ರಾಬರ್ಟ್‌ ಚಿತ್ರ ನಿರ್ಮಾಪಕನಿಗಲ್ಲ, ಸಹೋದರನ ಹತ್ಯೆಗೆ ಸ್ಕೆಚ್‌..!

By Kannadaprabha NewsFirst Published Dec 22, 2020, 7:24 AM IST
Highlights

ಚಿತ್ರ ನಿರ್ಮಾಪಕ ದೊಡ್ಡಪ್ಪನ ಮಗನ ಕೊಲೆಗೆ ಬಾಂಬೆ ರವಿ ಪ್ಲಾನ್‌| ಪೊಲೀಸ್‌ ತನಿಖೇಲಿ ವಿಷಯ ಬಯಲು| ಸುಪಾರಿ ಪಡೆದವರಿಗೆ ‘ಯಾರನ್ನು ತಾವು ಕೊಲೆ ಮಾಡಲು ಬಂದಿದ್ದೇವೆ’ ಎಂಬ ವಿಷಯವೇ ಕೊನೆ ವರೆಗೂ ಗೊತ್ತಿರಲಿಲ್ಲ| ಗೊಂದಲ ಹೇಳಿಕೆ ನೀಡುತ್ತಿದ್ದ ಬಂಧಿತ ಗ್ಯಾಂಗ್‌| 

ಬೆಂಗಳೂರು(ಡಿ.22): ಕುಖ್ಯಾತ ರೌಡಿಶೀಟರ್‌ ಬಾಂಬೆ ರವಿ ಆ್ಯಂಡ್‌ ಗ್ಯಾಂಗ್‌ ಸ್ಕೆಚ್‌ ಹಾಕಿದ್ದು ನಟ ದರ್ಶನ್‌ ಅಭಿನಯದ ‘ರಾಬರ್ಟ್‌’ ಚಿತ್ರದ ನಿರ್ಮಾಪಕ ಉಮಾಪತಿ ಶ್ರೀನಿವಾಸ್‌ ಅವರಿಗೆ ಅಲ್ಲ, ಬದಲಿಗೆ ಸ್ಕೆಚ್‌ ನಡೆದಿದ್ದು, ನಿರ್ಮಾಪಕರ ಸಹೋದರನಿಗೆ ಎಂಬ ವಿಷಯ ಜಯನಗರ ಪೊಲೀಸರ ತನಿಖೆ ವೇಳೆ ಬೆಳಕಿಗೆ ಬಂದಿದೆ.

ಬಾಂಬೆ ರವಿ ನಿರ್ಮಾಪಕನ ಸಹೋದರ ದೀಪಕ್‌ ಹತ್ಯೆಗೆ ಸಂಚು ರೂಪಿಸಿದ್ದ. ಬಂಧಿತ ಆರೋಪಿಗಳು ಗೊಂದಲ ಹೇಳಿಕೆ ನೀಡುವ ಮೂಲಕ ನಿರ್ಮಾಪಕರ ಹೆಸರನ್ನು ಮೊದಲಿಗೆ ಹೇಳಿದ್ದರು. ತನಿಖೆ ವೇಳೆ ದೀಪಕ್‌ ಹತ್ಯೆಗೆ ಸ್ಕೆಚ್‌ ನಡೆದಿತ್ತು ಎಂದು ಬಾಯ್ಬಿಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ದೀಪಕ್‌, ನಿರ್ಮಾಪಕ ಶ್ರೀನಿವಾಸ್‌ ಅವರ ದೊಡ್ಡಪ್ಪನ ಪುತ್ರ. ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ ವ್ಯವಹಾರ ಹೊಂದಿದ್ದಾರೆ. ಹಳೇ ದ್ವೇಷದ ಹಿನ್ನೆಲೆಯಲ್ಲಿ ಆರೋಪಿಗಳು ದೀಪಕ್‌ ಅವರ ಹತ್ಯೆಗೆ ಸಂಚು ರೂಪಿಸಿದ್ದರು ಎನ್ನಲಾಗುತ್ತಿದೆ. ಆದರೆ ಆರೋಪಿಗಳು ಗೊಂದಲದ ಹೇಳಿಕೆ ನೀಡುತ್ತಿದ್ದಾರೆ. ಬಾಂಬೆ ರವಿ ಅಣತಿಯಂತೆ ನಡೆದುಕೊಂಡಿದ್ದಾರೆ. ಸ್ಥಳಕ್ಕೆ ಬರುವ ತನಕ ಬಂಧಿತರಿಗೆ ತಲೆಮರೆಸಿಕೊಂಡಿರುವ ಬಾಂಬೆ ರವಿ ಯಾರನ್ನು ಹತ್ಯೆ ಮಾಡಬೇಕು ಎಂಬ ಗುಟ್ಟು ಬಿಟ್ಟು ಕೊಟ್ಟಿರಲಿಲ್ಲ. ಬಾಂಬೆ ರವಿ ಬಂಧನದ ಬಳಿಕ ಸತ್ಯ ಹೊರ ಬರಲಿದೆ ಎಂದು ಪೊಲೀಸ್‌ ಅಧಿಕಾರಿಗಳು ಮಾಹಿತಿ ನೀಡಿದರು.

