ವಿಶೇಷ ಸೌಲಭ್ಯ ಪ್ರಕರಣದ ಹಿನ್ನೆಲೆಯಲ್ಲಿ ನಟ ದರ್ಶನ್ ಸೇರಿ ನಾಲ್ವರನ್ನು ಬೇರೆ ಜೈಲಿಗೆ ಸ್ಥಳಾಂತರಿಸುವ ಬಗ್ಗೆ ಚಿಂತನೆ ನಡೆದಿದೆ. ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸುವ ಸಾಧ್ಯತೆ ಇದೆ. ನ್ಯಾಯಾಲಯದ ಆದೇಶ ಪಡೆದು ಸ್ಥಳಾಂತರ ಮಾಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರು (ಆ.27): ವಿಶೇಷ ಸೌಲಭ್ಯ ಪ್ರಕರಣ ಹಿನ್ನಲೆಯಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ನಟ ದರ್ಶನ್ ಸೇರಿ ನಾಲ್ವರನ್ನು ಬೇರೆಡೆಗೆ ಸ್ಥಳಾಂತರ ಕುರಿತು ಅಂತಿಮ ಹಂತದ ಮಾತುಕತೆಗಳು ನಡೆದಿದ್ದು, ದರ್ಶನ್ ನನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲು ಚಿಂತನೆ ನಡೆಸಲಾಗಿದೆ. ಪ್ರಕರಣದಲ್ಲಿರುವವರನ್ನು ವಿವಿಧ ಜೈಲುಗಳಿಗೆ ಶಿಫ್ಟ್ ಮಾಡಲು ನಿನ್ನೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ನ್ಯಾಯಾಲಯದ ಆದೇಶ ಪಡೆದು ಸ್ಥಳಾಂತರ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ಅವರಿಗೆ ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂಬಂಧ ಬೆಳಿಗ್ಗೆ ಸಿಎಂ ಸಿದ್ದರಾಮಯ್ಯಗೆ ಗೃಹ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಹೀಗಾಗಿ ಕೋರ್ಟ್ ನಿಂದ ಒಪ್ಪಿಗೆ ಸಿಗೋದೊಂದೆ ಬಾಕಿಯಿದೆ.
ದರ್ಶನ್ ಅತ್ಯಾಚಾರಿಯೆಂದ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ, ರೊಚ್ಚಿಗೆದ್ದ ಅಭಿಮಾನಿಗಳು
ದರ್ಶನ್ ಜತೆ ಕಾಣಿಸಿಕೊಂಡಿರುವ ರೌಡಿಗಳಾದ ನಾಗರಾಜ ಅಲಿಯಾಸ್ ವಿಲ್ಸನ್ ಗಾರ್ಡನ್ ನಾಗ, ಶ್ರೀನಿವಾಸ ಅಲಿಯಾಸ್ ಕುಳ್ಳ ಸೀನ, ಧರ್ಮ ಹಾಗೂ ದರ್ಶನ್ ಆಪ್ತ ನಾಗರಾಜ್ ನನ್ನು ಕೂಡ ಸ್ಥಳಾಂತರಕ್ಕೆ ಯೋಚಿಸಲಾಗಿದೆ.
ಪರಪ್ಪನ ಅಗ್ರಹಾರ ಜೈಲಿಂದ ದರ್ಶನ್ ಸೇರಿ ನಾಲ್ವರನ್ನು ಕಮಾನು ಎತ್ತುವ (ಬೇರೆ ಜೈಲಿಗೆ ಕೈದಿಗಳ ಸ್ಥಳಾಂತರ) ಸಂಬಂಧ ನ್ಯಾಯಾಲಯದ ಅನುಮತಿ ಪಡೆಯಬೇಕಿರುವ ಕಾರಣ ಕಾನೂನು ತಜ್ಞರ ಜತೆ ಸಮಾಲೋಚಿಸಲಾಗಿತ್ತು. ಈ ಬಗ್ಗೆ ಹಿರಿಯ ಅಧಿಕಾರಿಗಳು ಮಂಗಳವಾರ ಮತ್ತೊಂದು ಸುತ್ತಿನ ಸಭೆ ನಡೆಸಿ ಬಳಿಕ ಈಗ ಸಿಎಂ ಅವರಿಗೆ ಮಾಹಿತಿ ನೀಡಿದ್ದಾರೆ.
ರೌಡಿಗಳ ದೋಸ್ತಿಯಾದ ದರ್ಶನ್‌ಗೆ, ಕಬಾಬ್, ಬಿರಿಯಾನಿ ಸಪ್ಲೈ? ಬಯಲಾಯ್ತು ಜೈಲಾಧಿಕಾರಿಗಳ ಕಳ್ಳಾಟ!
