
ಬೆಳಗಾವಿ , (ಸೆಪ್ಟೆಂಬರ್.17): KPTCL ಕಿರಿಯ ಸಹಾಯಕ ಪರೀಕ್ಷಾ ಅಕ್ರಮ ಪ್ರಕರಣ ಬಗೆದಷ್ಟು ಬಯಲಾಗುತ್ತಿದ್ದು, ಇದೀಗ ಮತ್ತೆ ಮೂವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಈ ಮೂಲಕ ಬಂಧಿತರ ಸಂಖ್ಯೆ 20ಕ್ಕೆ ಏರಿಕೆಯಾಗಿದೆ.
ರಾಜಾಪುರ ಗ್ರಾಮದ ಶ್ರೀಧರ ಲಕ್ಕಪ್ಪ ಕಟ್ಟಿಕಾರ್, ಮೂಡಲಗಿ ತಾಲೂಕಿನ ಬಿರಣಗಡ್ಡಿ ಗ್ರಾಮದ ಬಸವರಾಜ ದುಂದನಟಿ ಹಾಗೂ ಮೂಡಲಗಿ ತಾಲೂಕಿನ ಅರಭಾವಿ ಗ್ರಾಮದ ಅಕ್ಷಯ್ ಭಂಡಾರಿ ಬಂಧಿತ ಆರೋಪಿಗಳು.
ಎಸ್‌ಐ ಕರ್ಮಕಾಂಡ ರೀತಿಯೇ ಕೆಪಿಟಿಸಿಎಲ್ ಪರೀಕ್ಷಾ ಅಕ್ರಮ!
ಬೆಂಗಳೂರಿನಿಂದ ಇಲೆಕ್ಟ್ರಾನಿಕ್ ಡಿವೈಸ್ ತಂದು ಪ್ರಕರಣದ ಕಿಂಗ್‌ಪಿನ್ ಸಂಜು, ಅಕ್ಷಯ್ ಭಂಡಾರಿಗೆ ನೀಡಿದ್ದ. ಬಂಧಿತನಿಂದ ಮೊಬೈಲ್, 50 ಖಾಲಿ ಇಲೆಕ್ಟ್ರಾನಿಕ್ ಡಿವೈಸ್ ಮತ್ತು 18 ಮಾಡಿಪಾಯ್ ಡಿವೈಸ್ ಜಪ್ತಿ ಮಾಡಲಾಗಿದೆ.
ಇನ್ನು ಮೂಡಲಗಿ ತಾಲೂಕಿನ ಬಿರಣಗಡ್ಡಿ ಗ್ರಾಮದ ಬಸವರಾಜ ದುಂದನಟಿ ಬಂಧಿತ ಆರೋಪಿ ಪ್ರಶ್ನೆ ಪತ್ರಿಕೆಯ ಉತ್ತರ ಬಿಡಿಸಿ ಅಕ್ರಮದಲ್ಲಿ ಭಾಗಿಯಾಗಿದ್ದ ಎನ್ನುವ ಮಾಹಿತಿ ತಿಳಿದುಬಂದಿದೆ. ಬಂಧಿತನಿಂದ ಪೊಲೀಸರು ಮೊಬೈಲ್, ಮೋಟಾರ್ ಸೈಕಲ್ ಜಪ್ತಿ ಮಾಡಿದ್ದಾರೆ.
ಮತ್ತೋರ್ವ ರಾಜಾಪುರ ಗ್ರಾಮದ ಶ್ರೀಧರ ಲಕ್ಕಪ್ಪ ಕಟ್ಟಿಕಾರ್ ಎನ್ನುವಾತನನ್ನು, ಅಭ್ಯರ್ಥಿಗಳಿಗೆ ಇಲೆಕ್ಟ್ರಾನಿಕ್ ಡಿವೈಸ್ ಕೊಟ್ಟ ಆರೋಪದ ಮೇಲೆ ಬೆಳಗಾವಿ ಪೊಲೀಸರು ಬಂಧಿಸಿದ್ದು, ಈತನಿಂದ ಒಂದು ಮೊಬೈಲ್ ಜಪ್ತಿ ಮಾಡಿಕೊಂಡಿದ್ದಾರೆ.
ಏನಿದು ಪ್ರಕರಣ?
ಕೆಪಿಟಿಸಿಎಲ್ ಕಿರಿಯ ಸಹಾಯಕರ ನೇಮಕಾತಿಯ ಪರೀಕ್ಷೆ ಆ.7ರಂದು ಗೋಕಾಕ್‌ನಲ್ಲಿ ನಡೆದಿತ್ತು. ಈ ಪರೀಕ್ಷೆಯಲ್ಲಿ ಸಿದ್ದಪ್ಪ ಎಂಬ ವ್ಯಕ್ತಿ ಸ್ಮಾರ್ಟ್ ವಾಚ್ ಬಳಸಿ ಪ್ರಶ್ನೆ ಪತ್ರಿಕೆಯ ಫೋಟೋ ತೆಗೆದು ಹೊರಗೆ ಕಳುಹಿಸಿದ್ದನು. ಈ ವಿಚಾರ ತಿಳಿದ ಅಭ್ಯರ್ಥಿಯೊಬ್ಬರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನ ಅನ್ವಯ ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ ನಡೆಸಿದಾಗ ಅಕ್ರಮ ಎಸಗಿರುವುದು ಖಚಿತವಾಗಿತ್ತು. ಅದರಂತೆ ಅ.22ರಂದು 9 ಮಂದಿಯನ್ನು ಬಂಧಿಸಿದ್ದ ಪೊಲೀಸರು, ಅ.24ರಂದು ಮೂವರನ್ನು ಬಂಧಿಸಿದ್ದರು. ಸೆ.2ರಂದು ಪ್ರಮುಖ ಆರೋಪಿಯನ್ನು ಬಂಧಿಸಿದ್ದ ಪೊಲೀಸರು ಇದೀಗ ಮತ್ತೆ ಮೂವರನ್ನು ಬಂಧಿಸಿದ್ದಾರೆ. ಇದರೊಂದಿಗೆ ಒಟ್ಟು ಬಂಧಿತರ ಸಂಖ್ಯೆ 20ಕ್ಕೇರಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