* ಬೆಳಗಾವಿಯಲ್ಲಿ ಪುಂಡರ ಪುಂಡಾಟ
* ಬಂಧಿಸಲಾಗಿದ್ದ 27 ಮಂದಿಗೆ ನ್ಯಾಯಾಂಗ ಬಂಧನ
* 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಕೋರ್ಟ್ ಆದೇಶ
ಬೆಳಗಾವಿ, (ಡಿ.18): ನಗರದಲ್ಲಿ ನಡೆದ ಅಹಿತಕರ ಘಟನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದ್ದ 27 ಮಂದಿಯನ್ನು ಕೋರ್ಟ್ ನ್ಯಾಯಾಂಗ ಬಂಧನಕ್ಕೆ (Judicial Custody) ಒಪ್ಪಿಸಿದೆ.
ಬೆಳಗಾವಿ ಪೊಲೀಸರು (Belagavi Police) ಒಟ್ಟು 27 ಮಂದಿಯನ್ನ ಬಂಧಿಸಿ ಇಂದು(ಶನಿವಾರ) ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ವಿಚಾರಣೆ ನಡೆಸಿದ್ದ ಜಿಲ್ಲಾ ಜಿಎಂಎಫ್ಸಿ ಕೋರ್ಟ್, ಆರೋಪಿಗಳನ್ನ 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ಹೊರಡಿಸಿದೆ.
undefined
Sangolli Rayanna Statue Row: ಬೆಳಗಾವಿಯಲ್ಲಿ ರಾಯಣ್ಣ ಪ್ರತಿಮೆ ಧ್ವಂಸ, 27 ಆರೋಪಿಗಳ ಬಂಧನ
ರಾಯಣ್ಣಮೂರ್ತಿ ಧ್ವಂಸ, ಸರ್ಕಾರಿ ಆಸ್ತಿ ಪಾಸ್ತಿಗೆ ಹಾನಿ ಹಾಗೂ ಪೊಲೀಸರ ವಾಹನಗಳಿಗೆ ಕಲ್ಲು ತೂರಾಟ ನಡೆಸಿದ್ದ ಆರೋಪಿಗಳನ್ನು ಬಂಧಿಸಿದ್ದರು.
ಬಂಧಿತ ಆರೋಪಿಗಳನ್ನ ಜಿಲ್ಲಾ ಜಿಎಂಎಫ್ಸಿ ಕೋರ್ಟ್ಗೆ ಹಾಜರುಪಡಿಸಲಾಗಿತ್ತು. ಇನ್ನು ಬೆಳಗಾವಿಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರು ಬಿಗಿಬಂದೋಬಸ್ತ್ ಏರ್ಪಡಿಸಲಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ರಾಜ್ಯ ಸರ್ಕಾರ ಕಠಿಣ ಕ್ರಮತೆಗೆದುಕೊಂಡಿದೆ.
ಎಂಇಎಸ್(MES) ಪುಂಡರ ಅಟ್ಟಹಾಸ ಮಿತಿಮೀರಿದ ಹಿನ್ನೆಲೆಯಲ್ಲಿ ನಗರದ ಮೂರು ಪೊಲೀಸ್ ಠಾಣೆಯಲ್ಲಿ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲು ಮಾಡಿಕೊಂಡಿದ್ದಾರೆ. ಬೆಳಗಾವಿಯ ಕ್ಯಾಂಪ್ ಪೊಲೀಸ್ ಠಾಣೆ, ಖಡೇಬಜಾರ್ ಪೊಲೀಸ್ ಠಾಣೆ ಮತ್ತು ಮಾರ್ಕೆಟ್ ಠಾಣೆಯಲ್ಲಿ ಮೂರು ಪ್ರತ್ಯೇಕ ದೂರುಗಳು ದಾಖಲಾಗಿವೆ.
ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ್ದು, ಕಾನೂನು ಸುವ್ಯವಸ್ಥೆ ಹಾಳು ಮಾಡುವುದು, ಭಾಷಾ ವೈಷಮ್ಯ ಮೂಡಿಸುವುದು, ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆ ಎಂದು ನೂರಾರು ಎಂಇಎಸ್ ಪುಂಡರ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.
ಘಟನೆ ಹಿನ್ನೆಲೆಯಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿರುವುದರಿಂದ ಇಂದು(ಡಿ.18) ಬೆಳಗ್ಗೆ 8 ಗಂಟೆಯಿಂದ ನಾಳೆ(ಡಿ.19) ಬೆಳಗ್ಗೆ 6 ಗಂಟೆಯವರೆಗೂ ಬೆಳಗಾವಿ ನಗರದಲ್ಲಿ 144 ಸೆಕ್ಷನ್ ಜಾರಿ ಮಾಡಿ ನಿಷೇಧಾಜ್ಞೆ ವಿಧಿಸಲಾಗಿದೆ ಎಂದು ಸಹ ಆಯುಕ್ತರು ತಿಳಿಸಿದ್ದಾರೆ.
ಏನಿದು ಘಟನೆ:
ಬೆಳಗಾವಿ ನಗರದ ಅನಗೋಳದ ಕನಕದಾಸ ಕಾಲೋನಿಯಲ್ಲಿ ಇಂದು ನಸುಕಿನ ಜಾವ ಕಿಡಿಗೇಡಿಗಳು ಸಂಗೊಳ್ಳಿ ರಾಯಣ್ಣ ಪುತ್ಥಳಿ ವಿರೂಪಗೊಳಿಸಿರುವ ಘಟನೆ ನಡೆದಿದೆ. ಜನಸಂಚಾರವಿರದ ಹೊತ್ತಿನಲ್ಲಿ ದುಷ್ಕರ್ಮಿಗಳು ಆಗಮಿಸಿ ಪುತ್ಥಳಿ ಬೀಳಿಸಿ ವಿರೂಪಗೊಳಿಸಿ ತಮ್ಮ ಅಟ್ಟಹಾಸ ಮೆರೆದಿದ್ದಾರೆ. ಸಂಗೊಳ್ಳಿ ರಾಯಣ್ಣ ಪುತ್ಥಳಿ ಹಾನಿಗೊಳಿಸಿ ಖಡ್ಗ, ಗುರಾಣಿ ಬೇರೆ ಬೇರೆ ಕಡೆ ಇಟ್ಟು ವಿಕೃತಿ ಮೆರೆದಿದ್ದಾರೆ. ಸ್ಥಳಕ್ಕೆ ಟೀಳಕವಾಡಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ನಂತರ ಸ್ಥಳದಲ್ಲಿ ತೀವ್ರ ಗಲಾಟೆ, ಗದ್ದಲ ನಡೆದಿದೆ. ಕರ್ನಾಟಕ ಸರ್ಕಾರದ, ಪೊಲೀಸ್ ಇಲಾಖೆಯ ವಾಹನಗಳನ್ನು ಗುರಿಯಾಗಿಟ್ಟುಕೊಂಡು ಪುಂಡರು ಕಲ್ಲು ತೂರಾಟ ನಡೆಸಿದ್ದಾರೆ. ದುರ್ಘಟನೆಯಲ್ಲಿ ಅನೇಕ ಕಾರುಗಳು ಪುಡಿಯಾಗಿವೆ. ಈ ಘಟನೆಯ ನಂತರ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತೇವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.