
ಬೆಂಗಳೂರು(ಡಿ.22): ಚಿತ್ರರಂಗದಲ್ಲಿನ ಡ್ರಗ್ಸ್ ಜಾಲದ ನಂಟು ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಮತ್ತೊಬ್ಬ ಪೆಡ್ಲರ್‌ವೊಬ್ಬನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಡಾ. ರಾಜ್‌ಕುಮಾರ್ ರಸ್ತೆ ಬ್ರಿಗೇಡ್ ಗೇಟ್ ಅಪಾರ್ಟ್‌ಮೆಂಟ್ ನಿವಾಸಿ ವಿನಯ್‌ಕುಮಾರ್ ಬಂಧನದೊಂದಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರ ಸಂಖ್ಯೆ 16ಕ್ಕೆ ಏರಿಕೆಯಾಗಿದೆ.
ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ಡಿ.28ರ ತನಕ ವಶಕ್ಕೆ ಪಡೆಯಲಾಗಿದೆ ಎಂದು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಹೇಳಿದ್ದಾರೆ. ಮೂಲತಃ ಬಳ್ಳಾರಿ ಜಿಲ್ಲೆಯ ವಿನಯ್‌ಕುಮಾರ್ ಕೆಲ ವರ್ಷಗಳಿಂದ ನಗರದಲ್ಲಿ ನೆಲೆಸಿದ್ದ. ಚಿತ್ರರಂಗದಲ್ಲಿನ ಡ್ರಗ್ಸ್ ಜಾಲದಲ್ಲಿ ಸಿಸಿಬಿ ತಂಡ ಆರೋಪಿ ಬಂಧನಕ್ಕೆ ಬಲೆ ಬೀಸುತ್ತಿದ್ದಂತೆ ಗೋವಾ ಮತ್ತು ಕೇರಳಕ್ಕೆ ಹೋಗಿ ತಲೆಮರೆಸಿಕೊಂಡಿದ್ದ. ಹೊರ ರಾಜ್ಯಗಳಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಭಾನುವಾರ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಸ್ಯಾಂಡಲ್‌ವುಡ್ ನಶೆ ನಂಟು; ಸಿಸಿಬಿ ಫುಲ್ ಸೈಲೆಂಟ್; ಆದಿತ್ಯ ಆಳ್ವ ತನಿಖೆ ಎಲ್ಲಿಗೆ ಬಂತು?
ಆರೋಪಿ ತುಮಕೂರಿನ ಕುಣಿಗಲ್‌ನಲ್ಲಿ ಕಲ್ಲು ಕ್ವಾರೆ ನಡೆಸುತ್ತಿದ್ದ ವಿನಯ್, ಫೇಜ್-3 ಪಾರ್ಟಿ ಆಯೋಜಕ ದೆಹಲಿ ಮೂಲದ ಆರೋಪಿ ವೈಭವ್ ಜೈನ್ ಆಪ್ತನಾಗಿದ್ದ. ರೆಸಾರ್ಟ್, ಪಂಚತಾರಾ ಹೋಟೆಲ್ ಮತ್ತು ತೋಟದ ಮನೆಗಳಲ್ಲಿ ವೈಭವ್ ಜೈನ್ ಆಯೋಜನೆ ಮಾಡುತ್ತಿದ್ದ ಪಾರ್ಟಿಗಳಿಗೆ ವಿನಯ್‌ಕುಮಾರ್ ವಿದೇಶಿ ಮಾದಕ ದ್ರವ್ಯ ಪೂರೈಕೆ ಮಾಡುತ್ತಿದ್ದ. ಚಿತ್ರರಂಗದಲ್ಲಿನ ಡ್ರಗ್ಸ್ ಪ್ರಕರಣದಲ್ಲಿ ನಟಿಯರಾದ ಸಂಜನಾ ಗಲ್ರಾಣಿ, ರಾಗಿಣಿ ದ್ವಿವೇದಿ ಹಾಗೂ ಸಾರಿಗೆ ಇಲಾಖೆ ಸಿಬ್ಬಂದಿ ರವಿಶಂಕರ್, ಸಂಜನಾ ಸ್ನೇಹಿತ ರಾಹುಲ್ ತೋನ್ಸೆ, ಪೇಜ್-3 ಪಾರ್ಟಿ ಆಯೋಜಕ ವೀರೇನ್ ಖನ್ನಾ ಹಾಗೂ ಮೂವರು ನೈಜೀರಿಯಾ ಪ್ರಜೆಗಳು ಸೇರಿ 15 ಮಂದಿಯನ್ನು ಬಂಧಿಸಿದ್ದರು.
ಇತ್ತೀಚೆಗೆ ಸಂಜನಾ ಗಲ್ರಾನಿಗೆ ನ್ಯಾಯಾಲಯದಿಂದ ಜಾಮೀನು ದೊರೆತಿತ್ತು. ಪ್ರಕರಣದಲ್ಲಿ ವಿನಯ್ ಕುಮಾರ್ ಹಾಗೂ ಮಾಜಿ ಸಚಿವ ದಿ.ಜೀವರಾಜ್ ಆಳ್ವಾ ಅವರ ಪುತ್ರ ಆದಿತ್ಯ, ಡ್ರಗ್ಸ್ ಕೇಸಿನ ಕಿಂಗ್‌ಪಿನ್ ಭಟ್ಕಳದ ಮಹಮ್ಮದ್ ಮೆಸ್ಸಿ, ರಾಗಿಣಿ ಗೆಳೆಯ ಶಿವಪ್ರಕಾಶ್, ಪ್ರಶಾಂತ್ ರಾಜ್, ಅಭಿಸ್ವಾಮಿ ಎಂಬುವರು ತಲೆಮರೆಸಿಕೊಂಡಿದ್ದಾರೆ. ಇವರ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