‘ರಾಬರ್ಟ್‌’ ನಿರ್ಮಾಪಕ ಉಮಾಪತಿ ಹತ್ಯೆಗೆ ಸ್ಕೆಚ್‌

ಆಯುಕ್ತರ ಭೇಟಿ:

ತಮ್ಮ ಹತ್ಯೆಗೆ ಸಂಚು ಎಂಬ ಸುದ್ದಿ ಹೊರ ಬರುತ್ತಿದ್ದಂತೆ ನಿರ್ಮಾಪಕ ಉಮಾಪತಿ ಶ್ರೀನಿವಾಸ್‌ ಅವರು ನಗರ ಪೊಲೀಸ್‌ ಆಯುಕ್ತ ಕಮಲ್‌ಪಂತ್‌ ಹಾಗೂ ದಕ್ಷಿಣ ವಿಭಾಗದ ಡಿಸಿಪಿ ಅವರನ್ನು ಸೋಮವಾರ ಭೇಟಿಯಾದರು.
ಈ ಸಂಬಂಧ ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ನಿರ್ಮಾಪಕ ಉಮಾಪತಿ ಅವರು ಅನಗತ್ಯವಾಗಿ ಪ್ರಕರಣದಲ್ಲಿ ನನ್ನ ಹೆಸರು ತಳುಕು ಹಾಕಿಕೊಂಡಿದೆ. ನನಗೂ ಬಾಂಬೆ ರವಿ ಎಂಬ ವ್ಯಕ್ತಿ ಸಂಬಂಧವೇ ಇಲ್ಲ. ಈ ವಿಚಾರದಲ್ಲಿ ಗೊಂದಲವಾಗಿದ್ದು, ಪೊಲೀಸರನ್ನು ಭೇಟಿಯಾಗಿ ಮಾಹಿತಿ ಪಡೆದಿದ್ದೇನೆ. ಎಲ್ಲಿಯೂ ಕೂಡ ನನ್ನ ಹೆಸರಿಲ್ಲ ಎಂದು ಆಯುಕ್ತರೇ ಹೇಳಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಏಳು ಮಂದಿ ಆರೋಪಿಗಳು ಜಯನಗರ ನ್ಯಾಷನಲ್‌ ಕಾಲೇಜು ಸಮೀಪ ವಾಹನದಲ್ಲಿ ಕುಳಿತು ಹತ್ಯೆಗೆ ಸಂಚು ರೂಪಿಸಿದ್ದರು. ನಿರ್ಮಾಪಕರ ಸಹೋದರನ ಜತೆಗೆ ಆರೋಪಿಗಳ ಸ್ಕೆಚ್‌ನಲ್ಲಿ ಕುಖ್ಯಾತ ರೌಡಿಶೀಟರ್‌ ಸೈಕಲ್‌ ರವಿ ಕೂಡ ಇದ್ದ. ಈ ಮಾಹಿತಿ ತಿಳಿದ ಜಯನಗರ ಠಾಣೆ ಇನ್‌ಸ್ಪೆಕ್ಟರ್‌ ಎಚ್‌.ವಿ.ಸುಧೀರ್‌ ನೇತೃತ್ವದ ತಂಡ ಭಾನುವಾರ ಬೆಳಗಿನ ಜಾವ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿತ್ತು.
 

click me!