ಕುಡಿದು ಗಲಾಟೆ ಮಾಡ್ತಿದ್ದ ಮಗನನ್ನು ಹೊಡೆದು ಮಲಗಿಸಿದ ತಂದೆ: ಬೆಳಗ್ಗೆ ನೋಡಿದ್ರೆ ಸತ್ತೇ ಹೋಗಿದ್ದ

By Sathish Kumar KH  |  First Published Jul 13, 2023, 11:36 PM IST

ಪ್ರತಿನಿತ್ಯ ಕುಡಿದು ಹಣ ಕೊಡುವಂತೆ ಗಲಾಟೆ ಮಾಡುತ್ತಿದ್ದ ಮಗನನ್ನು ತಂದೆ ಹೊಡೆದು ಮಲಗಿಸಿದ್ದಾರೆ. ಆದರೆ, ಬೆಳಗ್ಗೆ ಎದ್ದು ನೋಡಿದರೆ ಮಗ ಸತ್ತೇ ಹೋಗಿದ್ದನು.


ವರದಿ- ಮುಸ್ತಾಕ್‌ ಪಿರ್ಜಾದೆ, ಏಷ್ಯಾನೆಟ್‌ ಸುವರ್ಣ ನ್ಯೂಸ್‌

ಬೆಳಗಾವಿ/ ಚಿಕ್ಕೋಡಿ (ಜು.13): ತಂದೆ, ಅಣ್ಣ ಇಬ್ಬರು ಕೆಲಸ ಮಾಡುತ್ತಿದ್ದರೆ, ಆತ ಮನೆಯಲ್ಲಿದ್ದುಕೊಂಡೇ ಹಣ ನೀಡುವಂತೆ ನಿತ್ಯವೂ ಮನೆಯವರಿಗೆ ಕಾಟ ಕೊಡ್ತಿದ್ದ. ಮದ್ಯ ಕುಡಿಯಲು ಹಣ ಕೇಳಿದ್ದಕ್ಕೆ ತಂದೆ ಮಗನ ಮಧ್ಯೆ ರಾತ್ರಿ ಗಲಾಟೆ ನಡೆದಿದ್ದು ಕೊಲೆಯಲ್ಲಿ ಅಂತ್ಯವಾಗಿದೆ. ಈ ಸ್ಟೋರಿ ನೋಡಿ...

Tap to resize

Latest Videos

ಈ ಫೋಟೋದಲ್ಲಿ ಕಾಣುತ್ತಿರುವ ವ್ಯಕ್ತಿಯ ಹೆಸರು ಸೋಮಯ್ಯ ಹಿರೇಮಠ ವಯಸ್ಸು ಜಸ್ಟ್ 24... ರಾಯಬಾಗ ತಾಲೂಕಿನ ಹಿಡಕಲ್ ನಿವಾಸಿ. ತಂದೆ ತಾಯಿ, ಅಣ್ಣ, ಅಜ್ಜ ಅಜ್ಜಿಯ ಜೊತೆ ವಾಸವಿದ್ದ ಈತ ಆರನೇ ತರಗತಿಯವರೆಗೆ ಓದಿದ್ದ‌. ಯಾವುದೇ ಕೆಲಸ ಮಾಡದೇ ನಿತ್ಯ ಪುಂಡ ಪೋಕರಿಗಳ ಜೊತೆ ಅಡ್ಡಾಡೋದು, ಕುಡಿಯೋದು, ಸ್ಟೈಲ್ ಆಗಿ ಶೋಕಿ ಮಾಡುತ್ತ ಓಡಾಡುತ್ತಿದ್ದನಂತೆ. ಮನೆಯಲ್ಲಿ ತಂದೆ ತಾಯಿ ಅಣ್ಣನ ಬಳಿ ನಿತ್ಯವೂ ಕುಡಿದು ಜಗಳವಾಡುತ್ತಿದ್ದನಷ್ಟೇ ಅಲ್ಲದೇ ಹಣ ನೀಡುವಂತೆ ಪೀಡಿಸುತ್ತಿದ್ದನಂತೆ.