ನ್ಯಾಯಾಲಯಕ್ಕೆ ಕೈದಿಗಳನ್ನು ಕಾಮಾನು ಎತ್ತಲು ನಿಖರ ಕಾರಣಗಳನ್ನು ತಿಳಿಸಬೇಕಿದೆ. ಈ ಹಿಂದೆ ವಿಲ್ಸನ್ ಗಾರ್ಡನ್ ನಾಗರಾಜನನ್ನು ಬೇರೆ ಜೈಲಿಗೆ ಸ್ಥಳಾಂತರಿಸಿದ್ದ ಆದೇಶವನ್ನು ನ್ಯಾಯಾಲಯವು ರದ್ದುಪಡಿಸಿತ್ತು. ಹೀಗಾಗಿ ದರ್ಶನ್ ಪ್ರಕರಣದಲ್ಲಿ ಆ ತಪ್ಪು ಮರುಕಳಿಸದಂತೆ ಮುನ್ನಚ್ಚರಿಕೆ ವಹಿಸಲಾಗಿದೆ. ಇದೇ ವಿಚಾರವಾಗಿ ಸೋಮವಾರ ದಿನವೀಡಿ ಗೃಹ ಸಚಿವರು ಸೇರಿದಂತೆ ಉನ್ನತ ಮಟ್ಟದಲ್ಲಿ ಚರ್ಚೆ ನಡೆಯಿತು. ಕಾನೂನು ಪರಿಣಿತರ ಅಭಿಪ್ರಾಯ ಪಡೆದು ಈಗ ನ್ಯಾಯಾಲಯದ ಆದೇಶಕ್ಕೆ ಕಾಯಲಾಗುತ್ತಿದೆ.
ಸಿಸಿಬಿ ದಾಳಿ ಮಾಹಿತಿ ಸೋರಿಕೆ ವಿಚಾರಣೆ ನಡೆಸಿ ವರದಿ ಸಲ್ಲಿಸಲು ಸೂಚನೆ:
ದರ್ಶನ್ ವಿಶೇಷ ಸೌಲಭ್ಯ ಪ್ರಕರಣದ ಬೆನ್ನಲ್ಲೇ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮೇಲಿನ ದಾಳಿ ಮಾಹಿತಿ ಸೋರಿಕೆ ಬಗ್ಗೆ ಆಂತರಿಕ ಮಟ್ಟದ ವಿಚಾರಣೆ ನಡೆಸಿ ವರದಿ ಸಲ್ಲಿಸುವಂತೆ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಅವರು ಸಿಸಿಬಿಗೆ ಸೂಚಿಸಿದ್ದಾರೆ.
ಅಕ್ರಮ ಚಟುವಟಿಕೆಗಳ ಮಾಹಿತಿ ಹಿನ್ನಲೆಯಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮೇಲೆ ಸಿಸಿಬಿ ಪೊಲೀಸರು ಶನಿವಾರ ನಸುಕಿನಲ್ಲಿ ದಿಢೀರ್ ದಾಳಿ ನಡೆಸಿದ್ದರು. ಆದರೆ ದಾಳಿ ವೇಳೆ ಮೊಬೈಲ್ ಹಾಗೂ ಡ್ರಗ್ಸ್ ಸೇರಿದಂತೆ ಯಾವುದೇ ಕಾನೂನುಬಾಹಿರ ಕೃತ್ಯಗಳ ಕುರುಹುಗಳು ಪತ್ತೆಯಾಗಿರಲಿಲ್ಲ. ಇದಾದ ಮರುದಿನವೇ ಜೈಲಿನಲ್ಲಿ ದರ್ಶನ್ ರವರಿಗೆ ಲಭಿಸಿದ್ದ ಮೊಬೈಲ್, ಸಿಗರೇಟ್, ಕುರ್ಚಿ ಹಾಗೂ ಕಾಫಿ ಮಗ್‌ಗಳು ಕುರಿತು ಪೋಟೋಗಳು ಹಾಗೂ ವಿಡಿಯೋಗಳು ಬಹಿರಂಗವಾಗಿ ಸಿಸಿಬಿಗೆ ಮುಜುಗರ ಉಂಟು ಮಾಡಿತ್ತು. ಅಲ್ಲದೆ ಜೈಲಿನ ಮೇಲೆ ಸಿಸಿಬಿ ದಾಳಿ ವಿಚಾರ ತಿಳಿದು ಕೆಲ ಅಧಿಕಾರಿಗಳು ಹಾಗೂ ಕೈದಿಗಳು ಮುಂಜಾಗ್ರತೆವಹಿಸಿದ್ದರು ಎಂಬ ಮಾತುಗಳು ಕೇಳಿ ಬಂದಿದ್ದವು.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ನಗರ ಪೊಲೀಸ್ ಆಯುಕ್ತರು, ಜೈಲಿನ ಮೇಲೆ ದಾಳಿ ಮಾಹಿತಿ ಸೋರಿಕೆ ಬಗ್ಗೆ ಆಂತರಿಕ ಮಟ್ಟದ ವಿಚಾರಣೆ ನಡೆಸಿ ವರದಿ ಸಲ್ಲಿಸುವಂತೆ ಹೆಚ್ಚುವರಿ ಆಯುಕ್ತರಿಗೆ (ಅಪರಾಧ) ಸೂಚಿಸಿದ್ದಾರೆ. ಈ ವರದಿ ಬಳಿಕ ಮುಂದಿನ ಕ್ರಮ ಜರುಗಿಸುವಾಗಿ ಆಯುಕ್ತರು ಹೇಳಿದ್ದಾರೆ.