ಕನ್ನಡದ ಹಿರಿಯ ನಟಿ ಕೆ. ಪದ್ಮಜಾ ರಾವ್ ಅವರಿಗೆ ಚೆಕ್ ಬೌನ್ಸ್ ಪ್ರಕರಣದಲ್ಲಿ ಮೂರು ತಿಂಗಳು ಜೈಲು ಶಿಕ್ಷೆ ಅಥವಾ ₹40.20 ಲಕ್ಷ ದಂಡ ವಿಧಿಸಲಾಗಿದೆ. ಸಿನಿಮಾ ನಿರ್ಮಾಪಕ ವೀರೇಂದ್ರ ಶೆಟ್ಟಿ ನೀಡಿದ ದೂರಿನ ಮೇರೆಗೆ ಈ ಶಿಕ್ಷೆ ವಿಧಿಸಲಾಗಿದೆ.
ಮಂಗಳೂರು (ಆ.27): ಕನ್ನಡದ ಹಿರಿಯ ನಟಿ ಕೆ.ಪದ್ಮಜಾ ರಾವ್ ಅವರಿಗೆ ಚೆಕ್ ಬೌನ್ಸ್ ಕೇಸಿಗೆ ಸಂಬಂಧಪಟ್ಟಂತೆ ಕೋರ್ಟ್‌ನಿಂದ 3 ತಿಂಗಳು ಜೈಲು ಶಿಕ್ಷೆ ವಿಧಿಸಲಾಗಿದೆ. ಅಥವಾ 40.20 ಲಕ್ಷ ರೂ. ದಂಡವನ್ನು ಪಾವತಿಸಿ ಜೈಲು ಶಿಕ್ಷೆಯಿಂದ ಪಾರಾಗಲು ಅವಕಾಶವನ್ನು ನೀಡಲಾಗಿದೆ.
ಪ್ರಸ್ತುತ ಬಾಗ್ಯಲಕ್ಷ್ಮಿ ಧಾರಾವಾಹಿಯಲ್ಲಿ ಭಾಗ್ಯಾಳ ಅತ್ತೆ ಕುಸುಮಾ ಪಾತ್ರಧಾರಿಯಾಗಿ ನಟನೆ ಮಾಡುತ್ತಿದ್ದರು. ಆದರೆ ಈಗ ಚೆಕ್ ಬೌನ್ಸ್ ಕೇಸಿನಲ್ಲಿ ಜೈಲಿಗೆ ಹೋಗುವಂತಹ ಪರಿಸ್ಥಿತಿ ಎದುರಾಗಿದೆ. ಕನ್ನಡ ಹಿರಿಯ ನಟಿ ಪದ್ಮಜಾ ರಾವ್ ಅವರು ಲಕ್ಷ ಲಕ್ಷ ಹಣ ವಂಚನೆ ಮಾಡಿರುವ ಪ್ರಕರಣ ಸಾಬೀತಾಗಿದೆ. ಇನ್ನು ಚೀಟಿ ಹಗರಣದಲ್ಲಿ ತಾವು ಕೊಟ್ಟ ಚೆಕ್ ಬೌನ್ಸ್ ಆಗಿದ್ದು, ವಂಚಿಸಿದ ಹಣ ಪಾವತಿಸದೇ ಇದ್ದರೆ 3 ತಿಂಗಳು ಜೈಲು ಶಿಕ್ಷೆ ಅನುಭವಿಸುವಂತೆ ಮಂಗಳೂರು ಕೋರ್ಟ್ ಆದೇಶ ಹೊರಡಿಸಿದೆ.