ಶಕ್ತಿ ಯೋಜನೆಗೆ ವೀರೇಂದ್ರ ಹೆಗ್ಗಡೆ ಭಾರಿ ಮೆಚ್ಚುಗೆ: ಧರ್ಮಸ್ಥಳಕ್ಕೆ ಸಿದ್ದರಾಮಯ್ಯಗೆ ಆಹ್ವಾನ

ಅದೇ ರೀತಿ ಜುಲೈ 8ರ ರಾತ್ರಿ ತಂದೆ ಮಹಾಲಿಂಗಯ್ಯ ಹಿರೇಮಠ ಬಳಿ ಹಣ ಮತ್ತು ಬೈಕ್ ಕೀ ನೀಡುವಂತೆ ಜಗಳಕ್ಕಿಳಿದಿದ್ದಾನೆ. ಮನೆಯ ಅಂಗಳದಲ್ಲಿ ತಂದೆಯನ್ನು ಹಿಡಿದು ಎಳೆದಾಡಲು ಶುರು‌ಮಾಡಿದ್ದಾನೆ. ಈ ವೇಳೆ ತಂದೆ- ಮಗ ಕೈ, ಕೈ ಮಿಲಾಯಿಸಿದ್ದಾರೆ‌. ಆಗ ಹಿರಿಯ ಮಗ ಬಸಯ್ಯ ಮಧ್ಯ ಪ್ರವೇಶಿಸಿ ಬಿಡಿಸಲು ಯತ್ನಿಸಿದ್ದಾನೆ. ಈ ವೇಳೆ ರೊಚ್ಚಿಗೆದ್ದ ತಂದೆ ಮಹಾಲಿಂಗಯ್ಯ ಮನೆಯಲ್ಲಿದ್ದ ಬೆತ್ತದಿಂದ ಕಿರಿಯ ಮಗ ಸೋಮಯ್ಯನನ್ನು ಹಿಗ್ಗಾಮುಗ್ಗ ಥಳಿಸಿದ್ದಾನೆ. ಬಳಿಕ ತಂದೆ ಮಹಾಲಿಂಗಯ್ಯ, ಅಣ್ಣ ಬಸಯ್ಯ ಮನೆಯೊಳಗೆ ಹೋಗಿ ಮಲಗಿದ್ದಾರೆ. 

ವೈದ್ಯರನ್ನು ಕರೆತರುವಷ್ಟರಲ್ಲಿ ಅನಾಹುತ: ಇತ್ತ ಗಾಯಗೊಂಡಿದ್ದ ಸೋಮಯ್ಯ ಸಹ ತನ್ನ ರೂಮ್‌ಗೆ ಹೋಗಿ ಮಲಗಿದ್ದಾನೆ. ಬೆಳಗ್ಗೆ ಎಂಟು ಗಂಟೆಯಾದರೂ ಏಳದ ಹಿನ್ನೆಲೆ ಸ್ಥಳೀಯ ವೈದ್ಯರನ್ನು ಸಂಪರ್ಕಿಸಲು ಯತ್ನಿಸಿದ್ದಾರೆ. ವೈದ್ಯರು ಆಸ್ಪತ್ರೆಯಲ್ಲಿ ಇಲ್ಲದಿದ್ದಾಗ ಅಲ್ಲಿದ್ದ ಕಾಂಪೌಂಡರ್‌ನನ್ನ ಕರೆದುಕೊಂಡು ಹೋಗಿದ್ದಾರೆ. ಆಗ ಕಾಂಪೌಂಡರ್ ಹೋಗುಷ್ಟರಲ್ಲಿ ಮನೆಯಲ್ಲಿ ಜನ ಜಮಾವಣೆಗೊಂಡಿದ್ದರಂತೆ. ಅಷ್ಟೊತ್ತಿಗಾಗಲೇ ಆತ ಮೃತಪಟ್ಟಿದ್ದಾನೆ ಎಂದು ಕಾಂಪೌಂಡರ್‌ಗೂ ಗೊತ್ತಾಗಿದೆ. ಹಣೆ ಮತ್ತು ಕಾಲಿನ ಮೇಲೆ ರಕ್ತ ಹೆಪ್ಪುಗಟ್ಟಿ ಗಾಯವಾಗಿದ್ದನ್ನು ನೋಡಿ ಏನಾಗಿದೆ ಅಂತಾ ವಿಚಾರಿಸಿದಾಗ ರಾತ್ರಿ ಕುಡಿದು ಗಲಾಟೆ ಮಾಡ್ತಿದ್ದ ಬೆತ್ತದಿಂದ ಬಡೆದಿದ್ವಿ. ಬಳಿಕ ಆತ ಉಣ್ಣೆಪುಡಿಯನ್ನು ಕುಡಿದಿದ್ದಾನೆ ಏನೋ ಅಂತಾ ಹೇಳಿದ್ದಾರೆ. ಆಗ ಕಾಂಪೌಂಡರ್ ಇದು ಪೊಲೀಸ್ ಕೇಸ್ ಆಗುತ್ತೆ ಅಂತಾ ಸ್ಥಳದಿಂದ ಕಾಲ್ಕಿತ್ತಿದ್ದಾನೆ.

