
ಸೌತ್ ಇಂಡಿಯಾದ ಸ್ಟಾರ್ ನಟಿ ರಾಕುಲ್ ಪ್ರೀತ್ ಸಿಂಗ್ ಅವರ ಕಿರಿಯ ಸಹೋದರ ನಟ ಅಮನ್ ಸಿಂಗ್ ಮಾದಕ ದ್ರವ್ಯ ಕೇಸ್ ನಲ್ಲಿ ಅರೆಸ್ಟ್ ಆಗಿದ್ದಾರೆ. ಜುಲೈ 15ರಂದು ಸಂಜೆ ಸುದ್ದಿಗೋಷ್ಠಿ ನಡೆಸಿದ ಹೈದರಾಬಾದ್ ಪೊಲೀಸರು ಅಮನ್ ಪ್ರೀತ್ ಸಿಂಗ್ ಬಂಧನದ ಬಗ್ಗೆ ಖಚಿತ ಪಡಿಸಿದ್ದು, ಕೇಸ್ ನಲ್ಲಿ ಒಟ್ಟು 13 ಮಂದಿಯನ್ನು ವಿಚಾರಣೆ ನಡೆಸಿರುವುದಾಗಿ ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಬಂಧಿತರಿಂದ ಹೈದರಾಬಾದ್ ಪೊಲೀಸರು 199 ಗ್ರಾಂ ಮಾದಕ ವಸ್ತು, 35 ಲಕ್ಷ ರೂ ನಗದು, 2 ಬೈಕ್, 2 ಪಾಸ್ಪೋರ್ಟ್ ಮತ್ತು 10 ಮೊಬೈಲ್ ಫೋನ್ಗಳನ್ನು ವಶಕ್ಕೆ ಪಡೆಯಲಾಗಿದೆ. ಪ್ರಕರಣದ ಕೆಲ ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ. ಶೀಘ್ರವೇ ಅವರನ್ನು ಪತ್ತೆ ಮಾಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಡ್ರಗ್ ಸೇವನೆಯಾಗಿದೆ ಎಂಬ ಆರೋಪದಲ್ಲಿ ಬಂಧಿತರಾದ 13 ಜನರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದರಲ್ಲಿ ಅಮನ್ ಸಹಿತ ಹಲವು ಮಂದಿ ಮಾದಕ ವಸ್ತು ಸೇವಿಸಿರುವುದು ದೃಢಪಟ್ಟಿದೆ.
ಅಮನ್ ಪ್ರೀತ್ ಸಿಂಗ್ ಡ್ರಗ್ ಎಲ್ಲಿಂದ ತೆಗೆದುಕೊಂಡರು. ಯಾರ ಜೊತೆಗೆ ನಂಟು ಹೊಂದಿದ್ದಾರೆ. ಎಂಬುದು ತನಿಖೆಯಲ್ಲಿ ಬಯಲಾಗಲಿದೆ. ಭಾರತೀಯರು ಮಾತ್ರವಲ್ಲದೇ ಕೆಲವು ನೈಜೀರಿಯನ್ ಪ್ರಜೆಗಳು ಕೂಡ ಈ ಡ್ರಗ್ ಜಾಲದಲ್ಲಿ ಭಾಗಿಯಾಗಿರುವ ಬಗ್ಗೆ ಸುಳಿವು ಸಿಕ್ಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಹಿಂದೆ 2021ರಲ್ಲಿ ನಟಿ ರಾಕುಲ್ ಪ್ರೀತ್ ಸಿಂಗ್ ಹೆಸರು ಕೂಡ ಡ್ರಗ್ಸ್ ಪ್ರಕರಣದಲ್ಲಿ ತಳುಕು ಹಾಕಿಕೊಂಡಿತ್ತು. ಡ್ರಗ್ಸ್ ಕೇಸ್ನಲ್ಲಿ ಅಕ್ರಮ ಹಣ ವರ್ಗಾವಣೆ ಆಗಿದ್ದಕ್ಕೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ನಟಿಯನ್ನು ವಿಚಾರಣೆ ನಡೆಸಿದ್ದರು. ಇದೀಗ ಅನಗತ್ಯವಾಗಿ ರಕುಲ್ ಹೆಸರು ಈ ಕೇಸ್ ನಲ್ಲಿ ತರುವುದು ಬೇಡ ಎಂದು ಪೊಲೀಸ್ ಅಧಿಕಾರಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ನಟಿ ರಾಕುಲ್ ಪ್ರೀತ್ ಸಿಂಗ್ ಕನ್ನಡದಲ್ಲಿ ಗಿಲ್ಲಿ ಎಂಬ ಚಿತ್ರದಲ್ಲಿ ನಟಿಸಿದ್ದರು. 2019ರಲ್ಲಿ ಈ ಚಿತ್ರ ಬಿಡುಗಡೆಯಾಗಿತ್ತು. ಇನ್ನು ಬಂಧಿತ ಅಮನ್ ಸಿಂಗ್ ತೆಲುಗಿನಲ್ಲಿ ವೈಕುಂಠ ಬೋನು ನಿರ್ದೇಶನದ ನಿನ್ನೇ ಪೆಲ್ಲದಾತಾ (2020) ಚಿತ್ರದ ಮೂಲಕ ಬಣ್ಣದ ಬದುಕಿಗೆ ನಾಯಕನಾಗಿ ಪದಾರ್ಪಣೆ ಮಾಡಿದ್ದರು. ನಂತರ ಪ್ರೊಡಕ್ಷನ್ ನಂ. 1 (2020) ನಂತಹ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. 2020ರಲ್ಲಿ ಬಿಡುಗಡೆಯಾದ ಸಿನೆಮಾದಲ್ಲಿ ಬಾಲಿವುಡ್ ಚೊಚ್ಚಲ ಚಿತ್ರ ರಾಮರಾಜ್ಯವೂ ಸೇರಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