹಳ್ಳಿಗೆ ಬುಧವಾರ ರಾತ್ರಿ ಸಮೀರ್ ಬಂದಿದ್ದ. ಆ ವೇಳೆ ಆತನೊಂದಿಗೆ ಕೈಸರ್ ಹಾಗೂ ಇಸ್ಮಾಯಿಲ್ ಇದ್ದರು. ದೇವನಹಳ್ಳಿ ಹತ್ತಿರದ ಗಾಂಜಾ ದಾಸ್ತಾನು ಮಾಡುತ್ತಿದ್ದರು. ಬಳಿಕ ಕಾರು ಹಾಗೂ ಬೈಕ್‌ಗಳಲ್ಲಿ ಬೇರೆಡೆಗೆ ಗಾಂಜಾ ಸಾಗಿಸುತ್ತಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.
ಇದಕ್ಕಾಗಿ ವ್ಯವಸ್ಥಿತವಾಗಿ ಜಾಲವೊಂದು ಕಾರ್ಯನಿರ್ವಹಿಸುತ್ತಿತ್ತು. ಬೆಂಗಳೂರು, ಮೈಸೂರು, ರಾಮನಗರ, ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ಚಿಕ್ಕಬಳ್ಳಾಪುರ ಸೇರಿದಂತೆ ಇನ್ನಿತರ ಜಿಲ್ಲೆಗಳಿಗೆ ಸಬ್ ಪೆಡ್ಲರ್‌ಗಳ ಮೂಲಕ ಗಾಂಜಾ ಬಿಕರಿಯಾಗುತ್ತಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.