ಹೊಡೆದು ಮಲಗಿಸಿದ ಮಗ ಬೆಳಗ್ಗೆ ಸಾವನ್ನಪ್ಪಿದ್ದ:  ಇನ್ನು ಘಟನೆ ನಡೆದ ದಿನ ಮನೆಯಲ್ಲಿದ್ದ ಅಜ್ಜ, ಅಜ್ಜಿ ಮಲಗಿದ್ರೆ, ಸೋಮಯ್ಯನ ತಾಯಿ ಬಾಗಲಕೋಟೆಯ ತನ್ನ ತವರು ಮನೆಗೆ ಹೋಗಿದ್ದಳು. ಮಾರನೇ ದಿನ ಬೆಳಗ್ಗೆ ಮನೆಗೆ ಬಂದಾಗ ಕಿರಿಯ ಮಗ ಸೋಮಯ್ಯ ಮೃತಪಟ್ಟಿದ್ದು ಗೊತ್ತಾಗಿದೆ. ಈ ವೇಳೆ ಗಂಡ ಮಹಾಲಿಂಗಯ್ಯ, ಹಿರಿಯ ಮಗ ಬಸಯ್ಯ ನಡೆದ ಘಟನೆ ವಿವರಿಸಿದ್ದಾರೆ‌. ಬಳಿಕ ಕಾಂಪೌಂಡರ್ ಕರೆಯಿಸಿದಾಗ ಆತ ಮೃತಪಟ್ಟಿದ್ದು ಗೊತ್ತಾಗಿದೆ.‌ ಇದೇ ವೇಳೆ ಸ್ಥಳೀಯರು, ಸಂಬಂಧಿಗಳು ಜಮಾವಣೆಗೊಂಡಿದ್ದಾರೆ. ಆಗ ಮಗ ಉಣ್ಣೆಪುಡಿಯನ್ನು ಸಾರಾಯಿಯಲ್ಲಿ ಬೆರೆಸಿ ಕುಡಿದು ಸತ್ತಿದ್ದಾನೆ ಅಂತಾ ಹೇಳಿ ಮನೆಯ ಹಿಂಬದಿ ಇರುವ ತಮ್ಮ ಗದ್ದೆಯಲ್ಲಿ ಅಗ್ನಿಸ್ಪರ್ಶ ಮಾಡಿ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. 