ಪ್ರೀತಿಯಿಂದಾನೇ ಕಿರುಕುಳ ಕೊಡೋ ಭಾಗ್ಯಲಕ್ಷ್ಮಿಗೆ ಸಿಕ್ತು ಬಹುಮಾನ
ಪದ್ಮಜಾ ರಾವ್ ಅವರು 40 ಲಕ್ಷ ರೂ. ಹಣ ನೀಡಬೇಕು ಅಥವಾ 3 ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕು. ಪದ್ಮಜಾ ರಾವ್ ಅವರ ವಿರುದ್ಧ ತುಳು, ಕನ್ನಡ ಸಿನಿಮಾ ನಿರ್ದೇಶಕ ಮತ್ತು ನಟ ವೀರೇಂದ್ರ ಶೆಟ್ಟಿ ಆರೋಪ ಮಾಡಿದ್ದರು. ವೀರೇಂದ್ರ ಶೆಟ್ಟಿ ಒಡೆತನದ ವೀರೂ ಟಾಕೀಸ್ ನಿರ್ಮಾಣ ಸಂಸ್ಥೆಯಿಂದ ಪದ್ಮಜಾ ರಾವ್ ಸಾಲ ಮಾಡಿದ್ದರು. ಹಂತ ಹಂತವಾಗಿ 40 ಲಕ್ಷ ರೂಪಾಯಿಗಳನ್ನು ಸಾಲವಾಗಿ ಪಡೆದಿದ್ದ ಪದ್ಮಜಾ ರಾವ್ ಹಣ ವಾಪಾಸ್ ನೀಡದೇ ವಂಚಿಸಿ ಕೊನೆಗೆ ಒತ್ತಡಕ್ಕೆ ಮಣಿದು ಚೆಕ್ ನೀಡಿದ್ದರು. ಆದರೆ, ಖಾತೆಯಲ್ಲಿ ಹಣವಿಲ್ಲದೆ ಆ ಚೆಕ್ ಬೌನ್ಸ್ ಆಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವೀರೇಂದ್ರ ಶೆಟ್ಟಿ ಮಂಗಳೂರಿನ JMFC 8ನೇ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದರು. ಆದರೆ, ನ್ಯಾಯಾಲಯ ಎಷ್ಟು ಸಮನ್ಸ್ ಕಳಿಸಿದರೂ ಪದ್ಮಜಾ ರಾವ್ ಮಂಗಳೂರಿನ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ಕೊನೆಗೆ ನ್ಯಾಯಾಲಯ ಪದ್ಮಜಾ ರಾವ್ ಅವರ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಿತ್ತು. ಆಕೆಯನ್ನು ಬಂಧಿಸಿ ತರುವಂತೆ ಬೆಂಗಳೂರಿನ ತಲಘಟ್ಟಪುರ ಪೊಲೀಸರಿಗೆ ಆದೇಶ ನೀಡಿತ್ತು. ಆದರೆ, ಪೊಲೀಸರು ಬಂಧಿಸುವ ಮೊದಲೇ ಪದ್ಮಜಾ ರಾವ್ ಮಂಗಳೂರು ನ್ಯಾಯಾಲದಲ್ಲಿ ಶರಣಾಗಿ ಜಾಮೀನು ಪಡೆದಿದ್ದರು.
ನಾಯಿ ನೋಡಿ ಆಕ್ಟಿಂಗ್ ಕಲ್ತಿದ್ದೀನಿ; ಮಗ ಹಾವು ಹಿಡಿಯಬಾರದೆಂದು ಕುಕ್ಕೆ ಸುಬ್ರಹ್ಮಣ್ಯಗೆ ಓಡಿದ ನಟಿ ಪದ್ಮಜಾ ರಾವ್
ಇದಾದ ಬಳಿಕ 4 ವರ್ಷಗಳಿಂದ ನ್ಯಾಯಾಲಯದಲ್ಲಿ ಪ್ರಕರಣ ಮುಂದುವರಿದಿತ್ತು. ಇದೀಗ ಈ ಪ್ರಕರಣದಲ್ಲಿ ಪದ್ಮಜಾರಾವ್ ಆರೋಪ ಸಾಬೀತು ಆಗಿದೆ. ಪದ್ಮಜಾ ಅವರು 40,17,000 ಸಾವಿರ ರೂ.ಗಳನ್ನು ದೂರುದಾರ ವೀರೇಂದ್ರ ಶೆಟ್ಟಿಯವರಿಗೆ ಪಾವತಿ ಮಾಡಬೇಕು. ಜೊತೆಗೆ ಜುಲ್ಮಾನೆಯಾಗಿ ಸರಕಾರಕ್ಕೆ 3,000 ಸಾವಿರ ರೂ.ಗಳನ್ನು ಪಾವತಿಸಬೇಕು. ಇಲ್ಲವಾದಲ್ಲಿ ಮೂರು ತಿಂಗಳ ಜೈಲು ಶಿಕ್ಷೆಯನ್ನು ಅನುಭವಿಸಬೇಕು ಎಂದು ಮಂಗಳೂರಿನ JMFC 8ನೇ ನ್ಯಾಯಾಲಯ ಆದೇಶ ಹೊರಡಿಸಿದೆ.