*ಬೆಂಗಳೂರಿನಲ್ಲಿ ಬಿಜೆಪಿ ಮುಖಂಡ ಅನಂತರಾಜು ಆತ್ಮಹತ್ಯೆ ಪ್ರಕರಣ
*ಅನಂತರಾಜು ಪತ್ನಿಗೆ ಮತ್ತೊಮ್ಮೆ ನೋಟಿಸ್ ನೀಡಲು ಪೊಲೀಸರ ಸಿದ್ದತೆ
*ಪ್ರಕರಣ ಸಂಬಂಧ ಅನಂತರಾಜು ಗೆಳತಿ ರೇಖಾ ಬಂಧಿಸಿದ್ದ ಪೊಲೀಸರು
ಬೆಂಗಳೂರು (ಮೇ 23): ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ಬಿಜೆಪಿ ಮುಖಂಡ ಬಿ.ಪಿ.ಅನಂತರಾಜು (46) (BP Anantharaju) ಸಾವಿನ ಪ್ರಕರಣಕ್ಕೆ ತಿರುವು ಸಿಕ್ಕಿದೆ. ಫೇಸ್‌ಬುಕ್‌ನಲ್ಲಿ ಪರಿಚಯವಾಗಿದ್ದ ಮಹಿಳೆಯ ಹನಿಟ್ರ್ಯಾಪ್ ಸುಳಿಗೆ ಸಿಲುಕಿ ನಿರಂತರ ಬ್ಲ್ಯಾಕ್‌ಮೇಲ್‌ನಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಮೃತ ಬಿ.ಪಿ.ಅನಂತರಾಜು ಅವರ ಪತ್ನಿ ಬಿ.ಕೆ.ಸುಮಾ ಅವರು ನೀಡಿದ ದೂರಿನ ಮೇರೆಗೆ ಬ್ಲ್ಯಾಕ್‌ಮೇಲ್ ಮಾಡಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಕೆ.ಆರ್.ಪುರದ ರೇಖಾ, ವಿನೋದ್ ಹಾಗೂ ಸ್ಪಂದನಾ ಎಂಬುವವರ ವಿರುದ್ಧ ಬ್ಯಾಡರಹಳ್ಳಿ ಪೊಲೀಸ್ ಠಾಣೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಈಗ ಅನಂತರಾಜು ಪತ್ನಿಗೆ ಮತ್ತೊಮ್ಮೆ ನೋಟಿಸ್ ನೀಡಲು ಪೊಲೀಸರರು ಸಿದ್ದತೆ ನಡೆಸಿದ್ದಾರೆ. ಪ್ರಕರಣ ಸಂಬಂಧ ಅನಂತರಾಜು ಗೆಳತಿ ರೇಖಾಳನ್ನು ಪೊಲೀಸರು ಬಂಧಿಸಿದ್ದರು. ಇದರ ಬೆನ್ನಲ್ಲೇ ಆಡಿಯೋ ವೈರಲ್ ಆಗಿತ್ತು. ಅನಂತರಾಜು ಪತ್ನಿ ಸುಮಾ ಮತ್ತು ಗೆಳತಿ ರೇಖಾ ಸಂಭಾಷಣೆ ವೈರಲ್ ಆಗಿತ್ತು. ಅನಂತರಾಜು ಹೆಸರಿನಲ್ಲಿ ಸುಮಾ ರೇಖಾ ವಾಟ್ಸಾಪ್ ಚಾಟಿಂಗ್ ಕೂಡ ವೈರಲ್ ಆಗಿತ್ತು.
ಇದನ್ನೂ ಓದಿ: ಕೇರಳ ವೈದ್ಯ ವಿಸ್ಮಯ ಆತ್ಮಹತ್ಯೆ ಪ್ರಕರಣ: ವರದಕ್ಷಿಣೆ ಪ್ರಕರಣದಲ್ಲಿ ಪತಿ ದೋಷಿ: ಕೋರ್ಟ್
ಪ್ರಕರಣ ಸಂಬಂಧ ಬ್ಯಾಡರಹಳ್ಳಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಅನಂತರಾಜು ಆತ್ಮಹತ್ಯೆ ಕೇಸ್ ಸಂಬಂಧ ಪೊಲೀಸರು UDR ಕೇಸ್ ದಾಖಲಿಸಿದ್ದರು. ಅನಂತರಾಜು ನೇಣುಬಿಗಿದು ಕೊಂಡಿದ್ದ ಬಟ್ಟೆ ವಶಕ್ಕೆ ನೀಡುವಂತೆ ಪೊಲೀಸರು ನೋಟಿಸ್ ನೀಡಿದ್ದಾರೆ.
ಆತ್ಮಹತ್ಯೆ ಬಳಿಕ ಪೊಲೀಸರಿಗೆ ಕುಟುಂಬಸ್ಥರು ಮಾಹಿತಿ ನೀಡಿರಲಿಲ್ಲ ಎನ್ನಲಾಗಿದೆ. ಮೇ 12 ರಂದು ರಾತ್ರಿ ಬ್ಯಾಡರಹಳ್ಳಿ ಠಾಣಾ ವ್ಯಾಪ್ತಿ ಮನೆಯಲ್ಲಿ ಅನಂತರಾಜು ಆತ್ಮಹತ್ಯೆ ಮಾಡಿಕೊಂಡಿದ್ದರು. ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದು ಡೆತ್ ಕನ್ಪರ್ಮ್ ಆಕ್ತಿದ್ದಂತೆ ಮನೆಗೆ ಮೃತದೇಹ ಕುಟುಂಬಸ್ಥರು ಕೊಂಡೊಯ್ದಿದ್ದರು. ಆ ಬಳಿಕ ಆಸ್ಪತ್ರೆಯಿಂದ ಬ್ಯಾಡರಹಳ್ಳಿ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಈ ಬೆನ್ನಲ್ಲೇ ಅನಂತರಾಜು ಆತ್ಮಹತ್ಯೆ ಪ್ರಕರಣ ಸಂಬಂಧ ಹಲವು ಆಯಾಮಗಳಲ್ಲಿ ತನಿಖೆ ಚುರುಕುಗೊಂಡಿದೆ.