ಮಣ್ಣು ಮಾಡುವ ಪದ್ದತಿಯಿದ್ದರೂ ಸುಟ್ಟರು:  ಸಾಮಾನ್ಯವಾಗಿ ವೀರಶೈವ ಲಿಂಗಾಯತ ಸಮುದಾಯದಲ್ಲಿ ಯಾರಾದರೂ ಮೃತಪಟ್ಟರೇ ಮಣ್ಣು ಮಾಡಿ ಅಂತ್ಯಕ್ರಿಯೆ ಮಾಡ್ತಾರೆ. ಆದರೆ ಇಲ್ಲಿ ತರಾತುರಿಯಲ್ಲಿ ಅಗ್ನಿಸ್ಪರ್ಶ ಮಾಡಿದ್ದು ಸ್ಥಳೀಯರಲ್ಲಿ ಅನುಮಾನ ಉಂಟು ಮಾಡಿದೆ. ಈ ಬಗ್ಗೆ ರಾಯಬಾಗ ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ತೆರಳಿ ವಿಚಾರಣೆ ನಡೆಸಿದಾಗ ವಿಷಯ ಬೆಳಕಿಗೆ ಬಂದಿದ್ದು, ಕಾಂಪೌಂಡರ್‌ನಿಂದ ದೂರು ಪಡೆದು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಗಿಳಿದಿದ್ದಾರೆ. ಅಂತ್ಯಕ್ರಿಯೆ ಮಾಡಿದ ಸ್ಥಳಕ್ಕೆ ಎಫ್‌ಎಸ್‌ಎಲ್ ತಂಡ ಕರೆಯಿಸಿ ಚಿತಾಭಸ್ಮ, ಮೂಳೆ ಸಂಗ್ರಹಿಸಿದ್ದಾರೆ.

ರೈತರ ಆತ್ಮಹತ್ಯೆಯಲ್ಲಿ ಮಹಾರಾಷ್ಟ್ರ ಫಸ್ಟ್‌, ಕರ್ನಾಟಕದ ಸ್ಥಾನವೆಷ್ಟು ಗೊತ್ತಾ?

ಮೊಮ್ಮಗನ ಕ್ರೌರ್ಯ ಬಿಚ್ಚಿಟ್ಟ ಅಜ್ಜಿ: ಕೊಲೆ ಆರೋಪದಡಿ ಸೋಮಯ್ಯ ತಂದೆ ಮಹಾಲಿಂಗಯ್ಯ ಹಿರೇಮಠ, ಅಣ್ಣ  ಬಸಯ್ಯ ಹಿರೇಮಠ ಬಂಧಿಸಿ ಜೈಲಿಗಟ್ಟಿದ್ದಾರೆ. ಕಿರಿಯ ಮಗ ಸೋಮಯ್ಯನನ್ನು ಅವರ ತಂದೆ ಹೊಡೆದದ್ದು ನಿಜ. ಅದ್ರೆ ಆತ ಸಾರಾಯಿಯಲ್ಲಿ ಉಣ್ಣೆಪುಡಿ ಬೆರೆಸಿ ಮೃತಪಟ್ಟಿದ್ದಾನೆ ಎಂದಿರುವ ತಾಯಿ ಸುರೇಖಾ ಹಿರೇಮಠ ಮೃತ ಮಗ ಮಾಡುತ್ತಿದ್ದ ಕ್ರೌರ್ಯವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾಳೆ. ಇತ್ತ ಮನೆಯಲ್ಲಿದ್ದ ಅಜ್ಜಿ ನೀಲವ್ವ ಸಹ ಮೃತ ಕಿರಿಯ ಮೊಮ್ಮಗನ ಕ್ರೌರ್ಯ ಬಿಚ್ಚಿಟ್ಟು ಕಣ್ಣೀರಿಟ್ಟಿದ್ದಾಳೆ.

ಮೃತನ ತಾಯಿ ಹೇಳುವ ಪ್ರಕಾರ ತಂದೆಯಿಂದ ಹಲ್ಲೆಯಾದ ಬಳಿಕ ಆತ ಮದ್ಯದಲ್ಲಿ ಉಣ್ಣೆಪುಡಿ ಬೆರೆಸಿ ಸತ್ತಿದ್ದಾನೆ ಅಂತಿದ್ದಾರೆ. ಹಾಗಿದ್ರೆ ಪೊಲೀಸರಿಗೆ‌ ಮಾಹಿತಿಯಾದರೂ ನೀಡಬೇಕಿತ್ತು. ಪೊಲೀಸರಿಗೂ ತಿಳಿಸದೇ ಏಕಾಏಕಿ ಅಂತ್ಯಕ್ರಿಯೆ ಮಾಡಿದ್ದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ‌. ಸದ್ಯ ಕೊಲೆ ಪ್ರಕರಣ ದಾಖಲಿಸಿಕೊಂಡು ರಾಯಬಾಗ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

click me!